ಹೀಗಿದ್ದರೆ ಚೆನ್ನ ನಮ್ಮ ಆಹಾರಕ್ರಮ

Upayuktha
0

ಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ನಮ್ಮಜೀವನ ಶೈಲಿಯೂ ಉತ್ತಮವಾಗಿ ಇರಬೇಕು. ಜೊತೆಗೆ ನಾವು ಸೇವಿಸುವ ಆಹಾರವೂ ಕೂಡ ಅಷ್ಟೇ ಸತ್ವಯುತ ಆಗಿರಬೇಕು. ನಾವು ಬಹುತೇಕ ಇದುವರೆಗೂ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಈಗ ವಾತಾವರಣ ಮತ್ತು ಜೀವನಶೈಲಿ ಇವೆಲ್ಲವೂ ಬದಲಾಗುತ್ತಿದೆ. ತೂಕ ಇಳಿಕೆಗೆ ಸಹಾಯ ಆಗುವ ಆಹಾರ ಪದ್ಧತಿಗಳನ್ನು ಅನುಸರಿಸಲು ತಜ್ಞರು ಸೂಚಿಸುತ್ತಾರೆ. ಸಮಯವಲ್ಲದ ಸಮಯದಲ್ಲಿ ಆಹಾರ ಸೇವಿಸುವುದೂ ಒಂದು ರೀತಿಯಲ್ಲಿ ಅಪಾಯಕಾರಿಯೂ ಹೌದು.


ಯಾವಾಗಲೂ ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮ. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯ ವೇಳೆಗೆ ಸರಿಯಾದ ಸಮಯಕ್ಕೆ ಆಹಾರ ಸೇವಿಸಿದರೆ ಆರೋಗ್ಯವು ಉತ್ತಮವಾಗಿರುತ್ತದೆ. ರಾತ್ರಿ ಊಟ ಬೇಗ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ರಾತ್ರಿಯ ಊಟವನ್ನು ನಾವು ಮಲಗುವುದಕ್ಕಿಂತ ಒಂದರಿಂದ ಎರಡು ಗಂಟೆ ಮುಂಚಿತವಾಗಿ ಮಾಡಬೇಕು. ರಾತ್ರಿಯ ಊಟನ್ನು ಬೇಗನೇ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೆಂದರೆ, 


ಜೀರ್ಣಕ್ರಿಯೆ ಸುಧಾರಣೆ: ಊಟ ಮಾಡಿದ ಕೂಡಲೇ ನಿದ್ರೆ ಮಾಡಿದರೆ ಹೊಟ್ಟೆಯಲ್ಲಿ ಇರುವ ತಿಂದ ಆಹಾರ ಸರಿಯಾಗಿ ಜೀರ್ಣವೇ ಆಗುವುದಿಲ್ಲ. ಅದ್ದರಿಂದ ಮಲಗುವ ಎರಡರಿಂದ ಮೂರು ಗಂಟೆಗೆ ಮುಂಚೆ ಊಟ ಮಾಡಿದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. 


ಉತ್ತಮ ನಿದ್ರೆ: ಸೇವಿಸಿದ ಆಹಾರವು ನಮ್ಮ ಹೊಟ್ಟೆಯಲ್ಲಿ ಜೀರ್ಣವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ತಡವಾಗಿ ಆಹಾರ ಸೇವಿಸಿದಾಗ ನಾವು ಮಲಗಿದಾಗ ದೇಹದಲ್ಲಿ ಆಹಾರಜೀರ್ಣವಾಗಲು ಪ್ರಾರಂಭ ಆಗುವುದರಿಂದ ನಮ್ಮ ನಿದ್ರೆಗೆ ತೊಂದರೆ ಆಗಬಹುದು. ಆದ್ದರಿಂದ ತಡವಾಗಿ ಊಟ ಮಾಡಬಾರದು ಮತ್ತು ಊಟವಾದ ಕೂಡಲೇ ಮಲಗಬಾರದು ಎಂದು ಹಿರಿಯರು ಹೇಳಿರುವುದು ಇದೇ ಕಾರಣಕ್ಕೇ. ಬೇಗ ಊಟ ಮಾಡಿದಾಗ ನಾವು ಮಲಗುವ ಸಮಯ ಆಗುವ ವೇಳೆಗೆ ಜೀರ್ಣಕ್ರಿಯೆ ಉತ್ತಮವಾಗಿ ಆಗಿ ನಿದ್ದೆಯೂ ಚೆನ್ನಾಗಿ ಬರುತ್ತದೆ. ಇದರಿಂದ ಆರೋಗ್ಯವೂ ಸಹಜವಾಗಿ ಚೆನ್ನಾಗಿ ಇರುತ್ತದೆ. ಎದೆಉರಿ, ಹೊಟ್ಟೆಉರಿ ಮುಂತಾದ ಗ್ಯಾಸ್ಟಿಕ್ ಸಂಬಂಧಿತ ಸಮಸ್ಯೆ ಇರುವವರು ಬೇಗ ಊಟ ಮಾಡುವುದು ಬಹಳ ಒಳ್ಳೆಯ ಅಭ್ಯಾಸ. ತಡವಾಗಿ ಆಹಾರವನ್ನು ಸೇವಿಸಿ ಕೂಡಲೇ ನಿದ್ದೆಯನ್ನು ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ತುತ್ತಾಗುತ್ತೇವೆ.


