ಮಂಗಳೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಇರುವ ''ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ'' ಯಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಣಯಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ಈ ಕುರಿತು ನಮ್ಮ ಸಂಘವು ಹಲವಾರು ಬಾರಿ ಮಂಡಳಿಯ ಉನ್ನತ ಅಧಿಕಾರಿಗಳು ಮತ್ತು ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ವಿವರಿಸಿ ಅವುಗಳನ್ನು ಶೀಘ್ರ ಪರಿಹರಿಸುವಂತೆ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಚಿವರು ನೀಡಿರುವ ಆಶ್ವಾಸನೆ ಕಾರ್ಯರೂಪಕ್ಕೆ ಬಂದಿಲ್ಲ,ಅಷ್ಟೇ ಅಲ್ಲದೆ ಗಾಯದ ಮೇಲೆ ಬರೆ ಎಳೆಯುವಂತೆ ಕಾರ್ಮಿಕರ ಸೌಲಭ್ಯಗಳಲ್ಲಿ ಕಡಿತ ಮಾಡುವ ಬಗ್ಗೆ ಮಂಡಳಿಯ ಅಧ್ಯಕ್ಷರು (ಕಾರ್ಮಿಕ ಸಚಿವರು) ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಈ ರೀತಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಬಗ್ಗೆ ನಮ್ಮ ತೀವ್ರ ಆಕ್ಷೇಪಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಹೇಳಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು (ಸೆ.28) ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಮಾತನಾಡಿ, ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನಡವಳಿಕೆಗಳನ್ನು ಖಂಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಸರಕಾರದ ಕಾರ್ಮಿಕ ವಿರೋಧಿ ನಡವಳಿಕೆಗಳನ್ನು ಹಲವು ಉದಾಹರಣೆಗಳ ಸಹಿತ ವಿವರಿಸಲಾಗಿದೆ. ಹಲವು ವಿಷಯಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ಅವುಗಳನ್ನು ಕೂಡಲೇ ಸರಿಪಡಿಸುವಂತೆ ಮುಖಂಡರು ಆಗ್ರಹಿಸಿದರು.
ಮುಖ್ಯಾಂಶಗಳು:
2021-22 ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ ವಿದ್ಯಾರ್ಥಿ ವೇತನದ ಅರ್ಜಿಗಳಲ್ಲಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಇನ್ನೂ ಹಣ ಬಂದಿರುವುದಿಲ್ಲ ಇದನ್ನು ಶೀಘ್ರ ಪಾವತಿ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು.
2022-23 ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ ವಿದ್ಯಾರ್ಥಿ ವೇತನದ ಸಹಾಯಧನದ (ಸ್ಕಾಲರ್‌ಶಿಪ್) ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಪಾವತಿ ಮಾಡಬೇಕು.
