ಕುಪ್ಪಂ: “ಕನ್ನಡ ಕಾವ್ಯದಲ್ಲಿನ ಅನುಭಾವದ ಸೆಲೆ ಕಾವ್ಯಪ್ರಕಾರಕ್ಕೇ ವಿಶಿಷ್ಟವಾದ ಹೊಳಪನ್ನು ತಂದುಕೊಟ್ಟಿದೆ. ವಿಶೇಷವಾಗಿ ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವವು ದಟ್ಟವಾಗಿ ಕಾಣಿಸುತ್ತದೆ. ಅದು ಆಧ್ಯಾತ್ಮಿಕ ನೆಲೆಯಿಂದಾಚೆಗೂ ವಿಸ್ತರಿಸಿಕೊಂಡಿರುವುದಿದೆ. ಸರಳ ಸುಂದರವಾಗಿ ಆತ್ಯಂತಿಕ ಅನುಭೂತಿಯನ್ನು ಕಟ್ಟಿಕೊಡುವ ಈ ಕವಿಗಳು ಸದಾ ಸ್ಮರಣೀಯರು” ಎಂದು ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಯುವ ಕವಿ ಡಾ.ಸತ್ಯಮಂಗಲ ಮಹಾದೇವ ಅಭಿಪ್ರಾಯಪಟ್ಟರು.
ಅವರು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗವು ಆಯೋಜಿಸಿದ್ದ ‘ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. “ವರಕವಿ ಬೇಂದ್ರೆಯವರ ಕಾವ್ಯಕ್ಕೂ ಹಲಸಂಗಿ ಗೆಳೆಯರಲ್ಲೊಬ್ಬರಾದ ಮಧುರ ಚೆನ್ನರ ಕಾವ್ಯಕ್ಕೂ ಸಾಮ್ಯತೆ, ಭಿನ್ನತೆಗಳಿವೆ. ಆದರೆ ಅವರಿಬ್ಬರಲ್ಲೂ ಕಾಣಿಸುವ ಅನುಭಾವವು ಅನನ್ಯವಾದುದು” ಎಂದವರು ವಿವರಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಕೆ.ವೇಣುಗೋಪಾಲ ರೆಡ್ಡಿಯವರು ತಮ್ಮ ಸಂದೇಶದಲ್ಲಿ ಕನ್ನಡ ವಿಭಾಗದ ಈ ಸರಣಿ ಉಪನ್ಯಾಸಗಳನ್ನು ಶ್ಲಾಘಿಸುತ್ತಾ ಕಾವ್ಯದ ಸೂಕ್ಷ್ಮ ಅಧ್ಯಯನವು ತೌಲನಿಕ ಒಳನೋಟಗಳನ್ನು ಪಡೆಯಲು ಸಹಕಾರಿ ಎಂದರು.
ಭಾಷಾ ನಿಕಾಯದ ಡೀನ್ ಡಾ.ಬಿ.ಎಸ್.ಶಿವಕುಮಾರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ಅನುಭಾವವು ಕನ್ನಡ ಸಾಹಿತ್ಯದ ಮಜಲುಗಳನ್ನು ವಿಸ್ತರಿಸಿದೆ, ಡಾ.ಸತ್ಯಮಂಗಲ ಅವರು ಇದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ” ಎಂದು ನುಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಈ ಕಾರ್ಯಕ್ರಮದ ಆಯೋಜಕರಾದ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎಸ್.ದುರ್ಗಾಪ್ರವೀಣ್ ಅವರು “ಕಾವ್ಯದ ಓದು ನಿತ್ಯನಿರಂತರವಾದುದು, ಅದು ಸದಾ ಹೊಸ ಬೆಳಕನ್ನು ನೀಡುವಂತಹುದು. ಅನುಭಾವದ ಈ ಅರಿವು ವಿದ್ಯಾರ್ಥಿಗಳಿಗೆ ಅತ್ಯಗತ್ಯ. ವಿಭಾಗದ ಈ ಸರಣಿ ಯಶಸ್ವಿಯಾಗಿರುವುದು ಶ್ರಮವನ್ನು ಸಾರ್ಥಕಗೊಳಿಸಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಭಾಗದ ‘ಸಿರಿಗನ್ನಡ’ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವಿಭಾಗದ ಮುಖ್ಯಸ್ಥೆ ಪ್ರೊ.ಜಯಲಲಿತ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿದರು. ಎಂ.ಎ., ಪಿಎಚ್.ಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸೌಂದರ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಿ.ಎಸ್.ವಿನೋದ್ ರಾಜ್ ಅತಿಥಿಗಳನ್ನು ಪರಿಚಯಿಸಿದ್ದು ಬಿ.ಎನ್ ನಟರಾಜ ಅವರ ನಿರೂಪಣೆಯಿದ್ದಿತು. ಜೆ.ಎಸ್.ವ್ಯಾಸರಾವ್ ವಂದನಾರ್ಪಣೆ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