ಮುಂಜಾನೆ ನಾಗರ ಪಂಚಮಿಯ ಸಂಭ್ರಮ. ನಾಗದೇವರಿಗೆ ಪೂಜೆ, ಹಾಲೆರೆಯುವ ಕಾರ್ಯಕ್ರಮಕ್ಕೆ ಪ್ರತಿ ಮನೆಯಲ್ಲೂ ತಯಾರಿ ನಡೆಯುತ್ತಿತ್ತು. ಈ ಸಂಭ್ರಮದ ನಡುವೆ ಮನೆ-ಮನೆಯಲ್ಲೂ ಸುದ್ದಿಯೊಂದು ಪಿಸುಗುಡುತ್ತಿತ್ತು. ಸೂರ್ಯನ ಬೆಳಕು ಹರಿದಂತೆ, ಸಾವಿನ ಸುದ್ದಿಯೊಂದು ಊರಿಗೆಲ್ಲಾ ಹಬ್ಬಿತ್ತು. ವಿಧಿಯ ಆಟಕ್ಕೆ ಹೃದಯಾಘಾತ ಎಂಬ ನೆಪದಲ್ಲಿ ನಿಷ್ಟಾವಂತ ವ್ಯಕ್ತಿತ್ವ ತನ್ನ ಬಾಳ ಪಯಣವನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿತ್ತು.
ನಮ್ಮ ನಿಮ್ಮೆಲ್ಲರ ಜೊತೆ ಖುಶಿ ಖುಶಿಯಾಗಿ ಮಾತಾನಾಡುತ್ತಿದ್ದ ಜೀವಗಳು ಮರುಕ್ಷಣ ಇಲ್ಲ ಅಂದರೆ ಯಾವ ಮನಸ್ಸಿಗೆ ತಾನೇ ಒಪ್ಪಲಾಗುವುದು ಹೇಳಿ. ತಮ್ಮ ಆತ್ಮಿಯರು ಇನ್ನಿಲ್ಲ ಎಂಬುವುದನ್ನು ನಂಬುವುದಾದರೂ ಹೇಗೆ..?
ಹೌದು! ಇತ್ತಿಚಿನ ಸಾವಿನ ಪ್ರಕರಣಗಳೇ ಹಾಗಿವೆ. ಯಾರಿಗೂ ಅರಗಿಸಿಕೊಳ್ಳಲಾಗದ, ನಂಬಲಾಗದ ಪರಿಸ್ಥಿತಿ. ತಮಗೆ ಆತ್ಮೀಯಲ್ಲದಿದ್ದರೂ ಈ ಸಾವಿನ ಸುದ್ದಿ ಪ್ರತಿಯೊಬ್ಬರ ಎದೆ ನಡುಗಿಸುತ್ತವೆ, ಮೌನವಾಗಿಸುತ್ತದೆ. ಕಾರಣ ಅತೀ ಚಿಕ್ಕ ವಯಸ್ಸಿನಲ್ಲಿಯೇ ಕಾಡುತ್ತಿರುವ ಹೃದಯಾಘಾತ. ತಂದೆ-ತಾಯಿಗಾಗಿ, ಗಂಡನಿಗಾಗಿ, ಹೆಂಡತಿಗಾಗಿ, ಅಕ್ಕ ತಮ್ಮನಿಗಾಗಿ, ಅಣ್ಣ ತಂಗಿಗಾಗಿ, ಮಕ್ಕಳಿಗಾಗಿ ಮಿಡಿಯುತ್ತಿದ್ದ ಹೃದಯಗಳೇ ತಮ್ಮ ಬಡಿತವನ್ನು ನಿಲ್ಲಿಸುತ್ತಿವೆ. ಈಗ ತಾನೇ ಆಡಿದ ಮಾತುಗಳು ಹಾಗೇ ಸುಮ್ಮನೆ ಮೌನವಾಗುತ್ತಿವೆ. ಕಳೆದ ದಿನಗಳೆಲ್ಲ ಶಾಶ್ವತ ನೆನಪಾಗಿ ಉಳಿದುಬಿಡುತ್ತಿವೆ.
ಬಾಳಿ ಬದುಕಬೇಕಾಗಿದ್ದ, ಸುಂದರ ಕನಸುಗಳನ್ನು ಹೊತ್ತ ಅದೆಷ್ಟೊ ಜೀವಗಳ ಬಾಳ ಪಯಣವು ಅರ್ಧ ದಾರಿಯಲ್ಲೇ ನಿಂತು ಹೋಗುತ್ತಿವೆ. ಇದನ್ನು ಕಂಡ ಅದೆಷ್ಟೋ ಹಿರಿಯ ಜೀವಗಳು, ಹೇ ! ವಿಧಿಯೇ ನೀನೆಷ್ಟು ಕ್ರೂರಿಯೆಂದು ಮರುಗುತ್ತಿವೆ. ಯಾರು, ಯಾವಾಗ ಏನಾಗುತ್ತದೋ ಎಂದು ಹೇಳಲಾಗದ ಕಾಲವಿದು. ಆದರೂ ನಾಳೆಯ ನಂಬಿಕೆಯಲ್ಲಿ ಇಂದಿನ ಬದುಕು ಸಾಗುತ್ತಿದೆ.
-ಭಾಗ್ಯಶ್ರೀ ಕಲ್ಲಡ್ಕ
ಗೋಳಿತ್ತಟ್ಟು
ವಿವೇಕಾನಂದ ಕಾಲೇಜು, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