ಜನುಮದ ಜೋಡಿ: ಮದುವೆ ಸಂದರ್ಭ ವಸಿಷ್ಠ-ಅರುಂಧತಿ ನಕ್ಷತ್ರವನ್ನು ನೋಡುವುದೇಕೆ...?

Upayuktha
0


ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಚಲನಚಿತ್ರವೊಂದರಲ್ಲಿ ನೂತನವಾಗಿ ವಿವಾಹವಾದ ಜೋಡಿಗಳನ್ನು ಪುರೋಹಿತರು ಕಲ್ಯಾಣ ಮಂಟಪದ ಹೊರಗೆ ಕರೆತಂದು ಅರುಂಧತಿ ವಸಿಷ್ಠ ನಕ್ಷತ್ರವನ್ನು ತೋರಿಸುತ್ತಾರೆ. ನಮ್ಮಲ್ಲಿ ಮದುವೆಗಳು ನಡೆಯುವುದು ಮುಂಜಾನೆಯ ಸಮಯದಲ್ಲಿ. ಆ ಸಮಯದಲ್ಲಿ ಸೂರ್ಯನ ತಾಪ ಮತ್ತು ಬೆಳಕು ಹೆಚ್ಚಾಗಿರುವುದರಿಂದ ಯಾವುದೇ ನಕ್ಷತ್ರಗಳು ಕಾಣುವುದಿಲ್ಲ ನಿಜ. ಆದರೆ ವಸಿಷ್ಠ ಅರುಂಧತಿ ನಕ್ಷತ್ರವನ್ನು ಪುರೋಹಿತರು ಮುತ್ತಿನ ಉಂಗುರದಲ್ಲಿ ಕಲ್ಪಿಸಿ ಅನುರೂಪ ದಂಪತಿಗಳು ಎಂದು ಹೆಸರಾಗಿದ್ದ ಅವರಿಬ್ಬರನ್ನು ಪೂಜಿಸಿ ವೈವಾಹಿಕ ಬದುಕಿನ ಆದರ್ಶವಾಗಿಸಿಕೊಂಡು ತಮ್ಮ ಮುಂದಿನ ದಾಂಪತ್ಯ ಜೀವನವನ್ನು ಸಾಗಿಸಲು ಹೇಳುತ್ತಾರೆ.


ಆದರೆ ಇದನ್ನು ಅರಿಯದ ನಮ್ಮದೇ ಸಂಸ್ಕೃತಿಯ ಶಿಶುಗಳು ಫೋಟೋ ಚೆನ್ನಾಗಿ ಬರುತ್ತದೆ ಎಂದು ಪೋಸ್ ಕೊಡುತ್ತಾರೆ ಎಂದೂ, ಅರುಂಧತಿ ವಶಿಷ್ಠ ನಕ್ಷತ್ರಗಳು ನಿನಗೆ ಕಾಣಿಸುತ್ತದೆಯೇ ಎಂಬ ಪತಿಯ ಮಾತಿಗೆ ಪತ್ನಿ ಹುಂಗುಡುವ ಈ ಸಮಯವನ್ನು ಗಂಡ ಹೆಂಡತಿಗೆ ಹೇಳುವ ಮೊದಲ ಸುಳ್ಳು ಎಂದೂ ತಮಾಷೆ ಮಾಡುತ್ತಾರೆ. ಇಲ್ಲಿ ನಿಜವಾಗಿಯೂ ತಪ್ಪು ಆ ಮಕ್ಕಳದ್ದಲ್ಲ. ನಮ್ಮ ಭವ್ಯ ಭಾರತದ ಚಾರಿತ್ರಿಕ, ಬೌದ್ಧಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ನಮ್ಮ ಮಕ್ಕಳಿಗೆ ಹೇಳಿಕೊಡದ ನಮ್ಮದು.


