ತನ್ನ ಒಡಹುಟ್ಟಿದವರೊಂದಿಗೆ ಅರ್ಥಪೂರ್ಣವಾಗಿ ಸಂತೋಷದಿ ಆಚರಿಸುವ ಹಬ್ಬವೇ ರಕ್ಷಾಬಂಧನ. ರಕ್ಷೆ ಎಂದರೆ ರಕ್ಷಣೆ ಹಾಗೂ ಬಂಧನ ಎಂದರೆ ಸಂಬಂಧ ಎಂದರ್ಥ. ಸಹೋದರಿಯು ಪ್ರೀತಿಯಿಂದ ರಕ್ಷೆಯನ್ನು ತನ್ನ ಸಹೋದರನಿಗೆ ಕಟ್ಟುತ್ತಾಳೆ.
ಸಹೋದರ-ಸಹೋದರಿಯರ ನಡುವಿನ ಪ್ರೀತಿಯ ಬಂಧನವೇ ರಕ್ಷಾಬಂಧನ. ಇದು ಅಣ್ಣ ತಂಗಿ ಸಂಬಂಧದ ಒಂದು ಪ್ರೀತಿಯ ಸೂಚಕವಾಗಿದೆ.
ರಕ್ಷಾಬಂಧನ ಕ್ಕೆ ಸಂಬಂದಿಸಿದ ಹಲವಾರು ದಂತ ಕಥೆ ಗಳನ್ನು ನಾವು ಪುರಾಣಗಳಲ್ಲಿ ಕಾಣಬಹುದು.
ಪುರಾಣಗಳ ಪ್ರಕಾರ ಯಮನಿಗೆ ಯಮುನಾ ನದಿಯು ರಾಖಿ ಯನ್ನು ಕಟ್ಟಿದಾಗ ಮೃತ್ಯುವಿನ ಅಧಿಪತಿ ಯಮನು ಯಮುನಾ ಗೆ ಅಮರತ್ವ ವನ್ನು ಕರುಣಿಸಿದನೆಂದು ಹಾಗೂ ರಾಖಿ ಕಟ್ಟಿದ ಯಾವುದೇ ಸಹೋದರಿಯರನ್ನು ರಕ್ಷಿಸಲು ಮುಂದಾದ ಯಾವುದೇ ಸಹೋದರನು ಕೂಡ ಅಮರನಾಗುತ್ತಾನೆ ಎಂಬುವುದಾಗಿ ಹೇಳಿದನೆಂದು ತಿಳಿಸಲಾಗಿದೆ.
ಹಾಗೆಯೇ ಹಿಂದೂ ಪುರಾಣಗಳ ಪ್ರಕಾರ ರಕ್ಷಾಬಂಧನ ಮಹಾಭಾರತ ದ ಕಾಲದಿಂದಲೂ ಆಚರಣೆಯಲ್ಲಿದೆ.ಶ್ರೀ ಕೃಷ್ಣನಿಗೆ ಸುದರ್ಶನ ಚಕ್ರವು ತಾಗಿ ಆಕಸ್ಮಿಕ ವಾಗಿ ಕೈ ಗಾಯಗೊಂಡಾಗ ದ್ರೌಪದಿ ಯು ಹೆಚ್ಚಿನ ಗಾಯವನ್ನು ತಪ್ಪಿಸುವ ಸಲುವಾಗಿ ಕೃಷ್ಣನ ಕೈ ಗೆ ಬಟ್ಟೆಯನ್ನು ಕಟ್ಟಿ ಹೆಚ್ಚಿನ ರಕ್ತ ಹೊರಬಾರದಂತೆ ತಡೆಯುತ್ತಾಳೆ.ದ್ರೌಪದಿಯ ಈ ಸೇವೆಯಿಂದ ತೃಪ್ತ ನಾದ ಕೃಷ್ಣನು ಜಗತ್ತು ಇದನ್ನು ನೆನಪಿಟ್ಟುಕೊಳ್ಳಬೇಕು ಎಂಬ ಸಲುವಾಗಿ 'ರಕ್ಷಾ ಸೂತ್ರ'ಎಂದು ಕರೆಯುತ್ತಾನೆ.ಹಾಗೂ ದುಷ್ಯಾಶನನು ದ್ರೌಪದಿಯ ಸೀರೆ ಎಳೆಯುವ ಸಂದರ್ಭದಲ್ಲಿ ಶ್ರೀಕೃಷ್ಣ ದ್ರೌಪದಿಯ ಮಾನ ಕಾಪಾಡಿ ಆ ಮೂಲಕ ತನಗೆ ರಾಖಿ ಕಟ್ಟಿದ ಸಹೋದರಿಯ ಮಾನ ರಕ್ಷಣೆ ಮಾಡುತ್ತಾನೆ.
