ಗೋಕರ್ಣ: ಹಿರಿಯರ ಅನುಭವ ಪಾಠ ಎಲ್ಲಕ್ಕಿಂತ ಶ್ರೇಷ್ಠ. ಸಮಾಜದಲ್ಲಿ ಹಿರಿಯರ ಬಗ್ಗೆ ಅನಾದರ, ಅಶ್ರದ್ಧೆ ಹೋಗಬೇಕು. ಜೀವನದ ಪಕ್ವತೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ. ಅವರ ಅನುಭವ, ಬುದ್ಧಿಮತ್ತೆಯ ಪ್ರಯೋಜನ ಪಡೆದಾಗ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ ಎಂದು ಶ್ರೀಮಜ್ಜದಗ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, ಬಹುಶ್ರುತ ಎಂಬ ವಿಷಯದ ಬಗ್ಗೆ ಶ್ರೀಸಂದೇಶ ನೀಡಿದರು. ನಮ್ಮಲ್ಲಿರುವ ಆಂಜನೇಯನ ಶಕ್ತಿ ನಮ್ಮ ಅರಿವಿಗೆ ಬರಬೇಕಾದರೆ ನಾವು ಸರಿಯಾದ ಜಾಂಬವಂತನನ್ನು ಆಯ್ಕೆ ಮಾಡಿಕೊಳ್ಳಬೇಕು. ಹಿರಿಯರನ್ನು ಅಸಡ್ಡೆ ಮಾಡದೇ, ಅವರ ಅನುಭವ, ಸಲಹೆಗಳನ್ನು ಗೌರವಿಸೋಣ. ಅವರು ಹೇಳಿದ್ದನ್ನು ಶ್ರದ್ಧೆಯಿಂದ ಕೇಳಿ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ಮಾಡಿದರು.
ನಮ್ಮನ್ನು ಮುಂದಿನ ಪೀಳಿಗೆ ಗೌರವಿಸಬೇಕಾದರೆ, ನಾವು ನಮ್ಮ ಹಿರಿಯನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕು. ಉದಾಹರಣೆಗೆ ರಾಮಾಯಣದ ಜಾಂಬವಂತನನ್ನು ಗಮನಿಸಿದರೆ, ಇಡೀ ರಾಮಾಯಣದ ಸೂತ್ರವಾಗಿ ಕಾಣಿಸಿಕೊಳ್ಳುತ್ತಾನೆ. ಜಾಂಬವಂತ ಇಲ್ಲದ ರಾಮಾಯಣವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ ಎಂದು ಬಣ್ಣಿಸಿದರು.
ಸೀತಾನ್ವೇಷಣೆಗೆ ಕಪಿಸೈನ್ಯ ತೆಗೆದುಕೊಂಡ ಒಂದು ತಿಂಗಳ ಕಾಲಾವಕಾಶದ ಮುಕ್ತಾಯ ಹಂತದಲ್ಲಿ ದಕ್ಷಿಣ ಸಮುದ್ರ ತೀರದಲ್ಲಿ ಕಪಿಗಳೆಲ್ಲ ಚಿಂತಾಕ್ರಾಂತರಾಗಿ ಕುಳಿತಿದ್ದಾಗ, 100 ಯೋಜನ ಹಾರುವ ವೀರನಿಲ್ಲದೇ ಎಲ್ಲರೂ ಸಮುದ್ರಕ್ಕೆ ಹಾರಿ ಪ್ರಾಣಾರ್ಪಣೆ ಮಾಡುವ ಬಗ್ಗೆ ಚಿಂತಿಸುತ್ತಿದ್ದಾಗ, ಆಂಜನೇಯನ ಅಗಾಧ ಶಕ್ತಿಯನ್ನು ಆತನಿಗೇ ಅರಿವು ಮಾಡಿಸಿಕೊಟ್ಟು, ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದು ಜಾಂಬವ. ಇಂಥ ಜಾಂಬವಂತರ ಅಗತ್ಯ ಇಂದಿನ ಸಮಾಜದಲ್ಲಿ ಇದೆ ಎಂದು ಅಭಿಪ್ರಾಯಪಟ್ಟರು.
