ಸಿದ್ಧಿ ಬುದ್ದಿ ಪ್ರದಾಯಕ ನಮ್ಮ ವಿನಾಯಕ

Upayuktha
3 minute read
0


ಗಜಾನನಂ ಭೂತಗಣಾದಿ ಸೇವಿತಂ

ಕಪಿತ್ಥಜಮ್ಬೂಫಲಸಾರ ಭಕ್ಷಿತಮ್ । 

ಉಮಾಸುತಂ ಶೋಕವಿನಾಶಕಾರಣಂ

ನಮಾಮಿ ವಿಘ್ನೇಶ್ವರ ಪಾದಪಂಕಜಮ್ ॥


ಆನೆಯ ಮುಖ ಉಳ್ಳವನೆ, ಕೈಲಾಸದಲ್ಲಿರುವ ಭೂತ ಗಣಾದಿಗಳಿಗೆ ನಾಯಕನಾಗಿರುವವನೆ, ಕಪಿತ್ಥ, ಜಂಬೂ ಮುಂತಾದ ಫಲವನ್ನು ಸೇವಿಸುವವನೆ, ದೇವಿ ಪಾರ್ವತಿಯ ಸುತನೆ, ಶೋಕ ಮತ್ತು ದುಃಖಗಳ ನಾಶಕ್ಕೆ ಕಾರಣನಾದವನೆ, ಇಂತಹ ವಿಘ್ನೇಶ್ವರನ ಪಾದಗಳಿಗೆ ನಾನು ನಮಸ್ಕರಿಸುತ್ತೇನೆ ಎಂಬ ಶ್ಲೋಕ ವಿಘ್ನ ವಿನಾಶಕನಾದ ಗಣಪತಿಯ ವರ್ಣನೆಯನ್ನು ಅರ್ಥವತ್ತಾಗಿ ಮಾಡಿಕೊಡುತ್ತದೆ. ಗಣಪತಿಯನ್ನು ಇಂತಹ ಅನೇಕ ಶ್ಲೋಕಗಳಿಂದ ನಾವು ಸ್ತುತಿಸುತ್ತೇವೆ. ಅಲ್ಲದೆ ಗಣೇಶ, ವಿನಾಯಕ, ಲಂಬೋದರ, ವಿಘ್ನೇಶ್ವರ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಗಣೇಶನನ್ನು ಯಾವುದೇ ಶುಭಕಾರ್ಯದ ಮೊದಲಿಗೆ ಪ್ರಾರ್ಥಿಸಿಕೊಳ್ಳುವುದು ವಾಡಿಕೆ. ಆದ್ದರಿಂದಲೇ ಅವನನ್ನು ಮೊದಲು ವಂದಿತ ಎಂದು ಸಂಬೋಧಿಸುತ್ತೇವೆ. ಅಂತಹ ಗಣಪನನ್ನು ಜನರು ಅತ್ಯಂತ ವೈಭವದಿಂದ ಆರಾಧಿಸಿ ಪೂಜೆ ವ್ರತಗಳನ್ನು ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಹಬ್ಬವೇ ಗಣೇಶ ಚತುರ್ಥಿ.



