ಮಳೆಗಾಲ ಮುಗಿಯುತ್ತಾ ಬಂತೆಂದರೆ ಶ್ರಾವಣ, ನಾಗರ ಪಂಚಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಹೀಗೆ ಸಾಲು ಹಬ್ಬಗಳು ಬರುತ್ತವೆ. ಪ್ರತಿಯೊಂದು ಹಬ್ಬಗಳಿಗೂ ಪ್ರಾದೇಶಿಕ ಮತ್ತು ಧಾರ್ಮಿಕವಾಗಿ ಅದರದ್ದೇ ಆದ ಮಹತ್ವವಿದ್ದು, ಇವುಗಳನ್ನು ವಿಭಿನ್ನವಾಗಿ ಆಚರಿಸುವ ಪದ್ದತಿಯು ತಲೆಮಾರುಗಳಿಂದ ನಡೆಯುತ್ತಿದೆ. ಅದರಲ್ಲೂ ಗಣೇಶನ ಹಬ್ಬ ಬಂತೆಂದರೆ ದೇಶದ ಬೀದಿ ಬೀದಿಗಳಲ್ಲಿ ನವೋಲ್ಲಾಸ ಮತ್ತು ಸಂಭ್ರಮ ಮನೆಮಾಡಿ ಅದ್ದೂರಿ ಆಚರಣೆಗೆ ಭರ್ಜರಿ ತಯಾರಿಗಳು ಪ್ರಾರಂಭವಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸ್ವಾತಂತ್ರ್ಯ ಪೂರ್ವದ ಹಿನ್ನೆಲೆಯಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಬಾಲಗಂಗಾಧರ ತಿಲಕ್‍ರವರು ಜಾತಿ, ಮತ, ಪಂಥಗಳೆನ್ನದೆ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವಂತೆ ಮಾಡಿದರು. ಈ ಮೂಲಕ ಸರ್ವಧರ್ಮೀಯರನ್ನೂ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಮೂಲಕ ಸಂಘಟಿತರನ್ನಾಗಿ ಮಾಡಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತೀಯರನ್ನು ಒಗ್ಗೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದರು.
ಆದರೆ ಇಂದು ಗಣೇಶೋತ್ಸವವು ಒಂದು ದಿನದಿಂದ ಹಿಡಿದು, ಮೂರು ದಿವಸ, ಒಂದು ವಾರ, ಹದಿನೈದು ದಿವಸ ಹಾಗೂ ತಿಂಗಳುಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿ ಕೊನೆಯಲ್ಲಿ ವಿಸರ್ಜಿಸುವ ಮೂಲಕ ಸಂಪನ್ನಗೊಳ್ಳುತ್ತದೆ. ಇಂತಹ ಸಾರ್ವಜನಿಕ ಹಬ್ಬಗಳು ಇಂದು ಆಧುನಿಕ ಜೀವನದ ಭರಾಟೆಯಲ್ಲಿರುವ ಯುವ ಜನತೆಯ ನಡುವೆ ಸಂಸ್ಕøತಿ ಮತ್ತು ಪರಸ್ಪರ ಬಾಂಧವ್ಯವನ್ನು ಬೆಸೆಯುವ ಕೊಂಡಿ ಆಗಬೇಕಾದ ಅನಿವಾರ್ಯತೆ ಇದೆ. ಆಚರಣೆಗಳು ಇಂದು ಆಡಂಭರ ಮತ್ತು ವೈಭವದ ತೆಕ್ಕೆಗೆ ಬಿದ್ದು ತನ್ನ ಮೂಲ ಸ್ವರೂಪ ಹಾಗೂ ಅರ್ಥವನ್ನು ಕಳೆದುಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ ಗಣೇಶನ ಮೂರ್ತಿಯನ್ನು ಆವೆ ಮಣ್ಣಿನಿಂದ ತಯಾರಿಸಿ ಸ್ವಾಭಾವಿಕ ಬಣ್ಣಗಳಿಂದ ಅಲಂಕರಿಸಿ ಪೂಜಿಸುತ್ತಿದ್ದರು. ಆದರೆ ಇಂದು ಮೂರ್ತಿಯನ್ನು