ಕಾಲೇಜು ಬಿಟ್ಟು ಮನೆಗೆ ಹೋಗೋ ಆತುರ. ಒಮ್ಮೆ ಬಸ್ನಲ್ಲಿ ಸೀಟು ಹಿಡಿದು ಕೂತು ಮನೆಗೆ ತಲುಪುವ ದಾವಂತ. ಅಂತೂ ಬಸ್ ಬಂದೇ ಬಿಟ್ಟಿತು. ಎಲ್ಲರಂತೆ ನಾನು ಕೂಡ ತರಾತುರಿಯಿಂದ ಬಸ್ ಏರಿ ಕುಳಿತೆ. ಬಸ್ ಹೊರಡಲು ಇನ್ನು ಅರ್ಧ ಗಂಟೆಯ ಸಮಯವಿತ್ತು. ಕಿಟಕಿ ಬದಿ ಕೂತು ಸುಮ್ಮನೆ ಕುಳಿತಿದ್ದೆ. ನೋಡನೋಡುತ್ತಿದಂತೆ ಬಸ್ ರಶ್ ಆಯಿತು.
ನನ್ನ ಪಕ್ಕದ ಖಾಲಿ ಸೀಟ್ನಲ್ಲಿ ಇಬ್ಬರು ಮಹಿಳೆಯರು ಕೂತರು. ಸ್ವಲ್ಪ ಸಮಯದ ನಂತರ ಒಂದು ವಯಸ್ಸಾದ ಮಹಿಳೆ ಬಂದು 'ಸ್ವಲ್ಪ ಅಡ್ಜಸ್ಟ್ ಮಾಡಿ ಕೂರ್ಬೋದಾ'... ಎಂದು ಕೇಳಿದರು. ಅಷ್ಟು ಹೇಳಿದ್ದೆ ತಡ ಈ ಇರ್ವರು ಕೂಡ 'ಅಡ್ಜಸ್ಟ್ ಅಂತೆ ಅಡ್ಜಸ್ಟ್ ಎಲ್ಲಿಗೆ ಅಡ್ಜಸ್ಟ್ ಮಾಡೋದು. ಇಲ್ಲಿ ಮೂರು ಜನ ಕೂತಿದ್ದು ಕಾಣೋದಿಲ್ವ' ಎಂದು ಹೇಳಿ ನನ್ನ ಮುಖ ದಿಟ್ಟಿಸಿದರು. ನಾನೇನು ಹೇಳದೆ ಸುಮ್ಮನೆ ಕೂತೆ. ಆದರೂ ಮನದಲ್ಲಿ 'ಪಾಪ ಅವ್ರು ಕೇಳಿದರಲ್ಲಿ ತಪ್ಪಾದರೂ ಏನಿತ್ತು ಸುಸ್ತಾಗಿರಬಹುದು ನಿಂತು' ಎಂದು ಯೋಚಿಸುತ್ತಿದ್ದೆ.
ಆದರೆ ಆ ಇಬ್ಬರು ಅಷ್ಟಕ್ಕೇ ಸುಮ್ಮನಾಗದೇ ಸೀಟ್ನಲ್ಲಿ ಜಾಗ ಇರದಂತೆ ಪೂರ್ತಿಯಾಗಿ ಅವರಿಸಿಕೊಳ್ಳುವಂತೆ ಕೂತರು. ಅದನ್ನು ಕಂಡು ಮನಸ್ಸಿಗೆ ಒಂಥರಾ ಅನಿಸಿತು.
ಮನದಲ್ಲಿ ಯೋಚನಾಲಹರಿ ಯು ತನ್ನ ದಾಳಿ ಮುಂದುವರೆಸತೊಡಗಿತು. ಅಲ್ಲಾ ನನಗನ್ನಿಸುವುದು ಆ ವಯಸ್ಕ ಮಹಿಳೆಯ ಜಾಗದಲ್ಲಿ ಈ ಇಬ್ಬರು ಮಹಿಳೆಯರ ಮನೆಯವರೋ ಅಥವಾ ತಾಯಿಯೋ ಇರುತ್ತಿದ್ದರೆ ಇದೇ ರೀತಿ ಹೇಳುತ್ತಿದ್ದಾರಾ ಎಂದು. ನಾವು ಮನುಷ್ಯರು ಯಾಕಿಷ್ಟು ಸ್ವಾರ್ಥಿಗಳಾಗಿ ಬಿಡುತ್ತೇವೆ. ಕೇವಲ ನಮ್ಮ ಕುರಿತು ಮಾತ್ರವೇ ನಮ್ಮ ಯೋಚನೆ ಇರುತ್ತದೆ ಅಲ್ವಾ...
