ಸಾಧನೆಯ ಹಾದಿಯಲ್ಲಿ ಆತ್ಮ ವಿಶ್ವಾಸ ಬಹಳ ಮುಖ್ಯ

Upayuktha
0

ನಾವು ಯಾವುದೇ ಒಂದು ಕೆಲಸವನ್ನು ಮಾಡಿ ಯಶಸ್ಸನ್ನು ಹೊಂದಬೇಕೆಂದರೆ ನಮ್ಮಲ್ಲಿ ಆತ್ಮವಿಶ್ವಾಸ ಸದೃಢವಾಗಿರಬೇಕು. ಯಾರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆಯೋ ಅವನು ಏನನ್ನೂ ಸಾಧಿಸಲಾರನು. ಕೊರತೆಯಲ್ಲಿರುವ ಆತ್ಮವಿಶ್ವಾಸವನ್ನು ಮನಸ್ಸಿನಲ್ಲಿ ತುಂಬಿಕೊಂಡಾಗ ಹಿಡಿದ ಕಾರ್ಯವನ್ನು ಯಶಸ್ವಿಯಾಗಿ ಸಾಧಿಸಬಹುದು. ಒಟ್ಟಿನಲ್ಲಿ ಹೇಳುವುದಾದರೆ ಸಾಧನೆಗೆ ಆತ್ಮ ವಿಶ್ವಾಸ ಬಹಳ ಮುಖ್ಯವಾಗಿರು ತ್ತದೆ. ಒಬ್ಬ ವ್ಯಕ್ತಿ ಸಾಮಾನ್ಯವಾಗಿ ತಾನು ಮಾಡಲು ಬಯಸಿದ್ದನ್ನು ಸಾಧಿಸಬಲ್ಲನು ಎಂಬುವ ಒಂದು ಸಕಾರಾತ್ಮಕ ನಂಬಿಕೆಯೇ ಆತ್ಮವಿಶ್ವಾಸವಾಗಿದೆ. ಆತ್ಮವಿಶ್ವಾಸವೆಂದರೆ ಮನೋಸ್ಥೈರ್ಯವೆಂಬ ಮನದಾಳದ ಘನ ಅರ್ಥಾತ್ ಗಟ್ಟಿತನವಾಗಿದೆ. ಹೆಚ್ಚು ನಿರ್ದಿಷ್ಟವಾಗಿ ಯಾವುದಾದರೂ ಗುರಿಯನ್ನು ಸಾಧಿಸಲು ಒಬ್ಬರ ಸಾಮರ್ಥ್ಯದಲ್ಲಿನ ನಂಬಿಕೆಯೇ ಆತ್ಮವಿಶ್ವಾಸವೆನಿ ಸುತ್ತದೆ. ಇಂತಹ ಆತ್ಮವಿಶ್ವಾಸದ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಒಬ್ಬರ ವೈಯಕ್ತಿಕ ವಿವೇಚನೆ, ಸಾಮರ್ಥ್ಯ, ಅಧಿಕಾರ, ಇತ್ಯಾದಿಗಳಲ್ಲಿನ ಸ್ವನಂಬಿಕೆಯಾಗಿ ಬಳಸಲಾಗುತ್ತದೆ. ನಮ್ಮಲ್ಲಿ ಆತ್ಮವಿಶ್ವಾಸವೆಂಬ ವಿದ್ಯುತ್ ಪ್ರವಾಹ ತುಂಬಿ ಹರಿಯುತ್ತಿರುವಾಗ ಅದನ್ನು ಗುರುತಿಸಿ, ಬಳಸಿಕೊಂಡರೆ ಪ್ರತಿಯೊಬ್ಬರೂ ಇಂದ್ರನ ವಜ್ರಾಯುಧದಷ್ಟು ಶಕ್ತಿಶಾಲಿಯಾಗಬಲ್ಲರು ಎಂದು ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಆತ್ಮವಿಶ್ವಾಸವು ಹೆಚ್ಚು ನಿರ್ದಿಷ್ಟವಾಗಿ ಯಾವುದಾದರೂ ಗುರಿಯನ್ನು ಸಾಧಿಸಲು ಒಬ್ಬ ವ್ಯಕ್ತಿಯ ಸಾಮರ್ಥ್ಯದಲ್ಲಿನ ನಂಬಿಕೆಯೇ ಆಗಿದೆ. ನಿರ್ದಿಷ್ಟ ಕೆಲಸ - ಕಾರ್ಯಗಳಲ್ಲಿ ಪ್ರವೀಣನಾದವನು ತನ್ನ ಸ್ವಂತ ಅನುಭವಗಳಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾನೆ. ಇದಕ್ಕೆ ಉದಾಹರಣೆಯಾಗಿ ಪ್ರಖ್ಯಾತ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ವೈಜ್ಞಾನಿಕ ಪ್ರಯೋಗಗಳ ಸಂದರ್ಭದಲ್ಲಿ ಸಂಭವಿಸಿದ ಘಟನೆಯೊಂದನ್ನು ಹೇಳಬಹುದು.  


