ಅಕ್ಷರ ಆರಾಧನೆ- 28: ಆದರ್ಶ ಸಹಪಾಠಿ –ಗೆಳೆಯ ಕೃಷ್ಣ

Upayuktha
0

 || ವರುಣಾಂತರ್ಗತ ಶ್ರೀ ವಿಶ್ವತೋಮುಖಾಯ ನಮಃ|| 



A friend in need is a friend in deed ಈ ಆಂಗ್ಲೋಕ್ತಿ  ಅಕ್ಷರಶಃ ನಿಜ. ವಿಪತ್ತಿನ ಘಳಿಗೆಯಲ್ಲಿ ಸಹಾಯಹಸ್ತ ನೀಡುವವರೇ ನಿಜವಾದ ಗೆಳೆಯರು. ಸ್ನೇಹ ಧರ್ಮಕ್ಕೆ ಆದರ್ಶಪ್ರಾಯರು, ಪುರಾಣೇತಿಹಾಸಗಳಲ್ಲಿ ಕಂಡುಬರುತ್ತಾರೆ. ಅಂತಹ ಆದರ್ಶ ಸನ್ಮಿತ್ರರಲ್ಲಿ ದ್ವಾಪರಯುಗ ಶ್ರೀಕೃಷ್ಣ ಧ್ರುವತಾರೆಯಂತೆ ಪ್ರಕಾಶಿಸುತ್ತಾನೆ. ದ್ವಾರಕಾ ನಗರದ ರಾಜನಾದ ಶ್ರೀಕೃಷ್ಣನೆಲ್ಲಿ? ದಾರಿದ್ರ್ಯದ ಬಲೆಯಲ್ಲಿ ಸಿಕ್ಕಿ ತೊಳಲಾಡುವ ಸುಧಾಮನೆಲ್ಲಿ? ಸ್ನೇಹದ ಗಣಿಯಾದ ಶ್ರೀಕೃಷ್ಣ ಬಾಲ್ಯದ ಸಹಪಾಠಿ ಕುಚೇಲನನ್ನು ಉದ್ಧರಿಸಿದ ಘಟನೆ ಅತ್ಯಂತ ಹೃದಯಂಗಮವಾದ ಸನ್ನಿವೇಶ. ನರರಾಡುವ ನಾಟಕವನ್ನು ತಾನೇ ನಟಿಸಿ ತೋರಿಸಿದ (ಕುಮಾರವ್ಯಾಸ ಭಾರತ) ಶ್ರೀಕೃಷ್ಣ ತೋರಿದ ಅನುಪಮ ಸ್ನೇಹವಾತ್ಯಲ್ಯ ಮಾನವಕೋಟಿಗೆ ಆದರ್ಶಪ್ರಾಯ. 


ಶ್ರೀಕೃಷ್ಣ ಪರಮಾತ್ಮ ರುಕ್ಮಿಣಿ ಸತ್ಯಭಾಮೆಯರೊಂದಿಗೆ ದ್ವಾರಕಾನಗರದಲ್ಲಿ ನೆಲೆಸಿದ ರಾಜಕಾರ್ಯಗಳ ಮಧ್ಯೆ ಬಿಡುವಿರಲಿಲ್ಲ. ವೈಕುಂಠಧಾಮದಂತೆ ದ್ವಾರಕನಗರ ಶೋಭಿಸಿತು. ಸುಧಾಮ ವೇದಾಧ್ಯಯನ ಸಂಪನ್ನನಾದ, ಬಡಬ್ರಾಹ್ಮಣ, ಸುಶೀಲೆ ಎಂಬ ಕನ್ಯೆಯನ್ನು ಮದುವೆಯಾಗಿ ತನ್ನ ಗ್ರಾಮದಲ್ಲಿ ನೆಲೆಸಿದನು. ಬಡತನವೇ ಅವನ ಭಾಗ್ಯ. ಮಕ್ಕಳಿಗೆ ಒಪ್ಪತ್ತೂಟ, ಧಾರುಣವಾದ ಬಡತನ ಬೇಗೆಯಲ್ಲಿ ಬೆಂದು ಸುಶೀಲೆ ಕಂಗಾಲಾದಳು. ಒಮ್ಮೆ ಪತಿಗೆ ಸಲಹೆ ನೀಡಿದಳು - ``ನೀನು ಬಾಲ್ಯದ ಗೆಳೆಯ ಶ್ರೀಕೃಷ್ಣನನ್ನು ಭೇಟಿಯಾಗಿ ಬನ್ನಿ'' ಸುಧಾಮ ಸಂಕೋಚದಿAದ ಹೇಳಿದ - ``ಕಡುಬಡವನಾದ ನಾನು, ರಾಜನಾಗಿರುವ ಗೆಳೆಯನೆದುರು ಹೇಗೆ ನಿಲ್ಲಲಿ?'' ಸುಶೀಲೆ ನುಡಿದಳು. ``ಬಡತನ ಪಾಪವಲ್ಲ, ನೀವು ಗೆಳೆಯರು, ಗೆಳೆತನಕ್ಕೆ ಬಡವ ಬಲ್ಲಿದನೆಂಬ ಭೇದವಿಲ್ಲ''. ಪತ್ನಿಯ ಮಾತಿಗೆ ಸುಧಾಮ ಸೋತನು. ದ್ವಾರಕೆಗೆ ಹೋಗಲು ಸಿದ್ಧನಾದನು. ಆದರೆ ಗೆಳೆಯನನ್ನು ನೋಡಲು ಬರಿಗೈಯಲ್ಲಿ ಹೋಗುವುದೇ? ಸೂಕ್ಷö್ಮಮತಿಯಾದ ಸುಶೀಲೆ ಅವಲಕ್ಕಿಯನ್ನು ಕೊಟ್ಟಳು. ಅವಲಕ್ಕಿಯ ಗಂಟು ಹಿಡಿದು ಸುಧಾಮ ಹೊರಟನು. 


ಬರಿಗಾಲಿನಲ್ಲಿ ನಡೆಯುತ್ತಾ ಬೆವರುತ್ತಾ ದ್ವಾರಕೆಯನ್ನು ತಲುಪಿದನು. ದ್ವಾರಪಾಲಕರು ಈ ಬಡಬ್ರಾಹ್ಮಣನನ್ನು ಕಂಡು ``ತಮಗೇನು ಬೇಕು?'' ಎಂದು ಕೇಳಿದರು. ``ನಾನು ಶ್ರೀಕೃಷ್ಣನ ದರ್ಶನಾಕಾಂಕ್ಷಿಯಾಗಿ ಬಂದಿದ್ದೇನೆ. ಕೃಷ್ಣನ ದರ್ಶನ ಮಾಡಿಸಿ'' ಎಂದು ಭಿನ್ನವಿಸಿದನು ಕುಚೇಲ. ದ್ವಾರಪಾಲಕರಿಗೆ ಸಂದಿಗ್ಧ. ಈ ಬಡಬ್ರಾಹ್ಮಣನೆಲ್ಲಿ ದ್ವಾರಕಾಧೀಶನಾದ ಕೃಷ್ಣನೆಲ್ಲಿ ಎತ್ತಣ ಸಂಬಂಧ! ದ್ವಾರಪಾಲಕರು ಶ್ರೀಕೃಷ್ಣನಿಗೆ ತಿಳಿಸಿದರು. `ಸುಧಾಮ'' ಎಂಬ ಹೆಸರು ಕಿವಿಗೆ ಬಿದ್ದದ್ದೇ ತಡ ಶ್ರೀಕೃಷ್ಣ ಛಂಗನೆ ಒಡೋಡಿ ಬಂದನು. ರುಕ್ಮಿಣಿ ಸತ್ಯಭಾಮೆಯರು ಹಿಂಬಾಲಿಸಿದರು. ಅವರಿಗೋ ಸೋಜಿಗ, ಕೃಷ್ಣನು ಸುಧಾಮನನ್ನು ಬಿಗಿದಪ್ಪಿ, ಸಂತೈಸಿದನು, ಕಣ್ಣೀರ ಧಾರೆ ಸುರಿಸಿದನು. ಬಾಲ್ಯಗೆಳೆಯರ ಅಪೂರ್ವ ಮಿಲನ! ಕೈಹಿಡಿದು ಕರೆದೊಯ್ದು ಸಿಂಹಾಸನದ ಮೇಲೆ ಕುಳ್ಳಿರಿಸಿ ಅರ್ಘ್ಯಪಾದ್ಯಗಳಿಂದ ಸತ್ಕರಿಸಿದನು. ದಿವ್ಯವಾದ ವಸ್ತ್ರದಿಂದ ಪಾದವನ್ನೊರೆಸಿ ಕೇಳಿದನು ``ಅತ್ತಿಗೆ ನನಗೆ ಏನು ಕಳುಹಿಸಿದ್ದಾಳೆ?'' ಸುಧಾಮ ತನ್ನ ಬಗಲಲ್ಲಿಟ್ಟುಕೊಂಡಿದ್ದ ಅವಲಕ್ಕಿಯ ಗಂಟನ್ನು ಹೊರತೆಗೆದು, ಸಂಕೋಚದಿಂದ ಕೃಷ್ಣನ ಕೈಗಿತ್ತನು. ಕೃಷ್ಣನಾದರೋ ಅತ್ಯಂತ ಪ್ರೀತಿಯಿಂದ ಅವಲಕ್ಕಿಯನ್ನು ಮೆಲ್ಲುತ್ತಾ ಪರಮ ಪ್ರೀತನಾಗಿದ್ದನು. ರುಕ್ಮಿಣಿ ದೇವಿ ``ಸ್ವಾಮಿ ನಮಗೂ ಕೊಂಚ ಉಳಿಸಿಕೊಡಿ'' ಕೃಷ್ಣನು ಭುಜಿಸಿ, ಉಳಿದಿದ್ದ ಅವಲಕ್ಕಿಯನ್ನು ಪ್ರಸಾದ ರೂಪದಲ್ಲಿ ಅವರೆಲ್ಲರೂ ಸ್ವೀಕರಿಸಿದರು. ಅದಕ್ಕೆ ಇರಬೇಕು ಅವಲಕ್ಕಿಯನ್ನು ಯಾರೂ ನಿರಾಕರಿಸದೇ ಒಂದು ಕಾಳನ್ನಾದರೂ ತೆಗೆದುಕೊಳ್ಳುತ್ತಾರೆ. 


