ಧರ್ಮಶಾಸ್ತ್ರ, ಅರ್ಥಶಾಸ್ತ್ರ ಸಹಿತ ನಾಲ್ಕು ವಿಷಯಗಳಲ್ಲಿ ಸಮಗ್ರ ಸಂಶೋಧನೆಗೆ ಅವಕಾಶ

Upayuktha
0

ಯೋಗ, ಆಯುರ್ವೇದ ಸಂಶೋಧನೆಗೆ ರಾಘವೇಶ್ವರ ಶ್ರೀಗಳಿಂದ ಚಾಲನೆ



ಗೋಕರ್ಣ: ಭಾರತದ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹದುದ್ದೇಶದೊಂದಿಗೆ ಸ್ಥಾಪನೆಯಾಗಿರುವ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಯೋಗ, ಆಯುರ್ವೇದ, ಅರ್ಥಶಾಸ್ತ್ರ ಮತ್ತು ಧರ್ಮಶಾಸ್ತ್ರದ ಮೇಲೆ ಸಂಶೋಧನೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಪ್ರಕಟಿಸಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಭಾನುವಾರ ದಾನಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಸಂಶೋಧನಾ ಕೇಂದ್ರದಲ್ಲಿ ಶ್ರೀಮಠಕ್ಕೆ ಸಂಬಂಧಿಸಿದ ಸಾವಿರಾರು ತಾಳೆಗರಿ ಗ್ರಂಥಗಳಿವೆ. ಲಕ್ಷಾಂತರ ತಾಳೆಗರಿಗಳಿವೆ. ಅವುಗಳ ಶೋಧನೆ, ಬೋಧನೆ ಆಗಬೇಕು. ಸಂಸ್ಕೃತಿಯ ಸಂಶೋಧನೆ ಆರಂಭವಾಗಬೇಕು ಎಂಬ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ಸಂಶೋಧನಾ ಕೇಂದ್ರ ಕಾರ್ಯಾರಂಭ ಮಾಡುತ್ತಿದೆ ಎಂದು ವಿವರಿಸಿದರು.


ಧರ್ಮಶಾಸ್ತ್ರ ಮತ್ತು ಇಂದಿನ ಕಾನೂನಿನ ಪ್ರಸ್ತುತತೆ, ಆಯುರ್ವೇದದ ಪ್ರಸ್ತುತತೆ, ಇಂದಿನ ಆಡಳಿತ- ಅರ್ಥಶಾಸ್ತ್ರ ಎಷ್ಟು ಪ್ರಸ್ತುತ, ಭಾರತೀಯ ಯೋಗ ಶಾಸ್ತ್ರದ ಬಗ್ಗೆ ಅನೇಕ ವಿದ್ವಾಂಸರು ಇದಕ್ಕೆ ಕೈಜೋಡಿಸಿದ್ದಾರೆ. ತಮ್ಮ ಸಮಯ- ಶ್ರಮ ವಿನಿಯೋಗಿಸುತ್ತಿದ್ದಾರೆ. ವಿವಿವಿ ತನ್ನ ಮೂಲ ಉದ್ದೇಶ ಸಾರ್ಥಕಪಡಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇರಿಸಿದೆ. ಇದಕ್ಕೆ ಸಂಬಂಧಿಸಿದ ಪ್ರಯೋಗ, ಕಾರ್ಯಾಲಯ, ಸಮಾಲೋಚನೆಗಳು ನಿರಂತರವಾಗಿ ನಡೆಯಲಿವೆ. ಇದು ಸಮಾಜಕ್ಕೆ ಮುಂದೆ ದೊಡ್ಡ ಪ್ರಯೋಜನಕಾರಿಯಾಗಬೇಕು ಎಂದು ಆಶಿಸಿದರು.


ವಿವಿವಿಯ ವಾಮನ ರೂಪ ಇದು. ಇದರ ತ್ರಿವಿಕ್ರಮ ರೂಪ ಮುಂದೆ ಗೋಚರವಾಗಲಿದೆ. ದೈವ ಈ ಮಹಾನ್ ಕಾರ್ಯ ನಡೆಸುತ್ತಿದ್ದು, ನಾಲ್ಕು ವರ್ಷಗಳಲ್ಲಿ ಇಲ್ಲಿ ಪವಾಡಸದೃಶ ಬದಲಾವಣೆ ಸಾಧ್ಯವಾಗಿದೆ. ಇಂಥ ಮಹತ್ಕಾರ್ಯದಲ್ಲಿ ಭಾಗವಹಿಸಿದ ಸಾರ್ಥಕತೆ ನಮ್ಮದಾಗಬೇಕು ಎಂದು ಆಶಿಸಿದರು.


ವಿಶ್ವವಿದ್ಯಾಪೀಠಕ್ಕೆ ವಿಶೇಷ ಸಮರ್ಪಣೆ ಮಾಡಿದವರನ್ನು ಗುರುತಿಸುವ ಹಾಗೂ ವಿವಿವಿಯಲ್ಲಿ ವಿದ್ಯಾರ್ಥಿಗಳ ಅಪೂರ್ವ ಸಾಧನೆಗೆ ಕಾರಣರಾದ ಆರ್ಯ ಆರ್ಯೆಯರನ್ನು ಸನ್ಮಾನಿಸುವ, ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿರುವುದು ಅರ್ಥಪೂರ್ಣ ಎಂದರು.


