ಮನುವಿನ ಮೊಮ್ಮಗ ಉತ್ಥಾನಪಾದ ಮಹಾರಾಜನಿಗೆ ಇಬ್ಬರು ಹೆಂಡಿರು. ಸುನೀತಿ ಮತ್ತು ಸುರುಚಿ ಎಂದು ಅವರ ಹೆಸರು. ಸುನೀತಿಗೆ ಧ್ರುವ ಮತ್ತು ಸುರುಚಿಗೆ ಉತ್ತಮನೆಂಬ ಪುತ್ರರು ಇದ್ದರು. ಉತ್ಥಾನಪಾದ ಮಹಾರಾಜನಿಗೆ ಕಿರಿಯ ರಾಣಿಯ ಮೇಲೆ ಹೆಚ್ಚಿನ ಮೋಹವಿತ್ತು.
ಒಂದು ದಿನ ಉತ್ಥಾನಪಾದ ಮಹಾರಾಜನು ಪತ್ನಿ ಸುರುಚಿಯೊಂದಿಗೆ ಒಡ್ಡೋಲಗದಲ್ಲಿ ಕುಳಿತಿದ್ದಾಗ ಆತನ ತೊಡೆಯ ಮೇಲೆ ಮಗ ಉತ್ತಮನು ಇದ್ದ. ಆಗ ಅಲ್ಲಿಗೆ ಆಗಮಿಸಿದ ಧ್ರುವನು ಕೂಡ ತಂದೆಯ ತೊಡೆಯೇರಿ ಕುಳಿತುಕೊಳ್ಳಲು ಅಪೇಕ್ಷಿಸಿದನು. ಸಿಂಹಾಸನದ ಮೇಲೆ ಕುಳಿತ ತಂದೆಯ ತೊಡೆಯೇರಲು ಬಾಲಕ ಧ್ರುವನು ಪ್ರಯತ್ನಿಸಿದಾಗ ಪಕ್ಕದಲ್ಲಿದ್ದ ರಾಣಿ ಸುರುಚಿಯು ಅದಕ್ಕೆ ಆಸ್ಪದ ಕೊಡಲಿಲ್ಲ. ಏಕೆಂದು ಬಾಲಕ ಧ್ರುವನು ಪ್ರಶ್ನಿಸಿದಾಗ ಹೀಗೆ ಕುಳಿತುಕೊಳ್ಳುವ ಹಕ್ಕು ಕೇವಲ ಉತ್ತಮನಿಗೆ ಮಾತ್ರ ಇದೆ, ನಿನಗೆ ಆ ಹಕ್ಕು ಬೇಕೆಂದರೆ ಆ ದೇವರಲ್ಲಿ ಪ್ರಾರ್ಥಿಸು ಎಂದು ಆಕೆ ಉತ್ತರಿಸಿದಳು.
ಐದು ವರ್ಷದ ಪುಟ್ಟ ಬಾಲಕ ಧ್ರುವ ಅಳುತ್ತಾ ಅರಮನೆಗೆ ಬಂದು ತಾಯಿಯ ಬಳಿ ಈ ವಿಷಯ ಕುರಿತು ಹೇಳಿ ದೇವರಲ್ಲಿ ಪ್ರಾರ್ಥಿಸುವುದರ ಅರ್ಥವನ್ನು ಕೇಳಿದ. ಅದಕ್ಕುತ್ತರವಾಗಿ ತಾಯಿ ಸುನೀತಿಯು ಏಕಾಂತದಲ್ಲಿ ಅನ್ನ ಆಹಾರಗಳನ್ನು ತ್ಯಜಿಸಿ, ದೇವರಲ್ಲಿಯೇ ಮನಸ್ಸನ್ನು ನೆಟ್ಟು ತಪಶ್ಚರ್ಯ ಮಾಡುವ ಕುರಿತು ಹೇಳಿದಳು. ಕೂಡಲೇ ಪುಟ್ಟ ಬಾಲಕ ಧ್ರುವನು ಅತ್ಯಂತ ದೃಢವಾಗಿ ಅಮ್ಮ ನಾನು ಕಾಡಿಗೆ ಹೋಗಿ ದೇವರಲ್ಲಿ ಪ್ರಾರ್ಥಿಸಿ ತಂದೆಯ ತೊಡೆಯೇರುವ ವರವನ್ನು ಪಡೆಯುವ ಎಂದು ಹೇಳಿದನು. ಇದನ್ನು ಕೇಳಿ ಅಪ್ರತಿಭಳಾದ ಸುನೀತಿಯು ಮಗನಿಗೆ ಹಲವಾರು ರೀತಿ ತಿಳಿ ಹೇಳಿದಳು. ಆದರೆ ಇದಾವುದನ್ನು ಒಪ್ಪದ ಧ್ರುವನು ತನ್ನ ಮಾತಿಗೆ ಕಟ್ಟು ಬಿದ್ದನು. ವಿಧಿ ಇಲ್ಲದೆ ಸುನೀತಿಯು ಮಗನಿಗೆ ಕಾಡಿಗೆ ಹೋಗಲು ಅನುಮತಿ ನೀಡಿ, ಬೀಳ್ಕೊಂಡಳು.
