|| ಧಾತ್ರಂತರ್ಗತ ಶ್ರೀ ಪ್ರದ್ಯುಮ್ನಾಯ ನಮಃ ||
ಶ್ರೀಮನ್ನಾರಾಯಣನು ರಾಮಾವತಾರದಲ್ಲಿ ಏಕಪತ್ನಿ ವ್ರತಸ್ಥನಾಗಿದ್ದರೆ, ದ್ವಾಪರಯುಗದ ಶ್ರೀಕೃಷ್ಣನ ಅವತಾರದಲ್ಲಿ ಬಹುಪತ್ನಿವಲ್ಲಭ. ಶ್ರೀಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರಿದ್ದರು. ಇವರಲ್ಲಿ ಎಂಟು ಮಂದಿ ಪಟ್ಟದ ರಾಣಿಯರಿದ್ದರು. ಹಲವಾರು ಸನ್ನಿವೇಶಗಳಲ್ಲಿ ಶ್ರೀಕೃಷ್ಣನು ಇವರನ್ನು ವಿವಾಹವಾಗುತ್ತಾನೆ. ಈ ಎಂಟು ಜನ ರಾಣಿಯರನ್ನು ಅಷ್ಟಮಹಿಷಿಯರೆಂದೇ ಕರೆಯಲಾಗುತ್ತದೆ. ಆ ಅಷ್ಟಮಹಿಷಿಯರ ವಿವರವನ್ನು ತಿಳಿಯೋಣ.
ರುಕ್ಮಿಣಿ: ಶ್ರೀಕೃಷ್ಣನ ಹಿರಿಯ ರಾಣಿ. ಇವಳು ವಿದರ್ಭರಾಜ ಭೀಷ್ಮಕನ ಮಗಳು. ಶ್ರೀಕೃಷ್ಣನನ್ನು ತನ್ನ ಅಂತರಂಗದಲ್ಲೇ ಪ್ರೇಮಿಸುತ್ತಿದ್ದಳು. ಇವಳ ಅಣ್ಣ ರುಕ್ಮಿ. ದುಷ್ಟನಾದ ರುಕ್ಮಿಯು ಇವಳನ್ನು ಚೇದಿಯ ರಾಜನಾದ ಶಿಶುಪಾಲನಿಗೆ ಕೊಟ್ಟು ವಿವಾಹ ಮಾಡಿಸಲು ಸಿದ್ಧತೆ ನಡೆಸಿದ್ದನು. ಆಗ ಶ್ರೀಕೃಷ್ಣನು ರುಕ್ಮಿಣಿಯನ್ನು ಅಪಹರಿಸಿ, ವಿವಾಹವಾಗುತ್ತಾನೆ. ಶ್ರೀಕೃಷ್ಣ- ರುಕ್ಮಿಣಿಯರಿಗೆ ಪ್ರದ್ಯುಮ್ನ, ಚಾರುದೇಷ್ಣ, ಸುಚಾರ ಎಂಬ ಮಗಳಿದ್ದಳು. ಇವಳನ್ನು ಯಾದವ ವೀರನಾದ ಕೃತವರ್ಮನ ಮಗನಾದ ಬಲಿ ಎಂಬುವವನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.
ಜಾಂಬವತಿ: ಈಕೆ ಕರಡಿರಾಜ ಜಾಂಬವಂತನ ಮಗಳು. ಸ್ಯಮಂತಕಮಣಿಯ ಪ್ರಸಂಗದಲ್ಲಿ ಶ್ರೀಕೃಷ್ಣನಿಂದ ಸೋಲನುನುಭವಿಸಿ ಜಾಂಬವಂತಿಯನ್ನು ಕೃಷ್ಣನಿಗೆ ಕೊಟ್ಟು ವಿವಾಹ ಮಾಡಿಸುತ್ತಾನೆ. ಕೃಷ್ಣ ಜಾಂಬವತಿಯರಿಗೆ ಸಾಂಬ, ಸಮಿತ್ರ, ಪುರುಜಿತ್, ಶತಜಿತ್, ಸಹಸ್ರಜಿತ್, ವಿಜಯ, ಚಿತ್ರಕೇತು, ವಸುಮಾನ, ದ್ರವಿಡ, ಕ್ರತು ಎಂಬ ಹತ್ತು ಜನ ಮಕ್ಕಳಿದ್ದರು. ಮಿತ್ರವತಿ ಎಂಬ ಮಗಳಿದ್ದಳು.
ಸತ್ಯಭಾಮೆ: ಯದುವಂಶದ ಸತ್ರಾಜಿತನ ಮಗಳು. ಈಕೆಯೂ ಕೂಡ ಸ್ಯಮಂತಕಮಣಿ ಪ್ರಸಂಗದಲ್ಲಿ ಶ್ರೀಕೃಷ್ಣನ ಕೈಹಿಡಿದಳು. ಸತ್ಯಭಾಮೆ ಹಾಗೂ ಶ್ರೀಕೃಷ್ಣರಿಗೆ ಭಾನು, ಅತಿಭಾನು, ಶ್ರೀಭಾನು, ಪ್ರತಿಭಾನು ಎಂಬ ಮಕ್ಕಳಿದ್ದರು. ಭಾನು, ತಾಮ್ರಪಾಣಿ ಎಂಬ ಹೆಣ್ಣುಮಕ್ಕಳೂ ಇದ್ದರು.