"ಎಷ್ಟೋ ಮಂದಿ ದಾನಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಮರ್ಪಣೆ ಮಾಡುತ್ತಿದ್ದಾರೆ. ಜೀವನವಿಡೀ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಒಬ್ಬಂಟಿಯಾಗಿ ಸರಳ ಜೀವನ ನಡೆಸಿದ ಮಹಿಳೆಯೊಬ್ಬರು ವಿವಿವಿಗೆ 1.75 ಕೋಟಿ ರೂಪಾಯಿಗಳನ್ನು ಸಮರ್ಪಿಸಿ, ಹೆಸರು ಬಹಿರಂಗಪಡಿಸದಂತೆ ಕೋರಿದ್ದರು. ಇಂಥ ತ್ಯಾಗವನ್ನು ನೆನಪಿಸಿಕೊಳ್ಳಲೇಬೇಕಾಗುತ್ತದೆ" ಎಂದು ಹೇಳಿದರು.


ಆದರೆ ದಾನದ ಸಾರ್ಥಕತೆಯನ್ನು ಸ್ವತಃ ದಾನಿಗಳೇ ವೀಕ್ಷಿಸಲು ಅನುವಾಗುವಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸತ್ಪಾತ್ರರಿಗಷ್ಟೇ ದಾನ ಮಾಡಬೇಕು. ದಾನ ಸದ್ವಿನಿಯೋಗವಾಗಬೇಕು. ಅದು ಸ್ವತಃ ದಾನಿಗಳಿಗೆ ಮನವರಿಕೆಯಾದಾಗ ತಾವು ಮಾಡಿದ ದಾನ ಸಾರ್ಥಕ ಎಂಬ ಆತ್ಮತೃಪ್ತಿಯ ಭಾವ ಅವರಲ್ಲಿ ಮೂಡುತ್ತದೆ ಎಂದು ವಿಶ್ಲೇಷಿಸಿದರು.


ಜತೆಗೆ ಪ್ರತಿಭಾ ಪುರಸ್ಕಾರವನ್ನೂ ಇದರ ಜತೆಗೆ ಜೋಡಿಸಿದಾಗ ವಿದ್ಯಾರ್ಥಿಗಳು ಇಲ್ಲಿ ಹೇಗಿದ್ದಾರೆ ಎನ್ನುವುದನ್ನು ದಾನಿಗಳು ಸ್ವತಃ ಕಾಣಲು ಇದೊಂದು ಅವಕಾಶ. ಗುರುಕುಲ ಏನು ಮಾಡುತ್ತಿದೆ ಎಂದು ದಾನಿಗಳು ನೋಡಬಹುದು. ಗುರುಕುಲದಲ್ಲಿ ಎಲ್ಲ ಪ್ರಾಶಸ್ತ್ಯಗಳು ಆರ್ಯ ಆರ್ಯೆಯರಿಗೆ ಸಲ್ಲಬೇಕು. ಗುರುಗಳು ತಮ್ಮ ಜ್ಞಾನಧಾರೆಯನ್ನು ವಿದ್ಯಾರ್ಥಿಗಳಿಗೆ ಹರಿಸಿದಾಗ ಉಳಿದವರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.


ತಪಸ್ಸು, ದೀಕ್ಷೆಯಾಗಿ ಆರ್ಯ- ಆರ್ಯೆಯರು ವಿದ್ಯಾದಾನವನ್ನು ಸ್ವೀಕಾರ ಮಾಡಬೇಕು. ಶಿಲ್ಪಿಯೊಬ್ಬ ಶಿಲ್ಪವನ್ನು ಕೆತ್ತನೆ ಮಾಡುವಂತೆ, ವಸಿಷ್ಠರು ರಾಮನನ್ನು, ಸಮರ್ಥ ರಾಮದಾಸರು ಶಿವಾಜಿಯನ್ನು ಹಾಗೂ ಚಾಣಕ್ಯ ಚಂದ್ರಗುಪ್ತನನ್ನು ರಾಷ್ಟ್ರಯೋಧರಾಗಿ ನಿರ್ಮಾಣ ಮಾಡಿದಂತೆ ಇಲ್ಲಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಕಿವಿಮಾತು ಹೇಳಿದರು.


ಹವ್ಯಕ ಮಹಾಮಂಡಲ ವತಿಯಿಂದ ಪ್ರತಿಭಾ ಪುರಸ್ಕಾರ, ವಿವಿವಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ವಿಶೇಷ ಪುರಸ್ಕಾರವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿವಿ ಗೌರವಾಧ್ಯಕ್ಷ ಡಿ.ದೇವಶ್ರವ ಶರ್ಮ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಪುರಾಲೇಖ ವಿಭಾಗದ ವಿಷ್ಣುಭಟ್ ಪಾದೇಕಲ್, ವಿಶ್ವೇಶ್ವರ ಭಟ್ ಉಂಡೆಮನೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಜಿ.ಪ್ರಸನ್ನ ಕುಮಾರ್, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಸುಬ್ರಾಯ ಭಟ್ ಮುರೂರು ಮತ್ತಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸಂಶೋಧನಾ ಕೇಂದ್ರಕ್ಕೆ ನೀಡಿದ ತಾಳೆಗರಿ ಸ್ಕ್ಯಾನರ್ ಅನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top