ಅರಿವು ವಿಸ್ತಾರವಾಗುವುದು ಪ್ರಶ್ನಿಸಿಕೊಂಡಾಗ. ಅದು ತನ್ನೊಂದಿಗೆ ಇರಬಹುದು ಇತರರೊಂದಿಗೂ ಇರಬಹುದು. ಇತರರೊಂದಿಗೆ ನಾವು ಕೇಳುವಾಗ ಅವರು ಜ್ಞಾನಿಗಳಾಗಿದ್ದರೆ ನಮ್ಮ ಭಾಗ್ಯ. ಈ ಮಾತು ರಾಮನಿಗೂ ಸಲ್ಲುತ್ತದೆ. ರಾಮನ ಜ್ಞಾನದ ಹಸಿವು ವಿಶ್ವಾಮಿತ್ರ ಮಹರ್ಷಿಗಳಿಗೆ ತುಂಬಾ ಇಷ್ಟವಾಯಿತು. ಆತ ಒಂದು ವಿಷಯದ ಕುರಿತು ಪ್ರಶ್ನೆ ಕೇಳಿದರೆ ಅದಕ್ಕಿರುವ ಉತ್ತರ ಮಾತ್ರವಲ್ಲ ಪೂರಕವಾದ ಅನೇಕ ವಿಚಾರಗಳನ್ನೂ ಅವರು ಹೇಳುತ್ತಿದ್ದರು. ಅದಕ್ಕಿರುವ ಒಂದು ಉದಾಹರಣೆ:
ರಾಮ ಲಕ್ಷ್ಮಣರೊಡನೆ ಗಂಗೆಯನ್ನು ದಾಟಿ ಮಿಥಿಲಾ ನಗರದತ್ತ ಪಯಣಿಸುವಾಗ ಅವರು ವಿಶಾಲಾ ನಗರದಲ್ಲಿ ತಂಗಿದರು. ಆಗ ರಾಮನು ವಿಶ್ವಾಮಿತ್ರರಲ್ಲಿ ಈ ನಗರದ ವಿಶೇಷತೆಯ ಬಗ್ಗೆ ಹೇಳಿ ಎಂದು ಪ್ರಾರ್ಥನೆ ಮಾಡಿದನು.ಆಗ ವಿಶ್ವಾಮಿತ್ರರು ಆ ನಗರದ ಸೃಷ್ಟಿಯ ಕತೆಯೊಂದಿಗೆ
ಸಮುದ್ರ ಮಂಥನ,
ಹಾಲಾಹಲದ ಉತ್ಪತ್ತಿ,
ಶಿವನು ವಿಷ್ಣುವಿನ ಅಪೇಕ್ಷೆಯಂತೆ ಸ್ವೀಕರಿಸಿದ್ದು,ಸುರ-ಅಸುರರ ವಿಷಯ,
ಧನ್ವಂತರೀ ಉತ್ಪತ್ತಿ,
ಅಮೃತ ಸಿಕ್ಕಿದ್ದು, ಅದಕ್ಕಾಗಿ ದೇವತೆ ದೈತ್ಯರಲ್ಲಿ ಯುದ್ಧ, ವಿಷ್ಣುವಿನ ಮೋಹಿನಿ ರೂಪ,
ಮಾರುತರ ಹುಟ್ಟು... ಇವುಗಳನ್ನೆಲ್ಲಾ ಹೇಳಿ ಬಳಿಕ ಇಕ್ಷ್ವಾಕುವಿನ ಮಗ ವಿಶಾಲ ಎಂಬುವವನು ಈ ನಗರವನ್ನು ಕಟ್ಟಿದನು ಎಂದನು. ಈಗ ಅದೇ ವಂಶದ ಸುಮತಿ ರಾಜನು ಆಳುತ್ತಿದ್ದಾನೆ ಎಂದು ಪರಿಚಯಿಸಿದನು.
ಹೀಗೆ ತಿಳಿಸುತ್ತಾ ವಿಶ್ವಾಮಿತ್ರರು ಇಂದು ಇಲ್ಲೇ ರಾಜನ ಅತಿಥಿಯಾಗಿದ್ದು ನಾಳೆ ಇಲ್ಲಿಂದ ಹೊರಡೋಣವೆಂದರು.
ಅಂದು ಅಲ್ಲೇ ಉಳಿದುಕೊಂಡರು. ಮರುದಿನ ಸುಮತಿ ರಾಜನು ಅವರನ್ನು ಸತ್ಕರಿಸುವ ಸಂದರ್ಭದಲ್ಲಿ ಅವನು ರಾಮ ಲಕ್ಷ್ಮಣರ ಕುರಿತು ಕುತೂಹಲದಿಂದ ವಿಶ್ವಾಮಿತ್ರರಲ್ಲಿ ಕೇಳಿದನು. ಆಗ ವಿಶ್ವಾಮಿತ್ರರು ಇವರ ಕುರಿತು ಹೇಳುವಾಗ ಈ ತನಕ ನಾವು ಓದಿದ ರಾಮಾಯಣದ ಕಥೆಯನ್ನು ಹಿನ್ನೋಟದ ರೂಪದಲ್ಲಿ ಹೇಳಿದರು. ಇದು ಮೊದಲ Flash back ಹಿನ್ನೋಟ
.ದಶರಥನ ಪೂರ್ವೇತಿಹಾಸ
.ಪುತ್ರಕಾಮೇಷ್ಟಿ
. ನಾಲ್ವರು ಮಕ್ಕಳ ಜನನ
. ತನ್ನ ಯಜ್ಞ ರಕ್ಷಣೆಗೆ ರಾಮ ಲಕ್ಷ್ಮಣರನ್ನು ಕರೆದುಕೊಂಡು ಬಂದದ್ದು
.ತಾಟಕಾ ಸಂಹಾರ
.ರಾಕ್ಷಸರ ಸಂಹಾರ
ಇಷ್ಟು ಹೇಳಿ ಮಿಥಿಲೆಗೆ ಹೋಗುವ ಉದ್ದೇಶವನ್ನೂ ಹೇಳಿದರು. ದೀರ್ಘವಾದ ಕತೆಯು ಮರೆತು ಹೋಗಬಾರದೆಂದು ಎಡೆ ಎಡೆಯಲ್ಲಿ ಹಿಂದಿನ ಘಟನೆಗಳನ್ನು ನೆನಪಿಸುವ ಶೈಲಿ ಗಮನಾರ್ಹ.
ಇದು ವಾಲ್ಮೀಕಿ ಶೈಲಿ!
ಸಂಕಲನ: ವಿಶ್ವ ಉಂಡೆಮನೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