ಉಜಿರೆಯಲ್ಲಿ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ ಬೃಹತ್ ಸಮಾವೇಶ

Upayuktha
0

               ಭಕ್ತವೃಂದದ ನೇತೃತ್ವದಲ್ಲಿ ಜಾಥಾ, ಹಕ್ಕೊತ್ತಾಯ


ಉಜಿರೆ:
ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ ಉಜಿರೆಯಲ್ಲಿ ಶುಕ್ರವಾರ ಬೃಹತ್ ಸಮಾವೇಶ, ಜಾಥಾ ಮತ್ತು ಹಕ್ಕೊತ್ತಾಯ ಮಂಡನೆ ನಡೆಯಿತು.

2012ರ ಅಕ್ಟೋಬರ್ 10ರಂದು ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಕುಮಾರಿ ಸೌಜನ್ಯಳ ಹತ್ಯೆಯಾಗಿದ್ದು, ಕೊಲೆ ಆರೋಪಿಯ ಪತ್ತೆ ಮಾಡಿ ನ್ಯಾಯ ಒದಗಿಸಬೇಕು ಹಾಗೂ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಯೆ ಸುಳ್ಳು ವದಂತಿಯನ್ನು ತಡೆಯಬೇಕು ಎಂದು ಒತ್ತಾಯಿಸಿ ಉಜಿರೆಯಲ್ಲಿ ನಡೆದ ಸಮಾವೇಶದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಿಂದ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಭಾಗವಹಿಸಿದರು.

ಶ್ರೀ ಜನಾರ್ದನ ಸ್ವಾಮಿದೇವಸ್ಥಾನದ ರಥಬೀದಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‍ ಕುಮಾರ್ ಮಾತನಾಡಿ, ಸತ್ಯಮೇವ ಜಯತೇ ಎಂಬ ಮಾತಿನಂತೆ ಸತ್ಯಕ್ಕೆ ಯಾವಾಗಲೂ ಜಯಸಿಗುತ್ತದೆ. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಿ.ಬಿ.ಐ.ತೀರ್ಪು ಪ್ರಕಟಿಸಿದೆ. ಸಾಕ್ಷ್ಯಾಧಾರದ ಕೊರತೆಯಿಂದ ಶಂಕಿತ ಆರೋಪಿಯನ್ನು ಬಿಡುಗಡೆಗೊಳಿಸಲಾಗಿದೆ. ಸಾರ್ವಜನಿಕರು ಸಾಕ್ಷಾಧಾರಗಳಿದ್ದಲ್ಲಿ ಪೊಲೀಸ್ ಇಲಾಖೆಗೆ ನೀಡಬಹುದು. ಸರ್ಕಾರ ಪ್ರಕರಣದ ಮರುತನಿಖೆ ಮಾಡುವ ಭರವಸೆ ನೀಡಿದೆ. ಆದರೆ ಕೊಲೆ ಪ್ರಕರಣದ ನೆಪದಲ್ಲಿ ದುರುದ್ದೇಶದಿಂದ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಬಗ್ಯೆ ಸುಳ್ಳು ವದಂತಿ ಪಸರಿಸುವುದನ್ನು ಅವರು ಖಂಡಿಸಿದರು.

ಮಾಜಿ ಸಚಿವ ವಿನಯ್‍ ಕುಮಾರ್ ಸೊರಕೆ ಮಾತನಾಡಿ, ಕೊಲೆ ಆರೋಪಿಯ ಪತ್ತೆಯಾಗಿ ಆತನಿಗೆ ಶಿಕ್ಷೆ ಆಗಬೇಕು. ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಆಗಬಾರದು. ನಾವೆಲ್ಲರೂ ಹೆಗ್ಗಡೆಯವರ ಜೊತೆಗಿದ್ದು, ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಕಾನೂನು ಪ್ರಕಾರ ತನಿಖೆ ನಡೆಸಿ ನ್ಯಾಯ ಒದಗಿಸಿರುವುದಾಗಿ ಭರವಸೆ ನೀಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಜಯರಾಜ್ ಹೊಸಕೋಟೆ, ಮೂಡಬಿದ್ರೆಯ ವಕೀಲೆ ಶ್ವೇತಾ ಜೈನ್ ಮಾತನಾಡಿ ಕಾನೂನಾತ್ಮಕ ಹೋರಾಟ ನಡೆಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ತುಳುವಿನಲ್ಲಿ ಮಾತನಾಡಿ, ಶ್ರೀ ಮಂಜುನಾಥ ಸ್ವಾಮಿಯ ಪ್ರತಿನಿಧಿಯಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಯೆ ಸರ್ವಧರ್ಮಿಯರಿಗೂ ಅಪಾರ ಭಕ್ತಿ, ಗೌರವಇದೆ. ಸುಳ್ಳು ಆರೋಪ ಮಾಡುವವರಿಗೆ ದೇವರು ಸೂಕ್ತ ಶಿಕ್ಷೆ ನೀಡಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಇದು ಸತ್ಯ ಶೋಧನೆಯ ಸಮಾವೇಶವಾಗಿದೆ. ಇಂದಿನ ಸಮಾವೇಶ ಹೋರಾಟದ ಪ್ರಾರಂಭ ಮಾತ್ರ ಶೀಘ್ರ ಆರೋಪಿ ಪತ್ತೆಯಾಗದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.


