ರಕ್ಷಣೆಯ ಕಂಕಣ – ರಕ್ಷಾಬಂಧನ

Upayuktha
0

 ಆ 31,  ಶ್ರಾವಣ ಪೂರ್ಣಿಮೆ ತನ್ನಿಮಿತ್ತ  ಸಕಾಲಿಕ ಚಿಂತನೆ 




ಶ್ರಾವಣಮಾಸದ ಹುಣ್ಣಿಮೆಯ ದಿನದಂದು ಆಚರಿಸಲ್ಪಡುವ ರಕ್ಷಾಬಂಧನದ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ರಕ್ಷೆ, ರಕ್ಷಾಬಂಧನ, ರಾಖಿ ಎಂದು ಕರೆಯುವ ಈ ಹಬ್ಬವನ್ನು ನೂಲು ಹುಣ್ಣಿಮೆ ಅಥವಾ ಶ್ರಾವಣ ಮಾಸದ ಹುಣ್ಣಿಮೆಯ ಹಬ್ಬವೆಂದು ಆಚರಿಸುತ್ತಾರೆ. ಕಾಲಕಾಲಕ್ಕೆ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಅವಶ್ಯಕವಾಗಿ ನಮ್ಮಲ್ಲಿರಬೇಕಾದ ಮಾನಸಿಕ ಸ್ಥೈರ್ಯ ಮತ್ತು ದೈಹಿಕ ಬಲದ ಅವಶ್ಯಕತೆಯನ್ನು ರಕ್ಷಾಬಂಧನದ ಅನೇಕ ಉಲ್ಲೇಖಗಳಿವೆ. 


ರಕ್ಷೆಯನ್ನು ಯಾರಿಗಾದರೂ ಕಟ್ಟಬಹುದು. ಹೀಗೆ ಕಟ್ಟುವುದರ ಮೂಲಕ ಪರಸ್ಪರ ರಕ್ಷಣೆಯನ್ನು ಹೊಣೆಯೊಂದಿಗೆ ದೇಶದ ಅಭ್ಯುದಯವನ್ನು ಕೋರಿ ಅದರತ್ತ ಕಾರ್ಯತತ್ಪರವಾಗುವ ಸಂಕಲ್ಪವೂ ಬಹು ಮುಖ್ಯ. ವಿಶ್ವದೆಲ್ಲೆಡೆ ಸದಾ ಶಾಂತಿ ಮತ್ತು ಸಮೃದ್ಧಿಯನ್ನೇ ಬಯಸುವ ಲೋಕಾಃ ಸಮಸ್ತಾ ಸುಖಿನೋಭವಂತು ಎಂದು ಹರಸುವ ಏಕೈಕ ದೇಶ ನಮ್ಮ ಹೆಮ್ಮೆಯ ಭಾರತ. ತಪೋಭೂಮಿ ಭಾರತದಲ್ಲಿ ಆಕ್ರಮಣಗೈದ ಶತ್ರುಗಳೂ ಬೆರಗಾಗಿ ಸೋತು ಶರಣಾಗುವಂತೆ ಮಾಡಿದ ವೀರರ ಪರಂಪರೆಯನ್ನು ನಮ್ಮ ಇತಿಹಾಸ ಕಂಡಿದೆ. 