ತಯಾರಿಸಲು ಅವಶ್ಯವಿರುವ ಆವೆ ಮಣ್ಣು ಎಲ್ಲೆಡೆ ದೊರೆಯುತ್ತಿಲ್ಲ, ದೊರೆತರೂ ಅವುಗಳನ್ನು ತಯಾರಿಸುವ ತಜ್ಞರಿಲ್ಲ, ತಜ್ಞರು ಸಿಕ್ಕರೂ ತಯಾರಿಸಿ ಮಾರಾಟ ಮಾಡುವುದೇ ದುಸ್ತರ ಅಥವಾ ಸುಲಭವಾಗಿ ತಯಾರಿಸಿ ಅಲಂಕರಿಸಬಹುದು ಎಂಬ ಕಾರಣಕ್ಕೋ ಏನೋ ಎಲ್ಲೆಡೆ ‘ಪ್ಲಾಸ್ಟರ್ ಆಫ್ ಪ್ಯಾರೀಸ್’ (PoP-Plaster of Paries) ನಿಂದ ತಯಾರಿಸಿದ ಗಣೇಶನ ಮೂರ್ತಿಯನ್ನು ಬಳಸಲಾಗುತ್ತಿದೆ. ಈ ಮೂರ್ತಿಗಳು ಪರಿಸರಕ್ಕೆ ಹಾಗೂ ನೀರಿನಲ್ಲಿ ಕರಗದ ಕಾರಣದಿಂದಾಗಿ ಜಲ ಮೂಲಗಳಿಗೆ ಮತ್ತು ಜಲಚರಗಳಿಗೆ ಮಾರಕವಾಗಿದ್ದು ಇವುಗಳನ್ನೇ ಜನರು ಇಷ್ಟಪಟ್ಟು ಕೊಂಡು ಪೂಜಿಸಿ ಪರಿಸರವನ್ನು ಹಾಳು ಮಾಡುತ್ತಿದ್ದಾರೆ.
ಹಳ್ಳಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಓಣಿಗೋ, ಕೇರಿಗೋ, ಊರಿಗೋ ಒಂದು ಕಡೆಯಾದರೆ, ನಗರಗಳಲ್ಲಿ ಪ್ರತಿ ಮನೆಗಳಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಹಳ್ಳಿಗಳಲ್ಲೇನೋ ಈ ಮೂರ್ತಿಗಳನ್ನು ಸುಲಭವಾಗಿ ವಿಸರ್ಜಿಸಬಹುದು, ಆದರೆ ನಗರಗಳಲ್ಲಿರುವ ಕೆಲವೇ ಕೆರೆಗಳ ಪೈಕಿ ಕೆಲವೊಂದು ಭೂಗಳ್ಳರಿಂದ ಒತ್ತುವರಿಗೊಂಡು ಕೆರೆಗಳ ಪ್ರದೇಶಗಳಲ್ಲಿ ಬೃಹತ್ ಕಟ್ಟಡಗಳು ತಲೆಯೆತ್ತಿವೆ. ಹೀಗಿರುವಾಗ ಪ್ರತೀ ವರ್ಷವೂ ನಗರಗಳಲ್ಲಿ ಪೂಜಿಸಲಾಗುವ ಲಕ್ಷಗಟ್ಟಲೆ ಮೂರ್ತಿಗಳನ್ನು ವಿಸರ್ಜಿಸಲು ಕೆರೆಗಳೆಷ್ಟು ಬೇಕಾಗಬಹುದು ಎಂದು ಯೋಚಿಸಬೇಕು. ಊರಲ್ಲಿದ್ದ ಬಾವಿಗಳನ್ನೂ ಬಿಡದೇ ರಾಶಿ ರಾಶಿ ಮೂರ್ತಿಗಳನ್ನು ವಿಸರ್ಜಿಸಿ ಒಂದು ಗಣೇಶೋತ್ಸವ ಮುಗಿಯುವ ವೇಳೆಗೆ POP ಮೂರ್ತಿಗಳಿಂದ ಬಾವಿಯನ್ನು ತುಂಬಿಸಿ ಬಿಡುತ್ತೇವೆ. ಅಳಿದುಳಿದ ಕೆರೆ ಮತ್ತು ಬಾವಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡದೇ ‘ಪ್ಲಾಸ್ಟರ್ ಆಫ್ ಪ್ಯಾರೀಸ್’ ಮತ್ತು ಮಣ್ಣಿನಿಂದ ತಯಾರಿಸಲಾದ ವಿವಿಧ ಗಾತ್ರಗಳ ಲಕ್ಷಗಟ್ಟಲೆ ಮೂರ್ತಿಗಳನ್ನು ಕೆರೆಕಟ್ಟೆಗಳಲ್ಲಿ ವಿಸರ್ಜಿಸಿ ಅವುಗಳ ಒಡಲಲ್ಲಿ ಹೂಳನ್ನು ತುಂಬಿಸಿ, ವಿಗ್ರಹಕ್ಕೆ ಲೇಪಿಸಲಾದ ರಾಸಯನಿಕಯುಕ್ತ (ಸೀಸದ ಅಂಶ) ಬಣ್ಣಗಳಿಂದ ಜಲಚರಗಳು ಹಾಗೂ ಜೀವ ವೈವಿಧ್ಯಗಳ ನಾಶವನ್ನು ಹಬ್ಬದ ನೆಪದಲ್ಲಿ ಮಾಡುತ್ತಿರುವುದು ಮನುಕುಲದ ದುರಂತ. ಆಚರಣೆಗಳು