ಸಕಲ ಕಷ್ಟಗಳನ್ನು ನಿವಾರಿಸುವ ಗಣಪತಿಯು ಜನಿಸಿದ್ದು ಭಾದ್ರಪದ ಶುಕ್ಲದ ಚತುರ್ಥಿಯಂದು. ಈ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಭಾರತದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಭಾರತ ಮಾತ್ರವಲ್ಲದೆ ಲೋಕವಂದಿತನನ್ನು  ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಹೀಗೆ ಮತ್ತಿತರ ದೇಶಗಳಲ್ಲಿಯೂ ಆಚರಿಸುತ್ತಾರೆ. ಗಣೇಶನನ್ನು ಆರಾಧಿಸಿ, ವಿಧ್ಯುಕ್ತವಾಗಿ ಪೂಜಿಸಿ ವ್ರತವನ್ನು ಮಾಡುವುದರ ಮೂಲಕ ವಂದಿಸುತ್ತಾರೆ. ಈ ಹಬ್ಬವನ್ನು ಗಣೇಶೋತ್ಸವ, ಚೌತಿ ಅಥವಾ ವಿನಾಯಕ ಚತುರ್ಥಿ ಎಂದೂ ಕರೆಯಲಾಗುತ್ತದೆ. ಈ ದಿನವು ಗಣಪತಿಯು ಭೂಮಿಗೆ ತನ್ನ ಪಾದವನ್ನು ಸ್ಪರ್ಶಿಸುವ ದಿನವಾಗಿದೆ. ಹೇಗೆಂದರೆ ಚೌತಿಯ ಮೊದಲ ದಿನವನ್ನು ತಾಯಿ ಸ್ವರ್ಣಗೌರಿಯನ್ನು ಪೂಜಿಸಲಾಗುತ್ತದೆ. ನಂತರ ಗಣೇಶನನ್ನು ಆರಾಧಿಸಲಾಗುತ್ತದೆ.ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿಯು ಭೂಲೋಕಕ್ಕೆ ಬಂದ ಮಾರನೆಯ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ. ಹೀಗೆ ಎಲ್ಲವನ್ನೂ ಸಿದ್ಧಿಸುವ ವಿನಾಯಕನು ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸಲಾಗುತ್ತದೆ.



ನಮ್ಮ ದೇಶದ ಸಂಸ್ಕ್ರತಿ,ಆಚಾರ ವಿಚಾರಗಳು ಸಂಪೂರ್ಣ ಭಿನ್ನವಾಗಿದೆ. ಪ್ರತೀ ನೂರು ಕಿಲೋ ಮೀಟರ್‌ನಷ್ಟು ದೂರ ಪ್ರಯಾಣಿಸಿದರೆ ಆಲಿನ ಭಾಷೆ, ಸಂಪ್ರದಾಯ, ಸಂಸ್ಕೃತಿಗಳು, ಆಹಾರ, ಜನ ಜೀವನಗಳು ಬದಲಾಗುತ್ತಾ ಹೋಗುತ್ತವೆ. ಹಾಗೆ ಹಬ್ಬ ಹರಿದಿನಗಳನ್ನು ನಾವು ಗಮನಿಸಿದರೆ ಪ್ರತೀ ರಾಜ್ಯ, ಜಿಲ್ಲೆಯಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಹಬ್ಬ ಹರಿದಿನಗಳ ಆಚರಣೆಗಳನ್ನು ನಾವು ಕಾಣಬಹುದಾಗಿದೆ. ಅವುಗಳಲ್ಲಿ ಗಣೇಶ ಚತುರ್ಥಿಯು ಒಂದು. ಗಣೇಶ ಚತುರ್ಥಿಯನ್ನು ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ  ಚೌತಿಯಂದು ಗಣೇಶನ ವಿಗ್ರಹವನ್ನು ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿ ಬಹಳ ವಿಜೃಂಭಣೆಯಿಂದ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ವೈದಿಕ ಸ್ತೋತ್ರಗಳ ಪಠಣ, ಹಿಂದೂ ಪಠ್ಯಗಳಾದ ಪ್ರಾರ್ಥನೆಯನ್ನು ಮಾಡಿ, ವ್ರತ, ಉಪವಾಸಗಳನ್ನು ಮಾಡುವುದರ ಮೂಲಕ ತಮ್ಮ ಎಲ್ಲಾ ವಿಘ್ನಗಳು ನಾಶವಾಗಲಿ ಎಂದು ಗಣಪತಿಯನ್ನು ಮನಸಾರೆ ಪ್ರಾರ್ಥಿಸುತ್ತಾರೆ. ಗಣೇಶನಿಗೆ ಪ್ರಿಯವಾದ ಮೋದಕ, ಪಂಚಕಜ್ಜಾಯ, ಕಡಬು ಮುಂತಾದ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಮಾಡುತ್ತಾರೆ. ನಂತರ ನದಿ ಅಥವಾ ಸಮುದ್ರದಂತಹ ಹತ್ತಿರದ ಜಲರಾಶಿಗಳಲ್ಲಿ ಗಣಪತಿಯನ್ನು ಮೆರವಣಿಗೆಯ ಮೂಲಕ ಕರೆತಂದು ವಿಸರ್ಜಿಸುತ್ತಾರೆ. ಇನ್ನು ಮಹಾರಾಷ್ಟ್ರ ದಲ್ಲಿ ಅತ್ಯಂತ ವೈಭವದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ಮೊದಲನೆಯ ದಿನದಂದು ಚೌತಿಯನ್ನು ಆಚರಿಸಿ ನಂತರ ಗೌರಿ ಪೂಜೆಯನ್ನು ಆಚರಿಸಲಾಗುತ್ತದೆ.ಇಲ್ಲಿನ ಆಚರಣೆಯಂತೆ  ವಿಜೃಂಭಣೆಯಿಂದ ಆಚರಿಸಿದ ಈ ಹಬ್ಬವು ಒಂದು ದಿನ ಅಥವಾ ಒಂದು ದಿನದ ನಂತರ ಹಬ್ಬವನ್ನು ಕೊನೆಗೊಳಿಸುತ್ತಾರೆ.ಹೀಗೆ ಕೆಲವೆಡೆಗಳಲ್ಲಿ ಮೂರು ದಿನ, ಐದು ದಿನ, ಏಳು ದಿನ ಹೇಗೆ ಹತ್ತು ಹನ್ನೊಂದನೆಯ ದಿನದ ವರೆಗೂ ಆಚರಿಸುತ್ತಾರೆ.