ಆರೋಗ್ಯಯುತ ಹೃದಯ: ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಇದ್ದಾಗ ಸೇವಿಸಿದ ಆಹಾರವು ಸರಿಯಾಗಿ ಜೀರ್ಣ ಆಗದೇ ರಕ್ತದ ಒತ್ತಡ ಇತ್ಯಾದಿ ಸಮಸ್ಯೆಗೆ ಕಾರಣ ಆಗಬಹುದು. ಕೊಬ್ಬಿನ ಆಮ್ಲಗಳು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತದೆ. ಇದರಿಂದ ಹೃದಯರೋಗ, ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ಹೃದಯ ಸಂಬಂಧಿತ ರೋಗ, ರಕ್ತದಒತ್ತಡ, ಮಧುಮೇಹಿಗಳು ರಾತ್ರಿಯ ವೇಳೆ ಹೊಟ್ಟೆ ತುಂಬಾ ಆಹಾರ ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಗಾಗಿ ರಾತ್ರಿಯ ಊಟವನ್ನು ಬೇಗನೇ ಮಾಡುವುದರಿಂದ ಹೃದಯ ಸಂಬಂಧಿ ರೋಗಗಳಿಂದ ದೂರ ಇರಬಹುದು. 


ದೇಹದತೂಕ ನಿಯಂತ್ರಣ ಸಾಧ್ಯ: ಬೇಗನೇ ಊಟ ಮಾಡುವುದರಿಂದ ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಜೀರ್ಣ ಆಗಲು ಸಹಾಯ ಆಗುತ್ತದೆ. ತಿಂದ ಆಹಾರವು ಹೊಟ್ಟೆಯಲ್ಲಿ ಸರಿಯಾಗಿ ಪಚನವಾಗಿ ಅದರಲ್ಲಿರುವ ಪೌಷ್ಟಿಕ ಅಂಶಗಳು ಹೀರಲ್ಪಟ್ಟು ದೇಹಕ್ಕೆ ಸರಿಯಾಗಿ ಸೇರುತ್ತದೆ. ದೇಹದ ಚಯಾಪಚಯ ಕ್ರಿಯೆ ಸಮರ್ಪಕವಾಗಿ ಆಗಿ ದೇಹದ ಬೊಜ್ಜು ನಿಯಂತ್ರಣ ಆಗುತ್ತದೆ. ದೇಹದ ಬೊಜ್ಜು ನಿಯಂತ್ರಣ ಆದರೆ ದೇಹದ ತೂಕ ಕಳೆದುಕೊಳ್ಳಲು ಸಹಾಯ ಆಗುತ್ತದೆ.


ತಾಜಾ ಆಹಾರ ಸೇವಿಸಿರಿ: ಆರೋಗ್ಯಕರ ಆಹಾರದಿಂದ ಉತ್ತಮ ಆರೋಗ್ಯ ಇದಕ್ಕಾಗಿ ತಾಜಾ ತಯಾರಿಸಿದ ಆಹಾರಗಳನ್ನೇ ಸೇವಿಸಬೇಕು ಮತ್ತುಆಯಾ ಋತುಗಳಲ್ಲಿ ಲಭಿಸುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ಆಹಾರವು ಸಾಮಾನ್ಯ ಆಹಾರಗಳನ್ನು ಒಳಗೊಂಡಿರಬೇಕು, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಅದರ ಶುದ್ಧ ಮತ್ತು ಮೂಲಭೂತ ರೂಪದಲ್ಲಿ ಇರಬೇಕು.


