ತಳಜಾತಿಗಳ ಎದೆಯೊಳಗೆ ಸ್ವಾಭಿಮಾನವನ್ನು ಬಿತ್ತಿದ ದೇವರಾಜ ಅರಸರು : ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್

Upayuktha
0

ತೆಂಕನಿಡಿಯೂರು: ಒಕ್ಕಲುಮಸೂದೆ, ಮೀಸಲಾತಿ, ಜೀತಮುಕ್ತಿ, ಮಲಹೊರುವುದರ ನಿಷೇದ, ಋಣಮುಕ್ತಿಯೇ ಮೊದಲಾದ ಜೀವಪರ ಶಾಸನಗಳ ಮೂಲಕ ದಲಿತ, ದಮನಿತ ಹಾಗೂ ಹಿಂದುಳಿದ ವರ್ಗಗಳಿಗೆ ಬಿಡುಗಡೆ ಕೊಟ್ಟ,  ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲೆಗಳನ್ನು ತೆರೆದು ತಳಜಾತಿಗಳಿಗೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣದ ಹೊಸಬೆಳಕನ್ನು ಕಾಣಿಸಿದ, ತಬ್ಬಲಿ ಜಾತಿಗಳಿಗೆ ರಾಜಕೀಯ ಅಧಿಕಾರದ ಹೆಬ್ಬಾಗಿಲನ್ನು ತೆರೆದು ಕರ್ನಾಟಕದ ರಾಜಕಾರಣದಲ್ಲಿ ಹಿಂದೆಂದೂ ಕಾಣದ ಸಾಮಾಜಿಕ ಕ್ರಾಂತಿಯ ಹೆಗ್ಗುರುತನ್ನು ಸಾಧಿಸಿದ ದೇವರಾಜ ಅರಸರು ಹೇಳ ಹೆಸರಿಲ್ಲದ ತಳಜಾತಿಗಳ ಎದೆಯೊಳಗೆ ಸ್ವಾಭಿಮಾನವನ್ನು ಬಿತ್ತಿದವರು ಮಾತ್ರವಲ್ಲ, ಆಧುನಿಕ ಕರ್ಣಾಟಕಕ್ಕೆ ನಿಜವಾದ ಅರ್ಥದ ಮುಂಚಲನೆಯನ್ನು ಒದಗಿಸಿದ ಧೀಮಂತ ಜನನಾಯಕರು ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ ಹೇಳಿದರು. ಕಾಲೇಜಿನಲ್ಲಿ ಆಯೋಜಿತವಾದ ದೇವರಾಜ ಅರಸರ 108ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ದೇವರಾಜ ಅರಸರ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳಿಂದ ಬೆಚ್ಚಿಬಿದ್ದ ಪಟ್ಟಭದ್ರ ಹಿತಾಸಕ್ತಿಗಳು ನಕಾರಾತ್ಮಕ ಪ್ರಚಾರದ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಯತ್ನ ಮಾಡಿದರಾದರೂ, ಎದೆಗುಂದದ ಅರಸರು ತಾವೇ ಹೇಳಿಕೊಂಡಂತೆ ‘ಬೇಡನೊಬ್ಬನ ಕೈಯಲ್ಲಿ ಹೊಸದೊಂದು ರಾಮಾಯಣ’ ಬರೆಸಿದ್ದಷ್ಟೇ ಅಲ್ಲ, ಎಲ್. ಜಿ ಹಾವನೂರರ ಮೂಲಕ ಬರೆಸಿದ ಆ ಹೊಸರಾಮಾಯಣದ ಫಲಶ್ರುತಿಯಾದ ಮೀಸಲಾತಿಯನ್ನೂ ಜಾರಿಗೆ ತಂದು ಆಧುನಿಕ ಕರ್ಣಾಟಕ ಹಾಗೂ ಭಾರತದ ರಾಜಕಾರಣವನ್ನು ಈಗಲೂ ಪ್ರಭಾವಿಸುತ್ತಿರುವ ವಾಸ್ತವವನ್ನು ನಮ್ಮೆದುರು ಉಳಿಸಿ ಹೋಗಿರುವುದರಲ್ಲೇ ಅವರ ರಾಜಕೀಯ ದೂರದೃಷ್ಟಿಯ ಸಾಕ್ಷಿ ಇದೆ ಎಂದರು. 


ಇದೇ ಸಂದರ್ಭದಲ್ಲಿ ಅರಸರು ಜಾರಿಗೆ ತಂದ ಒಕ್ಕಲುಮಸೂದೆಯ ಅನುಷ್ಠಾನದಲ್ಲಿ ಅರಸರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಅರಸರ ಸಂಪುಟದ ಸಚಿವರಾಗಿದ್ದ ಕರಾವಳಿಯ ಸಜ್ಜನ ರಾಜಕಾರಣಿ ಸುಬ್ಬಯ್ಯ ಶೆಟ್ಟರನ್ನೂ, ಪತ್ರಕರ್ತನಾಗಿದ್ದುಕೊಂಡು ಪತ್ರಿಕಾರಂಗದ ರಾಜಕಾರಣ ಹಾಗೂ ಅರಸರು ಇಬ್ಬರನ್ನೂ ಹತ್ತಿರದಿಂದ ಕಂಡು ‘ಬಹುರೂಪಿ ಅರಸರು’ ಎಂಬ ಕೃತಿಯನ್ನು ಬರೆದ ವಡ್ಡರ್ಸೆ ರಘುರಾಮ ಶೆಟ್ಟರನ್ನೂ ನೆನೆದರಲ್ಲದೆ, ಚರಿತ್ರೆಯ ಅರಿವಿಲ್ಲದವರು ಚರಿತ್ರೆಯನ್ನು ನಿರ್ಮಾಣ ಮಾಡಲಾರರು ಎಂಬ ಅಂಬೇಡ್ಕರ್ ಅವರ ಸಾಲನ್ನೂ ನೆನೆದು ವಿದ್ಯಾರ್ಥಿಗಳನ್ನು ಎಚ್ಚರಸಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಅವರು, ಅರಸರು ಜಾರಿಮಾಡಿದ ಒಕ್ಕಲುಮಸೂದೆಯಂತಹ ಕಾರ್ಯಕ್ರಮ ಯಾರಿಂದ ನೆಲವನ್ನು ಕಸಿಯಿತೆನ್ನಲಾಗುತ್ತದೆಯೋ ಆ ಸಮುದಾಯಗಳಿಗೆ ನಿಜವಾದ ಅರ್ಥದಲ್ಲಿ ಹೊಸ ಚಲನೆಯನ್ನು ಒದಗಿಸಿದ್ದರಿಂದಲೇ ತನ್ನಂಥವರು ಇಂತಹ ಮುಂಚಲನೆಯನ್ನು ಕಾಣಲು ಸಾಧ್ಯವಾಯಿತು ಎಂದರು. ದೇವರಾಜ ಅರಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಅರ್ಚನಾ ವಂದಿಸಿದರು. ಶಾಲಿನಿ ಯು.ಬಿ. ನಿರೂಪಿಸಿದರು.  

 

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top