ಇತ್ತೀಚೆಗೆ ವೈಜ್ಞಾನಿಕವಾಗಿ ಜೋಡಿ ನಕ್ಷತ್ರಗಳ ಕುರಿತು ಸಂಶೋಧನೆಗಳು ಹೆಚ್ಚಾಗಿದ್ದು ಈ ಸಂಶೋಧನೆಗಳ ಮೂಲಕ ತಿಳಿದು ಬಂದಿರುವುದೇನೆಂದರೆ ಸಾಮಾನ್ಯವಾಗಿ ಜೋಡಿ ನಕ್ಷತ್ರಗಳಲ್ಲಿ ಒಂದು ನಕ್ಷತ್ರವು ನಿಶ್ಚಲವಾಗಿ ನಿಂತಿದ್ದು ಇನ್ನೊಂದು ನಕ್ಷತ್ರವು ಮೊದಲ ನಕ್ಷತ್ರವನ್ನು ಸುತ್ತುವರೆಯುತ್ತಿರುತ್ತದೆ. ಪಾಶ್ಚಾತ್ಯ ವಿಜ್ಞಾನಿಗಳಿಂದ ಅಲ್ಕಲ್ ಮತ್ತು ಮೀಜರ್ ಎಂದು ಹೆಸರಿಡಲ್ಪಟ್ಟ ಅರುಂಧತಿ-ವಶಿಷ್ಠ ನಕ್ಷತ್ರಗಳು ಮಾತ್ರ ಪರಸ್ಪರ ಒಂದನ್ನೊಂದು ಸುತ್ತುಪ್ರದಕ್ಷಿಣೆ ಹಾಕುತ್ತವೆ. ವಿಚಿತ್ರವೆನಿಸಿದರೂ ಇದು ಸತ್ಯ.


ಈ ವೈಜ್ಞಾನಿಕ ಸತ್ಯವನ್ನು ಶತಶತಮಾನಗಳ ಹಿಂದೆಯೇ ಅರಿತಿದ್ದ ನಮ್ಮ ಖಗೋಳ ವಿಜ್ಞಾನಿಗಳು ಈ ಜೋಡಿ ನಕ್ಷತ್ರವನ್ನು ಅನುರೂಪ ದಾಂಪತ್ಯಕ್ಕೆ ಹೆಸರಾದ ವಸಿಷ್ಠ ಮಹರ್ಷಿ ಮತ್ತು ಅರುಂಧತಿ ದಂಪತಿಗಳ ಹೆಸರಿನಲ್ಲಿ ಕರೆದರು ಮತ್ತು ಈ ಜೋಡಿ ನಕ್ಷತ್ರಗಳಂತೆ ಸತಿಪತಿಯರು ಒಬ್ಬರಿಗೊಬ್ಬರು ಪೂರಕವಾಗಿ ನಡೆಯಲಿ ಪರಸ್ಪರ ಪ್ರೇಮ ಅನುರಾಗಗಳನ್ನು ಹಂಚಿಕೊಳ್ಳಲಿ, ಕಷ್ಟ ಸುಖಗಳಲ್ಲಿ ಒಬ್ಬರನ್ನೊಬ್ಬರು ಕೈಬಿಡದೆ ಜೊತೆಯಾಗಿ ಜೀವಿಸಲಿ ಎಂಬ ಆಶಯದಿಂದ ದಕ್ಷಿಣ ಭಾರತದ ಬಹುತೇಕ ಎಲ್ಲ ವಿವಾಹ ಮಹೋತ್ಸವಗಳಲ್ಲಿ ಅರುಂಧತಿ-ವಸಿಷ್ಠ ನಕ್ಷತ್ರವನ್ನು ತೋರಿಸುತ್ತಾರೆ. ಇನ್ನಾದರೂ ನಮ್ಮ ಸಂಸ್ಕೃತಿಯ ಆಚರಣೆಗಳ ಹಿನ್ನೆಲೆಯನ್ನು ಅರಿತು ನಮ್ಮ ಸನಾತನವಾದರೂ ವೈಚಾರಿಕವಾದ ಹೊಂದಿರುವ ಸಂಸ್ಕೃತಿಗೆ ಮಾನ್ಯತೆ ನೀಡೋಣವೇ?


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top