ಮುಂದೆ ಲಂಕೆಯಲ್ಲಿ ಭೀಕರ ಕದನ ನಡೆದು ಇಂದ್ರಜಿತುವಿನ ಶರವೃಷ್ಟಿಗೆ ಕಪಿಸೈನ್ಯದ 67 ಕೋಟಿ ಕಪಿಗಳು ಹತವಾಗಿದ್ದವು. ರಾಮ, ಲಕ್ಷ್ಮಣರು ಕೂಡಾ ಘಾಸಿಗೊಂಡು ಎದ್ದು ಯುದ್ಧಮಾಡುವ ಸ್ಥಿತಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹನುಮಂತನಿಗೆ ವಿಷಂಜಿಕರಣಿ, ಸಂಧಾನಕರಣಿ, ಸಾವರ್ಣಕರಣಿ, ಮೃತಸಂಜೀವಿನಿಯ ಗುರುತು ಹೇಳಿ ಓಷಧಿಪರ್ವತದಿಂದ ಅದನ್ನು ತರುವಂತೆ ಮಾರ್ಗದರ್ಶನ ಮಾಡಿದ್ದು ಜಾಂಬವಂತ. ಮುಂದೆ ಈ ಮೂಲಿಕೆಗಳ ಗುರುತು ಇಲ್ಲದೇ ಇಡೀ ಪರ್ವತವನ್ನೇ ಕಿತ್ತುತಂದು ಗಾಳಿ ಬೀಸಿದಾಗ ಇಡೀ ಸೈನ್ಯ ಮತ್ತೆ ಚೇತನ ಪಡೆಯುತ್ತದೆ. ಹಿರಿಯರಿಂದ ಏನು ಲಾಭ ಎನ್ನುವುದಕ್ಕೆ ಇದು ನಿರ್ದಶನ ಎಂದು ಬಣ್ಣಿಸಿದರು.
ರಾಮಾಯಣ ಕೇವಲ ಪುರಾಣ ಕಾವ್ಯವಲ್ಲ. ವ್ಯಕ್ತಿತ್ವ ನಿರ್ಮಾಣಕ್ಕೆ ಇರುವುದು ಎಲ್ಲ ಪಾತ್ರಗಳು ಅನುಸರಣೀಯ. ಆದರ್ಶಪಾತ್ರಗಳಾದ ರಾಮ, ಲಕ್ಷ್ಮಣ, ಭರತ, ಶತ್ರುಘ್ನ, ಆದರ್ಶವಲ್ಲದ ಪಾತ್ರಗಳಾದ ರಾವಣ, ಕೈಕೇಯಿ, ಮಂಥರೆಯಂಥ ಪಾತ್ರಗಳೂ ಸಿಗುತ್ತವೆ. ಹೀಗೆ ರಾಮಾಯಣ ಎನ್ನುವುದು ನಮಗೆ ಬದುಕನ್ನು ಕಲಿಸುವ ಪಾಠ ಎಂದರು.
ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಬೆಂಗಳೂರು ಪ್ರಾಂತ ಉಪಾಧ್ಯಕ್ಷ ಜಿ.ಜಿ.ಹೆಗಡೆ, ಮಾತೃಪ್ರಧಾನರಾದ ವೀಣಾ ಜಿ. ಪುಳು, ಮುಷ್ಟಿಭಿಕ್ಷೆ ಪ್ರಧಾನ ಹೇರಂಬ ಶಾಸ್ತ್ರಿ, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಉತ್ತರ ಬೆಂಗಳೂರು ಮಂಡಲ ಅಧ್ಯಕ್ಷ ಎಲ್.ಆರ್.ಹೆಗಡೆ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ರಾಮಚಂದ್ರ ಅಜ್ಜಕಾನ ಅವರನ್ನು ವಿವಿವಿ ಗುರುಕುಲಗಳ ಛಾತ್ರವಾಸ ವ್ಯವಸ್ಥಾಪಕರನ್ನಾಗಿ ಶ್ರೀಸಂಸ್ಥಾನದವರು ನಿಯುಕ್ತಿ ಮಾಡಿ ಆಶೀರ್ವದಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 13 ಮಂದಿಗೆ ಸಾಧಕ ಸನ್ಮಾನ ನೆರವೇರಿತು. ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿದ 20 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದ ಮೂಲಕ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