ದ್ವಾರಕೆಯಿಂದ ಹೊರಟ ಸುಧಾಮ ತನ್ನೂರನ್ನು ಸೇರಿದಾಗ ಅಲ್ಲಿ ಪವಾಡವೇ ನಡೆದಿತ್ತು. ಇದೇನಾಶ್ಚರ್ಯ! ತನ್ನ ಮನೆಯೇ ಕಾಣುತ್ತಿಲ್ಲವಲ್ಲ. ಆವನಿಗೆ! ರಾಜಬೀದಿಗಳು, ಅರಮನೆ, ಇದೆಲ್ಲಾ ಎಂತಹ ಸೋಜಿಗ ಮುನ್ನೆಡೆದ ಸುಧಾಮನಿಗೆ ಮತ್ತೊಂದು ವಿಸ್ಮಯ ಸರ್ವಾಲಂಕೃತಳಾದ ಪತ್ನಿ, ಉತ್ತಮ ವೇಷಭೂಷಣಗಳಿಂದಲಂಕೃತರಾದ ಮಕ್ಕಳು ದ್ರವ್ಯಗಳೊಂದಿಗೆ ಸ್ವಾಗತಿಸುತ್ತಿದ್ದಾರೆ. ಇದೇನು ಕನಸೋ ಭ್ರಮೆಯೋ ಒಂದು ತಿಳಿಯದಾದ ಸುಧಾಮ ನಿಬ್ಬೆರಗಾಗಿ ನಿಂತನು. ಅಷ್ಟೈಶ್ವರ್ಯಗಳಿಂದ ತುಂಬಿದ ಅರಮನೆ ನಿಮಗಾಗಿ ಕಾದಿದೆ. ನಮ್ಮ ನೆರೆ-ಹೊರೆಯ ಜನರೂ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಅವರ ಬಾಳೂ ಹಸನಾಗಿದೆ. ಎಲ್ಲಾ ಹರಿಲೀಲೆ ಎಂದೂ ನಾನು ಬೇಡಲಿಲ್ಲ. ಅವನೂ ನಿನಗೇನು ಬೇಕು ಎಂದು ಕೇಳಲಿಲ್ಲ. ಎಲ್ಲವನ್ನು ಬಲ್ಲವನವ ಎಲ್ಲವನ್ನೂ ನೀಡಿದ್ದಾನೆ ಎಂದು ಕೊಂಡಾಡಿದನು. ಮುಂದಿನ ಪೀಳಿಗೆಗೆ ಆದರ್ಶಸ್ನೇಹದ ಮಾರ್ಗದರ್ಶನದ ನೀಡುವ ಕತೆ ಇದು. 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top