ಭಾವೀ ಪತ್ರಕರ್ತರು ಪರಿಷ್ಕರಣೆಗೊಳಗಾಗಲಿ: ಯು.ಟಿ. ಖಾದರ್
ಬೆಂಗಳೂರು: ಮಾಧ್ಯಮ ಸಮಾಜದಲ್ಲಿ ಅತ್ಯಂತ ಆದರಣೀಯ ಕ್ಷೇತ್ರ, ಈ ಕ್ಷೇತ್ರದಲ್ಲಿ ಬರುವ ಹೊಸಬರನ್ನು ಪರಿಷ್ಕರಣೆಗೊಳಪಡಿಸುವ ನಿಟ್ಟಿನಲ್ಲಿ 'ಮಾಮ್' ಸಂಸ್ಥೆ ತೊಡಗಿಕೊಳ್ಳಲಿ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಮೀಡಿಯಾ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ (ಮಾಮ್- ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆ) ವತಿಯಿಂದ, ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
'ಸಮಾಜದ ಬೆಳವಣಿಗೆಯಲ್ಲಿ ಪತ್ರಿಕಾ ಕ್ಷೇತ್ರ ಮತ್ತು ಮಾಧ್ಯಮ ತನ್ನದೇ ಆದ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿದೆ. 24 ವರ್ಷಗಳ ಹಿಂದೆ ತಮ್ಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕೆಂಬ ದೂರದೃಷ್ಟಿ ಇಟ್ಟುಕೊಂಡು ಬೆಳೆದು ಬಂದ ಮಾದರಿ ಸಂಘಟನೆ 'ಮಾಮ್', ಇಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಪ್ರಶಸ್ತಿ ಅವರ ಸಾಧನೆಗೆ ಒಂದು ಗರಿ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ "ಮಾಮ್" ಕಾರ್ಯಕ್ರಮಗಳಿಗೆ 30 ಸಾವಿರ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದರು.
ಮುಖ್ಯ ಅತಿಥಿ ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, "ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಸ್ಫೂರ್ತಿದಾಯಕ ಅಂಶಗಳು ಕಡಿಮೆಯಾಗುತ್ತಿವೆ. ಒಂದುಕಡೆ ವಿಪರೀತ ವ್ಯಾಪಾರೀಕರಣ, ಮತ್ತೊಂದು ಕಡೆಗೆ ಸೈದ್ಧಾಂತಿಕ ಬದ್ಧತೆ ಉಳಿಸಿಕೊಳ್ಳುವ ಸವಾಲು ಇದೆ. ಕೆಲವು ಸಾಮಾಜಿಕ ಜಾಲತಾಣಗಳಿಂದ ಬರುವ ಸುಳ್ಳು ಸುದ್ದಿ ಮತ್ತು ಬೇಡದ ವಿಚಾರಗಳ ವೈಭವೀಕರಣದಿಂದ ಮಾಧ್ಯಮ ಕ್ಷೇತ್ರ ಇಕ್ಕಟ್ಟಿನಲ್ಲಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೊಸ ಪರಂಪರೆಯನ್ನು ಹುಟ್ಟುಹಾಕುತ್ತಿದೆ.
ಅದರಿಂದ ಪತ್ರಕರ್ತ ಬರೀ ಕೆಲಸ ಕಳೆದುಕೊಳ್ಳುವುದು ಮಾತ್ರವಲ್ಲ, ಪತ್ರಕರ್ತನ ಕ್ರಿಯಾಶೀಲತೆ, ಬರೆಯುವ ಶಕ್ತಿ, ಬುದ್ಧಿಮತ್ತೆಯನ್ನು, ಸ್ಮರಣಾ ಸಾಮರ್ಥ್ಯವನ್ನು ತಂತ್ರಜ್ಞಾನ ಕಿತ್ತುಕೊಳ್ಳುತ್ತಿದೆ. ಆದರೆ, ಅದು ಆಗದೇ ಇರುವ ರೀತಿಯಲ್ಲಿ ನಮ್ಮ ಕಾರ್ಯಪಡೆ ಮತ್ತು ಶಿಕ್ಷಣವನ್ನು ರೂಪಿಸಬೇಕಾಗಿದೆ ಎಂದರು.
