ಗೋಕರ್ಣ: ಮಾರ್ಗದರ್ಶನದ ಕೊರತೆಯಿಂದ ಯುವಜನಾಂಗ ದಾರಿ ತಪ್ಪುತ್ತಿದ್ದು, ಭಾರತೀಯತೆ, ಬ್ರಾಹ್ಮಣ್ಯ ಹಾಗೂ ಹವ್ಯಕತ್ವವನ್ನು ನಮ್ಮ ಸಮಾಜದ ಯುವಜನತೆಯಲ್ಲಿ ತುಂಬುವ ಕೆಲಸ ಆಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು ಬುಧವಾರ ಮುಳ್ಳೇರಿಯ ಮಂಡಲದ ಸುಳ್ಯ, ಗುತ್ತಿಗಾರು, ಈಶ್ವರಮಂಗಲ ಮತ್ತು ಕೊಡಗು ವಲಯಗಳ ಶಿಷ್ಯಭಕ್ತರಿಂದ ಗುರುಭಿಕ್ಷಾ ಸೇವೆ ಸ್ವೀಕರಿಸಿ ವಲಯಗಳ ಶಿಷ್ಯಭಕ್ತರಿಗೆ ಮಾರ್ಗದರ್ಶನ ನೀಡಿದರು.
ಹವ್ಯಕ ಸಮಾಜ ಅತ್ಯಂತ ಶ್ರೇಷ್ಠ ಸಮುದಾಯಗಳಲ್ಲೊಂದು. ಅನೇಕ ಮಂದಿ ಮೇಧಾವಿಗಳು ದೇಶದ ಎಲ್ಲೆಡೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇಂಥ ಸಮಾಜ ಇಂದು ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಸಮಾಜದಲ್ಲಿ ಸಂಖ್ಯೆ ಕ್ಷೀಣಿಸುತ್ತಿರುವುದು ಒಂದು ಸಮಸ್ಯೆಯಾದರೆ, ನಮ್ಮ ಆಚಾರ- ವಿಚಾರ, ಆಹಾರ- ವಿಹಾರ, ಸಂಸ್ಕøತಿ- ಸಂಪ್ರದಾಯ ನಾಶವಾಗುತ್ತಿದೆ. ಆಧುನಿಕ ಶಿಕ್ಷಣದ ನೆಪದಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇಂಥ ಸಮಾಜ ಕ್ಷೀಣಿಸುವ ಮುನ್ನ ನಾವು ಎಚ್ಚೆತ್ತುಕೊಂಡು ನಮ್ಮ ಸಂಸ್ಕೃತಿಯ ಸಾರವನ್ನು ಯುವಜನತೆಯಲ್ಲಿ ತುಂಬುವ ಕಾರ್ಯ ಆಗಬೇಕು ಎಂದು ಆಶಿಸಿದರು.
ಆಧುನಿಕ ಶಿಕ್ಷಣದ ಜತೆಜತೆಗೆ ಪಾರಂಪರಿಕ ಶಿಕ್ಷಣವನ್ನೂ ನೀಡುವ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಪ್ರಯತ್ನವೇ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ಥಾಪನೆಗೆ ಮೂಲ ಕಾರಣ. ಮುಂದಿನ ದಿನಗಳಲ್ಲಿ ಹವ್ಯಕ ಸಮಾಜದ ಎಲ್ಲ ಮಕ್ಕಳು ಕನಿಷ್ಠ ಪಿಯುಸಿವರೆಗೆ ಇಲ್ಲಿಯೇ ಶಿಕ್ಷಣವನ್ನು ಪಡೆದು ಸಮಾಜದ ಆಸ್ತಿಯಾಗಿ ಬೆಳೆಯಬೇಕು. ಹವ್ಯಕ ಮಕ್ಕಳು ಅಪೇಕ್ಷಿಸುವ ಇತರ ಪದವಿ, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ನಮ್ಮ ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಬೇಕಾದ್ದು ನಮ್ಮೆಲ್ಲರ ಹೊಣೆ. ಈ ಹಿನ್ನೆಲೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಬೆಳೆಸುವ ಪ್ರಯತ್ನದಲ್ಲಿ ಇಡೀ ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‍ಜಿ ಭಟ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಉಪಾಧ್ಯಕ್ಷ ನಾರಾಯಣಮೂರ್ತಿ, ದೇವಕಿ ಭಟ್ ಪನ್ನೆ ಉಪಸ್ಥಿತರಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವೇದಮೂರ್ತಿ ನಾಗರಾಜ ಭಟ್ಟ, ಪಿಲಿಂಗುಳಿ ಕೃಷ್ಣ ಶರ್ಮಾ, ಡಾ.ನಾರಾಯಣ ಭಟ್ ಕಲ್ಚಾರು, ಡಾ.ರಾಧಾಕೃಷ್ಣ ಡಿ.ಎನ್, ನರಸಿಂಹ ಭಟ್ ಕೆ, ಯನ್. ಕೇಶವ ಭಟ್ ನಿಡುಗಳ, ಕೇಶವ ಜೋಯಿಸರು ಕರುವಜೆ, ಸುಬ್ರಾಯ ಭಟ್ ಮಾಫಲತೋಟ, ಶ್ರೀಗೋಪಾಲಕೃಷ್ಣ ಭಟ್ ಪನ್ನೆ, ಶ್ರೀ ನಾರಾಯಣಯ್ಯ ಕಟ್ಟ, ಬಾಲಕೃಷ್ಣ ಶರ್ಮ ಶೇಡಿಗುಳಿ, ಗೋಪಾಲಕೃಷ್ಣ ಭಟ್ ನೆಕ್ಕರೆಕಾಡು, ಎಂ.ಯನ್. ಹರೀಶ್,ಕೊಡಗು, ವಿಷ್ಣುಭಟ್ ಪೆರುಂಬಾರು, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ನರಸಿಂಹ ಭಟ್, ಕೆ ಅವರಿಗೆ ಸಾಧಕ ಸನ್ಮಾನ ಗೌರವ ನೀಡಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