ಹಲವಾರು ವರ್ಷಗಳವರೆಗೆ ಶ್ರಮಿಸಿ ಬಲ್ಬ್ ಕಂಡುಹಿಡಿದಿದ್ದ ಥಾಮಸ್ ಅಲ್ವಾ ಎಡಿಸನ್. ಅದನ್ನು ಹೋಲ್ಡರ್ ಗೆ ಸಿಕ್ಕಿಸಿ ಪರೀಕ್ಷಿಸಬೇಕಿತ್ತು. ಹೋಲ್ಡರ್ ಇದ್ದುದು ಅವರ ಮಹಡಿಯ ಮೇಲಿನ ಕೋಣೆಯಲ್ಲಿ. ಆಗ ಎಡಿಸನ್ ತನ್ನ ಸಹಾಯಕ ಹುಡುಗನನ್ನು ಕರೆದು ಹೀಗೆಂದರು " ತೆಗೆದುಕೊ ಈ ಬಿಲ್ಬನ್ನು . ಮೇಲಿನ ಮಹಡಿಯ ಕೋಣೆಗೆ ಹೋಗಿ, ಹೋಲ್ಡರ್ ಗೆ ಸಿಕ್ಕಿಸಿ ಬಾ" ಎಂದು ಹೇಳಿದರು. ಸಹಾಯಕ ಹುಡುಗ ಎಷ್ಟು ಭೀತಿಗೆ ಒಳಗಾಗಿದ್ದನೆಂದರೆ ಮೆಟ್ಟಿಲು ಹತ್ತುವುದರೊಳ ಗಾಗಿ ಅವನ ಕೈ ನಡುಗಿ ಆಗಷ್ಟೇ ಕಷ್ಟಪಟ್ಟು ತಯಾರಿಸಿದ ಬಲ್ಬ್ ಬಿದ್ದು ಒಡೆದುಹೋಯಿತು. ಸಹಾಯಕ ಹುಡುಗನಿಗೆ ಈಗಾಗಲೇ ಇದ್ದ ಭೀತಿಯ ಜೊತೆಗೆ ಎಡಿಸನ್ ಈಗ ಬಯ್ಯಬಹುದು ಮತ್ತು ಹೊಡೆಯಬಹುದು ಎಂಬ ಭಯವೂ ಆವರಿಸಿತು. ಆದರೆ ಎಡಿಸನ್ ಸಿಟ್ಟಾಗಲಿಲ್ಲ. ಮತ್ತೊಂದು ಬಲ್ಬ್ ತಯಾರಿಸಿದ. ಅದಕ್ಕೆ ಪೂರ್ಣ ಇಪ್ಪತ್ನಾಲ್ಕು ಗಂಟೆಗಳು ಹಿಡಿದವು. ಅವನ ತಂಡದ ಅಷ್ಟೂ ಸಹಾಯಕರು ಅದಕ್ಕಾಗಿ ಶ್ರಮಿಸಿದ್ದರು. ಎಲ್ಲಾ ಆದ ಮೇಲೆ ಮತ್ತೆ ಅದೇ ಸಹಾಯಕ ಹುಡುಗನನ್ನು ಕರೆದು " ತೆಗೆದುಕೊ ಈ ಬಲ್ಬನ್ನು , ಈ ಸಲವೂ ನೀನೇ ಇದನ್ನು ಹೋಲ್ಡರ್ ಗೆ ಸಿಕ್ಕಿಸಿ ಬಾ" ಎಂದ. ಉಳಿದ ಸಹಾಯಕರು ಇರಸು ಮುರಿಸಿಗೆ ಒಳಗಾದರು. ಈ ಹುಡುಗ ಮತ್ತೆ ಬಲ್ಬ್ ಒಡೆದರೆ, ಅದನ್ನು ತಯಾರಿಸಲು ಮತ್ತೆ ಇಪ್ಪತ್ನಾಲ್ಕು ಗಂಟೆ ಬೇಕು. ಎಡಿಸನ್ ಯಾಕಿಂತ ಅನಗತ್ಯವಾದ ಶ್ರಮ ತೆಗೆದುಕೊಳ್ಳುತ್ತಿದ್ದಾರೆ? ಎಂದು ಅವರವರಲ್ಲೇ ಮಾತನಾಡಿಕೊಂಡರು. ಅದನ್ನು ಗ್ರಹಿಸಿದ ಎಡಿಸನ್ ಹೇಳಿದರು : " ನೋಡಿ ಸಹಾಯಕರೇ,, ಅಂಥ ಸಾವಿರ ಬಲ್ಬ್ ಗಳನ್ನು ಸಾವಿರ ದಿನ ಕೆಲಸ ಮಾಡಿ ತಯಾರಿಸಿ ಬಿಡಬಹುದು. ಆದರೆ ಆ ಸಹಾಯಕ ಹುಡುಗನ ಆತ್ಮವಿಶ್ವಾಸ ನಾಶವಾಗಿ ಬಿಟ್ಟರೆ ಅದನ್ನು ಮತ್ತೆ ತುಂಬಿ ಕೊಡುವುದು ಸುಲಭವಲ್ಲ!" ಎಂದು ಹೇಳಿದರು. ಸಹಾಯಕ ಹುಡುಗನಲ್ಲಿ ಈಗ ಮೊದಲಿಗಿಂತಲೂ ಆತ್ಮ ವಿಶ್ವಾಸ ಹೆಚ್ಚಾಗಿತ್ತು. ಆತ ಮೇಲಿನ ಮಹಡಿಯ ಕೋಣೆಗೆ ಹೋಗಿ ಹೋಲ್ಡರ್ ಒಂದಕ್ಕೆ ಆ ಬಲ್ಬನ್ನು ಸರಿಯಾಗಿ ಸಿಕ್ಕಿಸಿ ಸಂಪೂರ್ಣ ಪ್ರಯೋಗವನ್ನು ಯಶಸ್ವಿಯಾಗುವಂತೆ ಮಾಡಿದ್ದನು. 


