ಚಿತ್ರಕಲೆಯೊಂದಿಗೆ ರಂಗಭೂಮಿಯಲ್ಲೂ ಕ್ರಿಯಾಶೀಲ ಕಲಾವಿದ ಜಿ.ಎಸ್. ಶಿವಶಂಕರಪ್ಪ

Upayuktha
0


ಚಿತ್ರಕಲಾ ಶಿಕ್ಷಕರು ಜೊತೆಗೆ ಹವ್ಯಾಸ ಕಲಾವಿದರು ಆದ ಜಿ.ಎಸ್. ಶಿವಶಂಕರ್ ಕಾರ್ಯಕ್ರಮ ನಿರೂಪಣೆಯಲ್ಲೂ ನಿಪುಣರು. ನಾನು ಚಿತ್ರ ಕಲಾವಿದರ ಕುರಿತಾದ ಪ್ರಕೃತಿ ವಿಕೃತಿ ಕಲಾಕೃತಿ ಪುಸ್ತಕ ಪ್ರಕಟಿಸುವ ಕಾಲಕ್ಕೆ ಇವರ ಪರಿಚಯ ನನಗಿರಲಿಲ್ಲ. ಅದಾಗಿ ಇತ್ತೀಚೆಗೆ ಕೆಲವು ಚಿತ್ರ ಕಲಾವಿದರ ಕುರಿತಾಗಿ ಲೇಖನ ಬರೆಯುತ್ತಾ ಅವುಗಳನ್ನು ಜಿಲ್ಲಾ ಚಿತ್ರ ಕಲಾವಿದರ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದೆ. ಇದಕ್ಕೆ ಮೆಚ್ಚುಗೆಯ ನುಡಿ ಸಾಲುಗಳ ಆಡಿಯೋ ರೆಕಾರ್ಡ್ ಶೇರ್ ಮಾಡಿದ್ದ ಶಿವಶಂಕರಪ್ಪನವರು ಓರ್ವ ಕಲಾವಿದರು ಎಂಬುದು ನನಗೆ ತಿಳಿದಿತ್ತು. ನಿಮ್ಮ ಕಲಾ ಪರಿಚಯ ಕಳಿಸಿ ಶಿವು ಎಂದು ಮೆಸೇಜ್ ಹಾಕಿದೆ. ಶಿವು ತಮ್ಮ ಕಲಾಕೃತಿಗಳೊಂದಿಗೆ ಹಂಚಿಕೊಂಡ ಮಾಹಿತಿ ಆಸಕ್ತಿದಾಯಕವಾಗಿತ್ತು.


ಶಿವಶಂಕರ್ ಚಿತ್ರ ಕಲಾವಿದರು. ಪ್ರಸ್ತುತ ಚನ್ನರಾಯಪಟ್ಟಣದ ಗಿರಿ ಕ್ಷೇತ್ರ ಎಂಬ ಸ್ಥಳದಲ್ಲಿ ಇರುವ ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಇಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೇಲೂರು ತಾಲೂಕು ಹಳೇಬೀಡು ಹೋಬಳಿ ಗೋಣಿ ಸೋಮನಹಳ್ಳಿ ಎಂಬ ಗ್ರಾಮದಲ್ಲಿ ದಿನಾಂಕ 20.04.1974 ರಂದು ಚಿಕ್ಕಮ್ಮ ಮತ್ತು ಸಿದ್ದಯ್ಯ ಎಂಬ ದಂಪತಿಗೆ ಮೂರನೇ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿ ನಂತರ ಮಡಿಕೇರಿ ಜಿಲ್ಲೆ ನಾಪೋಕ್ಲುನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ ಕಾಲೇಜು ಶಿಕ್ಷಣವನ್ನು ಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿ ನಂತರ ಚಿತ್ರಕಲಾ ಪದವಿಯನ್ನು ಶ್ರೀ ಶಾಂತಲಾ ಕಲಾ ಶಾಲೆಯಲ್ಲಿ ಮಾಡಿದರು.


