ಮಂಗಳೂರು: ಭಾಷಾ ಸಾಮರಸ್ಯತೆಗೆ ತುಳು ಭಾಷೆ ಸಾಕ್ಷಿ. ಈ ತುಳುನಾಡಿನಲ್ಲಿ ಬೇರೆ ಬೇರೆ ಭಾಷಿಗರು ಇಲ್ಲಿ ಬಂದು ತುಳುವರೇ ಆಗಿದ್ದಾರೆ. ಅಷ್ಟೇ ವೇಗವಾಗಿ ಈ ಮಣ್ಣಿನ ಸಂಸ್ಕಾರವನ್ನು ಅರಗಿಸಿಕೊಂಡಿ ದ್ದಾರೆ. ಸರ್ವರ ಸಹಕಾರದೊಂದಿಗೆ ಮೂಲ ಭಾಷೆ ತುಳು ವಿಜೃಂಬಿಸುತ್ತಿದೆ. ಮನೆ- ಮನೆಗಳ ಮಧ್ಯೆ ವಿನಿಮಯ. ಕೊಡು-ಕೊಳ್ಳುವಿಕೆ ಎಲ್ಲವೂ ನಿರ್ವಂಚನೆಯಿಂದ ನಡೆಯುತ್ತಿದೆ. ಇಂದು ಮಹಿಳಾ ಆಟ ಕೂಟಗಳ ಸಂಭ್ರಮ ಹೆಂಗಸರಿಗೊಂದು ವಿಶೇಷ ವೇದಿಕೆ. ಅವರು ಜತನದಿಂದ ತುಳುವನ್ನು ತಮ್ಮ ಮಕ್ಕಳಿಗೆ ದೊಡ್ಡ ಕೊಡುಗೆ ಕೊಟ್ಟಂತೆಯೇ ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಹೇಳಿದರು.
ಅವರು ಶುಕ್ರವಾರ ಕಂಕನಾಡಿ ಗರೋಡಿಯ ಸರ್ವಮಂಗಳೆ ಸಭಾಭವನದಲ್ಲಿ ನಡೆದ ತುಳುಕೂಟ ಕುಡ್ಲ (ರಿ) ನ ಬಂಗಾರ್ ಪರ್ಬ ಸರಣಿ- 07ರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೀಪ ಬೆಳಗಿಸಿ ಆಟ- ಕೂಟ -ನಲಿಕೆಯನ್ನು ಉದ್ಘಾಟನೆ ನೆರವೇರಿಸಿ ಚಿಲಿಂಬಿ ಸಾಯಿ ಮಂದಿರದ ಮುಕ್ತೇಸರರಾದ ವಿಶ್ವಾಸ ಕುಮಾರ್ ದಾಸ್‌ರವರು, ತುಳುವನ್ನು ನಾವು ಬಹಳ ಹಚ್ಚಿಕೊಂಡು ಕೃಷಿ ಮಾಡುವ ಭಾಷೆ, ನಮ್ಮ ಮಾತೃಭಾಷೆಯನ್ನು ನಾವೇ ಕಾಪಾಡಿಕೊಂಡು ಬರಬೇಕು. ಹಾಗಾಗಿ ನಾನು ತುಳು ಭಾಷಾ ಕಾರ್ಯಕ್ರಮಗಳಿಗೆ ಕೂಡಲೇ ಸ್ಪಂದಿಸುತ್ತೇನೆ. ತುಳು ಭಾಷೆ, ಸಂಘಟನೆಗಳಿಗೆ ನಮ್ಮ ದೇವಾಲಯದಲ್ಲಿ ಬಹಳ ಅವಕಾಶ ಮಾಡಿಕೊಡುತ್ತೇನೆ. ತುಳು ಕೂಟದ ಸರಣಿ ಕಾರ್ಯಕ್ರಮವನ್ನು ನಮ್ಮಲ್ಲಿ ಯೂ ನಡೆಸಲು ಈ ಮೂಲಕ ಕರೆಯುತ್ತೇನೆ. ನನ್ನ ಧರ್ಮಪತ್ನಿ ಲಾವಣ್ಯ ದಾಸ್ ಕೂಡಾ ತುಳು ನಾಟಕ, ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶವಿದೇಶಗಳಲ್ಲಿ ಭಾಷಾ ಪ್ರಸರಣಕ್ಕಾಗಿ ಶ್ರಮ ವ್ಯಯಿಸುತ್ತಿದ್ದಾಳೆ. ತುಳುಕೂಟದ ನಿರಂತರ ಐವತ್ತು ವರ್ಷಗಳ ಸಾಧನೆಗಾಗಿ ಕೂಟವನ್ನು ಅಭಿನಂದಿಸುತ್ತೇನೆ ಎಂದರು.
