ನಾಯಕತ್ವ ಎಂಬುದೊಂದು ಜವಾಬ್ದಾರಿ: ಡಾ| ಅನಿರ್ಬನ್ ಚಕ್ರವರ್ತಿ

Upayuktha
0


ಕಾರ್ಕಳ: 'ವಿದ್ಯಾರ್ಥಿಗಳು ತಮ್ಮ ಉದ್ಯೋಗದ ಭವಿಷ್ಯದ ದೃಷ್ಟಿಯಿಂದ ಸಂಘಟನಾಶಕ್ತಿಯನ್ನು ಬೆಳೆಸಿಕೊಳ್ಳುವುದು ಅತಿಮುಖ್ಯವೆನಿಸುತ್ತದೆ. ನಾಯಕತ್ವ ಎನ್ನುವುದು ಒಂದು ಸ್ಥಾನವಷ್ಟಕ್ಕೇ ಸೀಮಿತವಾಗದೆ ಅದೊಂದು ಜವಾಬ್ದಾರಿ ಎಂಬುದನ್ನು ನಾವು ಅರಿತುಕೊಂಡು ಮುಂದುವರೆಯಬೇಕು' ಎಂದು ನಿಟ್ಟೆ ಯುನಿವರ್ಸಿಟಿ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ & ರಿಸರ್ಚ್ ನ ನಿರ್ದೇಶಕ ಡಾ| ಅನೀರ್ಬನ್ ಚಕ್ರಬರ್ತಿ ಅಭಿಪ್ರಾಯಪಟ್ಟರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆ.16 ರಂದು ನಡೆದ 2023-24 ನೇ ಸಾಲಿನ ವಿಭಾಗ ಸಂಘಗಳ ಹಾಗೂ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. 'ಪ್ರತಿಯೋರ್ವ ಮಾನವನೂ ಶೇಷ್ಠತೆ ಅಥವಾ ಉತ್ಕೃಷ್ಟತೆಗಾಗಿ ಶ್ರಮಿಸಬೇಕೇ ಹೊರತು ಯಶಸ್ಸಿಗಾಗಿ ಕೆಲಸಮಾಡಬಾರದು' ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ಸಮಾಜದಲ್ಲಿ ನಿರಂತರ ಕಲಿಕೆಯ ಮಹತ್ವವನ್ನು ನಾವಿಂದು ಅರಿತುಕೊಂಡಿದ್ದೇವೆ. ವಿವಿಧ ವಿಭಾಗಗಳು ಇಂದು ಉತ್ತಮ ಯೋಜನೆಗಳನ್ನು ತಮ್ಮ ವಿಭಾಗದ ಅಸೋಸಿಯೇಶನ್ ಗಳ ಮೂಲಕ ನಡೆಸುತ್ತಾ ಬಂದಿದ್ದು ಈ ಕಾರ್ಯಕ್ರಮಗಳಿಗೆ ಭಾಗವಹಿಸಲು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮನಸುತೋರಬೇಕು. ಇಂದು ಇಂಟರ್-ಡಿಸಿಪ್ಲೀನರಿ ಚರ್ಚೆಗಳು ಮುನ್ನಲೆಯಲ್ಲಿದ್ದು ಆಸಕ್ತ ವಿದ್ಯಾರ್ಥಿಗಳು ಇನ್ನುಳಿದ ವಿಭಾಗಗಳಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ತೋರಬೇಕಿದೆ' ಎಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ 11 ವಿದ್ಯಾರ್ಥಿ ಸಂಘಗಳ ವಿವಿಧ ವಿಷಯಗಳ ಪದಾಧಿಕಾರಿಗಳಿಗೆ ಬ್ಯಾಜ್ ವಿತರಿಸಲಾಯಿತು. ಇದೇ ವೇಳೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ.ಆರ್ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.


ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ| ಐ.ಆರ್ ಮಿತ್ತಂತಾಯ ಸ್ವಾಗತಿಸಿದರು. ವಿದ್ಯಾರ್ಥಿ ಸಮ್ಯಕ್ತ್ ರೈ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಶ್ರಾವ್ಯಾ ಮತ್ತು ಶ್ರದ್ದಾ ಪ್ರಾರ್ಥಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ| ನರಸಿಂಹ ಬೈಲ್ಕೇರಿ ವಂದಿಸಿದರು. ವಿದ್ಯಾರ್ಥಿಗಳಾದ ನಚಿಕೇತ್ ನಾಯಕ್ ಮತ್ತು ಪ್ರಶಸ್ತಿ ಪಾಂಡೆ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments
Post a Comment (0)
To Top