ಯೂನಿವರ್ಸಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆರ್. ಉಪೇಂದ್ರ ಶೆಟ್ಟಿ ವಿವಿ ಪತ್ರಿಕೋದ್ಯಮ ಅಧ್ಯಯನದ ದಿನಗಳನ್ನು ನೆನಪಿಸಿಕೊಂಡರು.
ಮಾಮ್‌ನ ಗೌರವಾಧ್ಯಕ್ಷ ವೇಣು ಶರ್ಮಾ ಮಾತನಾಡಿ, "ಕೆಲವು ಸಮಾನ ಮನಸ್ಕರೆಲ್ಲ ಸೇರಿಕೊಂಡು ಮಾಮ್ ಸಂಸ್ಥೆಯನ್ನು ಕಟ್ಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಾಯವನ್ನು ಮಾಡುತ್ತ, 24 ವರ್ಷಗಳನ್ನು ಮುಗಿಸಿ ಮುಂದಿನ ವರ್ಷ ಅತೀ ದೊಡ್ಡ ಕಾರ್ಯಕ್ರಮವನ್ನು ಮಾಡುವ ಸಂಕಲ್ಪ ಹೊಂದಿದ್ದೇವೆ'' ಎಂದರು.
ಕೆ.ಆರ್.ಪುರ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಪಾರ್ಶ್ವನಾಥ್ ಅವರು ಮಾತನಾಡಿ, "ಮಾಮ್ ಸಂಸ್ಥೆ ಬರೀ ಮಂಗಳೂರು ವಿಶ್ವವಿದ್ಯಾನಿಲಯಕ್ಕಷ್ಟೇ ಸೀಮಿತವಾಗಿರದೇ ಕರ್ನಾಟಕದ ಎಲ್ಲ ಕಾಲೇಜು, ವಿದ್ಯಾಸಂಸ್ಥೆಗಳನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು' ಎಂದು ಸಲಹೆ ಮಾಡಿದರು. ಕರ್ನಾಟಕ ಕಲಾದರ್ಶಿನಿ ನಿರ್ದೇಶಕ ಶ್ರೀನಿವಾಸ್ ಸಾಸ್ತಾನ ಉಪಸ್ಥಿತರಿದ್ದರು. ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಅಧ್ಯಕ್ಷತೆ ವಹಿಸಿದ್ದರು. ನವಿತಾ ಜೈನ್ ಕಾರ‍್ಯಕ್ರಮ ನಿರೂಪಿಸಿದರು. ಶರತ್ ಹೆಗ್ಡೆ ವಂದಿಸಿದರು.
ಪ್ರಶಸ್ತಿ ವಿಜೇತರು
2020-21 ನೇ ಸಾಲಿನ ಪದವಿ
1. ರಶ್ಮಿ ಯಾದವ್ (ಎಸ್‌ಡಿಎಂ ಕಾಲೇಜು ಉಜಿರೆ)
2. ಯಕ್ಷಿತಾ (ಆಳ್ವಾಸ್ ಕಾಲೇಜು ಮೂಡಬಿದಿರೆ)
3. ಶಾಮ ಪ್ರಸಾದ್ (ಎಸ್‌ಡಿಎಂ ಉಜಿರೆ)
ಪ್ರೋತ್ಸಾಹಕ ಬಹುಮಾನ ನವ್ಯಶ್ರೀ ಶೆಟ್ಟಿ, ಎಂಜಿಎಂ ಕಾಲೇಜು ಉಡುಪಿ
2020-21ನೇ ಸಾಲಿನ ಸ್ನಾತಕೋತ್ತರ
1. ಚೈತ್ರಾ (ಎಸ್‌ಡಿಎಂ ಕಾಲೇಜು ಉಜಿರೆ)
2. ಸ್ವಸ್ತಿಕ್ ಕನ್ಯಾಡಿ (ಎಸ್‌ಡಿಎಂ ಕಾಲೇಜು ಉಜಿರೆ)
2021-22 ನೇ ಸಾಲಿನ ಸ್ನಾತಕೋತ್ತರ ವಿಭಾಗ
1. ಇಂದೂಧರ ಹಳೆಯಂಗಡಿ(ಆಳ್ವಾಸ್ ಕಾಲೇಜು ಮೂಡಬಿದಿರೆ)
2. ನಳಿನಿ (ಆಳ್ವಾಸ್ ಕಾಲೇಜು ಮೂಡಬಿದಿರೆ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