ರಾಮಾಯಣ ಹಕ್ಕಿನೋಟ-20: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0
ಶ್ರೀರಾಮಾಯನಮ:



ಹಿಮಾಲಯದಲ್ಲಿ ಘೋರ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡ ವಿಶ್ವಾಮಿತ್ರರು ಆತನಿಂದ ಪ್ರಪಂಚದಲ್ಲಿರುವ ಎಲ್ಲಾ ಅಸ್ತ್ರಗಳನ್ನು ಅನುಗ್ರಹಿಸಿಕೊಂಡರು.ಮತ್ತೊಮ್ಮೆ ವಸಿಷ್ಠರ ಆಶ್ರಮಕ್ಕೆ ಬಂದು ತಮ್ಮಲ್ಲಿರುವ ಅಸ್ತ್ರಗಳ ಮೂಲಕ ದಾಳಿ ಮಾಡಿ ವಸಿಷ್ಠಾಶ್ರಮವನ್ನು ಮುಹೂರ್ತ ಕಾಲದಲ್ಲೇ ಬಂಜರು ಭೂಮಿಯಂತಾಗಿಸಿದರು.ಎಂದೂ ಸಹನೆ ಕಳೆದುಕೊಳ್ಳದ ವಸಿಷ್ಠರು ಅಂದು ಕೋಪೋದ್ರಿಕ್ತರಾಗಿ ತಮ್ಮ ಬ್ರಹ್ಮದಂಡದ ಮೂಲಕ ವಿಶ್ವಾಮಿತ್ರರನ್ನೂ ಅವರ ಅಸ್ತ್ರಗಳನ್ನೂ ನಿಸ್ತೇಜರನ್ನಾಗಿಸಿದರು.ಬ್ರಹ್ಮರ್ಷಿಯ ಬ್ರಹ್ಮದಂಡದ ಎದುರು ನನ್ನೆಲ್ಲಾ ಅಸ್ತ್ರಗಳು ಸೋತು ಹೋದವೇ? ಎಂದು ನೊಂದು-

"ಧಿಗ್ಬಲಂ ಕ್ಷತ್ರಿಯ ಬಲಂ
ಬ್ರಹ್ಮತೇಜೋಬಲಂ ಬಲಮ್|"
ಕ್ಷಾತ್ರ ಬಲಕ್ಕೆ ಧಿಕ್ಕಾರವಿರಲಿ
ಬ್ರಹ್ಮತೇಜಸ್ಸಿನ ಬಲವೇ ಬಲ!
ಎಂಬ ಸತ್ಯವನ್ನು ಮನಗಂಡು ಬ್ರಹ್ಮ ತೇಜಸ್ಸನ್ನು ಪಡೆಯಲು ಘೋರ ತಪಸ್ಸಿಗೆ ಮತ್ತೊಮ್ಮೆ ತೆರಳಿದರು.
ವಿಶ್ವಾಮಿತ್ರರಲ್ಲಿದ್ದ ಮದ ಅಡಗಿತು.ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದ ಸಂದರ್ಭದಲ್ಲಿ ಅಡಿಗಡಿಗೆ ವಿಘ್ನ ಗಳು ಬಂದವು.ಇವುಗಳಲ್ಲಿ-

.ವಸಿಷ್ಠರ ಶಿಷ್ಯ ತ್ರಿಶಂಕುವಿಗೆ ಸಶರೀರ ಸ್ವರ್ಗಾರೋಹಣ ಮಾಡಿಸಲು ಯತ್ನಿಸುವಲ್ಲಿ ತ್ರಿಶಂಕು ಸ್ವರ್ಗ ನಿರ್ಮಾಣವಾಗುವಾಗ ತಪೋಬಲ ನಷ್ಟವಾಗಿದ್ದು
.ಮೇನಕೆಗೆ ಮನಸೋತು ಸಂಸಾರ ಹೂಡಿ ತಪೋಭಂಗವಾದದ್ದು
.ರಂಭೆಯು ಇವರು ತಪಸ್ಸನ್ನು ಕೆಡಿಸಲು ಬಂದಾಗ ಶಾಪ ನೀಡಿ ಮತ್ತೆ ತಪೋಬಲ ಕಡಿಮೆಯಾಗಿದ್ದು..ಎಲ್ಲವೂ ನಡೆದು ಹೋದವು.


