ಭರತಖಂಡದ ಜನರ ಹಬ್ಬಗಳ ಆಚರಣೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೂ ಒಂದು. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶೇಷಶಯನ ಶ್ರೀ ಮಹಾವಿಷ್ಣುವಿನ ದಶವತಾರಗಳಲ್ಲಿ ಒಂದಾದ ಕೃಷ್ಣಾವತಾರದ ನೆನಪಿಗಾಗಿ ಅಥವಾ ಶ್ರೀಕೃಷ್ಣ ಜನ್ಮ ಸ್ಮರಣಾರ್ಥ ಆಚರಿಸುವ ಹಬ್ಬವಾಗಿದೆ ಶ್ರೀ ಕೃಷ್ಣ ಜನ್ಮಾಷ್ಟಮಿ. ಹಲವಾರು ಕಡೆ ವಿವಿಧ ಹೆಸರುಗಳಿಂದ ಜನ್ಮಾಷ್ಟಮಿಯು ಪ್ರಸಿದ್ಧಿ ಪಡೆದಿದೆ. ಭಾರತದೆಲ್ಲೆಡೆ ಆಚರಿಸಲ್ಪಡುವುದು ಹಿಂದೂ ಹಬ್ಬಗಳಲ್ಲಿ ಒಂದಾದ ಶ್ರೀಕೃಷ್ಣ ಜನ್ಮಾಷ್ಟಮಿ. ಕೃಷ್ಣ ಜನಿಸಿದ ಈ ಶುಭದಿನವನ್ನು ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ. ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣಾಷ್ಟಮಿ ಎಂದೂ, ಸೌರಮಾನ ರೀತಿಯಲ್ಲಿ ಸಿಂಹ ಮಾಸದ ರೋಹಿಣೀ ನಕ್ಷತ್ರದ ದಿನ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯು ಶ್ರೀಕೃಷ್ಣನ ಜನನ ದಿನ. ಯಧಾ ಯಧಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ||
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ||7||
ಯದಾ ಯದಾ ಹಿ ಧರ್ಮಸ್ಯ ಗ್ಲಾನಿಃ ಭವತಿ ಭಾರತ | ಅಭ್ಯುತ್ಥಾನಂ ಅಧರ್ಮಸ್ಯ ತದಾ ಆತ್ಮಾನಂ ಸೃಜಾಮಿ ಅಹಂ |
ಹೇ ಭಾರತ! ಯದಾ ಯದಾ ಹಿ ಧರ್ಮಸ್ಯ ಗ್ಲಾನಿಃ, ಅಧರ್ಮಸ್ಯ ಅಭ್ಯುತ್ಥಾನಂ ಚ ಭವತಿ, ತದಾ, ಅಹಂ ಆತ್ಮಾನಂ ಸೃಜಾಮಿ |
ಯದಾ ಯದಾ - ಯಾವ್ಯಾವಾಗ (ಎಲ್ಲೆಲ್ಲಿ), ಹಿ- ಖಂಡಿತವಾಗಿಯೂ, ಧರ್ಮಸ್ಯ - ಧರ್ಮದ, ಗ್ಲಾನಿಃ - ಏರುಪೇರು (ದೌರ್ಬಲ್ಯ), ಭವತಿ- ಆಗುವುದೋ ಭಾರತ- ಭರತ ವಂಶಜನೇ!, ಅಭ್ಯುತ್ಥಾನಂ - ಪ್ರಾಬಲ್ಯವು, ಅಧರ್ಮಸ್ಯ - ಅಧರ್ಮದ, ತದಾ- ಆವಾಗ (ಆ ಕಾಲದಲ್ಲಿ), ಆತ್ಮಾನಂ- ಸ್ವಯಂ, ಸೃಜಾಮಿ- ವ್ಯಕ್ತನಾಗುತ್ತೇನೆ (ಉತ್ಪತ್ತಿಯಾಗುತ್ತೇನೆ), ಅಹಂ- ನಾನು. ಭರತವಂಶಜನಾದ ಅರ್ಜುನನೇ!, ಯಾವ್ಯಾವಾಗ ಎಲ್ಲೆಲ್ಲಿ ಧರ್ಮದ ಅಧಃಪತನ (ಶಿಥಿಲ) ಆಗುವುದೋ ಮತ್ತು ಅಧರ್ಮವು ಹೆಚ್ಚಾಗುವುದೋ ಆ ಸಂದರ್ಭದಲ್ಲಿ ನಾನು ದುಷ್ಟಶಿಕ್ಷೆ ಶಿಷ್ಟರಕ್ಷೆ ಹಾಗೂ ಧರ್ಮ ಸಂಸ್ಥಾಪನೆನಾಗಿ, ನಾನು ಜನ್ಮ ತಳೆಯುತ್ತೇನೆ. ಎಂದು ಸಕಲ ಜೀವ ರಾಶಿಗಳಿಗೆ (ಜೀವಕೋಟಿಗೆ) ಶ್ರೀಕೃಷ್ಣನ ಈ ಮಾತು ಅವಿಸ್ಮರಣೀಯ. ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಮಾತು ಇದು.
ಕೃಷ್ಣನ ಜನನ: ಮಧುರೆಯ ರಾಜನಾದ ಕಂಸ, ತನ್ನ ತಂಗಿ ದೇವಕಿಯ ವಿವಾಹಾನಂತರ ಮೆರವಣಿಗೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ "ಇವಳ 8ನೇ ಮಗನಿಂದ ನಿನಗೆ ಮರಣ ಬರಲಿದೆ'' ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಸುತ್ತದೆ. ಇದರಿಂದ ಭಯಭೀತಗೊಂಡ ಕಂಸ ಅಕ್ಕ ಭಾವರನ್ನೇ ಕೊಲ್ಲಲು ಭಾವಿಸಿದಾಗ ದೇವಕಿ ಅಣ್ಣನಿಗೆರಗಿ ಪತಿ ಭಿಕ್ಷೆ ಬೇಡುತ್ತಾಳೆ. ಈ ಸಂದರ್ಭದಲ್ಲಿ ದೇವಕಿ ಜನಿಸಿದ ಎಲ್ಲಾ ಮಕ್ಕಳನ್ನೂ ನಿನಗೇ ಒಪ್ಪಿಸುತ್ತೇನೆ ಆದರೆ ನನ್ನ ಪತಿಯನ್ನು ಬಿಟ್ಟು ಬಿಡು ಎಂದು ಅಂಗಲಾಚಿ ಬೇಡಿಕೊಳ್ಳುತ್ತಾಳೆ. ಆಗ ದುರುಳನಾದ ಕಂಸನು ತಂಗಿ ಹಾಗೂ ಭಾವನನ್ನು ಕಾರಾಗೃಹಕ್ಕೆ ತಳ್ಳುತ್ತಾನೆ.
ತದನಂತರದಲ್ಲಿ ಆತನು ಜನಿಸಿದ ಏಳು ಮಕ್ಕಳನ್ನೂ ಕೊಂದದ್ದರಿಂದ ಆತನ ಪಾಪದ ಕೊಡವು ತುಂಬಿ ತುಳುಕುತ್ತಿರುತ್ತದೆ. ಅದೊಂದು ರಾತ್ರಿ ಕಾವಲುಗಾರರೆಲ್ಲರೂ ಘೋರನಿದ್ರೆಯಲ್ಲಿದ್ದರು. ಆಕಾಶದಲ್ಲೆಲಾ ಕಾರ್ಮೋಡ ಕವಿದಿತ್ತು. ಈ ಸಂದರ್ಭದಲ್ಲಿ ದೇವಕಿಯು 8ನೇ ಮಗುವಿಗೆ ಜನ್ಮನೀಡುತ್ತಾಳೆ. ದೇವಕಿ ಪ್ರಸವಿಸಿದಾಕ್ಷಣವೇ ಸೆರೆಮನೆಯಲ್ಲಿ ಪ್ರಕಾಶ ತುಂಬಿತು. ಆ ಸಂದರ್ಭದಲ್ಲಿ ದೇವಕಿ ಯೋಗನಿದ್ರೆಗೆ ಜಾರಿರುತ್ತಾಳೆ. ಮೊದಲೇ ಕೇಳಿಬಂದ ಅಶರೀರ ವಾಣಿಯಂತೆ ವಸುದೇವನು ತನಗೆ ಜನಿಸಿದ ಗಂಡು ಮಗು (ಶ್ರೀಕೃಷ್ಣ) ವನ್ನು ಯಶೋದೆಯ ಬಳಿ ಇಟ್ಟು ಯಶೋದೆಯ ಬಳಿ ಇರುವ ಹೆಣ್ಣು ಮಗುವನ್ನು ಕಾರಾಗೃಹಕ್ಕೆ ಕರೆತಂದು ದೇವಕಿಯ ಬಳಿ ಮಲಗಿಸುತ್ತಾನೆ. ಆಗ ದೇವಕಿ ಯೋಗ ನಿದ್ರೆಯಿಂದ ಎಚ್ಚರಗೊಂಡು ಜನಿಸಿದ ಮಗು ಗಂಡು ಎಂದು