ತಾಯಿ ಎಂಬ ಮೊದಲ ಶಿಕ್ಷಕಿ

Upayuktha
0

 


ಬಾಳೆಂಬ ಪಯಣದಲ್ಲಿ ಕಲಿಕೆ, ಅಕ್ಷರ ಜ್ಞಾನಕ್ಕೆ ಅದರದ್ದೇ ಆದ ಮಹತ್ವ- ಶ್ರೇಷ್ಠವಾದ ಸ್ಥಾನಮಾನವಿದೆ.ಅಕ್ಷರಗಳ ಒಡನಾಟದಿಂದ ಲೋಕದ  ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆ, ಸಮಾಜದಲ್ಲಿ ಒಂದು ಉತ್ತಮವಾದ ಜೀವನವನ್ನು ಸಾಗಿಸಲು ಇದು ಸಹಕರಿಸುತ್ತದೆ. ಇಂದು ಈ ಜೀವ ನೆಮ್ಮದಿಯಿಂದ ಉಸಿರಾಡುತ್ತಿದೆ, ಏನಾದರೂ ಬರೆಯುತ್ತಿದೆ, ಓದುತ್ತಿದೆ ಎಂದರೆ ಅದು ಅಕ್ಷರ ಸಂತರ ಕೊಡುಗೆಯೇ ಸರಿ.


ಆಹಾರ, ವಸತಿ, ಬಟ್ಟೆಯಂತೆಯೇ ವಿದ್ಯಾಭ್ಯಾಸವು ಕೂಡ ಮೂಲಭೂತವಾದ ಅವಶ್ಯಕತೆಯಲ್ಲಿ ಒಂದು. ವಿದ್ಯಾಭ್ಯಾಸವು ಆಗುಹೋಗುಗಳ ಲೆಕ್ಕಾಚಾರದ ತುಲನೆಗೆ ಗಣನೆಗೆ ಸಹಕರಿಸುವ ಜೊತೆ ಬದುಕಿಗೆ ಸುಂದರವಾದ ಬುನಾದಿಯನ್ನು  ಹಾಕುತ್ತದೆ.  ಶಿಕ್ಷಕರ ದಿನಾಚರಣೆಯ ಆಸು ಪಾಸಿನಲ್ಲಿ ನಾವಿದೀಗ ಇದ್ದು ಅವರನ್ನು ಅನುದಿನವು ಅನು ಕ್ಷಣವು ನೆನೆಯುವುದು ಮುಖ್ಯ. ಯಾಕಂದರೆ ಅವರೇ ಪೋಷಿಸಿದ ವೃಕ್ಷ ಸಂಪತ್ತು ನಾವಾಗಿದ್ದೇವೆ. ಅವರ ಕ ಕೊಡುಗೆಗೆ ಎಂದೆಂದೂ ಬೆಲೆ ಕಟ್ಟಲಾಗದು.


ಜ್ಞಾನಿಗಳು ಒಂದು ಮಾತನ್ನು ಹೇಳಿದ್ದಾರೆ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬುದಾಗಿ. ಹೌದು, ಈ ಮಾತು ನನ್ನ ಜೀವನದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಅಮ್ಮ ಎಂಬ ಎರಡಕ್ಷರದ ಮಾಯೆಯು ಅಕ್ಷರ ಜ್ಞಾನವ ಉಣಪಡಿಸಿ, ಕಲಿಕೆಗೆ ಮೊದಲಾಗಿ ಗಟ್ಟಿಯಾದ ಪಾಯವನ್ನು ಹಾಕಿದವರು. ಅಕ್ಷರ ಕರುಣಾಮಯಿಯ ಕುರಿತು ಹೇಳಲು ಪದಗಳು ಸಾಲದು. ಸ್ವರಾಕ್ಷರ, ವ್ಯಂಜನಾಕ್ಷರ, ಒತ್ತಕ್ಷರ, ದೀರ್ಘ ಹೀಗೆ  ಅಕ್ಷರವ ತಿದ್ದುವ ಜೊತೆ ಜೊತೆಗೆ ಬದುಕಿನ ನೋವು, ಕಷ್ಟ, ಕೋಪವ ತಿದ್ದಿ ಬುದ್ದಿಯನ್ನು  ಕಲಿಸಿದವಳು.