ವೇದಕಾಲದಿಂದ ಆಧುನಿಕ ಯುಗದವರೆಗೆ ಇಲ್ಲಿ ನಡದ ಸಾಹಸ ಗಾಥೆಗಳು ಮತ್ತು ಘಟನಾವಳಿಗಳು ಇದಕ್ಕೆ ಪೂರಕವಾಗಿವೆ. ದೇವಾಸುರ ಯುದ್ಧದ ಸಮಯದಲ್ಲಿ ದೇವತೆಗಳ ದೊರೆ ಇಂದ್ರನಿಗೂ ವೃತ್ರಾಸುರನಿಗೂ ಭಿಕರ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಇಂದ್ರ ಸೋಲುವ ಹಂತ ತಲುಪಿದೆ. ದೇವತೆಗಳು ಗುರು ಬೃಹಸ್ಪøತಿಗಳ ಆಜ್ಞೆಯ ಮೇರೆಗೆ  ಶ್ರಾವಣ ಪೌರ್ಣಮಿಯಂದು ಮಂತ್ರಯುಕ್ತವಾಗಿ ಪೂಜಿಸಲ್ಪಟ್ಟ ರಕ್ಷೆಯನ್ನು ಇಂದ್ರನ ಪತ್ನಿ ಶಚಿ ಅವನ ಕೈಗೆ ಕಟ್ಟಿದಳು. ಯುದ್ಧದಲ್ಲಿ ವೃತ್ರಾಸುರನನ್ನು ಕೊಂದು ಇಂದ್ರ ಜಯಶಾಲಿಯಾದ. ವಿಷ್ಣುವಿನ ಪರಮಭಕ್ತನಾಗಿದ್ದ ಬಲಿ ಚಕ್ರವರ್ತಿಗೆ ಅವನ ದಾನಗುಣವನ್ನು ಮೆಚ್ಚಿ ವರ ನೀಡಿದ ವಿಷ್ಣು, ಅವನ ದ್ವಾರವನ್ನು ಕಾಪಾಡುವ ಭರವಸೆಯಿತ್ತ. ಮಾರುವೇಷದಲ್ಲಿ ಅವನ ಅರಮನೆಗೆ ಬಂದಿದ್ದ ಮಹಾಲಕ್ಷ್ಮಿಯ ಆಗಮದೊಂದಿಗೆ ಅರಮನೆ ಸಕಲ ವೈಭೋಗ ಮತ್ತು ಐಶ್ವರ್ಯವನ್ನು ಪಡೆಯಿತು. ಶ್ರಾವಣ ಪೌರ್ಣಮಿಯ ದಿನ ಮಹಾಲಕ್ಷ್ಮಿ ಬಲಿಯ ಕೈಗೆ ರಕ್ಷಣೆಯ ದ್ಯೋತಕವಾಗಿ ರಕ್ಷೆ ಕಟ್ಟಿದಳು. 


ಮಹಾಭಾರತದಲ್ಲಿ ಪಾಂಡವರು ವಿಜಯಶಾಲಿಗಳಾಗಿ ರಾಜಸೂಯ ಯಾಗವನ್ನು ಏರ್ಪಡಿಸಿದ್ದು ಆಗ್ರಪೂಜೆಯನ್ನು ಶ್ರೀಕೃಷ್ಣನಿಗೇ ಅರ್ಪಿಸಬೇಕೆಂದು ನಿರ್ಧರಿಸಿ ಆಗಿತ್ತು. ಯಜ್ಞ ಸಮಾಪ್ತಿಯ ಸಮಯ ಬಂದು ಅಗ್ರಪೂಜೆಯನ್ನು ಕೃಷ್ಣನಿಗೆ ನೆರವೇರಿಸಬೇಕೆಂದು ಧರ್ಮರಾಯ ಮುಂದಾದಾಗ ಶಿಶುಪಾಲ ಒಂದೇ ಸಮನೆ ಕೃಷ್ಣನನ್ನು ನಿಂದಿಸಲಾರಂಭಿಸಿದ. ಅವನ ತಾಯಿಗೆ ತಾನು ಕೊಟ್ಟಿದ್ದ ವಚನದಂತೆ ಕೃಷ್ಣ. ನೂರ ಒಂದನೆಯ ಘೋರ ನಿಂದನೆಯನ್ನು ಆಲಿಸಿದ ಕೂಡಲೇ ಸುದರ್ಶನ ಚಕ್ರವನ್ನು ನೆನೆಸಿದ. ಮಿಂಚಿನ ವೇಗದಲ್ಲಿ ಕೃಷ್ಣನ ಬಲಗೈ ತೋರುಬೆರಳಲ್ಲಿ ಪ್ರಯೋಗ ಚಕ್ರವಾಗಿ ನಿಂತಿತು. ವೇಗವಾಗಿ ಸರಿದ ಚಕ್ರ ಶಿಶುಪಾಲನ ಕೊರಳತ್ತ ಹರಿದು ಅವನ ತಲೆಯನ್ನ ಕತ್ತರಿಸಿ ಆಗಸಕ್ಕೆ ಹಾರಿಸಿತು. ಅತ್ತ ಶಿಶುಪಾಲನಿಗೆ ಮೋಕ್ಷವನ್ನು ಅವನು ಮತ್ತೆ ದ್ವಾರಪಾಲಕನಾಗಿ ಹಳೆಯ ಜನ್ಮದ ಅವತಾರದತ್ತ ಸಾಗಿದ. ಈ ಘಟನೆಗೆ ಪೂರಕವಾದ ಮತ್ತೊಂದು ಕಥೆಯಿದೆ. ಚಕ್ರ ಕೃಷ್ಣನ ತೋರುಬೆರಳಿಂದ ಶಿಶುಪಾಲನತ್ತ ಸಾಗಿ ಅವನ ರುಂಡವನ್ನು ಬೇಧಿಸಿದಾಗ ಅದರ ಹರಿತವಾಗಿದ್ದ ಅಲುಗು ಕೃಷ್ಣನ ಬೆರಳನ್ನು ತುಸು ಕತ್ತರಿಸಿ ಗಾಯಗೊಳಿಸಿತು. ರಕ್ತ ಹರಿಯತೊಡಗಿತು. ಎಲ್ಲರೂ ದಿಗ್ಬ್ರಾಂತರಾಗಿ ನಡೆದ ಘಟನೆಯನ್ನು ನೋಡುತ್ತಿದ್ದರು. ಯಾರಿಗೂ ಕೃಷ್ಣನನ್ನು ಉಪಚರಿಸುವ ಆಲೋಚನೆ ಬರಲಿಲ್ಲ. 


