ಆಹಾರ ನಷ್ಟ ಮತ್ತು ತ್ಯಾಜ್ಯ ಕಡಿತದ ಕುರಿತು ಅಂತರರಾಷ್ಟ್ರೀಯ ಜಾಗೃತಿ ದಿನ- 29 ಸೆಪ್ಟೆಂಬರ್
ಆಹಾರ ನಷ್ಟ ಮತ್ತು ತ್ಯಾಜ್ಯ ಕಡಿತದ ಕುರಿತು ಅಂತರರಾಷ್ಟ್ರೀಯ ಜಾಗೃತಿ ದಿನವನ್ನು ಆಚರಿಸಲು ಸೆಪ್ಟೆಂಬರ್ 29 ರಂದು ಜಗತ್ತು ಒಗ್ಗೂಡುತ್ತದೆ. ಆಹಾರದ ನಷ್ಟ ಮತ್ತು ಅಪಬಳಕೆ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ಕಡಿಮೆ ಮಾಡಲು ಕ್ರಮಗಳನ್ನು ಉತ್ತೇಜಿಸಲು ಇದು ಒಂದು ಅವಕಾಶವಾಗಿದೆ.
ನಮಗೆ ಬಳಸುವ ಹಕ್ಕಿದೆ ಆದರೆ ಎಸೆಯುವುದಕ್ಕಲ್ಲ
ಪ್ರತಿ ಅನ್ನದ ಅಗುಳಿನಲ್ಲಿ ತಿನ್ನುವವನ ಹೆಸರು ಬರೆದಿರುತ್ತದೆಂಬುದು ಬಲ್ಲವರ ಅಭಿಮತ. ಆದರೆ ಇಂದು ಜಗತ್ತಿನಲ್ಲಿ ಪ್ರತಿ ನಾಲ್ಕು ಸೆಕೆಂಡಿಗೆ ಒಂದು ಮಗು ಹಸಿವು ಮತ್ತು ಬಡತನದ ಕಾರಣದಿಂದಾಗಿ ಸಾಯುತ್ತಿದೆ ಎಂಬ ಅಂಕಿ ಅಂಶ ನಿಜಕ್ಕೂ ನಮ್ಮ ಅಸಹಾಯಕತೆ ಮತ್ತು ಅನಾದರದತ್ತ ಬೊಟ್ಟು ಮಾಡುತ್ತಿದೆ. ವಿಶ್ವವು ಇಂದು ಸಾಕಷ್ಟು ಆಹಾರವನ್ನು ಉತ್ಪಾದಿಸುತ್ತಿದ್ದರು ಕೂಡಾ ಹಸಿವು ಮುಕ್ತರಾಗಲು ಸಾಧ್ಯವಾಗದಿರುವುದು ಬೆಳವಣಿಗೆಯ ಸವಾಲುಗಳಲ್ಲಿ ಬಹುಮುಖ್ಯ ವಿಪರ್ಯಾಸವೇ ಸರಿ. ಮಾನವನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಈ ಭೂಮಿಗೆ ಇದೆ ಆದರೆ ಆಗ್ರಹಗಳನ್ನಲ್ಲ ಎಂಬ ಮಹಾತ್ಮಾ ಗಾಂಧೀಜಿಯವರ ಮಾತು ಇಂದಿನ ಸಮಸ್ಯೆಗೆ ಹಿಡಿದ ಕೈಗನ್ನಡಿ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಮಾನವ ಬಳಕೆಗಾಗಿ ಉತ್ಪಾದಿಸಲಾದ ಎಲ್ಲಾ ಆಹಾರದ ಮೂರನೇ ಒಂದು ಭಾಗವು ಪ್ರತಿ ವರ್ಷ ನಷ್ಟವಾಗುತ್ತದೆ ಅಥವಾ ವ್ಯರ್ಥವಾಗುತ್ತದೆ. ಇದು ಸರಿಸುಮಾರು ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ಸುಮಾರು 1.3 ಬಿಲಿಯನ್ ಟನ್ ಆಹಾರವಾಗಿದೆ. ಉತ್ಪಾದನೆಯಿಂದ ಸಂಸ್ಕರಣೆ, ಸಾಗಣೆ, ವಿತರಣೆ ಮತ್ತು ಬಳಕೆಯವರೆಗೆ ಆಹಾರ ಪೂರೈಕೆ ಸರಪಳಿಯ ಎಲ್ಲಾ ಹಂತಗಳಲ್ಲಿ ಆಹಾರ ನಷ್ಟ ಮತ್ತು ತ್ಯಾಜ್ಯ ಸಂಭವಿಸುತ್ತದೆ.
