ಸ್ವಾತಂತ್ರ್ಯದ ಅಮೃತ ಕಾಲ: ನೆನೆಯೋಣ ಅವರ ವೀರ ಬಲಿದಾನಗಳ

Upayuktha
0


ಅದು ಸ್ವಾತಂತ್ರ ಹೋರಾಟದ ಉತ್ತುಂಗದ ಕಾಲ. ಮನೆ ಮನೆಯಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ ಕಡುಗಲಿಗಳು ಉದಿಸಿದ ಕಾಲ. ತಾಯಿನಾಡಿನ ಮುಕ್ತಿಗಾಗಿ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಪಣ ತೊಟ್ಟವರು. ಅಂತಹದೇ ಒಂದು ದೇಶ ಭಕ್ತ ಕುಟುಂಬದ ಕುಡಿಯ ಕಥೆ ಇದು.


ಹುಟ್ಟಿನಿಂದಲೇ ಸ್ವಾತಂತ್ರ್ಯದ ಪ್ರಾಪ್ತಿಯ ಕನಸನ್ನು ಹೊತ್ತು ತಂದೆ ತಾಯಿಗಳು ಮಗನಿಗೆ ವೀರರ ಶೂರರ ಕಥೆಗಳನ್ನು ಹೇಳುತ್ತಾ ಬೆಳೆಸಿದ್ದರು. ಹೀಗೆ ಬೆಳೆದ ಮಗು ಮುಂದೆ ಒಳ್ಳೆಯ ಕವಿಯಾಗಿ ಲೇಖಕನಾಗಿ ಹೊರಹೊಮ್ಮಿದನು ಸ್ವಾತಂತ್ರ ಸಂಗ್ರಾಮಕ್ಕೆ ಅಗತ್ಯವಾದ ದೇಶಭಕ್ತಿ ಗೀತೆಗಳನ್ನು ರಚಿಸುವುದರಲ್ಲಿ ಎತ್ತಿದ ಕೈಯಾಗಿದ್ದನು ಆತ. ಮುಂದೆ ತಾರುಣ್ಯಕ್ಕೆ ಕಾಲಿಟ್ಟ ಮೇಲೆ ಸ್ವಾತಂತ್ರ್ಯ ಹೋರಾಟದ ಕಾರ್ಯಗಳಲ್ಲಿ ತೊಡಗಿಸಿಕೊಂಡನು ಆತ.


ಅಂದಿನ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಎಡರುತೊಡರಾಗುವಂತೆ ಟಪಾಲುಗಳನ್ನು ಕಳವು ಮಾಡುವುದು, ಸರ್ಕಾರಿ ಕಚೇರಿಗಳನ್ನು ಧ್ವಂಸ ಮಾಡುವುದು, ಬ್ರಿಟಿಷ್ ಸರ್ಕಾರದ ಆಧೀನದಲ್ಲಿರುವ ಮದ್ದು ಗುಂಡುಗಳನ್ನು ನಾಶ ಮಾಡುವುದು, ಎತ್ತಂಗಡಿ ಮಾಡುವುದು, ರೈಲುಗಳಲ್ಲಿ ಸರ್ಕಾರದ ಕಾಗದ ಪತ್ರಗಳನ್ನು ಆಯ್ದು ಸುಟ್ಟು ಹಾಕುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ಇದರಿಂದ ಬ್ರಿಟಿಷರು ಮತ್ತಷ್ಟು ಕೆರಳಿ ಅವಘಡಗಳಿಗೆ ಕಾರಣರಾಗುತ್ತಿದ್ದರು. 


ಇಂಥದ್ದೇ ಒಂದು ಪ್ರಕರಣ ರೈಲು ದರೋಡೆಯದ್ದು. ಕಾಕೋರಿ ಎಂಬ ಪುಟ್ಟ ನಿಲ್ದಾಣ ಒಂದರಲ್ಲಿ ರೈಲನ್ನು ತಡೆಹಿಡಿದು ದರೋಡೆ ಮಾಡಿದ ತಂಡ ಯಶಸ್ವಿಯಾದರು. ಆ ತಂಡದ ನಾಯಕ ರಾಮಪ್ರಸಾದ್ ಬಿಸ್ಮಿಲ್ ಸೆರೆ ಸಿಕ್ಕನು. ತಿಂಗಳುಗಳ ಕಾಲ ವಿಚಾರಣೆ ನಡೆಸಿ ಬ್ರಿಟಿಷ್ ಸರ್ಕಾರವು ಆ ಹೋರಾಟಗಾರನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು.