ಇವುಗಳೆಡೆಯಲ್ಲಿ ಅಂಬರೀಶನ ಯಜ್ಞಪಶುವಾಗಲಿದ್ದ ತನ್ನ ಸೋದರಳಿಯ ಶುನ:ಶೇಪನನ್ನು ಉಳಿಸಿದ ಮಹಾಕಾರ್ಯವನ್ನೂ ಮಾಡಿದರು.ಆದರೆ ಈ ಸಂದರ್ಭದಲ್ಲಿ ಕೋಪವನ್ನು ಗೆಲ್ಲಲಾರದೆ ತನ್ನ ಆದೇಶವನ್ನು ಧಿಕ್ಕರಿಸಿದ ತನ್ನ ಮಕ್ಕಳನ್ನೇ ಶಪಿಸಿದ ಘಟನೆಯೂ ನಡೆಯಿತು.

ಕೊನೆಗೆ ವಿಶ್ವಾಮಿತ್ರರು ತಮ್ಮ ದೌರ್ಬಲ್ಯಗಳಾಗಿ ಉಳಿದ ಕಾಮ ಕ್ರೋಧಗಳನ್ನು ಸಂಪೂರ್ಣವಾಗಿ ತ್ಯಜಿಸಿ ಬಹುಕಾಲ ತಪಸ್ಸು ಮಾಡಿ ದೇವತೆಗಳನ್ನು ದೇವರ್ಷಿಗಳನ್ನು ಬ್ರಹ್ಮನನ್ನು ಮೆಚ್ಚಿಸಿದರು.ಬ್ರಹ್ಮನು ದೇವತೆಗಳೊಡಗೂಡಿ ಬಂದು ವಿಶ್ವಾಮಿತ್ರರಿಗೆ-ಬ್ರಹ್ಮರ್ಷೇ,ನೀನು ಬ್ರಾಹ್ಮಣ್ಯವನ್ನು ಪಡೆದಿರುವೆ.ದೀರ್ಘಾಯುಷ್ಯವನ್ನೂ ಪಡೆದಿರುವೆ.ನಿನ್ನ ಸ್ವಸ್ಥಾನಕ್ಕೆ ಹೋಗಬಹುದು- ಎಂದನು.ಆಗ ವಿಶ್ವಾಮಿತ್ರರು ಈ ಮಾತು ವಸಿಷ್ಠರ ಬಾಯಿಯಿಂದಲೂ ಬಂದು ಅವರೂ ಒಪ್ಪಿಕೊಳ್ಳುವಂತಾಲಿ ಎಂದು ಪ್ರಾರ್ಥಿಸಿದರು.ದೇವತೆಗಳ ಪ್ರಾರ್ಥನೆಗೆ ಒಪ್ಪಿದ ಮಹರ್ಷಿ ವಸಿಷ್ಠರು ವಿಶ್ವಾಮಿತ್ರರಲ್ಲಿಗೆ ಬಂದು ಅವರನ್ನು ಗೌರವದಿಂದ ಬ್ರಹ್ಮರ್ಷಿ ಎಂದು ಕರೆದರು.ವಿಶ್ವಾಮಿತ್ರರು ಹೀಗೆ ಬ್ರಹ್ಮರ್ಷಿಗಳಾದರೆಂದು ಶತಾನಂದನು ರಾಮಲಕ್ಷ್ಮಣರಿಗೆ ಹೇಳಿದನು.
ಬಳಿಕ ಜನಕನು ವಿಶ್ವಾಮಿತ್ರರನ್ನು ರಾಮ ಲಕ್ಷ್ಮಣರನ್ನು ಸತ್ಕರಿಸಿದನು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top