ಗೋಕರ್ಣ: ಸಮಾಜದಲ್ಲಿ ಧನಕ್ಕಿಂತ ಹೆಚ್ಚಿನ ಮಹತ್ವ ಧರ್ಮಕ್ಕೆ ಸಿಕ್ಕಿದಾಗ ಮಾತ್ರ ಅದು ಸಂಸ್ಕಾರಯುತ ಸಮಾಜವಾಗುತ್ತದೆ ಎಂದು ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪರಮಪೂಜ್ಯರು ಬುಧವಾರ ರಾಮಚಂದ್ರಾಪುರ ಮಂಡಲದ ಭೀಮನಕೋಣೆ, ಪುರಪ್ಪೇಮನೆ ಮತ್ತು ಕಾನುಗೋಡು ವಲಯಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಶಿಷ್ಯಭಕ್ತರಿಂದ ಶ್ರೀಗುರುಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
"ನಮ್ಮ ಮಠದಲ್ಲಿ ಧರ್ಮಕ್ಕೆ ಎತ್ತರದ ಸ್ಥಾನ. ಧರ್ಮ ನಮ್ಮ ಮಠವನ್ನು ಆಳುವಂಥದ್ದು. ಧರ್ಮ, ಸಂಸ್ಕೃತಿ, ಮೌಲ್ಯ, ಪರಂಪರೆ ನಮಗೆ ಮುಖ್ಯ. ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ, ಮಠ, ಸಂಘಟನೆ ಇರುವುದು ನಮ್ಮ ಒಳಿತಿಗಾಗಿ ಎಂಬ ಭಾವನೆ ಸಮಾಜದಲ್ಲಿ ಸ್ಥಾಪಿತವಾಗಬೇಖು ಎಂದು ಆಶಿಸಿದರು.
ಮತ್ತೊಬ್ಬರ ಕಷ್ಟ ಪರಿಹಾರಕ್ಕೆ ನಾವು ಕಾರಣರಾದಾಗ ಆ ತೃಪ್ತಿಯ ಸುಖ ನಮಗೆ ಸಿಗುತ್ತದೆ. ಸಮಾಜದ ದುಃಖ ನಮ್ಮ ಕ್ಲೇಶ, ಜನತೆಯ ಖುಷಿ ನಮ್ಮ ಸುಖ ಎನ್ನುವ ಮನೋಭಾವ ನಮ್ಮದಾಗಬೇಕು. ಮಕ್ಕಳು ಸುಖವಾಗಿದ್ದಾಗ ತಾಯಿ ಆನಂದಿಸುವಂತೆ ಇತರರ ಸಂತೋಷದಲ್ಲಿ ನಾವು ಸುಖಪಡಬೇಕು. ಸೇವೆ-ಸಾಧನೆಯನ್ನು ಗುರುತಿಸಿ ಗೌರವಿಸುವ ಜತೆಗೆ ಸಂಕಷ್ಟಗಳಿಗೆ ಸ್ಪಂದಿಸಿ, ಸಮಾಜದಲ್ಲಿ ನೊಂದವರ ಕಣ್ಣೀರೊರೆಸುವ ಕಾರ್ಯ ಆಗಬೇಕು ಎಂದು ಸೂಚಿಸಿದರು.
ಸಂಸ್ಕೃತಿ ಇಲ್ಲದಿದ್ದರೆ ಸಮೃದ್ಧಿ ವ್ಯರ್ಥ. ಸಂಸ್ಕೃತಿಹೀನ ಸಮೃದ್ಧಿ ಭೋಗ ಜೀವನಕ್ಕೆ ಹಾಗೂ ನಾವು ಸಮಾಜದಲ್ಲಿ ದಾರಿ ತಪ್ಪಲು ಕಾರಣವಾಗುತ್ತದೆ. ಮುಂದಿನ ಪೀಳಿಗೆಗೆ ಸಂಸ್ಕಾರಯುತ ಶಿಕ್ಷಣ ನೀಡಲು ಎಲ್ಲ ಪೋಷಕರು ಪಣ ತೊಡಬೇಕು. ಆಗ ಮಾತ್ರ ಭವಿಷ್ಯದ ಸಮಾಜ ಉನ್ನತಿಗೆ ಹೋಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ ಕಾಲೇಜು ಆರಂಭಿಸಲಾಗುತ್ತಿದೆ. ಸಮಾಜ ಬಯಸುವ ಶಿಕ್ಷಣವನ್ನು ನೀಡುವುದು ನಮ್ಮ ಉದ್ದೇಶ. ಅತ್ಯುತ್ತಮ ಗುಣಮಟ್ಟದ ಆಧುನಿಕ ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸುವುದು, ಸಾತ್ವಿಕತೆಯನ್ನು ಬೆಳೆಸುವುದು ಹಾಗೂ ಈ ಮೂಲಕ ಇಡೀ ಸಮಾಜವನ್ನು ಸರಿದಾರಿಯಲ್ಲಿ ಒಯ್ಯುವುದು ವಿವಿವಿಯ ಮುಖ್ಯ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡದ ಪುತ್ತೂರಿನ ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ಈ ಸಂದರ್ಭದಲ್ಲಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಸೇವಾ ಪ್ರಧಾನ ಪ್ರಸನ್ನ ಉಡುಚೆ, ರಾಮಚಂದ್ರಾಪುರ ಮಂಡಲದ ಕಾರ್ಯದರ್ಶಿ ರಮೇಶ್ ಕಾನುಗೋಡು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗುನಗ ಸಮಾಜ ಮತ್ತು ಹಾಲಕ್ಕಿ ಸಮಾಜದ ವತಿಯಿಂದ ಶ್ರೀಪಾದುಕಾಪೂಜೆ ನೆರವೇರಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


