ಮಂಗಳೂರು: ಶಾಸ್ತ್ರೀಯ ಸಂಗೀತ ದೈವಿಕ ಕಲೆಯಾಗಿದ್ದು ಪೋಷಕರು ಮಕ್ಕಳಿಗೆ ಎಳವೆಯಲ್ಲಿಯೇ ಶಾಸ್ತ್ರೀಯ ಸಂಗೀತದ ಕುರಿತು ಆಸಕ್ತಿ ಮೂಡಿಸಬೇಕು ಎಂದು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸಂಸ್ಥೆಯ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ನುಡಿದರು. ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವತಿಯಿಂದ ಸುರತ್ಕಲ್‌ನ ಭಾಗ್ಯ ರೆಸಿಡೆನ್ಸಿಯಲ್ಲಿ ಆಯೋಜಿಸಲಾದ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೀಪ ಪ್ರಜ್ವಲನಗೊಳಿಸಿದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ, ವ್ಯಕ್ತಿಯ ಅಂತಸ್ಸತ್ವ ಅಭಿವ್ಯಕ್ತಿಸುವಲ್ಲಿ ಶಾಸ್ತ್ರೀಯ ಸಂಗೀತ ಕಲೆಯ ಅಭ್ಯಾಸ ವಿಶಿಷ್ಟವಾದುದು ಎಂದರು.
ಅಗರಿ ಸಮೂಹ ಸಂಸ್ಥೆಗಳ ಮಾಲೀಕ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಸನಾತನ ಧರ್ಮದ ಶ್ರೇಷ್ಠತೆಯ ಅರಿವನ್ನು ಹಿರಿಯರು ಮಕ್ಕಳಿಗೆ ತಿಳಿಯಪಡಿಸಬೇಕೆಂದರು. ಹಿರಿಯ ನಾದಸ್ವರ ಕಲಾವಿದರಾದ ವಿದ್ವಾನ್ ನಾಗೇಶ ಎ.ಬಪ್ಪನಾಡು ಶುಭ ಹಾರೈಸಿ ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದೆ ಎಂದರು.
ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಶುಭ ಹಾರೈಸಿ ಸಂಗೀತ ತರಗತಿಯ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಕಲೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮೂಲಕ ಉತ್ತಮ ಕಲಾವಿದರಾಗಬಹುದು. ಸಂಗೀತ ಕಲಿಕೆಗೆ ಪೂರಕವಾಗಬಲ್ಲ ಯೋಗ, ಪ್ರಾಣಾಯಾಮ, ಧ್ಯಾನ, ಭಗವದ್ಗೀತೆ, ಭಜನೆ, ದೇವರನಾಮ, ಪುರಾಣ ಕಥೆಗಳನ್ನು ಕಲಿಸುವುದರೊಂದಿಗೆ ಸಂಸ್ಕಾರಯುತ ವ್ಯಕ್ತಿತ್ವ ಬೆಳೆಸುವ ಗುರಿಯಿರಿಸಿ ಕೊಳ್ಳಲಾಗಿದೆ ಎಂದರು.
ಅರುಣಾ ರತೀಶ್ ಉಡುಪ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯ ಮಲ್ಲಿಕಾರ್ಜುನ, ಸುಜಾತ ಎಸ್. ಭಟ್, ಕೋಶಾಧಿಕಾರಿ ಆನಂದ ರಾವ್, ವಿಭು ರಾವ್ ಮತ್ತಿತರರು ಉಪಸ್ಥಿತರಿದ್ದರು.
ಮಂಜುನಾದ ತಂಡದ ಕಲಾವಿದೆಯರಾದ ಆಶ್ವೀಜಾ ಉಡುಪ ಮತ್ತು ಸುಮೇಧ ಕೆ.ಎನ್ ಶ್ರೀ ಧರ್ಮಸ್ಥಳ ಕ್ಷೇತ್ರದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ರಾಷ್ಟ್ರಗೀತೆ ಜನಗಣಮನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