ಇದಕ್ಕೇ ತಿಳಿದವರು ‘ಬೆಳಗಿನ ಉಪಾಹಾರವನ್ನು ರಾಜನಂತೆ ತಿನ್ನು, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಭಿಕ್ಷುಕನಂತೆ ತಿನ್ನು’ ಎಂದು ಹೇಳಿದ್ದಾರೆ. ಇದರ ಪ್ರಕಾರ, ಬೆಳಗ್ಗಿನ ಉಹಾರ ಹೆಚ್ಚು ಪೌಷ್ಠಿಕವಾಗಿ ಇರಬೇಕು, ಮಧ್ಯಾಹ್ನದ ಊಟ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು, ರಾತ್ರಿಯ ಊಟ ತೀರಾ ಕಡಿಮೆ ಪ್ರಮಾಣ ಇರಬೇಕು. ಇದರರ್ಥ ಬೆಳಿಗ್ಗೆ ತಿನ್ನುವ ಮತ್ತು ಕುಡಿಯುವ ಎಲ್ಲವೂ ದಿನವಿಡೀ ನಮ್ಮ ಚಟುವಟಿಕೆ, ಜಾಗರೂಕತೆ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಬೆಳಗಿನ ಊಟವು ನಮ್ಮ ಆರೋಗ್ಯ ಮತ್ತು ನಿಮ್ಮ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಸಹಕಾರಿ, ರಾತ್ರಿಯ ಊಟ ಕೇವಲ ನಾವು ಮಾರನೇ ದಿನದವರೆಗೆ ಬದುಕಿ ಉಳಿಯಲು ಸಾಕಾಗುವಷ್ಟೇ ಸೇವಿಸಬೇಕು ಎಂದು. ಅದಕ್ಕಾಗಿಯೇ ಯಾವುದೇ ಹೊತ್ತಿನ ಉಹಾರವನ್ನು ಬಿಡಬಾರದು. ಬೆಳಗಿನ ಉಪಾಹಾರವು ಸ್ಥಿರವಾದ ಇನ್ಸುಲಿನ್ ಮಟ್ಟವನ್ನು ಕಾಪಾಡಿ ಮಧುಮೇಹ ಮತ್ತು ಬೊಜ್ಜು ಅಪಾಯವನ್ನು ಕಡಿಮೆ ಮಾಡುತ್ತದೆ. ಮಿದುಳಿನ ಕಾರ್ಯನಿರ್ವಹಣೆ ಮತ್ತು ನಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಅಗತ್ಯ ಶಕ್ತಿಯನ್ನು ನಮಗೆ ಒದಗಿಸುತ್ತದೆ.


ಯಾವುದೇ ಆಹಾರ ಪದ್ಧತಿ ಆಗಿರಲಿ ಎಷ್ಟು ಆಹಾರವನ್ನು ತಿನ್ನುತ್ತೇವೆ ಯಾವಾಗ ತಿನ್ನುತ್ತೇವೆ ಎನ್ನುವುದು ಮುಖ್ಯ. ಪೌಷ್ಠಿಕ ಆಹಾರವನ್ನು ಸೇವಿಸಿದರೆ ಒಳ್ಳೆಯದೇ, ಆದರೂ ಅಧ್ಯಯನಗಳು ದಿನಕ್ಕೆ ಕೇವಲ ಮೂರು ಹೊತ್ತು ತಿನ್ನುವುದು, ಉಪಹಾರ ಮತ್ತು ಊಟದ ನಡುವೆ ಐದರಿಂದ ಆರು ಗಂಟೆ ಅಂತರ ಇಟ್ಟುಕೊಳ್ಳುವುದು ರಾತ್ರಿ ಊಟ ಆದ ನಂತರ 10 ರಿಂದ12 ಗಂಟೆಗಳ ಕಾಲ ಆಹಾರ ಸೇವಿಸದೆ ಇರುವುದು ದೇಹಕ್ಕೆ ಉತ್ತಮ.ಇದನ್ನು ಗಮನಿಸಿಕೊಂಡು ಸರಿಯಾದ ರೀತಿಯಲ್ಲಿ ಆಹಾರಕ್ರಮ ಅನುಸರಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಯಾವುದೇ ರೋಗ ಬಾಧೆಯೂ ಇಲ್ಲದೇ ಸಮಯಕ್ಕೆ ಸರಿಯಾಗಿ ನಿದ್ರೆಯೂ ಬರುತ್ತದೆ.


ಲೇಖನ:

ಸಂತೋಷ್‍ರಾವ್ ಪೆರ್ಮುಡ

ಪೆರ್ಮುಡ ಮನೆ, ಪಟ್ರಮೆಗ್ರಾಮ ಮತ್ತು ಅಂಚೆ

ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198

ದೂ: 9742884160



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top