ಇಂತಹ ಹಲವಾರು ಕಥೆಗಳನ್ನು ನಾವು ಪುರಾಣಗಳಲ್ಲಿ ಕಾಣಬಹುದಾಗಿದೆ. ಇವೆಲ್ಲವುಗಳ ಒಟ್ಟು ಸಾರ ಏನೆಂದರೆ ಪ್ರತಿಯೊಬ್ಬ ಸಹೋದರನು ತನ್ನ ಸಹೋದರಿಯ ರಕ್ಷಣೆಯನ್ನು ಯಾವುದೇ ಸಂದರ್ಭದಲ್ಲಿ ನಿರ್ವಹಿಸುತ್ತಾನೆ ಎಂಬುವುದಾಗಿದೆ.
ರಕ್ಷಾಬಂಧನದ ದಿವಸ ಸಹೋದರಿಯು ಸಹೋದರನಿಗೆ ರಾಖಿ ಕಟ್ಟಿ ಉಡುಗೊರೆಗಳನ್ನು ಪಡೆದುಕೊಳ್ಳುವ ಪದ್ಧತಿಯು ಕೂಡ ಇದೆ. ಕೆಲವೊಬ್ಬರು ಉಡುಗೊರೆಗಳನ್ನು ಪಡೆದುಕೊಳ್ಳಲೆಂದೇ ರಾಖಿ ಕಟ್ಟುವವರು ಕೂಡ ಇದ್ದಾರೆ.
ನಾವು ಕಾಣುವ ಎಲ್ಲಾ ಸಂಬಂಧಗಳಲ್ಲಿಯೂ ಅತೀ ಶ್ರೇಷ್ಠವಾದ ಹಾಗೂ ಅನ್ಯೋನ್ಯತೆಯುಳ್ಳ ಬಂಧ ಎಂದರೆ ಅದು ಅಣ್ಣ-ತಂಗಿ ಬಾಂಧವ್ಯ.
ಕೆಲವೊಂದು ಒಡಹುಟ್ಟಿದ ಸಂಬಂಧಗಳಾಗಿದ್ದರೆ, ಇನ್ನು ಕೆಲವೊಂದು ರಕ್ತಸಂಬಂಧಕ್ಕೂ ಮೀರಿದ ಬಂಧವಾಗಿರುತ್ತದೆ. ಯಾಕೆಂದರೆ ಅಣ್ಣ ತಂಗಿ ಎಂದು ಕರೆಯಲು ಒಡಹುಟ್ಟಿದವರೇ ಆಗಬೇಕೆಂದೇನಿಲ್ಲಾ. ಯಾರಿಗೆಲ್ಲಾ ಆ ಸಂಬಂಧದ ಮೌಲ್ಯ ಹಾಗೂ ಅರ್ಥದ ಅರಿವು ಇರುತ್ತದೆಯೋ ಅವರೆಲ್ಲಾ ಕೂಡ ಅಣ್ಣ ತಂಗಿಯೇ.
ಕೆಲವೊಂದು ಸಂಬಂಧಗಳು ಯಾವ ರೀತಿಯದ್ದಾಗಿರುತ್ತದೆ ಎಂದರೆ ಸ್ವಂತ ಅಣ್ಣತಂಗಿ ಗಿಂತಲೂ ಹೆಚ್ಚು ಬಾಂಧವ್ಯವು ಅವರ ನಡುವನದಿ ಬೆಸೆದಿರುತ್ತದೆ.
ತನ್ನ ಒಡಹುಟ್ಟಿದ ತಂಗಿಂತಲೂ ಹೆಚ್ಚು ಪ್ರೀತಿಕಾಳಜಿಯನ್ನು ಆತ ತನ್ನ ತಂಗಿಯ ಮೇಲೆ ತೋರಿಸುತ್ತಾನೆ ಹಾಗೂ ತನ್ನ ಸ್ವಂತ ಅಣ್ಣನಿಗಿಂತಲೂ ಹೆಚ್ಚಾಗಿ ಆಕೆ ಆತನನ್ನು ಗೌರವಿಸುತ್ತಾಳೆ.
ನನ್ನ ಪ್ರಕಾರ ಅಣ್ಣ ತಂಗಿ ಎಂದಾಗಬೇಕಿದ್ದರೆ ಜೊತೆಯಾಗಿಯೇ ಹುಟ್ಟಬೇಕು ಎಂದೇನಿಲ್ಲಾ.
ಒಡಹುಟ್ಟಿದವರಿಲ್ಲದವರಿಗೆ ಆ ಸಂಬಂಧದ ಅರ್ಥ ಹಾಗೂ ಬೆಲೆ ನಿಜವಾಗಿಯೂ ತಿಳಿದಿರುತ್ತದೆ.
ಹೇಗೆಯೇ ಇರಲಿ ರಕ್ಷಾಬಂಧನ ದ ದಿವಸ ಪ್ರತಿಯೊಬ್ಬ ಸಹೋದರಿಯು ಕೂಡ ತನ್ನ ನೆಚ್ಚಿನ ಅಣ್ಣನಿಗೆ ಪ್ರೀತಿಯಿಂದ ರಕ್ಷೆ ಯನ್ನು ಕಟ್ಟಿ ಆಶೀರ್ವಾದ ಪಡೆಯಲು ಕಾತರದಿ ಕಾದುಕೊಂಡಿರುತ್ತಾಳೆ.
-ಪ್ರಸಾದಿನಿ.ಕೆ ತಿಂಗಳಾಡಿ
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