ಎಡನೀರು: ಶ್ರೀ ಎಡನೀರು ಕ್ಷೇತ್ರದ ಶಾಲಾ ಭವನದಲ್ಲಿ ಪರಮಪೂಜ್ಯ ಶ್ರಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಡಾ. ಬನಾರಿಯವರು ಕವಿಯಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಹುಲುಸಾದ ಕೃಷಿಯನ್ನು ನಡೆಸಿದ್ದಾರೆ. ಕುಟುಂಬ ವೈದ್ಯರಾಗಿಯೂ, ಕನ್ನಡ ಪರ ಹೋರಾಟಗಾರರಾಗಿಯೂ, ಯಕ್ಷಗಾನ ಅರ್ಥಧಾರಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಕರ್ತವ್ಯಪರವಾದ ಮತ್ತು ಶ್ರೀಮಠದ ಕುರಿತಾದ ಅವರ ನಿಷ್ಠೆ ಪ್ರಶ್ನಾತೀತ ಎಂದು ಹೇಳಿ ಹರಸಿದರು.
ಖ್ಯಾತ ವಿದ್ವಾಂಸರೂ, ವಿಮರ್ಶಕರೂ ಆದ ಡಾ. ತಾಳ್ತಜೆ ವಸಂತ ಕುಮಾರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಬನಾರಿಯವರದ್ದು ಸಹಜ ಕಾವ್ಯ. ಸದ್ದಾಗಿಯೂ ಸದ್ದಾಗದ ಸದ್ದುಗಳು ಎನ್ನುವ ಶೀರ್ಷಿಕೆಯೇ ಅರ್ಥಗರ್ಭಿತವಾದುದು. ಅಗಸ್ತ್ಯ ಬಂದಾನೇ, ಮಾತು ಕೊಟ್ಟವನು ಹೀಗೆ ಅನೇಕ ಬಿಡಿ ಕವನಗಳಲ್ಲಿ ಅವರ ಕಾವ್ಯಶಕ್ತಿಗೆ ಪುರಾವೆಗಳಿವೆ. ಖಂಡ ಕಾವ್ಯಗಳಲ್ಲಿ ಹೊಸ ಒಳನೋಟಗಳನ್ನು ನೀಡಿದ್ದಾರೆ. ಪ್ರಭಾವತಿಯ ತಾಯ್ತನದ ಹಂಬಲ ಮತ್ತು ಗಯ ಚರಿತ್ರೆಯ ಶ್ರೀಕೃಷ್ಣನ ಲೀಲಾ ನಾಟಕ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಉದಾಹರಣೆಗಳನ್ನಿತ್ತು ಮಾತನಾಡಿದರು.
ಶುಭ ಹಾರೈಕೆ ಮಾಡಿದ ವಿಶ್ರಾಂತ ಸಂಪಾದಕರು, ಹೆಸರಾಂತ ವಿಮರ್ಶಕರು ಆದ ಶ್ರೀ.ಎಸ್. ನಿತ್ಯಾನಂದ ಪಡ್ರೆಯವರು ಡಾ. ಬನಾರಿಯವರ ವ್ಯಕ್ತಿತ್ವದ ಚರ್ತುಮುಖಗಳನ್ನು ಎತ್ತಿ ತೋರಿಸಿದರು. ಹಿಂದಿನ ತಲೆಮಾರಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಂಜೇಶ್ವರದ ಕೀರ್ತಿಯನ್ನು ಎತ್ತರಕ್ಕೆ ಏರಿಸಿದವರು ರಾಷ್ಟ್ರಕವಿ ಗೋವಿಂದ ಪೈಯವರು. ಇಂದಿನ ತಲೆಮಾರಿನಲ್ಲಿ ಅದನ್ನು ಮುಂದುವರಿಸಿದವರು ಡಾ. ರಮಾನಂದ ಬನಾರಿಯವರು ಎಂದು ಅಭಿಪ್ರಾಯಿಸಿದರು.
ಸಾಹಿತ್ಯ ಘಟಕದ ಅಧ್ಯಕ್ಷರಾದ ಎಸ್.ವಿ. ಭಟ್ಟರು ಸಂದರ್ಭೋಚಿತವಾಗಿ ಮಾತನಾಡಿದರು. ಖ್ಯಾತ ಸಾಹಿತಿ ವಿದುಷಿ ಡಾ. ಪ್ರಮೀಳಾ ಮಾಧವ ಕೃತಿ ಸಮೀಕ್ಷೆಯನ್ನು ಮಾಡುತ್ತಾ ಬನಾರಿಯವರ ಕಾವ್ಯ ಮಾರ್ಗದ ವೈಶಿಷ್ಟ್ಯವನ್ನು ಸೋದಾಹರಣವಾಗಿ ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಭಾಷಾತಜ್ಞರು, ವಿದ್ವಾಂಸರು ಆದ ಪ್ರೊ. ಶ್ರೀಕೃಷ್ಣ ಭಟ್ ರವರು ಬನಾರಿಯವರ ಭಾಷಾ ಪ್ರಭುತ್ವವನ್ನೂ ಸ್ವಸ್ಥ ಸಾಹಿತ್ಯ ಮನಸ್ಸಿನ ಹೆಚ್ಚುಗಾರಿಕೆಯನ್ನೂ ಪ್ರಸ್ತಾಪಿಸಿ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿಕೊಂಡರು.
ನನ್ನ ಕಾವ್ಯ ನನ್ನದಲ್ಲ
ಸ್ವಕಾವ್ಯ ಚಿಂತನೆಯನ್ನು ನಡೆಸಿದ ಬನಾರಿಯವರು ನನ್ನ ಕಾವ್ಯ ನನ್ನದಲ್ಲ ಎಂಬ ಶೀರ್ಷಿಕೆಯಿಂದ ಗಮನ ಸೆಳೆದರು. ಗೋವಿಂದ ಪೈ, ದ.ರಾ. ಬೇಂದ್ರೆ, ಕುವೆಂಪು ಮೊದಲಾದ ಆಧುನಿಕ ಕವಿಗಳಲ್ಲಿ ಮಾತ್ರವಲ್ಲ ಕುಮಾರವ್ಯಾಸನಂತಹ ಪ್ರಾಚೀನ ಕವಿಗಳಲ್ಲೂ ಇಂತಹ ಚಿಂತನ ಮನೆ ಮಾಡಿತ್ತು. ಹಾಗೆ ನೋಡಿದರೆ ಈ ಭಾವ ವೇದೋಪನಿಷತ್ತುಗಳ ಕಾಲದಿಂದಲೂ ಕವಿಗಳಲ್ಲಿ ಅಂತರ್ಗತವಾಗಿತ್ತು. ಸರ್ವಜ್ಞ, ಸೋಮೇಶ್ವರರಂತಹ ಕವಿಗಳಲ್ಲೂ ಅದು ಸಮಾಜಮುಖಿಯಾದ ಆಯಾಮವನ್ನು ಪಡೆದುಕೊಂಡಿತ್ತು ಎಂದು ಹೇಳುತ್ತಾ ತನ್ನ ಕಾವ್ಯದ ವಸ್ತು, ಪ್ರೇರಣೆ ಮತ್ತು ಧೋರಣೆಗಳ ಕುರಿತು ಕೆಲವು ಉದಾಹರಣೆಗಳೊಂದಿಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಡಾ. ಮಹೇಶ್ವರಿ ಯು, ವಿಜಯಲಕ್ಷ್ಮಿ ಶಾನುಭೋಗ್, ಶ್ರೀಮತಿ ಸತ್ಯವತಿ ಕೊಳಚಪ್ಪು, ವೆಂಕಟ ಭಟ್ ಎಡನೀರು, ಪ್ರಮೀಳ ಚುಳ್ಳಿಕಾನ ಅವರು ಸ್ವರಚಿತ ಕಾವ್ಯ ವಾಚನದಿಂದ ಕವಿಸಮಯವನ್ನು ನಡೆಸಿಕೊಟ್ಟರು. ಡಾ. ಅನ್ನಪೂರ್ಣೇಶ್ವರಿ ಏತಡ್ಕ ಅವರ ನೇತೃತ್ವದಲ್ಲಿ ಶಶಿಪ್ರಭಾ ವರುಂಬುಡಿ, ಸುಧಾ ಮುರಳಿ ಮಾಣಿತ್ತೋಡಿ, ಸ್ವಾತಿ ಕಡೇಕಲ್ಲು ಅವರು ಬನಾರಿಯವರ ಕವಿತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು. ಹಿರಿಯ ಕವಿ ಗೋಪಾಲ ಭಟ್ ಅವರು ಬನಾರಿಯವರ ಕವನವೊಂದನ್ನು ಸುಶ್ರಾವ್ಯವಾಗಿ ಹಾಡಿದರು.
ವೇದಿಕೆಯ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಪ್ರೊ. ಪಿ.ಎನ್. ಮೂಡಿತ್ತಾಯ, ನಂದಕಿಶೋರ ಬನಾರಿ, ವಿಷ್ಣು ಪ್ರಣಾಮ ಮತ್ತು ವಿಷ್ಣು ಶಶಾಂಕ ಸಹಕರಿಸಿದರು.
ಸುಂದರೇಶ್ ಬೆನಕ ಜಾಲ್ಸೂರು, ಬೆಳ್ಳಿಪ್ಪಾಡಿ ಸದಾಶಿವ ರೈ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ಗೋಪಾಲಯ್ಯ ಕೋಟಿಗೆದ್ದೆ, ಸುಕುಮಾರ ಆಲಂಪಾಡಿ ಕಾಸರಗೋಡು ಅವರು ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು.
ಸಪ್ತತಿ ಸಂಭ್ರಮವನ್ನು ಆಚರಿಸುತ್ತಿರುವ ಶ್ರೀಮಠದ ಪ್ರಮುಖ ಕಾರ್ಯಕರ್ತರಾದ ಸಾಹಿತಿ, ಕಲಾವಿದ ಶ್ರೀ ರಾಜೇಂದ್ರ ಕಲ್ಲೂರಾಯ ಮತ್ತು ಶ್ರೀಮತಿ ಪ್ರಭಾ ಕಲ್ಲೂರಾಯ ಅವರನ್ನು ಡಾ.ರಮಾನಂದ ಬನಾರಿ ದಂಪತಿ ಶಾಲು, ಸೀರೆ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಜಿಲ್ಲಾ ಲೇಖಕರ ಸಂಘದ ಜತೆ ಕಾರ್ಯದರ್ಶಿ ವಿಶಾಲಕ್ಷ ಪುತ್ರಕಳ ಸ್ವಾಗತಿಸಿದರು. ಶ್ರೀಮತಿ ಸುಶೀಲಾ ಪದ್ಯಾಣ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವರಚಿತ ಕವನವನ್ನು ವಾಚಿಸಿದರು. ಸಾಹಿತಿ ಚಂದ್ರಶೇಖರ್ ಏತಡ್ಕ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