ಮಂಗಳೂರು ನಾಗರಿಕರಿಂದ ಅನಂತನಾಗ್ ದಂಪತಿಗಳಿಗೆ 75ರ ಅಭಿನಂದನೆ; ಸಾರೋಟಿನಲ್ಲಿ ಮೆರವಣಿಗೆ

Upayuktha
0

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅನಂತನಾಗ್ ಅಭಿನಂದನಾ ಸಮಿತಿ ವತಿಯಿಂದ ಅನಂತನಾಗ್ ಅವರ 75ನೇ ವರ್ಷದ ಹುಟ್ಟುಹಬ್ಬ ಹಾಗೂ ವೃತ್ತಿಜೀವನದ 50 ನೇ ವರ್ಷದ ಸಂಭ್ರಮಾಚರಣೆ‌ ಅನಂತ ಅಭಿನಂದನೆ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಭಾನುವಾರ ಅದ್ದೂರಿ ಚಾಲನೆ ನೀಡಲಾಯಿತು.

ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಪುತ್ಥಳಿಗೆ ಅನಂತನಾಗ್ ಅವರು ಹಾರಾರ್ಪಣೆ ಮಾಡಿ ಶ್ರೇಷ್ಠ ಶಿಕ್ಷಣ ಮತ್ತು ಬ್ಯಾಂಕಿಂಗ್ ತಜ್ಞನಿಗೆ ಗೌರವ ಸಲ್ಲಿಸಿದರು.




ಕೆನರಾ ಹೈಸ್ಕೂಲಿನ ಮುಂಭಾಗದಲ್ಲಿ ವಿಶೇಷವಾಗಿ ಸಿಂಗರಿಸಿದ ಸಾರೋಟಿನಲ್ಲಿ ಅನಂತನಾಗ್ ದಂಪತಿಗಳನ್ನು ಕುಳ್ಳಿರಿಸಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಟಿ.ವಿ ರಮಣ್ ಪೈ ಸಭಾಂಗಣಕ್ಕೆ ಕರೆದುಕೊಂಡು ಬರಲಾಯಿತು. ದಾರಿಯುದ್ದಕ್ಕೂ ಹುಲಿವೇಷ‌ ಕುಣಿತ, ಸ್ಯಾಕ್ಸೋಪೋನ್, ಬೊಂಬೆಗಳು, ಮಕ್ಕಳಿಂದ ಅನಂತನಾಗ್ ಸಿನೆಮಾ ಪಾತ್ರಗಳ ವೇಷಭೂಷಣ, ಬಾಜಾ ಭಜಂತ್ರಿಗಳ ಅಬ್ಬರದಲ್ಲಿ ಅನಂತನಾಗ್ ಅಭಿಮಾನಿಗಳು ಸಂಭ್ರಮಿಸಿದರು.


ಮಂಗಳಾದೇವಿಯ ಕೃಪೆಯಿಂದ ಇದೆಲ್ಲ ಸಾಧ್ಯವಾಯ್ತು: ಅನಂತನಾಗ್

ಬಾಲ್ಯದಲ್ಲಿ ಓಡಾಡಿಕೊಂಡಿದ್ದ ಕರಾವಳಿಯ ಭೂಮಿಯಲ್ಲೇ 75ನೇ ವರ್ಷದ ಸಂಭ್ರಮಾಚರಣೆ ಮಾಡಿರುವುದು ಧನ್ಯತೆ, ಸಾರ್ಥಕತೆಯ ಭಾವ ಮೂಡಿಸಿದೆ. ತಾಯಿ ಮಂಗಳಾದೇವಿಯ ಕೃಪೆಯಿಂದಲೇ ಇದು ಸಾಧ್ಯವಾಗಿದ್ದು, ಪ್ರತಿದಿನ ಈ ಕ್ಷಣವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಕರಾವಳಿಯ ಅಭಿಮಾನದ ಈ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ನಟ ಅನಂತನಾಗ್ ಹೇಳಿದರು.



ಅನಂತನಾಗ್-75 ಅಭಿನಂದನ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಭಾನುವಾರ ನಗರದ ಟಿ.ವಿ ರಮಣ ಪೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.


ಕಾಸರಗೋಡಿನ ಸಮೀಪದ ಕಾಂಚನಗಢದ ಆನಂದಾಶ್ರಮದಲ್ಲಿ ಬಾಲ್ಯದ 6 ವರ್ಷಗಳನ್ನು ಕಳೆದಿದ್ದೆ. ಗುರುಗಳೇ ಸಾಕ್ಷಾತ್ ದೇವರು ಎನ್ನುವ ವಿಚಾರವನ್ನು ಅಲ್ಲಿ ಕಲಿತಿದ್ದೆ ಎಂದು ಅನಂತನಾಗ್ ನೆನಪಿಸಿಕೊಂಡರು.


ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ಸಂಸದ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಚಲನಚಿತ್ರನಟ ರಿಷಭ್ ಶೆಟ್ಟಿ, ಅನಂತನಾಗ್ ಪತ್ನಿ ಗಾಯತ್ರಿ, ಪುತ್ರ ಅದಿತಿ, ಅಳಿಯ ವಿವೇಕ್, ಶಾಸಕ ಡಿ. ವೇದವ್ಯಾಸ ಕಾಮತ್, ನಟ ದೇವದಾಸ್ ಕಾಪಿಕಾಡ್, ಉದ್ಯಮಿ ವಾಸುದೇವ ಕಾಮತ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯಕ್ರಮ ಸಂಚಾಲಕ ಗೋಪಿನಾಥ್ ಭಟ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗಿರಿಧರ ಶೆಟ್ಟಿ, ರಂಗ ಸಂಗಾತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ನರೇಶ್ ಶೆಣೈ ಉಪಸ್ಥಿತರಿದ್ದರು.



ಬೆಳಿಗ್ಗೆ ಶಾಸಕ ವೇದವ್ಯಾಸ ಕಾಮತ್ ಮುಂದಾಳತ್ವದಲ್ಲಿ ಅನಂತನಾಗ್ ಹಾಗೂ ಗಾಯತ್ರಿ ನಾಗ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆ ಬಳಿಕ ನಡೆದ ಸಂವಾದದಲ್ಲಿ ಕಾಸರಗೋಡು ಚಿನ್ನಾ, ದಿನೇಶ್ ಮಂಗಳೂರು, ಲಕ್ಷ್ಮಣ್ ಕುಮಾರ್ ಮಲ್ಲೂರು, ಸದಾಶಿವ ಶೆಣೈ‌ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಮನೋಹರ್ ಪ್ರಸಾದ್ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top