ಮಡಿಕೇರಿ: ಇಲ್ಲಿಗೆ ಸಮೀಪದ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಶ್ರೀ ಗಣೇಶ ಸೇವಾ ಸಮಿತಿಯ ಆಶ್ರಯದಲ್ಲಿ 31ನೇ ವರ್ಷದ ಅದ್ದೂರಿಯ ಗೌರಿ ಗಣೇಶೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ವೈಶಿಷ್ಟ್ಯ ಪೂರ್ಣವಾಗಿ ನೆರವೇರಿತು.
ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ವಿಶೇಷ ಪೂಜಾ ವಿಧಿಗಳು ನೇರವೇರಿದವು. ಬೆಳಗ್ಗೆ 9 ಗಂಟೆಯಿAದ ಗಣಪತಿ ಹೋಮ, ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಟಾಪನೆ ನೆರವೇರಿತು. ಬಳಿಕ ನಡೆದ ಧಾರ್ಮಿಕ ಪ್ರವಚನದಲ್ಲಿ ಮಾತನಾಡಿದ ಸೇವಾ ಭಾರತಿಯ ಕೊಡಗು ಜಿಲ್ಲಾಧ್ಯಕ್ಷರಾದ ಟಿ.ಸಿ ಚಂದ್ರನ್ ಅವರು, ಇಂದಿನ ಆಧುನಿಕ ಯುಗದಲ್ಲಿ ಸಂಸ್ಕಾರಯುತ ಜೀವನ ಮರೆಯಾಗುತ್ತಿದ್ದು ಮಕ್ಕಳು ದುಷ್ಚಟಗಳಿಗೆ ಒಳಗಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮನೆಯಿಂದಲೇ ಮಕ್ಕಳಿಗೆ ಮೌಲ್ಯಯುತ ಜೀವನ ಸಿಗುವಲ್ಲಿ ಪೋಷಕರು ಶ್ರಮ ವಹಿಸಬೇಕೆಂದು ಕರೆ ನೀಡಿದರು. ಮನಸ್ಸಿನ ಏಕಾಗ್ರತೆ ಪ್ರಮುಖವಾಗಿದ್ದು ದೇವರು, ಭಕ್ತಿ, ಸಂಸ್ಕೃತಿ, ಸನ್ನಢತೆಯ ಸಲುವಾಗಿ ಸದಾ ಜಾಗೃತವಾಗಿರಬೇಕು, ಒಳ್ಳೆಯ ವಿಚಾರಗಳಿಗಾಗಿ ನಮ್ಮ ಮನಸ್ಸನ್ನು ಅರ್ಪಣೆ ಮಾಡಬೇಕು ಎಂದ ಅವರು, ಮಾತೃ ಭಾಷೆ, ಉಡುಗೆ ತೊಡುಗೆ, ಭಜನೆ, ಮನೆಯಲ್ಲಿ ಸಹ ಭೋಜನ ಹಾಗೂ ಧಾರ್ಮಿಕ ಆಚರಣೆಗಳ ಮಹತ್ವದ ಕುರಿತು ಉದಾಹರಣೆ ಸಹಿತ ವಿವರಣೆ ನೀಡಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ 16 ಮಂದಿ ಸಾಧಕರನ್ನು ಶ್ರೀ ಗಣೇಶ ಸೇವಾ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಮೇಕೇರಿಯ ಗೌರಿ ಶಂಕರ ದೇವಾಲದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಕೆ.ಕೆ. ಪೂರ್ಣಯ್ಯ, ಹಾಕತ್ತೂರು ವಿ.ಎಸ್.ಎಸ್.ಎನ್‌ನ ನೂತನ ನಿರ್ದೇಶಕರಾಗಿ ಚುನಾಯಿತರಾದ ಚೋಂಡಿರ ಜಿ. ಚಂಗಪ್ಪ, ತೋರೇರ ಅಯ್ಯಪ್ಪ, ಲೋಕೇಶ್ ಟಿ.ವಿ. ದೇವಾಲಯದ ಅರ್ಚಕರಾದ ಕೃಷ್ಣ ಭಟ್, ಗಣೇಶ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಟಿ.ಕೆ ದಿವಾಕರ್, ಸ್ಥಾಪಕ ಕಾರ್ಯದರ್ಶಿಗಳು ಹಾಗೂ ಗುತ್ತಿಗೆದಾರರಾದ ಪಿ.ಕೆ ಬಾಲಕೃಷ್ಣ, 3 ಬಾರಿ ಕೊಡಗು ಜಿಲ್ಲಾ ಚುನಾವಣಾ ರಾಯಬಾರಿಯಾಗಿ ಕಾರ್ಯ ನಿರ್ವಹಿಸಿದ ಸಿ.ಕೆ ಈಶ್ವರಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಕ್ತದಾನಿ ರಾಮಪ್ಪ, ರ‍್ಯಾಲಿ ಪಟು ಅಬೀನ್ ರೈ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ಡಿ. ಇಂಪನ, ಲಿಪಿಕಾ ಕಾವೇರಮ್ಮ, ಪಿ.ಎ ದೀಕ್ಷಾ, ಕೆ.ಎಸ್ ಆರ್ಯ, ಎಸ್. ಮೇಘಾ ಹಾಗೂ ಟಿ.ಕೆ.ಯುಕ್ತಾ ಅವರುಗಳು ಸನ್ಮಾನಕ್ಕೆ ಭಾಜನರಾದರು.
ಬಳಿಕ ಮಧ್ಯಾಹ್ನ ಶ್ರೀ ಗೌರಿ ಗಣೇಶ ಮೂರ್ತಿಗೆ ಮಹಾಮಂಗಳಾರತಿ ನಡೆದು ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮಂಗಳೂರಿನ ಖ್ಯಾತ ಧ್ವನಿವರ್ಧಕ ತಂಡದ ಸೌಂಡ್ಸ್ ಸಿಸ್ಟಮ್ ನೊಂದಿಗೆ ಮೆರವಣಿಗೆ ಸಾಗಿ ಸುಭಾಶ್ ನಗರದ ನದಿಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