ಅದೇ ರೀತಿ ಗೋವಾದಲ್ಲಿ ಚೌತಿಯನ್ನು ಕೊಂಕಣಿ ಭಾಷೆಯಲ್ಲಿ ಚವಾತ್, ಪರಬ್ ಅಥವಾ ಪರ್ವ (ಮಂಗಳಕರ ಆಚರಣೆ) ಎಂದು ಕರೆಯಲಾಗುತ್ತದೆ. ಭಾದ್ರಪದ ಮಾಸದ ಮೂರನೆಯ ದಿನವನ್ನು ಗಣೇಶನನ್ನು ಪೂಜೆ ಮಾಡುವುದರ ಜೊತೆಗೆ ಶಿವ ಪಾರ್ವತಿಯರನ್ನು ಪೂಜಿಸುವುದು ಇಲ್ಲಿನ ಪದ್ಧತಿ. ಹಾಗೆ ತಮಿಳುನಾಡಿನಲ್ಲಿ ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ಪಿಳ್ಳಾರ್ ಚತುರ್ಥಿ ಎಂದು ಕರೆಯುತ್ತಾರೆ.


ವಿಶೇಷವೆಂದರೆ ಗಣಪತಿಯ ವಿಗ್ರಹವನ್ನು ಜೇಡಿ ಮಣ್ಣಿನಿಂದ ಮಾತ್ರವಲ್ಲದೆ ತೆಂಗಿನಕಾಯಿ ಹಾಗೂ ಇತರ ಸಾವಯವ ಉತ್ಪನ್ನಗಳಿಂದ ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಹಲವಾರು ಕಡೆಗಳಲ್ಲಿ ಗಣೇಶನ ಮೂರ್ತಿ ಇಂದ ಹಿಡಿದು ಉಪವಾಸ ವ್ರತ, ಆಹಾರ ವಿಸರ್ಜನೆಯವರೆಗೂ ಭಿನ್ನ ಭಿನ್ನವಾದ ಸಂಪ್ರದಾಯ ಸಂಸ್ಕೃತಿಗಳನ್ನು ಹೊಂದಿದೆ. ಒಂದೆಡೆ ಅತ್ಯಂತ ವೈಭವದಿಂದ ಆಚರಿಸಲ್ಪಟ್ಟರೆ ಇನ್ನೊಂದೆಡೆ ಸಾಮಾನ್ಯವಾಗಿ ಉತ್ಸಾಹದಿಂದ ಆಚರಿಸಲ್ಪಡುವ ಈ ಹಬ್ಬವನ್ನು ಎಲ್ಲರೂ ಸಂಭ್ರಮಿಸುತ್ತಾರೆ.