ಪಟ್ಟಾಭಿಷಿಕ್ತನಾಗಿದ್ದ ಯುಧಿಷ್ಠಿರನೊಡನೆ ಸಿಂಹಾಸನದಲ್ಲಿ ಕುಳಿತಿದ್ದ ದ್ರೌಪದಿ ತನ್ನ ಪ್ರೀತಿಯ ಸಹೋದರ ಕೃಷ್ಣನಿಗೆ ಆಗ್ರಪೂಜೆ ಸಲ್ಲಿಸುವ ಸಮಯದಲ್ಲಾದ ಆಚಾತುರ್ಯಕ್ಕೆ ಗಾಬರಿಗೊಂಡಿದ್ದಳು. ಕೃಷ್ಣನ ಕೈಯಲ್ಲಿ ರಕ್ತವನ್ನು ಕಂಡು ದುಃಖಿತಳಾಗಿ ಕೂಡಲೇ ಧಾವಿಸಿದ ದ್ರೌಪದಿ ತಾನುಟ್ಟಿದ್ದ ರೇಶಿಮೆಯ ಪೀತಾಂಬರದ ಅಂಚನ್ನು ಹರಿದು ಅವನ ಬೆರಳಿಗೆ ಕಟ್ಟಿದಳು. ರಕ್ತ ಹರಿಯುವುದು ನಿಂತಿತು. ತನ್ನ ಪ್ರೀತಿಯ ತಂಗಿಯ ಉಪಚಾರವನ್ನು ಕಂಡು ಕೃಷ್ಣ ಕೃತಜ್ಞನಾದ. 


ಮುಂದೆ ದ್ಯೂತದಲ್ಲಿ ಸೋತ ಯುಧಿಷ್ಠರ ಆಚಾತುರ್ಯದಿಂದ ತನ್ನದೆಲ್ಲವನ್ನೂ ಪಣಕ್ಕಿಟ್ಟು ಸೋತ ನಂತರ ದ್ರೌಪದಿಯನ್ನೂ ಪಣಕ್ಕಿಟ್ಟು ಸೋಲುತ್ತಾನೆ. ತುಂಬಿದ ಅರಮನೆಯಲ್ಲಿ ದಾಸಿಯಂತೆ ಅವಳನ್ನೆಳೆದು ತಂದ ದುಶ್ಯಾಸನ ರಾಜಸಭೆಯಲ್ಲಿ ಅವಳ ಸೀರೆಯನ್ನು ಸೆಳೆದು ಅಪಮಾನಿಸುತ್ತಿದ್ದಾಗ ದ್ರೌಪದಿಯನ್ನು ಅವಳ ಐವರು ಪತಿಯರು ರಕ್ಷಿಸಲಾಗಲಿಲ್ಲ. ದುಃಖ ಮತ್ತು ಅವಮಾನಗಳಿಂದ ನೊಂದ ದ್ರೌಪದಿ ತನ್ನ ಅಣ್ಣ ಶ್ರೀಕೃಷ್ಣನನ್ನು ರಕ್ಷಿಸುವಂತೆ ಗೋವಿಂದ.. ಕೃಷ್ಣ.. ದ್ವಾರಕಾವಾಸಿಯೇ.. ಎಂದು ಆರ್ತಳಾಗಿ ಬೇಡಿಕೊಂಡಾಗ ಅವಳ ರಕ್ಷಣೆಯಾಯಿತು. 