ಅಧ್ಯಕ್ಷೀಯ ಸ್ಥಾನದಿಂದ ಮರೋಳಿ ಬಿ. ದಾಮೋದರ ನಿಸರ್ಗ ಮಾತನಾಡುತ್ತಾ, ಬಹಳ ಕಷ್ಟದಿಂದ ಕಟ್ಟಿ ಬೆಳೆಸಿದ ಸಂಸ್ಥೆ ಇದು. ಇಂದು ಸಂತಸವಾಗುತ್ತಿದೆ. ಸ್ವಲ್ಪವೇ ಭೂಭಾಗ ತುಳುವರದ್ದಾಗಿದ್ದರೂ ಇಂದು ಕವಲು- ಕವಲಾಗಿ ಎಲ್ಲೆಡೆ ತುಳು ಪಸರಿಸಿದೆ. ತುಳುವ ಎಂಬಾಗ ಎದೆ ಹರ್ಷಿಸುತ್ತದೆ, ಮನ ಮಿಡಿಯುತ್ತಿದೆ. ಇನ್ನೂ ಎಷ್ಟೋ ಕಡೆ ತುಳು ತಲುಪಿಲ್ಲ ಎಂಬುದು ಖೇದಕರ. ಹಳೆಯ ಪದಗಳು, ವಸ್ತು-ವಾಹನಗಳ ಹೆಸರುಗಳು. ಸ್ಥಳಗಳ ಹೆಸರುಗಳು ಅದರ ಮೂಲ ಹೆಸರಿನಲ್ಲಷ್ಟೇ ಗುರುತಿಸಿದಂತಾದರೆ ತುಳುಕೂಟದ ಪ್ರಯತ್ನ ಫಲ ಕೊಟ್ಟಂತೆಯೇ ಸರಿ. ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದರು.
ಮಮತಾ ಪ್ರವೀಣ, ಕಾಮಾಕ್ಷಿ ಪ್ರಾರ್ಥನೆ ಹಾಡಿದರು. ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ಷಮ ನಿರ್ವಹಿಸಿದರು. ಅತಿಥಿಗಳಾಗಿ ಗರೋಡಿ ಸಾಯಿ ಮಂದಿರದ ಶ್ರೀ ಗಂಗಾಧರ ಶಾಂತಿ, ಶ್ರೀಮತಿ ಜಯಂತಿ ಗಂಗಾಧರ ಶಾಂತಿ, ಮ.ನ.ಪಾ. ಸದಸ್ಯ ಶ್ರೀ ಕೇಶವ ಮರೋಳಿ, ಶ್ರೀಮತಿ ಸರಳಾ ಕುಲಾಲ್ ಉಪಸ್ಥಿತರಿದ್ದರು.
ಕೂಟದ ಪ್ರಮುಖರಾದ ಜೆ.ವಿ. ಶೆಟ್ಟಿ, ಶ್ರೀಚಂದ್ರಶೇಖರ ಸುವರ್ಣ, ಹೇಮಾ ನಿಸರ್ಗ 'ಶ್ರೀಮತಿ ಸುಜಾತಾ ಸುವರ್ಣ, ದಿನೇಶ್ ಕುಂಪಲ, ರಮೇಶ್ ಕುಲಾಲ್ ಬಾಯಾರು: ವಿಶ್ವನಾಥ ಬಜಾಲ್, ಉಪಸ್ಥಿತರಿದ್ದರು. ಕೊನೆಯಲ್ಲಿ ಗೋಪಾಲಕೃಷ್ಣ ಪಿ ಧನ್ಯವಾದವಿತ್ತರು. ಬಳಿಕ ಮಹಿಳಾ ಸಂಭ್ರಮದ ಪೂರ್ಣ ಸ್ಪರ್ಧೆಗಳು ವಿಶೇಷವಾಗಿ ಮಹಿಳೆಯರೇ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಜರಗಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ



