ರಾಮಾಯಣ ಹಕ್ಕಿನೋಟ-18: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0


ಶ್ರೀರಾಮಾಯನಮ:


ರಾಮ ಲಕ್ಷ್ಮಣ ವಿಶ್ವಾಮಿತ್ರರು ಮಿಥಿಲಾ ನಗರಕ್ಕೆ ಪ್ರಯಾಣಿಸುತ್ತಿದ್ದರು. ನಗರಕ್ಕೆ ಸಮೀಪದಲ್ಲಿ ಒಂದು ದಿವ್ಯಾಶ್ರಮವನ್ನು ಕಂಡರು.ಅಚ್ಚರಿಗೊಂಡ ರಾಮನು ವಿಶ್ವಾಮಿತ್ರರಲ್ಲಿ- ಈ ದಿವ್ಯಾಶ್ರಮ ಯಾರದು? ಇಲ್ಲಿ ಮುನಿಗಳಿಲ್ಲದಿರಲು ಕಾರಣವೇನು? ಎಲ್ಲಾ ವಿವರವಾಗಿ ತಿಳಿದುಕೊಳ್ಳಲು ಬಯಸುತ್ತೇನೆ ಎಂದಾಗ ವಿಶ್ವಾಮಿತ್ರರು ಅವೇ ಪ್ರಶ್ನೆಗಳನ್ನು ಪುನರಾವರ್ತಿಸಿ ವಿವರವಾಗಿ ಉತ್ತರಿಸಿದರು.


ಈ ಅನುಪಮವಾದ ಆಶ್ರಮದಲ್ಲಿ ಹಿಂದೆ ಮಹರ್ಷಿ ಗೌತಮರು ಪತ್ನಿ ಅಹಲ್ಯೆಯೊಂದಿಗೆ ತಪಸ್ಸು ಮಾಡುತ್ತಿದ್ದರು.ಒಂದು ದಿನ ಗೌತಮರಿಲ್ಲದ ವೇಳೆಯಲ್ಲಿ ಇಂದ್ರನು ಗೌತಮರ ವೇಷ ಧರಿಸಿ ಬಂದು ಅಹಲ್ಯೆಯಲ್ಲಿ ಕಾಮಸುಖ ಬಯಸಿದಾಗ ಇಂದ್ರನೆಂದು ಗೊತ್ತಿದ್ದೂ ಅಹಲ್ಯೆ  ಸಮ್ಮತಿಸಿದಳು.ತನ್ನ ಕಾರ್ಯ ಪೂರೈಸಿ ಗೌತಮನಿಗೆ ಹೆದರುತ್ತಲೇ ಆಶ್ರಮದ ಪರಿಸರದಿಂದ ನಕಲಿ ಗೌತಮ ವೇಷಧಾರಿಯಾದ ಇಂದ್ರನು ಹೊರಬರುವುದೂ ಅಸಲಿ ತೇಜಸ್ವಿ ಶಿವ ಸದೃಶರಾದ ಗೌತಮರು ಪ್ರವೇಶಿಸುವುದೂ ಸರೀ ಹೋಯಿತು.ವಿಷಯ ತಿಳಿದ ಗೌತಮರು ಕೋಪಗೊಂಡು ಇಂದ್ರನಿಗೆ-ನೀನೀಗಲೇ ಫಲ(ವೃಷಣ)ರಹಿತನಾಗು ಎಂದು ಶಾಪವಿತ್ತರು.ತತ್ಕ್ಷಣವೇ ಶಾಪ ಫಲ ನೀಡಿ ಇಂದ್ರನು ಫಲರಹಿತ(ಪುರುಷತ್ವ ಹೀನತೆ)ನಾದನು.ಇತ್ತ ಅಹಲ್ಯೆಗೆ- ದುರ್ವೃತ್ತಳೇ ನೀನು ಸಾವಿರ ವರ್ಷಗಳ ಕಾಲ ಈ ಉಪವನದಲ್ಲಿಯೇ ಗಾಳಿಯನ್ನೇ ಆಹಾರವನ್ನಾಗಿ ಸೇವಿಸುತ್ತಾ ನಿರಾಹಾರಳಾಗಿ, ಪಶ್ಚಾತ್ತಾಪದಿಂದ ತಪಿಸುತ್ತಾ ಭಸ್ಮರಾಶಿಯ ಮೇಲೆ ಮಲಗುತ್ತಾ ಯಾರ ಕಣ್ಣಿಗೂ ಬೀಳದೆ ಅದೃಶ್ಯಳಾಗಿ ಇಲ್ಲಿ ವಾಸಿಸು.ಯಾವಾಗ ಇಲ್ಲಿಗೆ ಶ್ರೀರಾಮನು ಬರುವನೋ ಅಂದು ನೀನು ಶಾಪಮುಕ್ತಳಾಗಿ ಪೂತಾತ್ಮಳಾಗುವೆ ನನ್ನನ್ನು ಸೇರುವೆ- ಎಂದು ಶಪಿಸಿ ಹಿಮಾಲಯಕ್ಕೆ ತಪಸ್ಸಿಗೆ ತೆರಳಿದರು.