ಅದ್ದೂರಿಯಾಗಿ ಮುಗಿಯುತ್ತದೆ, ಆದರೆ ಕೆರೆಗಳಲ್ಲಿ ಕೈ, ಕಾಲು, ರುಂಡ ಮುಂಡ ಬೇರೆ ಬೇರೆಯಾಗಿ ಬಿದ್ದಿರುವ ಮೂರ್ತಿಗಳನ್ನು ಕಂಡಾಗ ನಮ್ಮ ಆಚರಣೆಗಳ ನೈಜತೆ ಎದ್ದು ಕಾಣುತ್ತದೆ. ಈ ಭಗ್ನ ಮೂರ್ತಿಗಳನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಇಂತಹ ಆಚರಣೆಗಳನ್ನು ಪರಿಸರಸ್ನೇಹಿ ಆಗಿ ಮಾಡಬೇಕಾಗಿದ್ದು, ಯುವ ಜನರು ಈ ಬಗ್ಗೆ ಮನಸ್ಸು ಮಾಡಬೇಕಿದೆ. ಈ ಬಗ್ಗೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ.
ಇಂತಹ ಹಲವಾರು ಸಂಘ ಸಂಸ್ಥೆಗಳು ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದು ಇದು ಸಂಘಸಂಸ್ಥೆಗಳಿಗೆ ಇರುವ ಪರಿಸರದ ಕಾಳಜಿಯನ್ನು ತೋರಿಸುತ್ತದೆ. ಇದಕ್ಕೆ ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ’ಯೂ ಸಹಕಾರವನ್ನು ನೀಡುತ್ತಿದ್ದು, ಎಲ್ಲೆಡೆ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಒತ್ತು ನೀಡಲಾಗುತ್ತಿದೆ. ಸಂಪೂರ್ಣವಾಗಿ ಆವೆಮಣ್ಣಿನಿಂದ ತಯಾರಿಸಲಾದ ಮೂರ್ತಿಗೆ ಸ್ವಾಭಾವಿಕ ಬಣ್ಣಗಳನ್ನು ಬಳಸುತ್ತಿದ್ದು, ಇವುಗಳನ್ನು ಬೆಂಗಳೂರು ಮತ್ತಿತರ ಪ್ರದೇಶಗಳ ತಜ್ಞ ಗಣಪತಿಯ ಮೂರ್ತಿ ತಯಾರಕರೇ ತಯಾರಿಸುತ್ತಿದ್ದಾರೆ. ಸುಮಾರು ಏಳು ಇಂಚಿನಿಂದ ಹಿಡಿದು ಎರಡು ಅಡಿ ಎತ್ತರದವರೆಗಿನ ಮೂರ್ತಿಗಳು ಇಂದು ಆನ್‍ಲೈನ್ ಮೂಲಕ ಮಾರಾಟಕ್ಕೆ ಲಭ್ಯವಿದ್ದು, ಈ ಮೂರ್ತಿಗಳ ಒಳಭಾಗದಲ್ಲಿ ಗುಣಮಟ್ಟದ ವಿವಿಧ ಹಣ್ಣಿನ ಮರಗಳ, ಹೊಂಗೆ, ಅರಳಿ ಹಾಗೂ ಹುಣಸೇ ಮರದ ಬೀಜಗಳನ್ನು ಸೇರಿಸಲಾಗಿದೆ. ಈ ಮೂಲಕ ಆಚರಣೆಗಳ ನೆಪದಲ್ಲಿ ಪರೋಕ್ಷವಾಗಿ ಮರಗಿಡಗಳನ್ನು ಬೆಳೆಸಬಹುದು. ‘ಹಬ್ಬ ಒಂದು ಉಪಯೋಗ ಹಲವು’ ಎಂಬ ಅರ್ಥದಲ್ಲಿ ಇದು ಮಾಡುತ್ತಿದೆ. ಆಗಸ್ಟ್‌ನಿಂದಲೇ ಆನ್‍ಲೈನ್ ಬುಕ್ಕಿಂಗ್ ಪ್ರಾರಂಭಗೊಂಡಿದ್ದು, ಕೆಲವೊಂದು ತಯಾರಕರ ಬೇಡಿಕೆಯು ಮಿತಿ ಮೀರಿದ್ದರಿಂದ ಬುಕ್ಕಿಂಗ್‍ನ್ನು ನಿಲ್ಲಿಸಿದ್ದಾರೆ. ಈ ಮೂಲಕ ಮೂರ್ತಿಯನ್ನು ಪೂಜೆಯ ನಂತರ ಕೆರೆ ಬಾವಿಗೋ ಹಾಕಿ ವಿಸರ್ಜಿಸುವ ಬದಲಾಗಿ ಒಂದೆಡೆ ಭೂಮಿಯಲ್ಲಿ ವಿಸರ್ಜಿಸಿ ಆ ಮೂಲಕ ಗಿಡಮರಗಳ ಬೆಳೆಸುವಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ.