ಅಂದು ತನ್ನ ಸೀರೆಯ ಅಂಚನ್ನು ಹರಿದು ತನ್ನ ಅಣ್ಣನ ಬೆರಳಿಗೆ ಕಟ್ಟಿ ಅವನನ್ನು ರಕ್ಷಿಸಿದ ಅವಳ ಮಾನವನು ಅಕ್ಷಯ ವಸ್ತ್ರ ನೀಡುವ ಮೂಲಕ ಪ್ರತ್ಯುಪಕರಿಸಿದ ಕೃಷ್ಣ. ಅವಳನ್ನು ರಕ್ಷಿಸಿದ್ದು ತನ್ನ ನಾಮ ಮಾತ್ರವಲ್ಲ. ಅಂದು ರಾಜಸೂಯದ ಸಭೆಯಲ್ಲಿ ಬೆರಳಿನಲ್ಲಿ ರಕ್ತ ಸುರಿಯುತ್ತಿದ್ದಾಗ ಪಟ್ಟದ ರಾಣಿಯಾಗಿ ವೈಭವದಿಂದ ಧರಿಸಿದ್ದ ರೇಶಿಮೆಯ ಸೀರೆಯ ಎಳೆ ತನ್ನನ್ನು ಸದಾ ರಕ್ಷಿಸುವುದಲ್ಲದೆ ಅವಳ ಸಂಕಷ್ಟದಲ್ಲಿ ಅಕ್ಷಯ ವಸ್ತ್ರವಾಗಿ ತನ್ನ ಋಣ ತೀರಿಸಿತು ಎಂದು ಕೃಷ್ಣ ತಿಳಿಸುತ್ತಾನೆ. ತನ್ನ ಸಹೋದರಿಯಾದ ಯಮುನಾ ನದಿಯನ್ನು ಅವಳು ಕಟ್ಟಿದ ರಕ್ಷೆಗೆ ಬದ್ಧನಾಗಿ ಅವಳನ್ನು ಬಯಸಿದಾಗಲೆಲ್ಲಾ ಭೇಟಿಯಾಗುವುದಾಗಿ ಯಮಧರ್ಮ ವಚನ ನೀಡುತ್ತಾನೆ. 


ರಕ್ಷಾಬಂಧನದ ಹಿರಿಮೆಯನ್ನು ಹೇಳುವ ಅನೇಕ ಸಂಗತಿಗಳು ಚರಿತ್ರೆಯಲ್ಲಿವೆ. ನಮ್ಮ ದೇಶದ ಇತಿಹಾಸದಲ್ಲಿ ಗ್ರೀಕ್ ದೊರೆ ಅಲೆಕ್ಷಾಂಡರ್ ಪತ್ನಿ ರೊಕ್ಸಾನಾ ಭಾರತದ ದೊರೆ ಪುರೂರವನಿಗೆ ರಕ್ಷೆಯನ್ನು ಕಟ್ಟಿದಳೆಂದು ಉಲ್ಲೇಖವಿದೆ.


ನಮ್ಮ ದೇಶದ ಮೇಲೆ ದಂಡೆತ್ತಿ ಬಂದ ಅಲೆಗ್ಸಾಂಡರನ ಪತ್ನಿ ತನ್ನ ಪತಿಯನ್ನು ಸಂಹರಿಸಬಾರದೆಂದು ರಕ್ಷಣೆ ಕೋರಿ ರಾಜ ಪೌರವನನ್ನು ಬೇಡಿಕೊಳ್ಳುತ್ತಾಳೆ. ಅಲ್ಲದೇ ಪೌರವನಿಗೆ ರಕ್ಷೆಯನ್ನು ಕಟ್ಟಿ ನನ್ನ ಸಂರಕ್ಷಣೆಯ ಹೊಣೆ ನಿಮ್ಮದೆಂದು ಹೇಳುತ್ತಾರೆ. 


ಪೌರವ ತನ್ನ ಸಹೋದರಿಯೆಂದು ಸ್ವೀಕರಿಸಿದ ಮೇಲೆ ಯುದ್ಧದಲ್ಲಿ ಅಲೆಗ್ಸಾಂಡರನ ಮೇಲೆ ಎತ್ತಿದ ಖಡ್ಗವನ್ನು ಕೆಳಗಿಳಿಸಿ, ಸೋದರಿಯ ಜೀವನವನ್ನು ಉಳಿಸಿ ರಕ್ಷೆ ಕಟ್ಟಿ ನೀಡಿದ ಅಭಯವನ್ನು ಪಾಲಿಸುತ್ತಾನೆ. ಅಲೆಗ್ಸಾಂಡರನಿಗೆ ಈ ಔದಾರ್ಯ ಅಚ್ಚರಿಯನ್ನುಂಟು ಮಾಡುತ್ತದೆ.