ನೂತನವಾಗಿ ಆಯ್ಕೆಯಾದ ಕರ್ನಾಟಕ ಸರ್ಕಾರದ ಕಾರ್ಮಿಕ ಮಂತ್ರಿಗಳಾದ ಸಂತೋಷ್ ಲಾಡ್ ರವರು ಏಕಪಕ್ಷೀಯ ನಿರ್ಧಾರ ಕೈಗೊಂಡು ಕಾರ್ಮಿಕರ ಮದುವೆ, ಅಪಘಾತ ಮರಣ, ಸಹಜ ಮರಣ, ವೃದ್ಧಾಪ್ಯ ಪಿಂಚಣಿ ಹಾಗೂ ಸ್ಕಾಲರ್‌ಶಿಪ್‌ನಲ್ಲಿ ಭಾರಿ ಪ್ರಮಾಣದಲ್ಲಿ ಕಡಿತ ಮಾಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಇದನ್ನು ಕೂಡಲೇ ಹಿಂಪಡೆದು ಈ ಮುಂಚಿನಂತೆ ಕಾರ್ಮಿಕರಿಗೆ ಈ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
ಭಾರತ ದೇಶದಲ್ಲಿ ಒಟ್ಟು 10 ರಾಷ್ಟ್ರೀಯ ಮಟ್ಟದ ಟ್ರೇಡ್ ಯೂನಿಯನ್‌ಗಳಿವೆ. ಆದರೆ ಕರ್ನಾಟಕ ಸರಕಾರ ನಮ್ಮ ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕೇವಲ ಒಂದು ಕಾರ್ಮಿಕರ ಸಂಘಟನೆಯನ್ನು ಹೊರತು ಪಡಿಸಿ ಇತರ ಎಲ್ಲಾ ಟ್ರೇಡ್ ಯೂನಿಯನ್‌ಗಳನ್ನು ಕಡೆಗಣಿಸಿರುತ್ತದೆ. ಮತ್ತು ಈ ಮಂಡಳಿಯಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವಿರುವಂತಹ ಕಾರ್ಮಿಕ ಸಂಘಗಳ ನಾಯಕರಿಗೆ ಸದಸ್ಯತ್ವ ನೀಡುವುದು ವಾಡಿಕೆ ಮತ್ತು ನಿಯಮವೂ ಆಗಿರುತ್ತದೆ. ಆದರೆ ಸದ್ರಿ ನೂತನವಾಗಿ ಆಯ್ಕೆಯಾದ ಕಾರ್ಮಿಕ ಸಚಿವರು ಕಾಂಗ್ರೇಸ್ ಪಕ್ಷದ ಪಧಾಧಿಕಾರಿಗಳನ್ನು ಈ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದು ಕಾರ್ಮಿಕರಿಗೆ ಮಾಡಿದ ಅನ್ಯಾಯವಾಗಿದೆ. ಮತ್ತು ನಮ್ಮ ಭಾರತೀಯ ಮಜ್ದೂರು ಸಂಘ ದೇಶದಲ್ಲಿ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾಗಿರುತ್ತದೆ. ಆದ್ದರಿಂದ ನಮ್ಮ ಸಂಘವು ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿತವಾದ ರಾಜ್ಯ ಫೆಡರೇಷನ್ ಆಗಿದ್ದು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸದಸ್ಯತ್ವ ನೀಡಬೇಕೆಂದು ಒತ್ತಾಯಿಸುತ್ತೇವೆ. ಕರ್ನಾಟಕ ರಾಜ್ಯ ಸರಕಾರವು ತನ್ನ ಕಾರ್ಮಿಕ ನೀತಿಯಲ್ಲಿ ಭಾರಿ ಕಾರ್ಮಿಕ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ. ಹಾಗೂ ರಾಷ್ಟ್ರದ ನಂಬರ್ 1 ಕಾರ್ಮಿಕ ಸಂಘವಾದ ಬಿ.ಎಂ.ಎಸ್‌ಗೆ ಪ್ರಾತಿನಿಧ್ಯ ನೀಡದಿರುವುದನ್ನು ನಾವು ಖಂಡಿಸುತ್ತೇವೆ. ನಮ್ಮನ್ನಾಳುವ ಸರಕಾರದ ಪ್ರತಿನಿಧಿಗಳು 'ಕಾರ್ಮಿಕ ವರ್ಗ ಹಾಗೂ ದುಡಿಯುವ ರೈತರು ಈ ದೇಶದ ಬೆನ್ನೆಲುಬು' ಎಂದು ಹೇಳುತ್ತಾರೆ. ಆದರೆ ಒಳಗೊಳಗೆ ಕಾರ್ಮಿಕರಿಗೆ ಮತ್ತು ರೈತರಿಗೆ ಮಾರಕವಾಗುವಂತ ನೀತಿ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕೆಂದು ನಾವು ನಮ್ಮ ಸಂಘದಿಂದ ಒತ್ತಾಯಿಸುತ್ತೇವೆ ಎಂದು ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮತ್ತು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಹೇಳಿದರು.
CSC ಗಳ ಮರುನೋಂದಣಿ ಹೆಸರಲ್ಲಿ ಹಲವು ಅಕ್ರಮ:
ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮತ್ತು ಮರುನೋಂದಣಿ ಹಾಗೂ ಎಲ್ಲಾ ಸೌಲಭ್ಯಕ್ಕೆ ಅರ್ಜಿ ಹಾಕುವ ವ್ಯವಸ್ಥೆಯನ್ನು ಕೇವಲ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಸಂಘಟನೆಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕೆಂದು ನಾವು ನಮ್ಮ ಸಂಘದಿಂದ 2018 ರಿಂದ 2023 ರವರೆಗೆ ಹಲವಾರು ಬಾರಿ ಪತ್ರ ಬರೆದು ವಿನಂತಿಸಿದರೂ ಸಹ ಕರ್ನಾಟಕ ಸರಕಾರದ ಮಂತ್ರಿಗಳಾಗಲಿ, ಕಟ್ಟಡ ಕಾರ್ಮಿಕ ಮಂಡಳಿಯ ಅಧ್ಯಕ್ಷರಾಗಲಿ, ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾಗಲಿ ಗಮನ ಹರಿಸಲಿಲ್ಲ. ಹಾಗೂ ಪತ್ರಗಳನ್ನು ಪರಿಗಣಿಸಲೂ ಇಲ್ಲ ಎಂಬುದು ತುಂಬಾ ವಿಷಾದನೀಯ ಸಂಗತಿ. ಕೋವಿಡ್ 19 ನಂತರ ಫಲಾನುಭವಿಗಳು ಕಾರ್ಮಿಕ ಕಾರ್ಡ್ ಮಾಡಿಸಲು ಕರ್ನಾಟಕ ಸರಕಾರ ಸಾರ್ವಜನಿಕವಾಗಿ, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಸಾರ್ವಜನಿಕ ಸೇವಾಕೇಂದ್ರ (CSC)ಗಳಿಗೆ ನೋಂದಣಿ ಮತ್ತು ಮರುನೋಂದಣಿ ಹಾಗೂ ಎಲ್ಲಾ ಸೌಲಭ್ಯಕ್ಕೆ ಅರ್ಜಿ ಹಾಕಲು ಅವಕಾಶ ನೀಡಿದ ಪರಿಣಾಮವಾಗಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಲ್ಲದವರ ಭಾರಿ ಪ್ರಮಾಣದಲ್ಲಿ ನೋಂದಣಿ ಆಗಿರುತ್ತದೆ ಎಂಬುದು ನಮ್ಮ ಸ್ಪಷ್ಟವಾದ ಅಭಿಪ್ರಾಯ ಇದು ಕಲ್ಯಾಣ ಮಂಡಳಿಯ ಅಧ್ಯಕ್ಷರು ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಏಕಪಕ್ಷೀಯ ನಿರ್ಣಯದಿಂದ ಆದ ತಪ್ಪಾಗಿರುತ್ತದೆ. ಆದುದರಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಲ್ಲದವರು ನೋಂದಾವಣೆ ಆಗುವುದನ್ನು ಮತ್ತು ಸೌಲಭ್ಯ ಪಡೆಯುವುದನ್ನು ತಡೆಗಟ್ಟಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.
ಸಾಮಾಜಿಕ ಭದ್ರತಾ ಯೋಜನೆಗಳ ಹಣ ದುರುಪಯೋಗ:
ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವುದನ್ನು ಕೈಬಿಡಬೇಕು. ಉದಾಹರಣೆಗೆ:- ಮೆಡಿಕಲ್ ಕ್ಯಾಂಪ್ ದೃಷ್ಟಿಯಲ್ಲಿ ಟೆಂಡರ್ ಕರೆಯುವುದು, ಉಪಯೋಗವಿಲ್ಲದ ಮೆಡಿಕಲ್ ಕಿಟ್‌ಗಳನ್ನು ಕಾರ್ಮಿಕರಿಗೆ ವಿತರಿಸುವುದು, ಕಳಪೆ ದರ್ಜೆಯ ಕೆಲಸದ ಸಾಮಾಗ್ರಿಗಳನ್ನು ವಿತರಿಸುವುದು ಇತ್ಯಾದಿ.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಹಾಗೂ ಅವಲಂಬಿತರ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮರುಪಾವತಿಯಲ್ಲಿರುವ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸೇಕು.
ಕಟ್ಟಡ ಮತ್ತು ಇತರೆ ಕಾರ್ಮಿಕರ ವಸತಿ ಯೋಜನೆಗೆ ಸಾಲ ಮತ್ತು ಸಹಾಯಧನವನ್ನು ಕೂಡಲೇ ನೀಡಬೇಕು ಮತ್ತು ವಸತಿ ಯೋಜನೆಯ ಹೆಸರಲ್ಲಿ ಕರ್ನಾಟಕ ಸರ್ಕಾರದ ಇತರ ಮಂಡಳಿಗಳಿಗೆ ಹಣ ನೀಡುವುದನ್ನು ನಿಲ್ಲಿಸಬೇಕು.
ಮರಣ ಹೊಂದಿದ ಕಾರ್ಮಿಕರ ಸಂಗಾತಿಗೆ ವಿಧವಾ ವೇತನ ನೀಡಬೇಕು ಮತ್ತು ಮರಣ ಹೊಂದಿದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು.
ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರಲ್ಲದ ಇತರ ಅಸಂಘಟಿತ ಅಸಂಖ್ಯಾತ ವಿಭಾಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೂ ನೋಂದಣಿ ಮತ್ತು ಸರ್ಕಾರದಿಂದ ಸೌಲಭ್ಯಗಳನ್ನು ನೀಡುವ ಬಗ್ಗೆ ನೀತಿಗಳನ್ನು ರೂಪಿಸಬೇಕು. ಮತ್ತು ಈಗಾಗಲೇ ಇರುವ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ವ್ಯಾಪ್ತಿಗೆ 'ಈ-ಶ್ರಮ' ದ ಅಡಿಯಲ್ಲಿ ಬರುವ 359 ವಿಭಾಗದ ಕಾರ್ಮಿಕರನ್ನು ಸೇರಿಸಿಕೊಳ್ಳಬೇಕು. ಮತ್ತು ಈ ಕಾರ್ಮಿಕರ ಭವಿಷ್ಯಕ್ಕೆ ಪೂರಕವಾಗಬಲ್ಲ ಯೋಜನೆ ರೂಪಿಸಿ ಈ ಮಂಡಳಿಗೆ ಸರಕಾರ ಅನುದಾನ ನೀಡಬೇಕು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈಗ ಇರುವ ಸುಂಕದ ಹಣವನ್ನು ಮಂಡಳಿಯ ನೋಂದಾಯಿತ ಕಾರ್ಮಿಕ ಫಲಾನುಭವಿಗಳಿಗೆ ಕಟ್ಟಡ ಕಾರ್ಮಿಕ ಕಾನೂನಿನನ್ವಯ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಕೊಡುವ ಕಲ್ಯಾಣ ಮಂಡಳಿಯು ಜಾರಿಗೆ ತಂದಿರುವ ಸೌಲಭ್ಯಗಳನ್ನು ಕೊಡಲು ಮಾತ್ರ ಉಪಯೋಗಿಸಬೇಕೆಂದು ಉಚ್ಚ ನ್ಯಾಯಾಲಯದ ಆದೇಶ ಇರುತ್ತದೆ. ಆದರೂ ಸಹ ಕರ್ನಾಟಕ ಸರಕಾರ ಹಾಗೂ ಕಲ್ಯಾಣ ಮಂಡಳಿಯ ಅಧ್ಯಕ್ಷರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಮಂಡಳಿಯ ಹಣವನ್ನು ದುರುಪಯೋಗಪಡಿಸಿಕೊಂಡು ''ನ್ಯಾಯಾಲಯಗಳ ಆದೇಶ ಧಿಕ್ಕರಿಸಿ' ಮಂಡಳಿಯ ಹಣವನ್ನು ಕರ್ನಾಟಕ ಸರಕಾರದ ಇತರೆ ಅಂಗ ಸಂಸ್ಥೆಗಳಿಗೆ ಕೊಡುತ್ತಾ ಬಂದಿರುವುದು ತಿಳಿದು ಬಂದಿರುತ್ತದೆ. ಇದು ತುಂಬಾ ಅನ್ಯಾಯ, ಇದನ್ನು ಕೂಡಲೇ ಸಂಪೂರ್ಣವಾಗಿ ನಿಲ್ಲಿಸಬೇಕು. 'ನಮ್ಮ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಇನ್ನು ಮುಂದೆ ಯಾವುದೇ ಅನಾವಶ್ಯಕವಾದ ಮತ್ತು ಕಾರ್ಮಿಕರಿಗೆ ಉಪಯೋಗವಿಲ್ಲದ ಯೋಜನೆಗಳನ್ನು ಕೊಡುವುದು ಬೇಡ.' ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈಗ ಜಾರಿಯಲ್ಲಿರುವ ಸೌಲಭ್ಯಗಳನ್ನು ನೀಡುವಂತಾಗಬೇಕು. ಇನ್ನು ಮುಂದೆ ಸರಕಾರದ ಇತರೆ ಅಂಗ ಸಂಸ್ಥೆಗಳಿಗೆ ಹಣ ಮಂಜೂರು ಮಾಡುವುದನ್ನು ನಿಲ್ಲಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಈಗ ಕೊಡುವ ಸೌಲಭ್ಯಗಳನ್ನು ಕಡಿತ ಮಾಡಿದ್ದೇ ಆದಲ್ಲಿ ನಮ್ಮ ನಾವು ನಮ್ಮ ಸಂಘದಿಂದ ಉಗ್ರ ಹೋರಾಟವನ್ನು ಕರ್ನಾಟಕ ಸರಕಾರ ಹಾಗೂ ಕಲ್ಯಾಣ ಮಂಡಳಿಯ ವಿರುದ್ಧ ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಸರಕಾರದ ಕಟ್ಟಡ ಕಾರ್ಮಿಕರ ವಿರೋಧ ನೀತಿಯನ್ನು ಧಿಕ್ಕರಿಸಿ ಹೋರಾಟ ಮಾಡುವುದು ಹಾಗೂ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಸಂಘಟನೆಯ ಪದಾಧಿಕಾರಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಎಲ್ಲಾ ಬೇಡಿಕೆಗಳನ್ನು ಕರ್ನಾಟಕ ಸರಕಾರ ಹಾಗೂ ಕಲ್ಯಾಣ ಮಂಡಳಿ ಕೂಡಲೇ ಈಡೇರಿಸಬೇಕು; ಇಲ್ಲವಾದಲ್ಲಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕ ವಿರೋಧವನ್ನು ತಾವುಗಳು ಎದುರಿಸಬೇಕಾಗುತ್ತದೆ ಎಂದು ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಬೆಳ್ತಂಗಡಿಯ ಅಧ್ಯಕ್ಷರಾದ ಉದಯ ಬಿ.ಕೆ ಹಾಗೂ ಪ್ರಧಾನ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ರವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಭಗವಾನ್ ದಾಸ್, ರಾಜ್ಯ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್‌ನಾಥ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