ಪೌರಾಣಿಕ ಹಿನ್ನೆಲೆಯಲ್ಲಿ ಆತ್ಮವಿಶ್ವಾಸಕ್ಕೆ ಒಂದು ಉದಾಹರಣೆಯನ್ನು ನೀಡಬಹುದು. ವೇದಗಳ ಕರ್ತೃ ವೇದವ್ಯಾಸರು ಮಹಾಕಾವ್ಯ ಮಹಾಭಾರತವನ್ನು ರಚಿಸಲು ಆತ್ಮವಿಶ್ವಾಸವುಳ್ಳ ಹಾಗೂ ಏಕಾಗ್ರತೆಯನ್ನು ಹೊಂದಿರುವ ಓರ್ವ ವ್ಯಕ್ತಿಯನ್ನು ಹುಡುಕುತ್ತಿದ್ದರು. ಆಗ ಶ್ರೀಕೃಷ್ಣನು ಬಾಲಗಣೇಶನನ್ನು ತೋರಿಸಿ, " ಬಾಲಗಣೇಶನು ನಿಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸುತ್ತಾನೆ." ಎಂದು ಹೇಳಿದನು. ಆಗ ಸಂತಸಗೊಂಡ ವೇದವ್ಯಾಸರು ಸಮ್ಮತಿ ನೀಡಿದರು. ಈ ಮಧ್ಯೆ ಷರತ್ತೊಂದನ್ನು ಇರಿಸಿದರು. ಅದೇನೆಂದರೆ ವೇದ ವ್ಯಾಸರು ಶ್ಲೋಕ ಸಹಿತ ಕಥೆಯನ್ನು ಹೇಳುತ್ತಿರವಂತೆ ಎಲ್ಲಿಯೂ ತೊಡಕುಂಟಾಗದಂತೆ ನಿತ್ಯ ನಿರಂತರವಾಗಿ ಬಾಲಗಣೇಶನು ಬರೆಯಬೇಕಿತ್ತು. ಈ ಷರತ್ತಿಗೆ ಬಾಲಗಣೇಶನು ಒಪ್ಪಿಕೊಂಡಿದ್ದನು. ನಂತರ ವೇದ ವ್ಯಾಸರು ಕಥೆಯನ್ನು ಹೇಳುತ್ತಾ ಹೋದರು. ಬಾಲಗಣೇಶ ಬರೆಯುತ್ತಾ ಹೋದನು. ಆದರೆ ಮಹಾಕಾವ್ಯವನ್ನು ಬರೆಯುವ ಮಧ್ಯದಲ್ಲಿ ಲೇಖನಿ ಮುರಿದು ಹೋಯಿತು. ಆಗ ಬಾಲಗಣೇಶನು ಮತ್ತೊಂದು ಲೇಖನಿ ತನ್ನ ಬಳಿ ಇಲ್ಲವೆಂದು ಚಿಂತಿಸಲಿಲ್ಲ ಹಾಗೆಯೇ ಬರೆಯುವುದನ್ನು ನಿಲ್ಲಿಸಲಿಲ್ಲ. ತನ್ನ ದಂತವನ್ನೇ ಮುರಿದು ದಂತದ ಚೂಪಾದ ಭಾಗದಿಂದ ಬರೆಯಲು ಪ್ರಾರಂಭಿಸಿ ಮಹಾಭಾರತ ಮಹಾಕಾವ್ಯದ ಕಥೆಯನ್ನು ಪೂರ್ಣಗೊಳಿಸಿದನು. ಸೂರ್ಯಚಂದ್ರರಿರುವ ತನಕ ಅಜರಾಮರನಾದನು. ಅಷ್ಟಲ್ಲದೇ ಬಾಲಗಣೇಶ ನು ಏಕದಂತನೆಂದು ಜಗತ್ಪ್ರಸಿದ್ಧಿಯಾದನು. ಏಕೆಂದರೆ ಬಾಲಗಣೇಶನಲ್ಲಿ " ನಾನು ಸಂಪೂರ್ಣ ಮಹಾಭಾರತವನ್ನು ಬರೆದೇ ತೀರುತ್ತೆನೆ " ಎಂಬ ಅಚಲ ನಂಬಿಕೆ ಮತ್ತು ಸದೃಢವಾದ ಆತ್ಮವಿಶ್ವಾಸ ಇತ್ತು. ಹೀಗೆ ಆತ್ಮವಿಶ್ವಾಸದಿಂದ ಯಾವುದೇ ಕೆಲಸವನ್ನು ಮಾಡಿದರೆ ಜಯ ಶತಸಿದ್ಧವೆನಿಸುತ್ತದೆ. ದುರಂತವೊಂದರಲ್ಲಿ ಒಂದು ಕಾಲನ್ನೇ ಕಳೆದುಕೊಂಡ ’ಅರುಣಿಮಾ ಸಿನ್ಹಾ’ ಎವರೆಸ್ಟ್ ಏರಿದ ಮೊದಲ ವಿಕಲಚೇತನ ಮಹಿಳೆ ಎಂಬ ಖ್ಯಾತಿಗೆ ಕಾರಣವಾಗಿದ್ದು ಆಕೆಯ ಆತ್ಮವಿಶ್ವಾಸವೇ ಆಗಿದೆ. ಹುಟ್ಟು ಅಂಗವೈಕಲ್ಯವನ್ನೂ ಮತ್ತು ಕಡು ಬಡತನವನ್ನೂ ಮೀರಿ ನಿಂತು ಪ್ಯಾರಾ ಒಲಂಪಿಕ್ಸ್‌ನಲ್ಲಿ ಪದಕ ಗೆದ್ದ ’ಗಿರೀಶ್’ ಗೆ ಆ ಸಾಧನೆ ಸಾಧ್ಯವಾಗಿದ್ದು ತನ್ನಲ್ಲಿದ್ದ ದೃಢವಾದ ಆತ್ಮವಿಸ್ವಾಸದಿಂದ.    


ನಾವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕೆಲವು ಸಲಹೆಗಳನ್ನು ಪಾಲಿಸಬಹುದು: 

1. ನಮ್ಮನ್ನು ನಾವು ಯಾವಾಗಲೂ ಚೈತನ್ಯಶೀಲರನ್ನಾಗಿರಿಸಿಕೊಳ್ಳುವುದು ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ.

 2. ಆತ್ಮವಿಶ್ವಾಸವು ಜ್ಞಾನಜನ್ಯವಾದುದು. ಕಲಿಯುವುದಿನ್ನೂ ಸಾಗರದಷ್ಟಿದೆ. ಪರಿಪೂರ್ಣವಾಗಿ ಯಾರೂ ಕಲಿತವರಲ್ಲ ಎಂಬ ಮೂಲಮಂತ್ರವನ್ನು ತಿಳಿದಿರಬೇಕು. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಕಲಿಕೆಯಿಂದ ಅನುಭವ ಪ್ರಾಪ್ತಿಯಾಗುತ್ತದೆ. ಈ ಅನುಭವ ಪ್ರಾಪ್ತಿಯೇ ಆತ್ಮವಿಶ್ವಾಸದ ವರ್ಧಕವಾಗಿದೆ. ಆದ್ದರಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ಜಗತ್ತಿನಲ್ಲಿ ನಮಗೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ನಮ್ಮನ್ನು ನಾವು ಸದಾ ಸನ್ನದ್ಧರಾಗಿರಿಸಿಕೊಂಡಿದ್ದರೆ ಹೆಚ್ಚು ಆತ್ಮವಿಶ್ವಾಸದಿಂದಿರುತ್ತೇವೆ. ಅದಕ್ಕೆ ಉತ್ತಮ ಮಾರ್ಗವೆಂದರೆ ವಿವಿಧ ವಿಷಯಗಳ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳವುದು. ಸಂಶೋಧನೆ, ಅಧ್ಯಯನ, ಪ್ರವಾಸ, ಮಾಹಿತಿ ಸಂಗ್ರಹ, ವಿವಿಧ ರೀತಿಯ ಜನಗಳೊಡನಾಟ, ಪುಸ್ತಕಗಳು, ಸಂಚಿಕೆಗಳು ಇವೆಲ್ಲವೂ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ನಮಗೆ ಪ್ರಪಂಚದೊಂದಿಗೆ ಸ್ಪರ್ಧಿಸಲು ಮತ್ತು ಒಡನಾಡಲು ಹೆಚ್ಚು ವಿಶ್ವಾಸವನ್ನು ತಂದುಕೊಡುತ್ತವೆ. 


3. ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸೋಣ: ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಿಂದ ದೂರವಿರಿಸಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡರೆ ನಮ್ಮ ಜೀವನ ಬದಲಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ.


4. ಯಾವುದೇ ವಿಷಯ ಮತ್ತು ಕ್ಷೇತ್ರದಲ್ಲಿ ಪರಿಪೂರ್ಣರಾಗಲು ನಿರಂತರ ಅಭ್ಯಾಸ ಅಗತ್ಯ. ಕಠಿಣ ಪರಿಶ್ರಮ ಅಗತ್ಯವಾಗಿದೆ. ಅವಿರತ ಅಭ್ಯಾಸದಿಂದಲೇ ಸಚಿನ್‌ ತೆಂಡೂಲ್ಕರ್‌ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದರು. 