ಅದೇ ರೀತಿಯಲ್ಲಿ ಧಾರವಾಡದಲ್ಲಿ ಕೆಲವೊಂದು ಸ್ವಸಹಾಯ ಸಂಘಗಳ ಸದಸ್ಯರು ಪ್ರತಿವರ್ಷವೂ ಪರಿಸರಸ್ನೇಹಿ ಗಣೇಶನ ಪರಿಕಲ್ಪನೆಯನ್ನು ಗಣೇಶನ ಹಬ್ಬದಲ್ಲಿ ಅಳವಡಿಸುತ್ತಿದ್ದಾರೆ. ಅದರಂತೆ ಧಾರವಾಡ ಪಟ್ಟಣದ ಕಲಗೇರಿ ಜಗದೀಶ ವಿರೂಪಾಕ್ಷ ಭಾವೀಕಟ್ಟಿಯವರು ಗಣಪತಿಗೆ ಅತ್ಯಂತ ಪ್ರಿಯವಾದ ತೆಂಗಿನ ಕಾಯಿಯಿಂದ ತಯಾರಿಸಿದ ಪರಿಸರಸ್ನೇಹಿ ‘ನಾರಿಕೇಳ ಗಣಪ’ನನ್ನು ಐದಾರು ವರ್ಷದಿಂದ ಅಮೃತ ಕರಕುಶಲ ಅಕಾಡೆಮಿ ಮೂಲಕ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಭಾವಿಕಟ್ಟಿಯವರ ನೇತೃತ್ವದಲ್ಲಿ ಹಲವಾರು ಸ್ವಸಹಾಯ ಸಂಘಗಳ ಸದಸ್ಯ ಮಹಿಳೆಯರು ಮತ್ತು ಯುವಕ ಯುವತಿಯರು ನಾರಿಕೇಳ ಗಣಪತಿ ತಯಾರಿಕೆ ಕಲಿತಿದ್ದಾರೆ. ಕರಾವಳಿ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಲಭಿಸುವ ದೊಡ್ಡ ಗಾತ್ರದ ತೆಂಗಿನ ಕಾಯಿಗಳನ್ನು ಖರೀದಿಸಿ ತಂದು ಅವುಗಳಲ್ಲಿ ತಮ್ಮ ಕೈಚಳಕ ಹಾಗೂ ವಿಶಿಷ್ಟ ಸಲಕರಣೆಗಳ ಮೂಲಕ ಕೆತ್ತಿ ಸುಂದರ ಗಣಪತಿಯ ಮೂರ್ತಿಗಳನ್ನು ತಯಾರಿಸುತ್ತಾರೆ. ಇದು ಪೂರ್ತಿ ನೈಸರ್ಗಿಕ ಮತ್ತು ಕಡಿಮೆ ವೆಚ್ಚದಾಯಕ ಆಗಿದ್ದು, ಪರಿಸರ ಸ್ನೇಹಿಯೂ ಹೌದು. ಗಣೇಶನಿಗೆ ಪ್ರಿಯವಾದ ‘ಅಷ್ಟದ್ರವ್ಯ’ಗಳ ಪೈಕಿ ನಾರೀಕೇಳಕ್ಕೆ ಅಗ್ರಸ್ಥಾನ. ಗಣಪತಿಗೆ ಗಣಹೋಮವೂ ಅತ್ಯಂತ ವಿಶಿಷ್ಟವಾದ ಸಮರ್ಪಣೆ ಆಗಿರುವುದರಿಂದ ತೆಂಗಿನಕಾಯಿಯಿಂದಲೇ ತಯಾರಿಸಿದ ಗಣಪತಿಯ ಮೂರ್ತಿಯು ಭಕ್ತಾದಿಗಳಲ್ಲಿ ಭಕ್ತಿಯನ್ನು ಹೆಚ್ಚಿಸುತ್ತದೆ. ಮೂರ್ತಿಗಳನ್ನು ವಿಶಿಷ್ಟವಾದ ಭಂಗಿಗಳಲ್ಲಿ ಕೆತ್ತಿರುವುದರಿಂದ ಭಕ್ತಾದಿಗಳನ್ನು ಸೆಳೆಯುತ್ತಿದೆ.
