ಮಣಿಪಾಲ: ಸಮುದಾಯ ಬಾನಲಿ ಕೇಂದ್ರಗಳ ಮೂಲಕ ನಮ್ಮ ಸುತ್ತಮುತ್ತಲಿನ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕು. ಅಲ್ಲದೆ ಸ್ಥಳೀಯ ಪ್ರತಿಭಾನ್ವಿತರಿಗೆ ಅವಕಾಶ ಸಿಗುವಂತಾಗಬೇಕು ಎಂದು ಮಾಹೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾಕ್ಟರ್ ಹೆಚ್ ಎಸ್ ಬಲ್ಲಾಳ್ ಹೇಳಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಾಹೆ, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮತ್ತು ರೇಡಿಯೋ ಮಣಿಪಾಲ್ ಇತ್ತೀಚೆಗೆ ಎಂ.ಐ.ಸಿಯಲ್ಲಿ ಅಯೋಜಿಸಿದ ರೇಡಿಯೋ ಮಣಿಪಾಲ್ ಆ್ಯಪ್ ಲೋಕಾರ್ಪಣೆ ಹಾಗೂ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಯುವ ಜನತೆ ಮಕ್ಕಳು ಸಮುದಾಯ ಬಾನುಲಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಗೆಲುವು ಸಾಧಿಸುವುದಕ್ಕಿಂತ ಭಾಗವಹಿಸುವುದು ಅತ್ಯಗತ್ಯ. ದೇಶಾಭಿಮಾನ ಮೂಡಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಮಣಿಪಾಲ ಸಮೂಹ ಸಂಸ್ಥೆಗಳು ಕೂಡ ಶೈಕ್ಷಣಿಕ ಆರೋಗ್ಯ ಕ್ಷೇತ್ರದಲ್ಲಿ ಹಲವು ರೀತಿಯ ಕೊಡುಗೆ ನೀಡುತ್ತಿವೆ ಎಂದರು.
ರೇಡಿಯೋ ಮಣಿಪಾಲದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ. ರಶ್ಮಿ ಅಮ್ಮೆಂಬಳ ಮಾತನಾಡಿ ರೇಡಿಯೋ ಮಣಿಪಾಲ ಆ್ಯಪ್ ಮೂಲಕ ಸಮುದಾಯದ ಸಹಕಾರದೊಂದಿಗೆ ನಿರ್ಮಾಣಗೊಳ್ಳುತ್ತಿರುವ ರೇಡಿಯೋ ಮಣಿಪಾಲದ ಕಾರ್ಯಕ್ರಮಗಳು ಜಗತ್ತಿನಾದ್ಯಂತ ಕೇಳುವುದಕ್ಕೆ 'ರೇಡಿಯೋ ಮಣಿಪಾಲ್ ಆ್ಯಪ್ " ಸಹಾಯವಾಗಲಿದೆ. ಇದು ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಲಭ್ಯ ಎಂದರು.
ಮಾಧ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥೆ ಶುಭ ಎಚ್ಎಸ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ಮಾಣ ಸಹಾಯಕರಾದ ಮಂಜುನಾಥ್ ಹಿಲಿಯಾಣ ವಂದಿಸಿದರು. ವಿದ್ಯಾರ್ಥಿನಿ ಲೆರಿಸ ಡಿ'ಸೋಜ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