ಗಣೇಶ ಹಬ್ಬ ಬಂದಿದೆ . ಆಧುನಿಕತೆಯತ್ತ ಬೆಂಗಳೂರು ಹೆಜ್ಜೆ ಹಾಕಿದರೂ ,ಗ್ರಾಮೀಣ ಸೊಗಡಿನ ಕಲೆ ನಗರದಲ್ಲಿ ಉಳಿದಿದೆ. ಇಂದಿಗೂ ಕಲೆಯನ್ನು ನಂಬಿ ಮೂರ್ತಿ ತಯಾರಿಸುವಂತಹ ಕಲಾವಿದರು ಸಾಕಷ್ಟಿದ್ದಾರೆ.ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಕಲಾವಿದರು ಕಳೆದ ಒಂದು ತಿಂಗಳಿಂದ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸ್ವಾಭಾವಿಕ ಬಣ್ಣಗಳ ಮೂಲಕ ಗಣಪನ ಮೂರ್ತಿ ತಯಾರಿಕೆಗೆ ಒತ್ತು ನೀಡಲಾಗಿದೆ.
ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಜೊತೆ ಪೂಜಿಸಲು ಗೌರಿ ಗಣಪನ ಮಣ್ಣಿನ ಮೂರ್ತಿಯನ್ನು ಕೊಂಡು ತರಲು ಅಂಗಡಿಗೆ ಹೋದರೆ ಸಾಲುಸಾಲಾಗಿ ಜೋಡಿಸಿಟ್ಟಿರುವ ಗೌರಿಗಣಪನ ವಿಗ್ರಹಗಳು ನಿಮ್ಮನ್ನು ಸ್ವಾಗತಿಸುತ್ತದೆ.ಜೇಡಿಮಣ್ಣಿನಿಂದ ತಯಾರಾದ ಗಣಪತಿ ವಿಗ್ರಹಗಳು ಪೂಜೆಗೆ ಶ್ರೇಷ್ಟವೆಂಬ ಭಾವನೆ ನಮ್ಮಲ್ಲಿದೆ. ಈ ಕಾರಣ ಕೆರೆಗಳು ಕಾಣದಾಗುತ್ತಿರುವ ದಿನಗಳಲ್ಲೂ ,ಕುಂಬಾರಿಕೆ ಕಷ್ಟವೆನಿಸಿರುವ ಈ ಹೊತ್ತಿನಲ್ಲೂ ನಾವು ಮಣ್ಣಿನ ಗೌರಿ ಗಣಪನನ್ನು ಪೂಜಿಸುವುದನ್ನೇನ್ನೂ ಕಡಿಮೆ ಮಾಡಿಲ್ಲ.
ನಗರದಲ್ಲಿ ಕೆರೆಗಳು ಸೈಟುಗಳಾಗಿ ಪರಿವರ್ತಿತವಾಗುತ್ತಿದೆ. ಉತ್ತಮ ಗುಣಮಟ್ಟದ ಜೇಡಿಮಣ್ಣು ಕುಂಬಾರಿಕೆಗೆ ಸಿಗದೆ ಇದ್ದರೂ ಈ ಮೂರ್ತಿಗಳಿಗೆ ಬೇಡಿಕೆ ಇದೆ.ಹಾಗಾಗಿ ದೂರದ ಊರುಗಳಿಂದಾದರೂ ಮಣ್ಣನ್ನು ತಂದು ಈ ಮೂರ್ತಿಗಳನ್ನು ಮೂಡಿಸುವ ಹೊಣೆಗಾರಿಕೆ ಕುಂಬಾರರಗಿದೆ.
ಗಣಪನ ಆಗಮನ ,ವ್ಯಾಪಾರಿಗಳಲ್ಲಿ ಸಂಚಲನ ….
ವರ್ಷದಿಂದ ವರ್ಷಕ್ಕೆ ಗಣಪನನ್ನು ನಾನಾರೂಪದಲ್ಲಿ ತಯಾರಿಸುವ ಉಮೇದು ಮೂರ್ತಿ ತಯಾರಕರದು. ನಗರದ ಬನಶಂಕರಿ 1ನೇ ಹಂತದ ಶ್ರೀನಿವಾಸನಗರದ ಬ್ರಹ್ಮ ಚೈತನ್ಯ ಮಂದಿರದ ಬಳಿ ಗಣೇಶ ಮಾರಾಟ ಮಳಿಗೆಯಲ್ಲಿನ ಕಲಾವಿದನ ಕೈಚಳಕದಲ್ಲಿ ಮೂಡಿಬಂದಿರುವ ಗಣೇಶ ವಿಗ್ರಹಗಳು ಜನಮನಸೂರೆಗೊಳ್ಳುತ್ತದೆ.
ಭಕ್ತರ ಆಶಯಕ್ಕೆ ಪೂರಕವಾಗಿ ಸ್ಪಂದಿಸುವ ಕಲಾವಿದ ಕರಿಬಸಪ್ಪ ಅರ್ಧ ಅಡಿಯಿಂದ ಆಳೆತ್ತರದ ತರಾವರಿ ದೇಶಾವರಿ ಗಣೇಶಗಳನ್ನು ತಯಾರಿಸುತ್ತಾರೆ. ಮೂರ್ತಿ ತಯಾರಿಕೆ ಅವರ ಕುಲಕಸುಬು ಹೀಗಾಗಿ ಬಾಲ್ಯ ದಿಂದಲೇ ಈ ನಂಟನ್ನು ಬೆಳೆಸಿಕೊಂಡ ಈ ಕಲಾವಿದನ ಕುಟುಂಬ ದವರೆಲ್ಲ ಕಲಾಸೇವೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ 5000 ಗಣಪತಿ ವಿಗ್ರಹಗಳನ್ನು ತಯಾರಿಸುವ ಜೊತೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಭಂಗಿಯ ಆಲಂಕಾರಿಕ ಗಣೇಶನನ್ನು ಸಿದ್ದಪಡಿಸುತ್ತಾರೆ.
ನಾಗರಾಜ್ ರವರ ವಿಶಿಷ್ಟ ಕಲೆಗೆ ಮಾರುಹೋಗಿ ಹಬ್ಬಕ್ಕೆ ಇನ್ನು ಮೂರು ತಿಂಗಳು ಇರುವಾಗಲೆ ಫೋಟೋ ಹಿಡಿದು ಇಂತಹ ಮೂರ್ತಿಯೇ ಬೇಕೆಂದು ಬೇಡಿಕೆಯನ್ನಿಡುವ ಗಣೇಶ ಭಕ್ತರ ಸಂಖ್ಯೇ ಆಪಾರ.
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ 2-3 ದಿನ ಪೂಜೆಮುಗಿಸಿ ಪೂಜೆಗೊಂಡು ಗಂಗೆಯ ಮಡಿಲು ಸೇರುವ ಗಣಪನ ಹುಟ್ಟು ಮಾತ್ರ ಗಜಪ್ರಸವವೇ ಸರಿ. ಹಬ್ಬದ ಸಂಭ್ರಮದ ಜೊತೆ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬ ಆಚರಿಸುವ ಹೊಣೆ ಸಾರ್ವಜನಿಕರ ಮೇಲಿದೆ.
-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