ಗೆಳೆಯ ಗೆಳತಿಯರೆಂದೊಡನೇ ಥಟ್ಟನೇ ನೆನಪಾಗುವುದು ನಮ್ಮ ಸುಂದರ ಬಾಲ್ಯ. ಅದೆಂಥಾ ಸೊಗಸಿನ ದಿನಗಳವು! ಮುಗ್ಧ ಮನಸ್ಸುಗಳ ಮಿಡಿತ, ಅರಿಯದ ವಯಸ್ಸಿನಲ್ಲಿ ಚಿಮ್ಮತ್ತಿದ್ದ ನಿಸ್ವಾರ್ಥ ಸ್ನೇಹದ ಸೆಲೆ.!
ಸ್ನೇಹವೆಂದರೆ ಅದೊಂದು ಅನುಪಮ ಅವರ್ಣನೀಯ ಅನುಭಾವವನ್ನುಂಟು ಮಾಡುವ ಮನ ಮನಗಳ ನಡುವಿನ ಮಿಡಿತ ತುಡಿತಗಳ ಸುಮಧುರ ಅನುಬಂಧ. ತಾಯಿ ಮಗಳ, ತಂದೆ ಮಗನ, ಪತಿ ಪತ್ನಿಯ, ಸಹಪಾಠಿಗಳ, ಸಹೋದ್ಯೋಗಿ, ನೆರೆಹೊರೆಯ, ಸಂಬಂಧಿಕರನ್ನೊಳಗೊಂಡಂತೆ ಯಾರೇ ಆಗಿದ್ದರೂ ಅವರ ನಡುವಿನ ಒಂದು ಉತ್ತಮವಾದ ಸ್ನೇಹಭಾವವೆನ್ನುವುದು ಆ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಪ್ರೀತಿಗಿಂತಲೂ, ಅಧಿಕಾರಕ್ಕಿಂತಲೂ, ಕರುಣೆ ಅನುಕಂಪಗಳಿಗಿಂತ ಭಿನ್ನವಾಗಿ ತನ್ನದೇ ಆದಂಥ ವಿಶೇಷ ಸ್ಥಾನವನ್ನು ಸ್ನೇಹತ್ವ ಎಂಬುದು ಪಡೆದಿರುತ್ತದೆ ಎಂದು ಹೇಳಬಹುದಾಗಿದೆ. ಸ್ನೇಹವೆಂದರೆ ಅದೊಂದು ಸಲುಗೆ, ಅದೊಂದು ತ್ಯಾಗ, ಅದೊಂದು ಸಲಹೆ. ಎಷ್ಟೇ ದೂರದಲ್ಲಿದ್ದರೂ ಮನಸ್ಸು ಮನಸ್ಸುಗಳ ಬಿಡಿಸಲಾಗದ ಶಾಶ್ವತ ಸಾಂಗತ್ಯ. ಅದೊಂದು ಸಹಕಾರ, ಉಪಕಾರ, ಆದರದ ಪ್ರತೀಕ. ಮೊದಲೇ ಹೇಳಿದಂತೆ ಅದೊಂದು ಅವರ್ಣನೀಯ ಅನುಭಾವದ ಸೊಗಸು.
ಅಂದಿನ ದಿನಗಳಲ್ಲಿ ಸಮವಸ್ತ್ರಗಳಿಲ್ಲದೇ ಗೈರು ಹಾಜರಾಗುತ್ತಿದ್ದ ಎಷ್ಟೋ ಗೆಳೆಯ ಗೆಳತಿಯರಿಗೆ ಶ್ರೀಮಂತ ಕುಟುಂಬದಿಂದ ಬಂದಂಥ ಮಕ್ಕಳು ತಮ್ಮ ತಮ್ಮ ಗೆಳೆಯ ಗೆಳತಿಯರಿಗೆ ತಮ್ಮ ಮತ್ತೊಂದು ಜೊತೆ ಸಮವಸ್ತ್ರವನ್ನು ಕೊಡುತ್ತಿದ್ದ ಶ್ರೀಮಂತರ ಮನೆಯ ಮಕ್ಕಳ ಮತ್ತು ಬಡವರ ಮನೆಯ ಊಟ ಚಂದ ಎನ್ನುವ ಹಾಗೆ ತಮ್ಮ ತಮ್ಮ ಮನೆಗಳಲ್ಲಿ ತಾಯಂದಿರು ತಯಾರಿಸುತ್ತಿದ್ದ ರೊಟ್ಟಿ, ಸೊಪ್ಪು ಕಾಳುಗಳನ್ನು ಬೇಯಿಸಿ ಮಾಡುತ್ತಿದ್ದ ರುಚಿಕರ ಪಲ್ಯ, ಹುರಿದ ಶೇಂಗಾಬೀಜ, ಗಟ್ಟಿ ಮೊಸರು, ಘಮ ಘಮಿಸುವ ಬೆಲ್ಲದ ಅನ್ನ ಇದೆಲ್ಲದರ ಸವಿರುಚಿಯನ್ನು ಸವಿಯುವಂತೆ ಮಾಡುತ್ತಿದ್ದ ಬಡ ಕುಟುಂಬದ ಮಕ್ಕಳ ಸ್ನೇಹ ಸಮ್ಮಿಲನಕ್ಕೆ ಎಲ್ಲೆಯೇ ಇರುತ್ತಿರಲಿಲ್ಲ.
ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳಲ್ಲಿ ಸಂಬಂಧಿಕರಿಗಿಂತಲೂ ಹೆಚ್ಚಾಗಿ ಸ್ನೇಹಿತರ ಪಾಲ್ಗೊಳ್ಳಯುವಿಕೆಯು ಸ್ನೇಹದ ಮಹತ್ವವನ್ನು ಸಾರುತ್ತದೆ. ಒಮ್ಮೊಮ್ಮೆ ಯಾರೊಡನೆಯೂ ಹೇಳಿಕೊಳ್ಳಲಾಗದ ನಮ್ಮ ಮನದೊಳಗಿನ ಅಳಲು, ನೋವು ತೋಳಲಾಟಗಳನ್ನು ಸ್ನೇಹಿತರ ಜತೆ ಹಂಚಿಕೊಂಡಾಗ ಮಾತ್ರ ನಮ್ಮ ಮನಸ್ಸು ನಿರಾಳತೆಯೆಡೆಗೆ ಸಾಗುವುದು. ರಕ್ತಸಂಬಂಧವೇ ಬೇರೆ, ಸ್ನೇಹಸಂಬಂಧವೇ ಬೇರೆ. ರಕ್ತಸಂಬಂಧದಲ್ಲಿ ನೀನು ತಾನು, ನನ್ನದು ನಿನ್ನದು, ಏನು ಯಾಕೆ ಹೀಗೆಲ್ಲಾ ಪ್ರಶ್ನೆ ವಿಚಾರಗಳು ಉದ್ಭವಿಸುವುದು ಸಹಜ. ಆದರೆ ಸ್ನೇಹವು ಇವೆಲ್ಲವನ್ನೂ ಬದಿಗೊತ್ತಿ ಮೊದಲು ಅಗತ್ಯವಾಗಿ ಸಿಗಬೇಕಾದ ಸ್ಪಂದನೆಗೆ ಮುಂದಾಗುತ್ತದೆ. ಇದೇ ಈ ಎರಡು ಸಂಬಂಧಗಳ ನಡುವಿನ ವ್ಯತ್ಯಾಸ ಎನ್ನಬಹುದು.
ಬರುವಾಗ ಏನನ್ನೂ ತಂರುವುದಿಲ್ಲ, ಹೋಗುವಾಗಲೂ ಏನನ್ನೂ ಒಯ್ಯುವುದಿಲ್ಲ. ಬಂದುಹೋಗುವ ನಡುವೆ ವಿರಸ, ದ್ವೇಷ, ಅಸಮಾನತೆ, ಅಸಮಾಧಾನ, ಅವಿವೇಕಗಳೆಂಬ ಶತೃತ್ವವನ್ನು ಪ್ರಚೋದಿಸುವ ಗುಣಗಳಿಗೆ ಬಲಿಯಾಗಿ ಇರುವ ನಾಲ್ಕು ದಿನಗಳ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವ ಗೊಡವೆಯೇಕೆ ನಮ್ಮ ನಮ್ಮೊಳಗೇ.
ಸಂಬಂಧ ಯಾವುದಾದರೇನು? ಇರಲಿ ಅದರೊಳಗೊಂಡಷ್ಟು ಸ್ನೇಹತ್ವದ ಸವಿಭಾವ, ನೀಗಲಿ ನಮ್ಮೆಲ್ಲರ ಮನದ ನೋವ.
- ವಿಜಯಲಕ್ಷ್ಮಿ ನಾಗೇಶ್, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