ಖಾವಂದರೆ, ನಾವು ನಿಮ್ಮ ಜೊತೆ ಇದ್ದೇವೆ, ನೈಜ ಆರೋಪಿಯ ಪತ್ತೆಯಾಗಿ ಶಿಕ್ಷೆ ಆಗಲಿ ಹಾಗೂ ಧರ್ಮಸ್ಥಳದ ವಿರುದ್ಧ ಸುಳ್ಳು ವದಂತಿ ಹಬ್ಬುವುದು ಕೊನೆಗೊಳ್ಳಲಿ ಎಂದು ಘೋಷಣೆಗಳನ್ನು ಕೂಗುತ್ತಾ ಎಲ್ಲಾ ಸಾರ್ವಜನಿಕರು ಎಸ್.ಡಿ.ಎಂ. ಕಾಲೇಜಿನ ಬಳಿ ಜಾಥಾದಲ್ಲಿ ಸಾಗಿದರು.

ಅಲ್ಲಿ ನಡೆದ ಸಮಾವೇಶದಲ್ಲಿ ಸೌಜನ್ಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು. ಧರ್ಮಸ್ಥಳದ ಬಗ್ಯೆ ಸುಳ್ಳು ವದಂತಿ ಹಬ್ಬಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುವ ಹಕ್ಕೊತ್ತಾಯದ ಪ್ರತಿಯನ್ನು ಶಾಸಕ ಹರೀಶ್ ಪೂಂಜರಿಗೆ ನೀಡಲಾಯಿತು.


ಹಕ್ಕೊತ್ತಾಯ ಸ್ವೀಕರಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ ಕಾನೂನಾತ್ಮಕ ಪ್ರಕ್ರಿಯೆಯೊಂದಿಗೆ ಪ್ರಕರಣದತನಿಖೆ ನಡೆಸಿ ಎರಡು ತಿಂಗಳೊಳಗೆ ಕೊಲೆ ಆರೋಪಿಯನ್ನು ಸಮಾಜದ ಮುಂದೆ ಪ್ರಸ್ತುತಪಡಿಸುವುದಾಗಿ ಭರವಸೆ ನೀಡಿದರು. ಈ ಬಗ್ಯೆ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ನೀಡುವುದಾಗಿ ತಿಳಿಸಿದರು.

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಅಭಯ ಮತ್ತು ಅನುಗ್ರಹದಿಂದ ಆರೋಪಿ ಶೀಘ್ರ ಪತ್ತೆಯಾಗಿ ಆತ ಹುಚ್ಚರಂತೆ ತಿರುಗಾಡಲಿದ್ದಾನೆ ಎಂದು ಹೇಳಿದರು.


ಧರ್ಮಸ್ಥಳದ ಬಗ್ಯೆ ಅಪಪ್ರಚಾರ ಮಾಡುವವರಿಗೆ ತಕ್ಕ ಶಿಕ್ಷೆ ಸಿಗಲಿದೆ ಎಂದುಅವರು ವಿಶ್ವಾಸ ವ್ಯಕ್ತಪಡಿಸಿದರು. 

ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್‍ಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೆ. ಅಭಯಚಂದ್ರಜೈನ್ ಮಾತನಾಡಿ ನ್ಯಾಯ ಒದಗಿಸುವ ಭರವಸೆ ನೀಡಿದರು.

ಶಾರದಾ ಆರ್. ರೈ ಸ್ವಾಗತಿಸಿದರು. ಡಾ. ಎಲ್.ಎಚ್. ಮಂಜುನಾಥ್‍ ಧನ್ಯವಾದವಿತ್ತರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top