5. ನಾವು ಮಾಡುವ ಕೆಲಸದಲ್ಲಿ ನಮಗೆ ಆಸಕ್ತಿ ಇದ್ದಾಗ ಮಾತ್ರ ಅದನ್ನು ಸರಿಯಾಗಿ ಮಾಡಲು ಸಾಧ್ಯ. ಅದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆಸಕ್ತಿಯಿಂದ ಅಭ್ಯಾಸ ಮಾಡಿದಾಗ ಏಕಾಗ್ರತೆ ಮೂಡುತ್ತದೆ. ಏಕಾಗ್ರತೆಯಿಂದ ಮಾಡುವ ಯಾವುದೇ ಕೆಲಸ ಯಶಸ್ವಿಯಾಗುತ್ತದೆ. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. 6. ನಾವೇ ಸ್ವತಃ ಸ್ವಯಂಸೇವಕರಾಗಿ ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಕಾರಣಕ್ಕೆ ಇತರರ ಜೀವನದ ಒಳಿತಿಗಾಗಿ ಮುಂದಾಗಿ ಕೆಲಸ ಮಾಡೋಣ. ಇದು ನಮ್ಮ ಬಗ್ಗೆ ನಾವೇ ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡುತ್ತದೆ. 


7. ಸಾಧಕರ ಜೀವನಚರಿತ್ರೆಗಳನ್ನು ಓದಿ ತಿಳಿದುಕೊಳ್ಳುವುದರಿಂದ ಪರಿಸ್ಥಿತಿ ನಿಭಾಯಿಸುವ ಆತ್ಮವಿಶ್ವಾಸ ಮೂಡುತ್ತದೆ. ಬದುಕಿನಲ್ಲಿ ಮುಂದೆ ಸಾಗಲು ಸ್ಫೂರ್ತಿ ದೊರೆಯುತ್ತದೆ. ನಮಗೆ ಗೊತ್ತಿಲ್ಲವೆಂದಾಗ ತಿಳಿದವರನ್ನು ಕೇಳುವುದರ ಮೂಲಕ ಕಾರ್ಯ ನಿರ್ವಹಣೆಗೆ ಮುಂದಾಗೋಣ. ಈ ರೀತಿಯ ಮನೋಭಾವವು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.


8. ನಾವು ಸೋಲಿನ ಭಯಕ್ಕೆ ತುತ್ತಾದರೆ ನಮಗೆ ಆತ್ಮವಿಶ್ವಾಸ ಕುಂಠಿತವಾಗುತ್ತದೆ, ಸೋಲಿಗೆ ಅಂಜದೆ, ಧೈರ್ಯದಿಂದ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ನಮ್ಮಲ್ಲಿ ಆತ್ಮವಿಶ್ವಾಸ ತಾನೇ ತಾನಾಗಿ ಹೆಚ್ಚಾಗುತ್ತದೆ. ಏಕೆಂದರೆ ಧೈರ್ಯಂ ಸರ್ವತ್ರ ಸಾಧನಂ.


9. ಪ್ರತಿ ನಿತ್ಯ ದೈಹಿಕ ವ್ಯಾಯಾಮವು ನಮ್ಮನ್ನು ನಾವು ಸದಾ ಸನ್ನದ್ಧರಾಗಿರಿಸಿಕೊಳ್ಳಲು ಒಂದು ಬಹುಮುಖ್ಯವಾದ ಚಟುವಟಿಕೆ. ಇದು ನಮ್ಮ ಮನಸ್ಸನ್ನು ಪ್ರಫುಲ್ಲವಾಗಿಡುತ್ತದೆ. ವೇಗದ ನಡಿಗೆ, ಈಜು, ಓಟ, ಯೋಗ.. ಇವೆಲ್ಲವೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿ. ಇವು ನಮ್ಮ ಜೀವನವನ್ನು ನೋಡುವ ದೃಷ್ಟಿಕೋನವನ್ನು ಬದಲಿಸುತ್ತದೆ. 10. ದಿನದಲ್ಲಿ ಸ್ವಲ್ಪ ಹೊತ್ತಿನ ಪೂಜೆ, ಭಗವಂತನ ನಾಮಸ್ಮರಣೆ, ಭಜನೆ ಮಾಡುವ ಮೂಲಕ ಮನಸ್ಸನ್ನು ಚೈತನ್ಯ ಶಿಲವನ್ನಾಗಿ ಇಟ್ಟುಕೊಳ್ಳುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. 11. ಪ್ರತಿನಿತ್ಯದ ಸ್ನಾನ, ಉತ್ತಮ ಉಡುಪುಗಳನ್ನು ಧರಿಸುವುದು, ಸಜ್ಜನರ ಸಹವಾಸ ಮಾಡುವುದು, ಜೈವಿಕ ಗಡಿಯಾರದಂತೆ ಊಟ-ತಿಂಡಿ ಮಾಡುವುದು ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಾವು ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡೋಣ. ಅದು ನಮಗೆ ಆತ್ಮತೃಪ್ತಿ ಕೊಡುತ್ತದೆ. ಈ ಆತ್ಮತೃಪ್ತಿಯು ಆತ್ಮವಿಶ್ವಾಸವನ್ನು ಮೂಡಿಸುತ್ತದೆ.