ಗಣಪತಿ ಸಾರ್ವಜನಿಕ ಉತ್ಸವ: ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಒಂದುಗೂಡಿಸುವ ಸಲುವಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಣೆಗೆ ತಂದರು. ಅನಾದಿ ಕಾಲದಿಂದಲೂ  ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿದ್ದ ಉತ್ಸವಕ್ಕೆ ಸಾರ್ವಜನಿಕ ಉತ್ಸವದ ರೂಪು ಕೊಟ್ಟರು. ಬಹಳ ವೈವಿಧ್ಯಮಯವಾಗಿ ಆಚರಿಸುವ ಈ ಹಬ್ಬದಲ್ಲಿ ಒಂದೆಡೆ ಆನೆಯ ಮುಖವುಳ್ಳ ಗಣಪತಿಯನ್ನು ಈ ದಿನದಂದು ಪೂಜೆ ಮಾಡಿದರೆ ರೈತಾಪಿ ವರ್ಗಳಿಗೆ ಆನೆಗಳಿಂದ ಆಗುತ್ತಿರುವ ಬೆಳೆ ನಾಶಗಳನ್ನು ತಪ್ಪಿಸುತ್ತಾನೆ ಎಂದು ಕೆಲವರು ಹೇಳುತ್ತಾರೆ. ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಎಲ್ಲೆಲ್ಲೂ ನೆಮ್ಮದಿಯನ್ನು ಪಸರಿಸಲಿ, ಸಹಬಾಳ್ವೆಯನ್ನು ಕಂಡುಕೊಂಡು ಒಳ್ಳೆಯ ಕಾರ್ಯಗಳು ನಡೆಯಲಿ ಎಂಬ ಸಲುವಾಗಿಯೂ ಆರಾಧಿಸುತ್ತಾರೆ. ಗಣೇಶ ಚತುರ್ಥಿಯು ಕೇವಲ ಹಬ್ಬವಲ್ಲ, ಎಲ್ಲಾ ಜನನ, ಜೀವನ ಮತ್ತು ಮರಣ ಚಕ್ರದ ಮಹತ್ವವನ್ನು ಸಹ ಸೂಚಿಸುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಅಲ್ಲದೆ ಚತುರ್ಥಿಯ ದಿನದಂದು ರಾತ್ರಿ ಕೇವಲ ಭಗವಂತನನ್ನು ಆರಾಧಿಸುವ ಮೂಲಕ ಆನಂದಿಸಬೇಕು. ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಿದವರು ತಪ್ಪಿತಸ್ಥರಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬ ನಂಬಿಕೆಯೂ ಜನರಲ್ಲಿದೆ. ಹೀಗೆ ಗಣೇಶ ಚತುರ್ಥಿಯನ್ನು ಜನರು ಪ್ರತೀ ವರ್ಷ ಆಚರಿಸುವ ನಿರೀಕ್ಷೆಯಲ್ಲಿ ಇರುತ್ತಾರೆ. ಗಣೇಶನ ಆಶೀರ್ವಾದವನ್ನು ಪಡೆಯಲು ದೇವರ ಮೇಲಿರುವ ತಮ್ಮ ಭಕ್ತಿಯನ್ನು ನಿರೂಪಿಸುತ್ತಾರೆ ಅಲ್ಲದೆ ತಮ್ಮ ಪ್ರಾರ್ಥನೆಯಲ್ಲಿ ಯಶಸ್ವಿಯನ್ನು ಸಿದ್ಧಿಸಿಕೊಳ್ಳುತ್ತಾರೆ. ಆದುದರಿಂದ ಎಲ್ಲರೂ ಚೌತಿಯನ್ನು ಸಂಭ್ರಮದಿಂದ ಆಚರಿಸಿ ತಮ್ಮ ಎಲ್ಲಾ ವಿಘ್ನಗಳನ್ನು ದೂರಗೊಳಿಸುವಂತೆ ಪ್ರಾರ್ಥಿಸುತ್ತಾರೆ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.



- ಮೇಘಾ. ಡಿ. ಕಿರಿಮಂಜೇಶ್ವರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top