ಇನ್ನೇನು ನಾಳೆಯ ದಿನ ನೇಣಿಗೇರಿಸುತ್ತಾರೆ ಎಂಬ ಸಮಯದಲ್ಲಿ ಆತನನ್ನು ಭೇಟಿಯಾಗಲು ಆತನ ತಾಯಿ ಬಂದಳು. ಜೈಲಿನ ಅಧಿಕಾರಿಗಳು ಆತನ ತಾಯಿಯ ಬರವನ್ನು ಅರುಹಲು ಆತನ ಕೊರಳ ಸೆರೆಯುಬ್ಬಿ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯಿತು.


ಆತನ ಮುಂದೆ ನಿಧಾನವಾಗಿ ಬಂದು ನಿಂತ ತಾಯಿ, ಮಗನ ಕಣ್ಣೀರನ್ನು ಕಂಡು ಅಪ್ರತಿಭಳಾದಳು. ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲು ಹಾಕಿ ವಿಜಯಶಾಲಿಯಾದ ನನ್ನ ಮಗನನ್ನು ಆಶೀರ್ವದಿಸಲು ಬಂದ ನನಗೆ ನಿನ್ನ ಕಣ್ಣೀರು ಆಘಾತವನ್ನುಂಟು ಮಾಡಿದೆ. ನೀನು ನನ್ನ ಮಗನೇ ಎಂದು ಸಂಶಯ ಉಂಟಾಗುತ್ತಿದೆ ಎಂದು ಆಕೆ ನುಡಿದಳು.


ಅದಕ್ಕೆ ಉತ್ತರವಾಗಿ ಮಗನು ಅಮ್ಮ ತಪ್ಪು ತಿಳಿಯದಿರು, ತಾಯಿ ಭಾರತಿಯ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಈ ದೇಶದ ಹೆಣ್ಣು ಮಕ್ಕಳು ತಮ್ಮ ಮಕ್ಕಳನ್ನು ಖುಷಿಖುಷಿಯಾಗಿ ಅರ್ಪಿಸುತ್ತಾರೆ. ಹಾಗೆಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತಮ್ಮ ಮಕ್ಕಳನ್ನು ಬ್ರಿಟಿಷರು ಗಲ್ಲಿಗೇರಿಸುವಾಗ ಅವರನ್ನು ಆಶೀರ್ವದಿಸಲು ಬರುವಂತಹ ಶ್ರೇಷ್ಠ ತಾಯಿಯ ಬಸಿರಲ್ಲಿ ನನ್ನನ್ನು ಹುಟ್ಟಿಸಿದ್ದಕ್ಕಾಗಿ ಆ ದೇವರಿಗೆ ಕೃತಜ್ಞತೆ ಸಲ್ಲಿಸಿದಾಗ ಮನದುಂಬಿ ಬಂದ ಭಾಷ್ವವಿದು. ಅಮ್ಮ ಮುಂದಿನ ಜನ್ಮವೆಂಬುದಿದ್ದರೆ ನಾನು ನಿನ್ನ ಕಂದನಾಗಿಯೇ ಮತ್ತೆ ಹುಟ್ಟಿ ಬರುವಂತೆ  ಆಶೀರ್ವದಿಸು ಎಂದು ತಾಯಿಯ ಪಾದಗಳಿಗೆ ನಮಸ್ಕರಿಸಿದ ಮಗನನ್ನು ಆಶೀರ್ವದಿಸುವಂತೆ ಆ ತಾಯಿ ಬಾಚಿ ತಬ್ಬಿ ಬಿಗಿದಪ್ಪಿಕೊಂಡಳು. 


ಇದಲ್ಲವೇ ದೇಶ ಭಕ್ತಿ, ಇದಲ್ಲವೇ ತಾಯ್ನಾಡಿನ ಪ್ರೇಮ. ಇಂತಹ ದೇಶಭಕ್ತ ತಾಯಿ ಮಕ್ಕಳ ನೆತ್ತರು ಬಸಿದು ಗಳಿಸಿದ ಸ್ವಾತಂತ್ರ್ಯ... ನಮ್ಮೆಲ್ಲರ ಉನ್ನತ ದೇಶಭಕ್ತಿ ಸಹೋದರತ್ವ, ಸಮಾನತೆ ಮತ್ತು ಸಹಕಾರಗಳ ಮೂಲಕ ಉಳಿಸಿಕೊಂಡು ಹೋಗಬೇಕಾದ ಕಟಿಬದ್ಧತೆ ನಮ್ಮದಾಗಿರಬೇಕು. ಇಂತಹ ಕಥೆಗಳನ್ನು ನಮ್ಮ ಮಕ್ಕಳಿಗೆ ಹೇಳುವ ಮೂಲಕ ಸ್ವಾತಂತ್ರ್ಯಕ್ಕಾಗಿ ಮಾಡಿದ ವೀರರ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕು.


- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top