ಐದು ವರ್ಷದ ಪುಟ್ಟ ಬಾಲಕ ಧ್ರುವನು ದಟ್ಟ ಕಾಡಿನಲ್ಲಿ ದೇವರನ್ನು ಹುಡುಕುತ್ತಾ ಹೊರಟಾಗ ದಾರಿಯಲ್ಲಿ ಆತನಿಗೆ ನಾರದಮುನಿಗಳು ಮಾರುವೇಷದಲ್ಲಿ ಸಿಕ್ಕು ಆತನ ದೃಢ ಸಂಕಲ್ಪವನ್ನು ಪರೀಕ್ಷಿಸಿದರು. ಬಾಲಕ ಧ್ರುವನ ಗುರಿಯೆಡೆಗಿನ ಅಚಲವಾದ ನಿಷ್ಠೆ ಮತ್ತು ಶ್ರದ್ದೆಯನ್ನು ಕಂಡು ಸಂತುಷ್ಟರಾದ ನಾರದರು ತಪಗೈಯ್ಯುವ ವಿಧಾನಗಳನ್ನು ತಿಳಿಸಿಕೊಟ್ಟು ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ಹೇಳಿ ಕೊಟ್ಟರು.
ಇನ್ನೂ ದಟ್ಟವಾದ ಅರಣ್ಯದ ಒಳ ಹೊಕ್ಕ ಧ್ರುವ ಕುಮಾರನು ಸುಮಾರು ಆರು ತಿಂಗಳ ಕಾಲ ಕಠಿಣ ತಪಗೈದನು. ಅನ್ನ ಆಹಾರಗಳಿಲ್ಲದೆ ಪುಟ್ಟ ಬಾಲಕ ಧ್ರುವನು ಮಾಡಿದ ದೀರ್ಘ ತಪಸ್ಸು ಸ್ವರ್ಗ ಲೋಕವನ್ನೇ ನಡುಗಿಸಿತು. ಆತನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಭಗವಂತನನ್ನು ಕಂಡು ಬಾಲಕನು ಮೂಕ ವಿಸ್ಮಿತನಾದನು. ಧ್ರುವನ ಬಲಗೆನ್ನೆಯನ್ನು ತನ್ನ ಶಂಖದಿಂದ ಶ್ರೀಮನ್ಮಹಾವಿಷ್ಣುವು ಮುಟ್ಟಿದಾಗ ಧ್ರುವನಿಗೆ ಅರಿವಿಲ್ಲದೆಯೇ ಆತನ ಬಾಯಿಂದ ದೇವರನ್ನು ಸೂಚಿಸುವ 12 ಶ್ಲೋಕಗಳು ನಿರಂತರವಾಗಿ ಹೊರಹೊಮ್ಮಿದವು. ಆ ಶ್ಲೋಕಗಳೇ ಮುಂದೆ ಧ್ರುವ ಶ್ಲೋಕಗಳು ಎಂದು ಕರೆಯಲ್ಪಟ್ಟವು. ತಾನು ತಪಸ್ಸಿಗೆ ಕುಳಿತ ಕಾರಣವನ್ನೇ ಮರೆತು ಸದಾ ಹರಿ ಸ್ಮರಣೆಯಲ್ಲಿ ಬದುಕುವಂತಹ ಜೀವನವನ್ನು ದಯಪಾಲಿಸೆಂದು ಪುಟ್ಟ ಬಾಲಕ ಧ್ರುವನು ಬೇಡಿಕೊಂಡನು. ಕೇವಲ ದೇವರನ್ನು ಸ್ತುತಿಸಿದ ಧ್ರುವನ ಭಕ್ತಿ, ಶ್ರದ್ಧೆ ಮತ್ತು ಮುಗ್ಧತೆಗಳು ಮಹಾವಿಷ್ಣುವಿನ ಮನಸೂರೆಗೊಂಡವು. ಧ್ರುವನ ಮುಗ್ಧ ಭಕ್ತಿಗೆ ಮೆಚ್ಚಿದ ಶ್ರೀಮನ್ಮಹಾವಿಷ್ಣುವು ಆತನಿಗೆ ಧ್ರುವ ನಕ್ಷತ್ರವಾಗಿ ಆಕಾಶದಲ್ಲಿ ಆಚಂದ್ರಾರ್ಕವಾಗಿ ಸದಾ ನೆಲೆಸುವಂತೆ ವರ ನೀಡಿದನು.
ಮುಂದೇ ಧ್ರುವ ಕುಮಾರನು ತನ್ನ ರಾಜ್ಯಕ್ಕೆ ಮರಳಿದಾಗ ಆತನಿಗೆ ಅಭೂತಪೂರ್ವ ಸ್ವಾಗತ ದೊರೆಯಿತಲ್ಲದೆ ಆರನೇ ವಯಸ್ಸಿನಲ್ಲಿಯೇ ಆತ ಯುವರಾಜನಾಗಿ ಪಟ್ಟಾಭಿಷಿಕ್ತನಾದನು. ಮುಂದೆ ಹಲವಾರು ವರ್ಷಗಳ ಕಾಲ ಉತ್ತಮವಾಗಿ ರಾಜ್ಯಭಾರ ಮಾಡಿದನು. ತನ್ನ ಮುಗ್ಧ ಭಕ್ತಿಯಿಂದ ದೇವರನ್ನು ಒಲಿಸಿಕೊಂಡ ಬಾಲಕ ಧ್ರುವನ ದೈವ ಭಕ್ತಿಗೆ ನಮ್ಮದೊಂದು ಭಕ್ತಿ ಪೂರ್ವಕ ನಮನ.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