ಪ್ರಶ್ನಿಸುವುದು ರೂಢಿಸಿದರೆ ವ್ಯಕ್ತಿತ್ವದ ಬೆಳವಣಿಗೆ: ಸಂಗೀತ ನಿರ್ದೇಶಕ ವಿ ಮನೋಹರ್

Upayuktha
0


ವಿದ್ಯಾನಗರ: "ಪ್ರತಿ ವಿಚಾರವನ್ನು ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು. ಅದು ನಮ್ಮನ್ನು ಬೆಳೆಸುತ್ತದೆ" ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಅಭಿಪ್ರಾಯಪಟ್ಟರು.



ಅವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ 'ಸ್ನೇಹರಂಗ'  ಆಯೋಜಿಸಿದ್ದ ಚಿಂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಪ್ರಶ್ನಿಸುವ ಸಂದರ್ಭಗಳಲ್ಲಿ ಸವಾಲುಗಳು ಎದುರಾಗುತ್ತವೆ. ಹಿಂದೆ ಕನ್ನಡದ ಚಾನಲ್ ಒಂದರಲ್ಲಿ ಪ್ರಶ್ನಿಸುವ ಹಾಸ್ಯಮಯ ಧಾರಾವಾಹಿ ಮಾಡಿ ಹೊರದಬ್ಬಿಸಿಕೊಂಡದ್ದೂ ಇದೆ. ಆದರೆ ಸಂಕಷ್ಟಗಳು ಬಂದಾಗ ಕಂಗೆಡಬಾರದು ಎಂದರು.


ನಟ -ನಿರ್ದೇಶಕ ಉಪೇಂದ್ರ ಅವರು ಸಂಗೀತ ನಿರ್ದೇಶನದ ಮೊದಲ ಅವಕಾಶ ನೀಡಿದರು. ಆನಂತರ ಡಾ. ರಾಜ್ ಅವರೂ ಕೈಹಿಡಿದರು. ಜನುಮದ ಜೋಡಿ, ಚಿಗುರಿದ ಕನಸು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಸಂದರ್ಭದಲ್ಲಿ ರಾಜ್ ಅವರ ಒಡನಾಟ ದೊರೆಯಿತು.

ಎಳವೆಯಲ್ಲೇ ಚಿತ್ರಗೀತೆಯ ಹುಚ್ಚು ಹಚ್ಚಿಸಿಕೊಂಡವ ನಾನು. ಹುಚ್ಚು ಇರದಿದ್ದರೆ ಈ ಕ್ಷೇತ್ರದಲ್ಲಿ ಪಳಗಲು ಸಾಧ್ಯವಿಲ್ಲ. ಇದೊಂಥರಾ ಒಳ್ಳೆಯ ಹುಚ್ಚು. ಮೊದಲಿಗೆ ವ್ಯಂಗ್ಯ ಚಿತ್ರಕಾರ ಆಗಿದ್ದೆ. ಕ್ಯಾಸೆಟ್ ಸಂಗೀತದಲ್ಲೂ ಪ್ರಯೋಗ ಮಾಡಿದ್ದೆ. ಆದರೆ ಕೈಹಿಡಿದದ್ದು ಸಿನಿಮಾ ಸಂಗೀತ ಎಂದು ಮನೋಹರ್ ಹಳೆಯ ದಿನಗಳನ್ನು ಮೆಲುಕು ಹಾಕಿದರು.


ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆಯಂತಹ ಸಿನಿಮಾ ಕಾಸರಗೋಡಿನ ಕನ್ನಡದ ಪರಿಸ್ಥಿತಿಯನ್ನು ತೆರೆದಿಟ್ಟಿದೆ. ಕನ್ನಡ ಮಕ್ಕಳಿಗೆ ಕನ್ನಡ ಅಧ್ಯಾಪಕರೇ ಶಿಕ್ಷಕರಾಗಬೇಕು. ಅದಕ್ಕಾಗಿ ಸಾತ್ವಿಕ ಹೋರಾಟ ಮಾಡಬೇಕು ಎಂದರು.


ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೆ, ಕೋಲು ಮಂಡೆ ಜಂಗಮ ದೇವ ಮುಂತಾದ ತಮ್ಮ ನಿರ್ದೇಶನದ ಚಿತ್ರಗೀತೆಗಳನ್ನು ವಿ. ಮನೋಹರ್ ಹಾಡಿ ವಿದ್ಯಾರ್ಥಿಗಳ ಮನರಂಜಿಸಿದರು. ನಂತರ ವಿದ್ಯಾರ್ಥಿಗಳು ಮನೋಹರ್ ಅವರೊಂದಿಗೆ ಸಂವಾದ ನಡೆಸಿದರು. 


ಕಾರ್ಯಕ್ರಮಕ್ಕೆ ಶುಭಕೋರಿದ ಹಿರಿಯ ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಅವರು 'ಬುಡಕಟ್ಟು ಜನಾಂಗದ ಸಂಗೀತದ ಬಗ್ಗೆ ಕಾಳಜಿ ಹೊಂದಿರುವ ವಿ. ಮನೋಹರ್ ಆ ಜನಾಂಗದ ಹಾಡುಗಳನ್ನು ಸಂರಕ್ಷಿಸುವ ನೆಲೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಸ್ನೇಹರಂಗವು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ, ಸಾಂಸ್ಕೃತಿಕ ವೇದಿಕೆಯಾಗಿದ್ದು ವಿದ್ಯಾರ್ಥಿಗಳು ಸಾಂಸ್ಕೃತಿಕ ವಲಯದಲ್ಲಿ ಗಟ್ಟಿಯಾಗಬೇಕು. ಸಂಗೀತ, ನಟನೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಅದುವೇ ನಮ್ಮನ್ನು ಜೀವನದ ಕೊನೆಯವರೆಗೆ ಕಾಪಾಡುತ್ತದೆ. ಮನೋಹರ್ ರಂತವರನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತು ನೀಡಲು ನಾವು ಸಿದ್ಧ ಎಂದರು.

ವಿ. ಮನೋಹರ್ ಅವರನ್ನು ಸ್ನೇಹರಂಗದ ಪರವಾಗಿ ಸನ್ಮಾನಿಸಲಾಯಿತು. ಗಾಯಕ ಕಿಶೋರ್ ಪೆರ್ಲ ಮನೋಹರ್ ನಿರ್ದೇಶನದ ಚಿತ್ರಗೀತೆ ಹಾಡಿದರು.


ವಿಭಾಗ ಮುಖ್ಯಸ್ಥೆ ಪ್ರೊ. ಸುಜಾತ ಎಸ್ ಅಧ್ಯಕ್ಷತೆ ವಹಿಸಿದ್ದರು. ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ವಿದ್ಯಾರ್ಥಿನಿ ಜ್ಯೋತಿಕಾ ಪ್ರಾರ್ಥನೆ ಹಾಡಿದರು. ಡಾ. ಬಾಲಕೃಷ್ಣ ಬಿ. ಎಂ. ಹೊಸಂಗಡಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top