ಇತ್ತ ಇಂದ್ರನು ಹೆದರಿ ದೇವತೆಗಳಲ್ಲಿ ಫಲಸಹಿತನಾಗಲು ಕೋರಿಕೊಂಡಾಗ ಅವರು ಪಿತೃ ದೇವತೆಗಳಲ್ಲಿ ಪ್ರಾರ್ಥಿಸಿದರು.ಪಿತೃದೇವತೆಗಳು ಟಗರಿನ ವೃಷಣಗಳನ್ನು ಇಂದ್ರನಿಗೆ ಸಂಯೋಜಿಸಿದರು.


ರಾಮ,ಈಗ ನೀನು ಈ ಆಶ್ರಮವನ್ನು ಪ್ರವೇಶಿಸಿ ಅಹಲ್ಯೆಯನ್ನು ಪುನೀತಳನ್ನಾಗಿಸು ಎಂದು ಅವರನ್ನು ಕರೆದುಕೊಂಡು ಆಶ್ರಮವನ್ನು ಪ್ರವೇಶಿಸಿದರು.ರಾಮನು ಆಶ್ರಮಕ್ಕೆ ಕಾಲಿಡುತ್ತಿದ್ದಂತೆ ಅನುಪಮ ಸೌಂದರ್ಯವತಿ ಸೌಭಾಗ್ಯವತಿ ತಪಸ್ಸಿನಿಂದ ದಿವ್ಯತೇಜಸ್ಸುಳ್ಳವಳಾದ ಅಹಲ್ಯೆಯು ಗೋಚರಿಸಿದಳು.ಸಹಜವಾಗಿಯೇ ರಾಮ ಲಕ್ಷ್ಮಣರು ಅಹಲ್ಯಾದೇವಿಯ ಪಾದಮುಟ್ಟಿ ನಮಸ್ಕರಿಸಿದರು.ಅಹಲ್ಯೆ ಅವರನ್ನು ಆಶ್ರಮ ಸಂಪ್ರದಾಯಕ್ಕೆ ಅನುಸಾರವಾಗಿ ಸತ್ಕರಿಸಿದಳು.ದೇವತೆಗಳು ಹೂಮಳೆಗರೆದರು.ತಮ್ಮ ದಿವ್ಯ ದೃಷ್ಟಿಯಿಂದ ರಾಮಾಗಮನವನ್ನು ತಿಳಿದ ಗೌತಮರು  ಬಂದು ಅಹಲ್ಯೆಯಡಗೂಡಿ ಮತ್ತೊಮ್ಮೆ ಶ್ರೀರಾಮನನ್ನು ಸತ್ಕರಿಸಿದರು.ಬಳಿಕ ತಪಸ್ಸಿನಲ್ಲಿ ನಿರತರಾದರು.

ರಾಮಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಮಿಥಿಲೆಗೆ ತೆರಳಿದರು.


ಸಾಮಾನ್ಯವಾಗಿ ನಾವು ಕೇಳಿದ ಕತೆಯಲ್ಲಿ ಗೌತಮರು ಅಹಲ್ಯೆಗೆ ನೀನು ಕಲ್ಲಾಗಿರು,ರಾಮಪಾದ ಸ್ಪರ್ಶವಾದಾಗ ಶಾಪವಿಮೋಚನೆಯಾಗುತ್ತದೆ ಎಂಬುದಿದೆ. ವಾಲ್ಮೀಕಿ ರಾಮಾಯಣದಲ್ಲಿ ಹೀಗೆ ಇಲ್ಲ.ಈ ಕತೆಯೇ ಹೆಚ್ಚು ಸಹಜವಾಗಿದೆ ಅಲ್ಲವೇ? 

ಪಶ್ಚಾತ್ತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ್ತ ಯಾವುದು?


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top