ಪ್ರಥಮವಾಗಿ ಕೈಗೆ  ಸ್ಲೇಟುಕೊಟ್ಟು ಅ.... ಆ..... ಇ... ಈ.... ಕನ್ನಡ ಅಕ್ಷರಮಾಲೆಯ ಪರಿಚಯವನ್ನು ಮಾಡಿಸಿದ್ದು ಮಾತ್ರ ಅಮ್ಮ. ಇವರ ಕೊಡುಗೆಯ ಫಲವಾಗಿಯೇ ಅದು ಮುಂದೆ ಉನ್ನತ ಕಲಿಕೆಗೆ ಅದು ಪ್ರೇರಣೆಯಾಯಿತು. ಮುಂದೆ ಉತ್ತಮವಾದ ಶಾಲಾ ಜೀವನವನ್ನು  ಆರಂಭಿಸಲು ಸಹಕಾರಿಯಾಯಿತು. ವಿದ್ಯೆಯನ್ನು ಧಾರೆ ಎರೆದ  ಅನೇಕ ಮಹನೀಯರ ಸಾಲಿನ ಪೈಕಿ ತಾಯಿಯು ಪ್ರಥಮ ಸ್ಥಾನ ಅಲಂಕರಿಸುತ್ತಾರೆ. ತಾಯಿ ಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ.


ತಿಳಿದು ತಿಳಿಯದೆಯು ಮಾಡಿದ ತಪ್ಪನ್ನು ಕ್ಷಮಿಸಿ, ಅದನ್ನು ಸರಿಪಡಿಸಿ, ಛಲ ಆತ್ಮ ಬಲವನ್ನು ಪ್ರತಿ ಸೋಲಿನಲ್ಲೂ ನೆರಳಾಗಿ ನಿಂತು ಹೆಚ್ಚಿಸಿ, ಗೆಲುವಿನ ಸೋಪಾನಕ್ಕೆ ಜೋಪಾನವಾಗಿ ತಲುಪಿಸಿ, ಜೀವನವನ್ನು ಸುಂದರ ಪುಟಗಳಲ್ಲಿ ಪೋಣಿಸಿದ ಕೀರ್ತಿ ಬದುಕಿಗೆ ಸ್ಪೂರ್ತಿ ನನ್ನ ಅಮ್ಮ. ತ್ರಿಮೂರ್ತಿಗಳಿಗೂ ಗುರು ತಾಯಿ ಹಾಗೆಂದಾದರೆ ಸೃಷ್ಟಿ- ಸ್ಥಿತಿ- ಲಯಗಳಿಗೂ ಮಾತೆಯೇ ಗುರು ಎಂಬುದಾಗಿ ಆಯ್ತಲ್ಲವೇ?. ಗುರುವಾಗಿ ಸಲಹೋ  ಜನನಿಯನ್ನು ಪ್ರಕೃತಿಯೆಂದು ದೇಶವೆಂದು ಕರೆಯುವುದು ಹಾಗಾಗಿಯೇ ಅಲ್ಲವೇ?


ವೈದಿಕ ಕಾಲದಿಂದಲೂ ಮಾತೆಯೇ ಮೊದಲ ಗುರುವಿನ ಸ್ಥಾನವನ್ನು ಅಲಂಕರಿಸುತ್ತಾಳೆ. ಅಂಧಕಾರವ ನೀಗಿಸಿ, ಜ್ಞಾನಜ್ಯೋತಿಯ ಬೆಳಗಿಸಿ, ಅತ್ತಾಗ ನಗಿಸಿದ ಜೀವದ ಮಹಿಮೆ ಕೊನೆಯಿಲ್ಲದ ಆಗಸದಷ್ಟು ವಿಶಾಲ. ಅಮ್ಮಾ ನೀವೇ ನನ್ನ ಮೊದಲ ಗುರು. ನೀವು ಇದ್ದ ಆಲಯವೇ ನನ್ನ ಮೊದಲ ಪಾಠಶಾಲೆ.


-ಗಿರೀಶ್ ಪಿಎಂ

ಪ್ರಥಮ ಎಂ ಎ ಇತಿಹಾಸ ಮತ್ತು ಪುರಾತತ್ವಶಾಸ್ತ್ರ

ವಿ ವಿ ಕಾಲೇಜು ಮಂಗಳೂರು

                                                                           


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top