ಆ ಮಹಿಳೆಯ ಮುಖ ನೋಡಿ ನನಗೆ ಅನಿಸಿತು' ಎಲ್ಲಾದರೂ ನನ್ನ ಅಮ್ಮನೂ ಬಸ್ ನಲ್ಲಿ ಇರುವಾಗ ಇದೇ ರೀತಿ ಆಗಬಹುದಲ್ಲವೇ'ಎಂದು. ಆ ಮಹಿಳೆಯ ಮುಖ ನೋಡುವಾಗ ಅಮ್ಮನದೇ ನೆನಪಾಗುತ್ತಿತ್ತು. ಆ ಕ್ಷಣ ವೇ ತುಸು ಯೋಚನೆ ಕೂಡ ಮಾಡದೇ ಆ ಇಬ್ಬರು ಮಹಿಳೆಯರಲ್ಲಿ ಹೇಳಿದೆ ' ಸ್ವಲ್ಪ ಅಡ್ಜಸ್ಟ್ ಮಾಡುವ ಪಾಪ ಅವರು ಕೂಡ ಕುಳಿತುಕೊಳ್ಳಲಿ' ಎಂದು ಅದಕ್ಕೆ ಅದ್ಯಾಕೆ ನಮಗಿಲ್ಲಿ ಆಗುವುದಿಲ್ಲ ಕುಳಿತುಕೊಳ್ಳಲು' ಎಂದರು. ನಾ ಹೇಳಿದೆ ನಾನಿರುವುದು ತೆಳ್ಳಗೆ ನೀವೂ ಕೂಡ ಹೆಚ್ಚು ದಪ್ಪವೇನು ಇಲ್ಲ ಅವರಿಗೆ ಕೂರಬಹುದು ಎಂದು. ಅಷ್ಟು ಹೇಳಿದರು ಕೂಡ ಒಲ್ಲದ ಮನದಲ್ಲಿಯೇ ಜಾಗ ಮಾಡಿ ಕೊಟ್ಟರು.
ಪಾಪ ಕೂರಲು ಜಾಗ ಸಿಕ್ಕಾಗ ಆ ಮಹಿಳೆ ಗೆ ತುಸು ನೆಮ್ಮದಿ ಎನಿಸಿತು. 'ಅಬ್ಬಾ...ದೇವರೇ' ಎಂದು ಕೂತರು.
ಅದನ್ನು ಕಂಡು ನನ್ನ ಮನಸ್ಸಿಗೆ ಏನೋ ಒಂಥರಾ ಖುಷಿ. ತಾನೇನೂ ಮಾಡದೇ ಇದ್ದರೂ ಕೂಡ ಏನೋ ಮನಸ್ಸಿಗೆ ನಿರಾಳ ಅನುಭವ.
ನಾವೆಲ್ಲರೂ ಇದೇ ರೀತಿಯಾಗಿ ಯೋಚಿಸಿದರೆ ಅದೆಷ್ಟು ಸುಂದರ ಅಲ್ವಾ. ಯಾವತ್ತೂ ನಮ್ಮ ಸ್ಥಾನದಲ್ಲಿ ನಿಂತು ಯೋಚನೆ ಮಾಡುವುದು ಬಿಟ್ಟು ನಮ್ಮೆದುರು ಇರುವವರ ಸ್ಥಾನದಲ್ಲಿ ನಿಂತು ಯೋಚಿಸಿದಾಗ ಅವರ ಪರಿಸ್ಥಿತಿಯ ಅರಿವು ನಮಗಾಗುತ್ತದೆ. ಆ ಇಬ್ಬರು ಮಹಿಳೆಯರಲ್ಲಿ ಒಬ್ಬರು ನನ್ನಲ್ಲಿ ಕೇಳಿದರು 'ನಿನಗಿವರು ಗೊತ್ತಾ' ಎಂದು. ಇಲ್ಲ ಎಂದೇ ಅದಕ್ಕೆ ಪುನಃ ಕೇಳಿದ್ರು 'ಮತ್ತೆ ಅಷ್ಟು ಒತ್ತಾಯ ಮಾಡಿ ಕೂರಿಸಿದೆ ಅಲ್ವಾ ಯಾಕೆ' ಎಂದು. ನಾ ಹೇಳಿದೆ ಅವರ ಜಾಗದಲ್ಲಿ ನನ್ನ ತಾಯಿಯನ್ನು ಕಲ್ಪಿಸಿಕೊಂಡೆ. ಅದಕ್ಕೆ ಹಾಗೆ ಹೇಳಿದೆಯಷ್ಟೇ. ನೀವು ಕೂಡ ಒಮ್ಮೆ ಆ ಜಾಗದಲ್ಲಿ ನಿಮ್ಮನ್ನು ಕಲ್ಪಿಸಿ ನೋಡಿ ನಿಮಗೂ ಗೊತ್ತಾಗುತ್ತದೆ ಎಂದು. ಅದಕ್ಕೆ ಸುಮ್ಮನೆ ಹೂಂಗುಟ್ಟಿದರು.
ಆ ವಯಸ್ಕ ಮಹಿಳೆ ನನ್ನೆಡೆ ನೋಡಿ ನಗು ಬೀರಿದರು. ಅವರ ನಗು ಕಂಡು ಏನೋ ಸಂತ್ರಪ್ತಿ ಮನಸ್ಸಿಗಾಯಿತು.
ಪ್ರಸಾದಿನಿ.ಕೆ ತಿಂಗಳಾಡಿ
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