 

ಮೊಘಲ್ ರಾಜ ಹುಮಾಯೂನನಿಗೆ ಮೇವಾಡದ ರಾಣಿ ಕರ್ಣಾವತಿ ರಕ್ಷೆ ಕಟ್ಟಿದಳು ಎನ್ನುವ ಕಥೆಯೂ ಇದೆ. ಇಂತಹ ಅನೇಕ ರಕ್ಷಾಬಂಧನ ಕಥೆಗಳು ಪ್ರಚಲಿತವಾಗಿವೆ. 


ಯುದ್ಧಕ್ಕೆ ತೆರಳುತ್ತಿದ್ದ ಸಾಮ್ರಾಟರೂ ಮತ್ತು ದೊರೆಗಳೂ ಹೋರಾಡಿ ವಿಜಯಶಾಲಿಗಳಾಗಿ ಸುರಕ್ಷಿತವಾಗಿ ಹಿಂದಿರುಗಲೆಂಬ ಸಂಕಲ್ಪದಿಂದ ವೀರ ತಿಲಕವನ್ನು  ಹಣೆಗಿಟ್ಟು ಕೈಗಳಿಗೆ ರಕ್ಷೆಯನ್ನು ಕಟ್ಟಿ ಆರತಿಯೆತ್ತಿ ಕಳುಹಿಸಿಕೊಡಲಾಗುತ್ತಿತ್ತು. ರಕ್ಷೆಯೆಂದರೆ ಅಣ್ಣನಿಗೆ ತಂಗಿ ಕಟ್ಟುವ ದಾರ ಮಾತ್ರವಲ್ಲ, ರಕ್ಷಣೆಯ ದ್ಯೋತಕವಾಗುವ ಕರದಲ್ಲಿ ಕಟ್ಟಲ್ಪಡುವ ಅರಿಸಿನ, ಕುಂಕುಮದ ದಾರ, ಹೋಮದಲ್ಲಿ ಹಣೆಗಿಡುವ ಪೂರ್ಣಾಹುತಿಯ ಕಪ್ಪು (ರಕ್ಷೆ), ಅಣ್ಣನಿಗೆ ತಂಗಿ ಕಟ್ಟುವ ರಾಖಿ ಅಥವಾ ಕೈಗೆ ಕಟ್ಟುವ ಕಂಕಣದ ದಾರವೂ ಆಗಬಹುದು. ಹೀಗೆ ರಕ್ಷಣೆಯ ದ್ಯೋತಕವಾಗಿರುವ ರಕ್ಷಾಬಂಧನ ಒಂದು ಉತ್ಸವದ ರೂಪದಲ್ಲಿ ಆಚರಿಸಲ್ಪಡುತ್ತಿದೆ. 


ರಕ್ಷೆಯನ್ನು ಯಾರು ಯಾರಿಗಾದರೂ ಕಟ್ಟಬಹುದು. ಹೀಗೆ ಕಟ್ಟುವುದರ ಮೂಲಕ ಪರಸ್ಪರ ರಕ್ಷಣೆಯ ಹೊಣೆಯೊಂದಿಗೆ ದೇಶದ ಅಭ್ಯುದಯವನ್ನು ಕೋರಿ ಅಂತೆಯೇ ನಿರತರಾಗುವ ಸಂಕಲ್ಪವೂ ಬಹು ಮುಖ್ಯ. ನಮ್ಮ ರಕ್ಷಾಬಂಧನ ಅಥವಾ ರಾಖಿಯನ್ನು ಪರಸ್ಪರ ಸಹೋದರ ಸಹೋದರಿಯರು, ಅರಿತವರು, ಬಂಧುಗಳು, ಸ್ನೇಹಿತರಷ್ಟೇ ಅಲ್ಲದೆ ಕಷ್ಟದಲ್ಲಿರುವವರಿಗೆ ನೆರವಾಗುವ, ಸ್ನೇಹ-ಸೌಹಾರ್ದತೆಯನ್ನು ಸಾರುವ ಸಂಕೇತವಾಗಬೇಕು. ಕೊರೆದ ಚಳಿಯಲ್ಲಿ ಗಡಿ ಕಾಯುತ್ತಾ ನಿಂತು ದೇಶವನ್ನು ರಕ್ಷಿಸುವ ನಮ್ಮ ಸೈನಿಕರ ರಕ್ಷಣೆಯ ಪ್ರಾರ್ಥನೆ ನಮ್ಮದಾಗಬೇಕು. ಪ್ರಕೃತಿಯ ವಿಕೋಪದ ರುದ್ರರೂಪೀ ಪ್ರವಾಹದ ಸುಳಿಗೆ ಸಿಲುಕಿ ಕಷ್ಟಕೋಟಲೆಗಳನ್ನೆದುರಿಸುತ್ತಿರುವ ಸೋದರ-ಸೋದರಿಯರನ್ನು ರಕ್ಷಿಸಲು ದೇವರಲ್ಲಿ ಪ್ರಾರ್ಥಿಸುವ ಮನಸ್ಸು ನಮ್ಮದಾಗಬೇಕು. ಎಲ್ಲರನ್ನೂ ಸುರಕ್ಷೆ ಮತ್ತು ಸ್ವರಕ್ಷಣೆಯ ಭಾವನೆಯೊಂದಿಗೆ ಬೆಸೆಯುವ ದಾರ ರಕ್ಷಾಬಂಧನವಾಗಬೇಕು. 