ಭಾರತದಲ್ಲಿ ದಿನವೊಂದಕ್ಕೆ 15 ಸಾವಿರ ಟನ್ ಸಿದ್ಧ ಅಹಾರ ಪೋಲಾಗುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಜನರು ಹೊಟ್ಟೆಗಿಲ್ಲದೆ ತೊಳಲಾಡುತ್ತಿರುವಾಗ ಆಹಾರ ಅಪವ್ಯಯವಾಗುತ್ತಿರುವುದು ತೀರಾ ಕಳವಳಕಾರಿಯಾದುದು. ಆಹಾರದ ಕೊರತೆ ಬಡತನವನ್ನು ಸೂಚಿಸಿದರೆ, ಆಹಾರ ಪೋಲಾಗುವಿಕೆ ಉಪೇಕ್ಷೆಯನ್ನು ಸೂಚಿಸುತ್ತದೆ.
ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು: 2023ರ ಘೋಷವಾಕ್ಯ
2023 ರಲ್ಲಿ ಆಹಾರ ನಷ್ಟ ಮತ್ತು ತ್ಯಾಜ್ಯದ ಕುರಿತು ಅಂತರರಾಷ್ಟ್ರೀಯ ಜಾಗೃತಿ ದಿನದ ವಿಷಯವು "ಆಹಾರ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವುದು: ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸಲು ಕ್ರಮ ತೆಗೆದುಕೊಳ್ಳುವುದು." ಈ ಘೋಷವಾಕ್ಯ ಆಹಾರ ನಷ್ಟ ಮತ್ತು ತ್ಯಾಜ್ಯವನ್ನು ಪರಿಹರಿಸುವಲ್ಲಿ ಸರ್ಕಾರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳ ಹಂಚಿಕೆಯ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.
ನಾವು ತಿನ್ನುವ ಆಹಾರ ನಮ್ಮನ್ನು ತಿನ್ನುತ್ತಿದೆ!
ಜಾಗತಿಕ ಆಹಾರದ ಉತ್ಪಾದನೆ ಹೆಚ್ಚುತ್ತಿದ್ದರೂ ಕೂಡಾ ಆಹಾರದ ದುರ್ಬಳಕೆ ಮತ್ತು ಪೋಲಿನ ಕಾರಣದಿಂದಾಗಿ ಜಾಗತಿಕ ಹಸಿವಿನ ಸಮಸ್ಯೆಯನ್ನು ಬಗೆಹರಿಸಲಾಗಲಿಲ್ಲ. ಹಾಗಾಗಿ ನಾವು ನಿಯಂತ್ರಣವಿಲ್ಲದೆ ಬೇಜಾವಾಬ್ದಾರಿಯಿಂದ ಆಹಾರ ಪದಾರ್ಥಗಳ ನಿರ್ವಹಣೆ ಮಾಡುತ್ತಿರುವುದರಿಂದ ಆಹಾರದ ಸಮಸ್ಯೆ ದಿನೇ ದಿನೇ ಉಲ್ಬಣಿಸುತ್ತಿದೆ.
ಸಂಪನ್ಮೂಲಗಳ ಸಂರಕ್ಷಣೆ: ಆಹಾರದ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವುದು ಅತ್ಯಗತ್ಯ ಏಕೆಂದರೆ ಇದು ಅಮೂಲ್ಯವಾದ ಸಂಪನ್ಮೂಲಗಳನ್ನು ಸಂರಕ್ಷಿಸುತ್ತದೆ. ಆಹಾರವು ಕಳೆದುಹೋದಾಗ ಅಥವಾ ವ್ಯರ್ಥವಾದಾಗ, ಅದು ಆಹಾರದ ನಷ್ಟವನ್ನು ಮಾತ್ರವಲ್ಲದೆ ಅದರ ಉತ್ಪಾದನೆಯಲ್ಲಿ ಬಳಸಲಾಗುವ ಸಂಪನ್ಮೂಲಗಳಾದ ನೀರು, ಭೂಮಿ, ಶಕ್ತಿ, ಕಾರ್ಮಿಕ ಮತ್ತು ಬಂಡವಾಳವನ್ನು ಪ್ರತಿನಿಧಿಸುತ್ತದೆ. ಆಹಾರದ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ ನಾವು ಈ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು, ಭವಿಷ್ಯದ ಪೀಳಿಗೆಗೆ ಅವುಗಳ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಬಹುದು.