ದಿನಾಂಕ 11-6-1995ರಲ್ಲಿ ಚನ್ನರಾಯಪಟ್ಟಣದ ಗೌತಮ ಪ್ರೌಢಶಾಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ಅವರದು ಅತ್ಯಂತ ಕಡು ಬಡತನದ ಕುಟುಂಬ. ಒಟ್ಟಾರೆ ಹೇಳಬೇಕೆಂದರೆ ಜೀತಗಾರರ ಕುಟುಂಬ, ಅವರು ಚಿತ್ರ ಕಲಾವಿದನಾಗಿ ಬದುಕನ್ನು ಹಸನುಗೊಳಿಸಲು ಆಯ್ಕೆ ಮಾಡಿಕೊಂಡ ಪುಣ್ಯ ಕ್ಷೇತ್ರ ಚಿತ್ರ ಕಲೆ ಎಂದು ಭಾವಿಸಿದ್ದಾರೆ. ಒಬ್ಬ ಬಡತನದ ಹುಡುಗ ಚಿತ್ರಕಲೆಯನ್ನು ಆಶ್ರಯಿಸಿಕೊಂಡರೆ ಅವನು ಜೀವನದಲ್ಲಿ ಶ್ರೇಯಸ್ಸನ್ನು ಗಳಿಸಬಹುದು ಎಂಬುದಕ್ಕೆ ಶಿವಶಂಕರ್ ಅವರೇ ಜೀವಂತ ಸಾಕ್ಷಿ.


ಗುರುಗಳಾದ ಎಂ.ಹೆಚ್. ಉಪ್ಪಿನ್ ಹಾಗೂ ವೈ.ಎಚ್. ಜಯರಾಮ್ ಇವರ ಮಾರ್ಗದರ್ಶನದಲ್ಲಿ ಹಲವಾರು ಕಲಾ ಪ್ರೌಢಿಮೆ ತೋರಿ ಕಲಾ ಲೋಕಕ್ಕೆ ಬಹು ವಿಧ ಸೇವೆ ಸಲ್ಲಿಸಿದ್ದಾರೆ. ಅವರು ಅನೇಕ ವೈಯಕ್ತಿಕ  ವಿಶೇಷ ಚಿತ್ರಕಲೆಯ ಕೆಲಸ ನಿರ್ವಹಿಸಿದ್ದಾರೆ. ಪ್ರಮುಖವಾಗಿ 2016ರಲ್ಲಿ ಮಂತ್ರಾಲಯದಲ್ಲಿ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಮಧ್ವಾಚಾರ್ಯರ ಜೀವನ ಚರಿತ್ರೆಯನ್ನು ರಚಿಸಿ ಕಾಲ ಇತಿಹಾಸಕ್ಕೆ ಪೂರಕವಾಗಿ ಚಿತ್ರಿಸಿರುತ್ತಾರೆ.



ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜರುಗಿದ ಡಾ. ಶಿವಕುಮಾರ ಸ್ವಾಮೀಜಿಯವರ 108ನೇ ಜನ್ಮ ಜಯಂತಿ ದಿನಾಚರಣೆಯಲ್ಲಿ ಅವರ 108 ಕಲಾಕೃತಿಗಳನ್ನು ರಚಿಸಿದ್ದರು. ಡಾ. ರಾಜಕುಮಾರ್, ಪುನೀತ್ ರಾಜಕುಮಾರ್  ಭಾವಚಿತ್ರಗಳನ್ನು ರಚಿಸಿದ್ದಾರೆ. ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಮೆರವಣಿಗೆಯ ಹಾಗೂ ಮೆರವಣಿಗೆಗೆ ಸಿದ್ಧಪಡಿಸಿದ ಸುಮಾರು 600 ಕುಂಭಗಳನ್ನು ಮತ್ತು ಗೋಡೆ ಬರಹಗಳನ್ನು ಚಿತ್ರಿಸಿ ಇಡೀ ಶ್ರವಣಬೆಳಗೊಳ ಕಂಗೊಳಿಸುವಂತೆ ಕಲಾ ಕೌಶಲ್ಯದಿಂದ ಜನತೆ ಮೆಚ್ಚುಗೆ ಗಳಿಸಿದ್ದರು. ಕೋವಿಡ್ ಸಂದರ್ಭ ಇಡೀ ನಮ್ಮ ಶಾಲೆಯನ್ನು ಕೋವಿಡ್ ಜಾಗೃತಿ ಚಿತ್ರ ರಚಿಸಿ ದೇಶದ ಗಮನ ಸೆಳೆದಿದ್ದಾರೆ. ಶ್ರೀರಾಮನ ಮೂರ್ತಿ, ಭಾರತಾಂಬೆಯ ಮೂರ್ತಿ, ಗೊಮ್ಮಟೇಶ್ವರನ ಮೂರ್ತಿ ನಿರ್ಮಾಣ ಮಾಡಿ ಧಾರ್ಮಿಕವಾಗಿಯೂ ಕೆಲಸ ನಿರ್ವಹಿಸಿದ್ದಾರೆ.


ಶಿವಶಂಕರ್ ಅವರು ಅನೇಕ ನಾಟಕಗಳಲ್ಲಿ ಹತ್ತಾರು ವೈವಿಧ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾಲ್ಕು ಲಿಮ್ಕಾ ದಾಖಲೆಗಳನ್ನು ಎರಡು ಅಂತರಾಷ್ಟ್ರೀಯ ದಾಖಲೆಗಳನ್ನು ಮಾಡಿದ್ದಾರೆ. ಸುಮಾರು 60 ನಾಟಕಗಳಲ್ಲಿ  ನಟಿಸಿರುದ್ದಾರೆ. ಉಡುಪಿ, ಮುಂಬಯಿ, ಬೆಂಗಳೂರು ಮುಂತಾಗಿ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಪೌರಾಣಿಕ ನಾಟಕದಲ್ಲಿ ಶಕುನಿ ಪಾತ್ರ ನಿರ್ವಹಿಸಿರುತ್ತಾರೆ. ಕವನಗಳನ್ನು ಬರೆದಿದ್ದಾರೆ. ಅವು ಕೆಲವು ಪುಸ್ತಕಗಳಲ್ಲಿ ಮುದ್ರಿತವಾಗಿವೆ. ಸಿನಿಮಾದಲ್ಲೂ ನಟಿಸಿದ್ದಾರೆ. ಬರಗೂರು ರಾಮಚಂದ್ರಪ್ಪನವರ ಉಗ್ರಗಾಮಿ ಹಾಗೂ ಹೆಬ್ಬಟ್ಟು ರಾಮಕ್ಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರೂಪಕ ಭಾಷಣಕಾರನಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸುಮಾರು 40 ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ, 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಅನೇಕ ಕಲಾಕೃತಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಶೇಖರಣೆಗೊಂಡಿವೆ. ಜನಪದ ಶೈಲಿಯ ವರ್ಲಿ ಕೃತಿಗಳನ್ನು ರಚಿಸಲು ಅನುಭವ ಪಡೆದಿದ್ದು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದರು.


ಇವರ ಕಲಾಸೇವೆಗೆ ಹಲವು ಪ್ರಶಸ್ತಿಗಳು ಸಂದಿವೆ. ಚಿತ್ರಕಲಾ ಸಾಮ್ರಾಟ್ ಬಿರುದು ಒಳಗೊಂಡು ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2018ರಲ್ಲಿ ಹಾಸನ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.


- ಗೊರೂರು ಅನಂತರಾಜು, ಹಾಸನ

9449462879


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top