ರಕ್ಷಾ ಬಂಧನ ಸೌಹಾರ್ದ ಸ್ಪಂದನ

ಸ್ವಾಮಿ ವಿವೇಕಾನಂದರು ಅಮೆರಿಕೆಯ ಸರ್ವಧರ್ಮ ಸಮ್ಮೇಳನದಲ್ಲಿ ‘ನನ್ನ ಸೋದರ, ಸೋದರಿಯರೇ..’ ಎಂದು ಮಾತು ಆರಂಭಿಸಿದರು. ಇಡೀ ಜನಸ್ತೋಮ ಪುಳಕಿತವಾಯಿತು. ‘ಸೋದರ, ಸೋದರಿಯರೇ’ ಎಂಬ ಸಂಭೋದನೆ ಸಂಚಲನವನ್ನುಂಟು ಮಾಡಿತು. ವಿಶ್ವವೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬವೆಂಬ, ವಿಶಾಲಹೃದಯವೆಂಬ ಭಾವನೆಯಲ್ಲಿ ಬಾಂಧವ್ಯದ ಬಲವಿದೆ. ಸೋದರ, ಸೋದರಿಯರ ಸೌಹಾರ್ದತೆ ಭಾರತೀಯ ಸಂಸ್ಕೃತಿಯ ಹಿರಿಮೆ. ಇದನ್ನು ಸಾರುವುದಕ್ಕಾಗಿಯೇ ರಕ್ಷಾ ಬಂಧನದ ಹಬ್ಬದ ಸಂಭ್ರಮ. ಉತ್ತರ ಭಾರತದೆಲ್ಲೆಡೆ ರಕ್ಷಾಬಂಧನಕ್ಕೆ ಬಲು ಪ್ರಾತಿನಿಧ್ಯ. ದಕ್ಷಿಣ ಭಾಗದಲ್ಲಿ ಇದನ್ನು ಅಣ್ಣ ತಂಗಿಯರ ಹಬ್ಬವೆಂದು ಕರೆಯುತ್ತಾರೆ. ತಂಗಿಯಾದವಳು ಅಣ್ಣನಿಗೆ ಆರತಿ ಬೆಳಗಿ, ಕೈಗೆ ಕೇಸರಿ ರೇಶ್ಮೆಯ ನೂಲಿನಿಂದ ತಯಾರಿಸಿದ ರಕ್ಷಾ (ರಾಖಿ)ವನ್ನು ಕಟ್ಟಿ ಹರಸು ಹಾರೈಸು ಎಂದು ವಂದಿಸುತ್ತಾಳೆ. ಅಣ್ಣನು ತಂಗಿಗೆ ಉಡುಗೊರೆ ನೀಡಿ ನಿನ್ನ ಸಂರಕ್ಷಣೆಯನ್ನು ಮಾಡುತ್ತೇನೆಂದು ಅಭಯ ನೀಡುತ್ತಾನೆ. ಭಾರತದೆಲ್ಲೆಡೆ ಆಚರಿಸುವ ಸಂಭ್ರಮ ಸೌಹಾರ್ದತೆಯ ಹಬ್ಬ ಭಾರತೀಯರಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಸಂತೋಷದ ದಿನ. 