ಹವಾಮಾನ ಬದಲಾವಣೆ ತಡೆಗಟ್ಟುವುದು
ಆಹಾರದ ನಷ್ಟ ಮತ್ತು ತ್ಯಾಜ್ಯವು ಪರಿಸರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ತಿರಸ್ಕರಿಸಿದ ಆಹಾರವು ಕೊಳೆಯುತ್ತದೆ ಮತ್ತು ಹಸಿರುಮನೆ ಅನಿಲಗಳನ್ನು ಉತ್ಪಾದಿಸಿ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.
ಆಹಾರ ಭದ್ರತೆ
ಆಹಾರದ ನಷ್ಟ ಮತ್ತು ತ್ಯಾಜ್ಯವು ಆಹಾರದ ಒಟ್ಟಾರೆ ಲಭ್ಯತೆಯನ್ನು ಕಡಿಮೆ ಮಾಡುವ ಮೂಲಕ ಆಹಾರ ಭದ್ರತೆಯ ಮೇಲೆ ಋಣಾತ್ಮಕವಾದ ಪರಿಣಾಮ ಬೀರುತ್ತದೆ. ಕೋಟ್ಯಾಂತರ ಜನರು ಇನ್ನೂ ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನಲ್ಲಿ, ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಪೂರೈಕೆಗೆ ಪ್ರವೇಶವಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಆಹಾರವನ್ನು ಸಂರಕ್ಷಿಸುವುದು ಮುಖ್ಯವಾಗಿದೆ.
ಆಹಾರದ ವೆಚ್ಚ ಕಡಿತ
ಆಹಾರದ ನಷ್ಟ ಮತ್ತು ತ್ಯಾಜ್ಯವು ಆಹಾರ ಉತ್ಪಾದನೆ ಮತ್ತು ವಿತರಣೆಯ ವೆಚ್ಚವನ್ನು ಹೆಚ್ಚಿಸುತ್ತದೆ. ಈ ಹೆಚ್ಚಿದ ವೆಚ್ಚವು ಗ್ರಾಹಕರಿಗೆ ಹೆಚ್ಚಿನ ಬೆಲೆಗಳಿಗೆ ಕಾರಣವಾಗಬಹುದು. ಆಹಾರದ ಪೋಲನ್ನು ಕಡಿತಗೊಳಿಸುವ ಮೂಲಕ ಆಹಾರವಸ್ತುಗಳನ್ನು ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಪೂರೈಸಬಹುದಾಗಿದೆ.
ಅನ್ನದಾನ ಪರಮ ಪುಣ್ಯದ ಕೆಲಸ
ಒಂದೆಡೆ ಹಸಿದವರ ಆಕ್ರಂದನ ಕೇಳಿಸುತ್ತಿದ್ದರೆ ಮತ್ತೊಂದೆಡೆ ಹೊಟ್ಟೆ ಬಿರಿಯುವಂತೆ ತಿಂದು ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ಬಿಸಾಡಲಾಗುತ್ತದೆ. ಹೀಗೆ ಪೋಲು ಮಾಡುವುದು ದೊಡ್ಡ ಸಮಸ್ಯೆ ಎಂದು ಯಾರಿಗೂ ಅನ್ನಿಸುವುದಿಲ್ಲ. ಆದರೆ ಆಹಾರವನ್ನು ವ್ಯರ್ಥಗೊಳಿಸುವುದು ಗಂಭೀರವಾದ ಸಮಸ್ಯೆ. ವರ್ಷಕ್ಕೆ ಹತ್ತಾರು ಹಬ್ಬಗಳಿರುವ ದೇಶ ನಮ್ಮದು. ಅನ್ನದಾನ ಎಂಬುದನ್ನು ಪರಮ ಪುಣ್ಯದ ಕೆಲಸ ಎನ್ನುವ ನಂಬಿಕೆ ನಮ್ಮದು. ಆದರೆ ಇಂಥ ಆಚರಣೆಗಳ ಸಂದರ್ಭದಲ್ಲಿಕೊಡುವ ತಿಂಡಿ, ತೀರ್ಥ, ಪ್ರಸಾದ ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಮನೆಗಳಲ್ಲೂ ಆಹಾರ ಪದಾರ್ಥಗಳು ಹಾಳಾಗದಂತೆ ಎಚ್ಚರವಹಿಸಬೇಕು. ಹೀಗೆ ಮಾಡುವುದರಿಂದ ವೈಯಕ್ತಿಕ ಲಾಭವಷ್ಟೇ ಅಲ್ಲ; ಇಡೀ ದೇಶಕ್ಕೆ ಒಳಿತು ಎಂಬುದನ್ನು ಮರೆಯಬಾರದು.
