ಪಣಜಿ: ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಕನ್ನಡಿಗರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಗೋವಾದ ಸರ್ವತೋಮುಖ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರ ಬಹು ದೊಡ್ಡದಿದೆ. ಗೋವಾದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕೂಡ ಮಹತ್ತರ ಕಾರ್ಯ ನಡೆಯುತ್ತಿದೆ. ಕಳೆದ ಸುಮಾರು 9 ವರ್ಷಗಳಿಂದ ಗೋವಾದ ಮಾಪ್ಸಾದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಕವಿಶೈಲ ಕನ್ನಡ ಸಂಘದ ವತಿಯಿಂದ ಕನ್ನಡ ಗಣಪನನ್ನು ಪ್ರತಿಷ್ಠಾಪಿಸುತ್ತಿರುವುದು ಕೂಡ ಗೋವಾ ಕನ್ನಡಿಗರೆಲ್ಲ ಹೆಮ್ಮೆ ಪಡುವ ವಿಷಯವಾಗಿದೆ. ವಿಘ್ನ ನಿವಾರಕ ಗಣಪತಿಯು ಕನ್ನಡಿಗರ ಎಲ್ಲ ಸಮಸ್ಯೆಗಳನ್ನೂ ನಿವಾರಿಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ನುಡಿದರು.
ಗೋವಾದ ಮಾಪ್ಸಾದಲ್ಲಿ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ರವರ ಅಧ್ಯಕ್ಷತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಕನ್ನಡ ಗಣಪನ 9ನೆಯ ದಿನದ ಮಹಾಪೂಜಾ ಕಾರ್ಯಕ್ರಮದಲ್ಲಿ ಡಾ. ಸಿದ್ಧಣ್ಣ ಮೇಟಿ ಮಾತನಾಡುತ್ತಿದ್ದರು.
ಗೋವಾದಲ್ಲಿ ಕನ್ನಡಿಗರಿಗೆ ತೊಂದರೆಯಾದಾಗ ನಾನು ಕೂಡ ಕಳೆದ ಅನೇಕ ವರ್ಷಗಳಿಂದ ಸಂಕಷ್ಟದಲ್ಲಿರುವ ಕನ್ನಡಿಗರೊಂದಿಗೆ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ. ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದರೂ ಕೂಡ ಕನ್ನಡಿಗರು ಸರ್ಕಾರದ ಹಲವು ಪ್ರಮುಖ ಯೋಜನೆಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕ ಮತ್ತು ಗೋವಾ ಎರಡೂ ಸರ್ಕಾರಗಳು ಗೋವಾದಲ್ಲಿರುವ ಕನ್ನಡಿಗರಿಗೆ ಎಲ್ಲ ಸರ್ಕಾರಿ ಯೋಜನೆಗಳ ಸೌಲಭ್ಯ ಲಭಿಸುವಂತೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಕರ್ನಾಟಕ ಹಾಗೂ ಗೋವಾ ಸರ್ಕಾರದ ಬಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ರೇಣುಕಾ ಶೆಟ್ಟರ್, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಗೌ. ಕಾರ್ಯದರ್ಶಿ ಪ್ರಕಾಶ್ ಭಟ್, ಗಣಪತಿ ಭಟ್, ಶ್ರೀಲತಾ ಭಟ್, ಪಾರ್ವತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