ಚಾರಿತ್ರಿಕ ಮಹತ್ವ 

ರಾಜಸ್ಥಾನದ ಚಿತ್ತೋರಘಡದಲ್ಲಿ ಸುಂದರ ತರುಣಿ ಜ್ವಾಲಾ ಎಂಬುವವಳು ರಕ್ಷಾಬಂಧನದ ದಿನವೇ ಕೈಯಲ್ಲಿ ರಕ್ಷಾಧಾರ ಹಿಡಿದು ಮನೆಯಿಂದ ಹೊರಗಡೆ ಬಂದಿದ್ದಳು ನಿರ್ಜನ ದಾರಿಯಲ್ಲಿ ಸಾಗುತ್ತಿರುವಾಗ ದರೋಡೆಕೋರನೊಬ್ಬ ಇವಳಿಗೆ ಎದುರಾದ. ಕಂಗಾಲಾದ ಜ್ವಾಲಾ ಇದ್ದು ಬಿದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ಆತನ ಬಳಿ ‘ಅಣ್ಣಾ, ಈ ತಂಗಿಯ ಸಂರಕ್ಷಣೆ ಹೊಣೆ ನಿನ್ನದು’ ಎಂದು ರಕ್ಷೆ ಕಟ್ಟುತ್ತಾಳೆ. ಹಾಗೆಯೇ ಕಾಲಿಗೆ ಬೀಳುತ್ತಾಳೆ. ಆಗ ಅವಳ ಮೈಮೇಲೆ ನೀರ ಹನಿ ಬೀಳುತ್ತದೆ. ತಲೆಯೆತ್ತಿ ನೋಡಿದಾಗ ನಿರ್ದಯಿ ದರೋಡೆಕೋರನ ಕಣ್ಣಲ್ಲಿ ನೀರು ಸುರಿಯುತ್ತಿದೆ. ಆತ ಹೇಳುತ್ತಾನೆ – ‘ಇದುವರೆಗೂ ಯರೊಬ್ಬರೂ ನನಗೆ ಅಣ್ಣಾ ಎಂದು ಕರೆಯಲ್ಲೇ ಇಲ್ಲ. ಈ ನಿನ್ನ ಪ್ರೀತಿಗೆ ನನ್ನಲ್ಲಿ ಮಾತೇ ಇಲ್ಲ. ನನ್ನಿಂದ ನಿನಗೇನು ಸಹಾಯಬೇಕು’ ಎಂದು ಕೇಳಿದಾಗ, ಜ್ವಾಲಾ – ‘ಇಂದಿನಿಂದ ನೀನು ದರೋಡೆಕೋರತನದ ಈ ದೌರ್ಜನ್ಯ ಬಿಟ್ಟು ದುಡಿದು ಬದುಕುವಂತಾಗು’ ಎಂದು ಕೇಳುತ್ತಾರೆ. ಅಂದಿನಿಂದ ಆತ ಕರ್ಮಯೋಗಿಯಾಗಿ ಬಾಳಿದ. 


ಒಡೆದು ಆಳುವುದಕ್ಕೆ ಅಂಕುಶ 

ಬ್ರಿಟಿಷರು ಒಡೆದು ಆಳುವುದರಲ್ಲಿ ನಿಪುಣರು. ಬಂಗಾಳವನ್ನು ಇಬ್ಬಾಗ ಮಾಡಬೇಕೆಂಬುದು ಅವರ ಆಲೋಚನೆ. ಲಾರ್ಡ್ ಕರ್ಜನ್ ಈ ಕೆಲಸ ಮಾಡುವುದರಲ್ಲಿ ನಿಸ್ಸೀಮನಾಗಿದ್ದ. ಇವನ ನಂತರ ಬಂದ ಲಾರ್ಡ್ ಮಿಂಟೋ ಇದನ್ನೇ ಮುಂದುವರೆಸಿದ್ದ. ಪೂರ್ವ ಬಂಗಾಳ ವಿಭಜನೆ ದಿನವನ್ನು ಗೊತ್ತುಪಡಿಸಿದ್ದ. ಆದರೆ ಆ ದಿನವೇ ರಕ್ಷಾಬಂಧನದ ದಿನವಾಗಿತ್ತು. ಅಂದಿನ ಲಾಲ್, ಬಾಲ್, ಪಾಲ್, ರವೀಂದ್ರನಾಥ್ ಟಾಗೋರರ ನೇತೃತ್ವದಲ್ಲಿ ರಕ್ಷಾಬಂಧನದ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಬಂಗಾಳದ ಭಾವೈಕ್ಯತೆಯ ಬಲವನ್ನು ತೋರಿಸಬೇಕೆಂದು ಕರೆ ಕೊಟ್ಟರು. ಬ್ರಿಟಿಷರು ಬಲ ಪ್ರಯೋಗಿಸಿ ಗಲಭೆ ಎಬ್ಬಿಸಿದರು. ಆದರೆ ಸಹಸ್ರ ಸಹಸ್ರ ಸಂಖ್ಯೆಯ ಭಾರತೀಯರು ಗಂಗಾಸ್ನಾನ ಮಾಡಿ ಪರಸ್ಪರ ರಕ್ಷಾದಾರ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಬಂಡೆದ್ದರು. ಇವರ ಐಕ್ಯತೆಯ ಹೋರಾಟ ಕಂಡು ಬ್ರಿಟಿಷರು ಬೆದರಿದರು. ರಕ್ಷಾಬಂಧನದಿಂದ ಇಬ್ಭಾಗವಾಗಿ ಹೋಗುತ್ತಿದ್ದ ಬಂಗಾಳ ಬಚಾವಾಯಿತು. 