ಈಕೆಯು ಯಮುನೆಯ ತಂಗಿ. ಶ್ರೀಕೃಷ್ಣನು ತನ್ನ ಪತಿಯಾಗಬೇಕೆಂದು ತಪಸ್ಸು ಮಾಡಿ ಕೊನೆಯಲ್ಲಿ ಶ್ರೀಕೃಷ್ಣನನ್ನು ಪತಿಯಾಗಿ ಪಡೆದಳು. ಇವಳಿಗೆ ಶ್ರುತ, ಸುಭಾಹು, ಭದ್ರಾ, ಸೋಮಕರೆಂಬ ಮಕ್ಕಳಿದ್ದರು.
ಮಿತ್ರವಿಂದೆ: ಈಕೆಯ ತಂದೆ ಆವಂತಿ ದೇಶದ ದೊರೆಯಾದ ಜಯತ್ಸೇನ. ತಾಯಿ ರಾಜಾಧಿದೇವಿ. ರಾಜಾಧಿದೇವಿಯು ಶ್ರೀಕೃಷ್ಣನ ಸೋದರತ್ತೆ. ಮಿತ್ರವಿಂದೆಗೆ ಬೇರೆಡೆ ವಿವಾಹ ಮಾಡಲು ಆಕೆಯ ಸಹೋದರರು ಯತ್ನಿಸಿದಾಗ, ಸ್ವಯಂವರ ಮಂಟಪಕ್ಕೆ ನುಗ್ಗಿದ ಶ್ರೀಕೃಷ್ಣನು ಆಕೆಯ ಅಣ್ಣ-ತಮ್ಮಂದಿರನ್ನು ಸೋಲಿಸಿ, ಈಕೆಯನ್ನು ವಿವಾಹವಾದನು. ಶ್ರೀಕೃಷ್ಣ ಮಿತ್ರವಿಂದೆಗೆ ವೃಕ, ಹರ್ಷ, ಅನಿಲ, ಗೃಧ್ರ, ವರ್ಧನ, ಉನ್ನಾದ, ಮಹಾಶ, ಪಾವನ, ವಹ್ನಿ, ಕ್ಷ್ಯಧಿ ಎಂಬ ಮಕ್ಕಳಿದ್ದರು.
ಭದ್ರೆ: ಕೇಕೆಯ ದೇಶದ ರಾಜ ದೃಷ್ಟಕೇತು-ಶ್ರುತಕೀರ್ತಿ ದಂಪತಿಗಳ ಮಗಳು, ಶ್ರುತಕೀರ್ತಿ ಕೃಷ್ಣನ ಸೋದರತ್ತೆಯರಲ್ಲಿ ಓರ್ವಳು. ಇವರೀರ್ವರಿಗೆ ಸಂಗ್ರಾಮಜಿತ್, ಬೃಹತ್ಸೇನ, ಸೂರ, ಪ್ರಹರಣ, ಅರಿಜಿತ್, ಜಯ, ಸುಭದ್ರ, ವಾಮ, ಆಯು, ಸತ್ಯಾಕರೆಂಬ ಪುತ್ರರಿದ್ದರು.
ಸತ್ಯೆ: ಈಕೆ ಕೋಸಲ ದೇಶದ ರಾಜಕುಮಾರಿ. ಈಕೆಯ ತಂದೆ ಏರ್ಪಡಿಸಿದ್ದ, ಸಪ್ತ ವೃಷಭಗಳನ್ನು ಮಣಿಸುವ ಕಾಳಗದಲ್ಲಿ ಜಯಶಾಲಿಯಾಗಿ, ಕೃಷ್ಣನು ಸತ್ಯೆಯನ್ನು ವಿವಾಹವಾದನು. ಇವರಿಗೆ ಮೀರಾ, ಚಂದ್ರ, ಶಂಕು, ವಾಸು ಎಂಬ ಪುತ್ರರು ಹಾಗೂ ಭದ್ರಾವತಿ ಎಂಬ ಪುತ್ರಿಯೂ ಇದ್ದಳು.
ಲಕ್ಷಣೆ: ಈಕೆಯ ತಂದೆ ಬೃಹತ್ಸೇನನೆಂಬ ಮಹಾರಾಜ. ಅರ್ಜುನನು ಮತ್ಸ್ಯ ಯಂತ್ರವನ್ನು ಭೇಧಿಸಿ ದ್ರೌಪದಿಯನ್ನು ವಿವಾಹವಾದಂತೆ, ಶ್ರೀಕೃಷ್ಣನು ಮತ್ಸ್ಯಯಂತ್ರವನ್ನು ಭೇದಿಸಿ ಲಕ್ಷಣೆಯನ್ನು ಪರಿಗ್ರಹಿಸಿದನು. ಇವರಿಗೆ ಗತ್ರವಾನ, ಗತ್ರವಿಂದ, ಗತ್ರಗುಪ್ತ ಎಂಬ ಪುತ್ರರೂ ಗತ್ರವತಿ ಎಂಬ ಪುತ್ರಿಯೂ ಇದ್ದಳು. ಮಹಾಭಾರತ, ಹರಿವಂಶ, ಭಾಗವತಪುರಾಣ, ವಿಷ್ಣುಪುರಾಣ, ಪದ್ಮಪುರಾಣಗಳಲ್ಲಿ ಇವರ ಉಲ್ಲೇಖವಿದ್ದು, ಶ್ರೀಕೃಷ್ಣನ ಅವಸಾನದ ನಂತರ ಇವರು ಅಗ್ನಿಪ್ರವೇಶ ಮಾಡಿದರೆಂದು ಹೇಳಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