ನಾವು ಆತ್ಮವಿಶ್ವಾಸವನ್ನು ಹೊಂದುವುದುರಿಂದ ಏನೇನು ಪ್ರಯೋಜನಗಳಿವೆ ? ಎಂಬುದನ್ನು ನೋಡೋಣ. ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿಯ ವ್ಯಕ್ತಿತ್ವವು ಸಮಾಜದಲ್ಲಿ ಗೌರವಕ್ಕೆ ಅರ್ಹವಾಗುತ್ತದೆ. ಸಾಧನೆಯ ಹಾದಿಯಲ್ಲಿ ಏನೆಲ್ಲಾ ಕಷ್ಟನಷ್ಟಗಳು ಎದುರಾದರೂ ಅವೆಲ್ಲವನ್ನು ಎದುರಿಸಿ ಸಾಧನೆಯಲ್ಲಿ ಯಶಸ್ಸು ಹೊಂದುವಂತೆ ಮಾಡುವುದು ಈ ಆತ್ಮವಿಶ್ವಾಸ. 


ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯಲ್ಲಿ ಶ್ರದ್ಧೆ ಮತ್ತು ನಿಷ್ಠೆಗಳು ಜಾಗೃತಗೊಂಡು ಕ್ರಿಯಾಶೀಲತೆಯಿಂದ ಕೂಡಿರುತ್ತವೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಆತ್ಮವಿಶ್ವಾಸವು ಪೂರಕವಾಗಿರುತ್ತದೆ. ಸರ್ ಎಂ.ವಿಶ್ವೇಶ್ವರಯ್ಯ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ, ಡಾII ಬಿ.ಆರ್. ಅಂಬೇಡ್ಕರ್, ಎ. ಪಿ. ಜೆ. ಅಬುಲ್ ಕಲಾಂ, ಸರ್ ಸಿ.ವಿ.ರಾಮನ್, ಸರ್ ಜಗದೀಶ್ ಚಂದ್ರ ಬೋಸ್, ನೇತಾಜಿ ಸುಭಾಷ್ ಚಂದ್ರ ಬೋಸ್ ಇವರೆಲ್ಲರ ಸಾಧನೆಯ ಹಾದಿಯಲ್ಲಿ ಆತ್ಮವಿಶ್ವಾಸವು ಕಾರ್ಯನಿರ್ವಹಿಸಿರುವುದು ನಮಗೆ ಗೊತ್ತಾಗುತ್ತದೆ. ನಾವು ಸದಾ ಆತ್ಮವಿಶ್ವಾಸದಿಂದ ಬದುಕೋಣ. ಕೌಟುಂಬಿಕ ಪ್ರಗತಿಯಿಂದ ಹಿಡಿದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಭಿವೃದ್ಧಿಯವರೆಗೂ ನಿತ್ಯ ನಿರಂತರ ಆತ್ಮ ವಿಶ್ವಾಸದಿಂದ ಕೆಲಸ ಮಾಡುತ್ತಾ ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ ಎನ್ನುತ್ತಾ ಒಂದಾಗಿ ಸಾಗೋಣ.  

-ಕೆ. ಎನ್. ಚಿದಾನಂದ ಹಾಸನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top