ಆನೆಯ ಬಾಯಿಯಿಂದ ಬಿದ್ದ ಕಾಳು
ಆನೆಗೆ ಬಹಳ ಚಿಕ್ಕದಿರಬಹುದು, ಆದರೆ ಅದು ಇರುವೆಗೆ ಒಂದೆರಡು ದಿನದ ಆಹಾರವಾಗಬಹುದು. ನೀವು ಬೇಡವೆಂದು ಎಸೆದಿದ್ದು ಬೇರೆಯವರಿಗೆ ಉಪಯೋಗಕ್ಕೆ ಬರಬಹುದು. ಹಂಚಿಕೊಳ್ಳುವುದರಲ್ಲಿನ ಸಂತಸ ಬೇರೆ ಯಾವುದರಲ್ಲಿಯೂ ಇಲ್ಲ ಎಂಬ ಹಿರಿಯರ ಮಾತು ನಮಗೆ ಮಾರ್ಗದರ್ಶಿಯಾಗಬೇಕು.
ಮಳೆಯ ಹನಿ ತುಂಬಾ ಚಿಕ್ಕದಾಗಿರಬಹುದು. ಆದರೆ ಅದು ಬಿಡದೆ ಸುರಿದರೆ ದೊಡ್ಡ ದೊಡ್ಡ ನದಿಗಳು ತುಂಬುತ್ತವೆ. ಹಾಗೆಯೇ ನಾವು ಮಾಡುವ ಸಣ್ಣ ಸಣ್ಣ ಪ್ರಯತ್ನಗಳು ಜೀವನದಲ್ಲಿ ದೊಡ್ಡ ಪರಿವರ್ತನೆ ತರಲು ಸಕ್ಷಮವಾಗಿದೆ. ಪ್ರಯತ್ನ ಸಣ್ಣದಾದರೂ ಪರವಾಗಿಲ್ಲ ಆದರೆ ಆ ಪ್ರಯತ್ನ ನಿಲ್ಲಬಾರದು ಅಷ್ಟೆ.
ಆಹಾರ ಪದಾರ್ಥಗಳನ್ನು ಪೋಲು ಮಾಡುವುದನ್ನು ತಡೆಯಲು ಕಾನೂನು ಕ್ರಮ ಒಂದೆಡೆಯಾದರೆ, ಪ್ರತಿಯೊಬ್ಬರೂ ಈ ವಿಷಯದ ಕುರಿತು ಗಾಢವಾಗಿ ಆಲೋಚಿಸಬೇಕು. "ಯಾರೊಬ್ಬರೂ ತಿನ್ನುವ ಅನ್ನವನ್ನು ಪೋಲು ಮಾಡಬೇಡಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಕರೆ ಕೊಟ್ಟಿದ್ದರು.
ಒಂದು ತುತ್ತು ಅನ್ನ ಚೆಲ್ಲಲು ಒಂದೇ ಸೆಕೆಂಡು ಸಾಕು, ಆದರೆ ಅದನ್ನು ಬೆಳೆಯಲು ರೈತನ ನಾಲ್ಕು ತಿಂಗಳ ಬೆವರು ಇದೆ ಎಂಬುದನ್ನು ಅರಿಯೋಣ. ಒಂದೇ ಒಂದು ತುತ್ತಾದರೂ ಸರಿಯೇ ಚೆಲ್ಲುವ ಮುನ್ನ ಒಂದು ಕ್ಷಣ ಯೋಚಿಸೋಣ.
- ಡಾ. ಎ. ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಶ್ರೀ.ಧ.ಮಂ. ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