ಭಾವಿಸಿ ಮುದ್ದಾಡುತ್ತಾಳೆ. ಆಗ ಕಂಸ ಮಗು ಜನಿಸಿದ ವಿವರ ಕೇಳಿ ಓಡೋಡಿ ಬರುತ್ತಾನೆ. ಹಸುಗೂಸನ್ನು ಕೊಲ್ಲಲು ಬಂಡೆಗೆ ಅಪ್ಪಳಿಸಿದಾಗ ಆ ಕೈಗೂಸು ಆಕಾಶಕ್ಕೆ ನೆಗೆದು ವಿಷ್ಣುವಿನ ಸಹಾಯಕಿ ಯೋಗಮಾಯೆಯ ರೂಪತಳೆದು "ನಿನ್ನನ್ನು ಸಂಹರಿಸುವ ಶಿಶು ಜನ್ಮವೆತ್ತಿ ಬೆಳೆಯುತ್ತಿದೆ" ಎಂದು ಹೇಳಿ ಮಾಯವಾದಳು. ಇದನ್ನು ಕೇಳಿದ ಕಂಸನು ಭಯಭೀತನಾಗುತ್ತಾನೆ.
ಹರಿಯು ಜನಿಸಿದ ಈ ಶುಭಗಳಿಗೆಯನ್ನೇ ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಹಿಂದೂ ಬಾಂಧವರಾದ ನಾವುಗಳೆಲ್ಲಾ ಆಚರಿಸುತ್ತೇವೆ. ಇತ್ತ ನಂದಗೋಕುಲದಲ್ಲಿ ನಂದರಾಜನ ಮನೆಯಲ್ಲಿ ಆ ಹಸುಗೂಸು ಬೆಳೆಯುತ್ತಿರುತ್ತದೆ. ಕಂಸನು ಹರಿಯನ್ನು ಹರಣ ಗೈಯಲು ಬಗೆ ಬಗೆಯ ಪ್ರಯತ್ನ ಮಾಡಿದರೂ ಅತನ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ. ಮುರಾರಿಯ ಬಾಲಲೀಲೆಗಳನ್ನು ವಿವರಿಸಲು ಪುಟಗಳು ಸಾಲದು. ಕೃಷ್ಣನು ಹಲವಾರು ರೀತಿಯಲ್ಲಿ ತನ್ನ ಬಾಲ ಲೀಲೆಗಳನ್ನು ತೋರಿಸುತ್ತಾ ಬೆಳೆಯುತ್ತಾನೆ. ಕೊನೆಗೆ ಈತನೇ ತನ್ನ ಮಾವನಾದ ಕಂಸನನ್ನು ವಧಿಸುತ್ತಾನೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ವಿಧಾನ
ಅಷ್ಟಮಿಯಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮಿಂದು ಶುಚಿರ್ಭೂತನಾಗಿ ತಳಿರು, ತೋರಣ ಸಾರಣಾದಿಗಳಿಂದ ಮನೆಯನ್ನು ಸಿಂಗರಿಸಿ, ವ್ರತ ಸಂಕಲ್ಪ ಮಾಡಿ ಶ್ರೀಕೃಷ್ಣನ ಕಥಾಶ್ರವಣ ಮಾಡಿ ರಾತ್ರಿ ವಿಶೇಷ ಪೂಜೆ ಸಲ್ಲಿಸುವುದು ಈ ಹಬ್ಬದ ವೈಶಿಷ್ಟ್ಯ. ಉಡುಪಿ, ಮಧುರಾ, ವೃಂದಾವನ, ಮುಂತಾದೆಡೆಗಳಲ್ಲಿ ಕೃಷ್ಣನ ಮೂರ್ತಿಯನ್ನು ಉಯ್ಯಾಲೆಯಲ್ಲಿಟ್ಟು ಲಾಲಿ ಹಾಡಿ ತೂಗಲಾಗುವುದು. ನಂತರ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸಿ ನಾಮಕರಣ, ಪೂಜೆ, ನೈವೇದ್ಯ, ಭಜನೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತದೆ. ಬೃಂದಾವನದಲ್ಲಿ ಇಂದಿಗೂ ಕೂಡಾ ಅಂದಿನ ಗೋಪಿಯರು ವರ್ತುಲಾಕಾರದಲ್ಲಿ ನರ್ತಿಸಿದಂತೆ ಹೆಣ್ಣು ಮಕ್ಕಳು ಶ್ರೀಕೃಷ್ಣನ ಮೂರ್ತಿಯ ಸುತ್ತಲೂ ಸುತ್ತುಗಟ್ಟಿ ನರ್ತಿಸುವುದು ಕಾಣಸಿಗುತ್ತದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಆಯೋಜಿಸುವ ಸ್ಪರ್ಧೆಗಳು
ಮಕ್ಕಳಿಗೆ ಕೃಷ್ಣ ವೇಷ ಹಾಕುವುದು, ಮೊಸರು ಕುಡಿಕೆ, ಎಣ್ಣೆಗಂಬ, ಕೃಷ್ಣನ ಬಿಂಬಕ್ಕೆ ತಿಲಕವಿಡುವುದು, ಹಗ್ಗಜಗ್ಗಾಟ ನಾಣ್ಯ ಹೆಕ್ಕುವುದು ಮೊದಲಾದ ಸ್ಪರ್ಧೆಗಳನ್ನು ಹಾಗೂ ಬೇರೆ ಬೇರೆ ಕಾರ್ಯಚಟುವಟಿಕೆಗಳನ್ನು ಮಾಡುವುದರ ಮೂಲಕ ಮತ್ತು ಇತರ ರಸಮಯವಾದ ಸ್ಪರ್ಧೆಗಳನ್ನು ಆಚರಿಸುವುದರೊಂದಿಗೆ ಅದ್ಧೂರಿಯಾಗಿ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಮುದ್ರಣ ಮಾಧ್ಯಮಗಳಲ್ಲಿ ಮುದ್ದು ಕೃಷ್ಣಸ್ಪರ್ಧೆಯನ್ನೂ ಆಯೋಜಿಸುತ್ತಾರೆ.
ಹೀಗೆ ಜೀವನದ ಕಲುಷಿತ ಕಾಳರಾತ್ರಿಯಲ್ಲಿ ಎಲ್ಲರನ್ನೂ ಪವಿತ್ರಾತ್ಮರನ್ನಾಗಿ ಮಾಡುವ ಶ್ರೀಕೃಷ್ಣ ಜನ್ಮಾಷ್ಟಮಿ ಭಾರತದ ಎಲ್ಲಾ ಭಾಗಗಳಲ್ಲೂ ಆಚರಿಸಲ್ಪಡುವ ಜನಪ್ರಿಯ ಹಬ್ಬವಾಗಿದೆ.
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಹಾರೈಕೆಗಳು
- ಕಾರ್ತಿಕ್ ಕುಮಾರ್ ಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