ಈ ಮೂರ್ತಿಗಳು ಗಣೇಶನನ್ನು ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಪೂಜಿಸುವವರಿಗೆ ಸೂಕ್ತವಾಗಿದೆ. ಈ ಗಣಪತಿಯ ಮೂತಿಗಳನ್ನು ವಿಸರ್ಜಿಸುವಾಗ ನೀರಿನಲ್ಲಿರುವ ಜೀವ ಸಂಕುಲಕ್ಕೆ ಹಾನಿ ಮತ್ತು ಜಲ ಮೂಲಗಳನ್ನು ಹಾಳುಗೈಯುವ ಪ್ರಮೇಯವಿಲ್ಲ. ಬದಲಾಗಿ ಪೂಜಿಸಿದ ಗಣಪತಿಯ ಮೂರ್ತಿಯನ್ನು ನಿರ್ದಿಷ್ಟವಾದ ಜಾಗದಲ್ಲಿ ಗುಂಡಿಯನ್ನು ತೋಡಿ ಇಟ್ಟು ಪೋಷಿಸಿದರೆ ತೆಂಗಿನ ಮರವನ್ನು ಬೆಳೆಸುವ ಕೆಲಸವನ್ನು ಮಾಡಿ ಪರಿಸರ ರಕ್ಷಣೆಗೆ ಕೊಡುಗೆ ನೀಡಿದಂತಾಗುತ್ತದೆ.
ಒಟ್ಟಿನಲ್ಲಿ ಆಚರಣೆಗಳು, ಹಬ್ಬಹರಿದಿನಗಳ ಹೆಸರಿನಲ್ಲಿ ದುಂದುವೆಚ್ಚ ಹಾಗೂ ಪರಿಸರವನ್ನು ಹಾಳುಗೈಯ್ಯುವ ಇಂದಿನ ಯುವ ಜನತೆಯಲ್ಲಿ ಪರಿಸರ ಕಾಳಜಿ ಹಾಗೂ ಜಲಮೂಲಗಳನ್ನು ಉಳಿಸುವಂತಹ ಇಂತಹ ವಿಭಿನ್ನವಾದ ಪರಿಸರಸ್ನೇಹಿ ಗಣಪತಿಯನ್ನು ಪೂಜಿಸುವ ಕಾಳಜಿ ಮೂಡಿಸಬಹುದು. ಈ ಮೂಲಕ ಪರಿಸರ ರಕ್ಷಣೆಯ ಪರೋಕ್ಷ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಇಂತಹ ಕೆಲಸಗಳನ್ನು ಕೇವಲ ಸಂಘ ಸಂಸ್ಥೆಗಳು ಮತ್ತು ಒಬ್ಬೊಬ್ಬ ವ್ಯಕ್ತಿಗಳು ಮಾಡುವುದರ ಬದಲಾಗಿ ಸಮಸ್ತ ಪ್ರಜ್ಞಾವಂತ ನಾಗರೀಕರೂ ಕೆಲಸ ಮಾಡಬೇಕಾದ್ದು ಅನಿವಾರ್ಯ. ಆವೆ ಮಣ್ಣಿನ ಮೂರ್ತಿಗಳು ಆನ್‍ಲೈನ್‍ನಲ್ಲಿ ಲಭ್ಯವಿದ್ದು, www.aniruddhafoundation.com, www.amazon.in, www.flipkart.com ಮತ್ತು www.globalnpo.org ಮೂಲಕ ಕೊಂಡುಕೊಳ್ಳಬಹುದಾಗಿದೆ. ನಾರಿಕೇಳ ಗಣಪತಿಯ ಮೂರ್ತಿಗಳಿಗಾಗಿ ಶ್ರೀ ಜಗದೀಶ್ ಭಾವಿಕಟ್ಟಿ ದೂ: 9901874544 ಇವರನ್ನು ಸಂಪರ್ಕಿಸಬಹುದಾಗಿದೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು ದ.ಕ ಜಿಲ್ಲೆ-574198
ದೂ: 9742884160
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