ಸಣ್ಣ ಪುಟ್ಟ ಅವಕಾಶಗಳನ್ನೂ ಸದ್ಬಳಕೆ ಮಾಡಿಕೊಳ್ಳಬೇಕು: ವಿದ್ವಾನ್ ತೇಜಶಂಕರ ಸೋಮಯಾಜಿ

Upayuktha
0

           ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ಅನುಪಮ ವೇದಿಕೆ ಕಾರ್ಯಕ್ರಮ



ಪುತ್ತೂರು: ಯಾರಿಗೂ ಒಂದೇ ಸಲಕ್ಕೆ ಅತ್ಯುತ್ತಮ ವೇದಿಕೆಗಳು ಲಭ್ಯವಾಗುವುದಿಲ್ಲ. ಹಂತಹಂತವಾಗಿ ಬೆಳೆಯುವುದರ ಮುಖೇನ ಉನ್ನತ ವೇದಿಕೆಗಳವರೆಗೆ ತಲಪುವುದಕ್ಕೆ ಸಾಧ್ಯವಿದೆ. ಹಾಗಾಗಿ ಕಾಲೇಜುಗಳಲ್ಲಿ ದೊರಕುವ ಸಣ್ಣ ಪುಟ್ಟ ಅವಕಾಶಗಳನ್ನೂ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ತಮ್ಮೊಳಗೆ ಅವಿತಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವುದಕ್ಕೆ ಸಾಧ್ಯವಿದೆ ಎಂದು ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸುತ್ತಿರುವ ಅನುಪಮ ಪ್ರತಿಭಾ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.


ಒಬ್ಬರೊಂದಿಗೆ ಸಾಮಾನ್ಯವಾಗಿ ಮಾತನಾಡುವುದಕ್ಕೂ, ವೇದಿಕೆಯ ಮೂಲಕ ಮಾತನಾಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ವೇದಿಕೆಯ ಮಾತುಗಳು ಸಭಾಮರ್ಯಾದೆಯ ಪರಿಧಿಯೊಳಗೆ ಪ್ರಸ್ತುತಗೊಳ್ಳಬೇಕಾದ ಅನಿವಾರ್ಯತೆಗಳಿವೆ. ಈ ವ್ಯತ್ಯಾಸಗಳನ್ನು ಅರಿತು ನಮ್ಮನ್ನು ನಾವು ರೂಪಿಸಿಕೊಳ್ಳುವುದಕ್ಕೆ ಸರಿಯಾದ ಅವಕಾಶಗಳು ಪ್ರಾಪ್ತವಾಗಬೇಕು. ಕಾಲೇಜು ಜೀವನ ಎಂಬುದು ವಿದ್ಯಾರ್ಥಿಗಳಿಗೆ ಅನೇಕ ಅನುಭವಗಳನ್ನು ಕಟ್ಟಿಕೊಡುವಲ್ಲಿ ವಿವಿಧ ವೇದಿಕೆಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ವಿದ್ಯಾಸಂಸ್ಥೆಗಳಲ್ಲಿ ವಿವಿಧ ಸಂದರ್ಭಗಳಲ್ಲಿ ನಾನಾ ಬಗೆಯ ಸ್ಪರ್ಧೆಗಳನ್ನು ಆಯೋಜಿಸುವುದು ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಿಯೇ ಬೆಳೆದುಬಂದಿದೆ. ಆದರೆ ಆ ಸಂದರ್ಭಗಳಲ್ಲಿ ಆಯೋಜನೆಗೊಳ್ಳುವ ಸ್ಪರ್ಧೆಗಳಿಗಿಂತಲೂ ವಿಭಿನ್ನವಾದ ವಿಷಯಗಳಲ್ಲಿ ಪರಿಣತಿ ಹೊಂದಿರುವ ವಿದ್ಯಾರ್ಥಿಗಳಿರುತ್ತಾರೆ. ಹಾಗಾಗಿ ಎಲ್ಲರಿಗೂ ಅವರವರ ಪ್ರತಿಭೆಯ ಅನಾವರಣಕ್ಕೆ ಅವಕಾಶ ದೊರಕುವಂತಹ ವೇದಿಕೆಯನ್ನು ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಕಲ್ಪಿಸಿಕೊಟ್ಟಿದೆ ಎಂದರು.


ವೇದಕೆಗೆ ಬರುವುದರಿಂದ ಮೈಕ್ ಮೂಲಕ ಮಾತನಾಡುವುದು ಹೇಗೆ?, ಸಭಾಕಂಪನ ಮೀರುವುದು ಹೇಗೆ? ಧ್ವನಿಯ ಏರಿಳಿತ ಯಾವ ರೀತಿಯಲ್ಲಿರಬೇಕು ಎಂಬುದೇ ಮೊದಲಾದ ಹತ್ತು ಹಲವು ವಿಷಯಗಳನ್ನು ಕಲಿಯುವುದಕ್ಕೆ ಸಾಧ್ಯ. ಅಂತೆಯೇ ಸಭ್ಯ ಪ್ರೇಕ್ಷಕರ ಗುಣಲಕ್ಷಣಗಳನ್ನು ವೇದಿಕೆಯ ಮುಂಭಾಗದಲ್ಲಿರುವವರೂ ರೂಢಿಸಿಕೊಳ್ಳಬೇಕು. ಹಾಗಾಗಿ ಕಲಿಕೆಗೊಂದು ಅವಕಾಶವಾಗಿ ವೈವಿಧ್ಯಮಯ ವೇದಿಕೆಗಳನ್ನು ಮಾರ್ಪಾಡುಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.


ಈ  ಸಂದರ್ಭದಲ್ಲಿ ಪ್ರಥಮ ಬಿ.ಎ ವಿದ್ಯಾರ್ಥಿನಿ ಅಪರ್ಣಾ ಭಕ್ತಿಗೀತೆ ಹಾಡಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿ ಆದಿತ್ಯ ಸುಬ್ರಹ್ಮಣ್ಯ ಕವನ ವಾಚನ ನಡೆಸಿಕೊಟ್ಟರು. ಪ್ರಥಮ ಬಿ.ಎ ವಿದ್ಯಾರ್ಥಿನಿ ಅಕ್ಷಿತಾ ಹಾಗೂ ತಂಡದವರು ರಸಪ್ರಶ್ನೆ ಆಯೋಜಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಸಂಗೀತ ಕಾರ್ಯಕ್ರಮ ಪ್ರಸ್ತುತಿಗೊಳಿಸಿದರು. 


ವಿದ್ಯಾರ್ಥಿನಿ ತೃಪ್ತಿ ಹಾಗೂ ಶ್ರಾವ್ಯಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಜಯಶ್ರೀ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಜನ್ಯಾ ವಂದಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top