ತಂತುಧಾರಣಾ 

ಶ್ರಾವಣ ಪೌರ್ಣಮೆಯ ದಿನ ರಕ್ಷಾಬಂಧನ ಕಾರ್ಯಕ್ರಮ ಇರುವಂತೆ ಆಸ್ತಿಕರು ಯಜ್ಞೋಪವಿತ ಧಾರಣ ಮಾಡುವುದರಿಂದ ‘ನೂಲುಹುಣ್ಣಿಮೆ’ ಎಂದೂ ಕರೆಯುತ್ತಾರೆ. 

ಯಜ್ಞೋಪವೀತ ಧಾರಣ ವಿಧಿಯಾದರೂ ಕರ್ಮಾನುಷ್ಠಾನ ಪವಿತ್ರವಾಗಿರಬೇಕೆಂಬುದೇ ಆಗಿದೆ. ಯಜ್ಞೋಪವೀತ ಧಾರಣ ವಿಧಿಯಲ್ಲಿ ಕಾಮಚಾರ (ಮನಸೋ ಇಚ್ಛೆ ವರ್ತಿಸುವಂತಿಲ್ಲ), ಕಾಮವಾದ (ಮನಸ್ಸಿಗೆ ಬಂದಂತೆ ಮಾತನಾಡುವುದಲ್ಲ). ಕಾಮಭಕ್ಷಣ (ಕಂಡಿದ್ದನ್ನು ತಿನ್ನುವುದಲ್ಲ), ಇದರ ಬದಲಾಗಿ ಶ್ರದ್ಧಾ, ಮೇಧಾ, ಪ್ರಜ್ಞಾವನ್ನು ಅಳವಡಿಸಿಕೊಳ್ಳಬೇಕು. ಜೀವನಧರ್ಮ ಮಾನವೀಯ ಗುಣಗಳನ್ನು ಹೊಂದುವ ದೀಕ್ಷೆಯೇ ಆಗಿದೆ. ಮನೆಯ ಅಕ್ಕ ತಂಗಿಯರಷ್ಟೇ ಅಲ್ಲ, ಎಲ್ಲ ಹೆಣ್ಣು ಮಕ್ಕಳನ್ನು ಗೌರವಯುತವಾಗಿ ಕಾಣಬೇಕು. ಪೂಜ್ಯತೆಯ ಪವಿತ್ರ ಭಾವನೆ ಎಷ್ಟೊಂದು ಸುಂದರವಾಗಿರುತ್ತದೆ. ಸೋದರಿಯರಿಗೆ ಅತಂತ್ರ ಅಭದ್ರತೆಯ ಭಾವನೆ ಬಂದರೆ ಅವರ ಬದುಕೇ ಅಸಹನೀಯವಾಗಿ ಬಿಡುತ್ತದೆ. ಅವರಲ್ಲಿ ಸೋದರಿಯರಿಂದಲೇ ಈ ಅಭಯ ಸಂರಕ್ಷಣೆ ಸಿಗುವಂತಾದರೆ ಅವರ ಬದುಕು ಸಾರ್ಥಕವಾಗುತ್ತದೆ. ಸಂತೋಷದಾಯಕವಾಗಿರುತ್ತದೆ. ಇಲ್ಲವಾದಲ್ಲಿ ಭಯಗ್ರಷ್ತ ಭಯೋತ್ಪಾದಕರ ನಡುವೆ ನಲುಗುವಂತಾಗುತ್ತದೆ. ಗಾಂಧೀಜಿಯವರು, ‘ನಡುರಾತ್ರಿಯಲ್ಲಿ ಹೆಣ್ಣು ಮಗಳೊಬ್ಬಳು ನಿರ್ಭಯವಾಗಿ ನಡೆಯುವಂತಾಗಬೇಕು’ ಎಂದು ಹೇಳಿದ್ದರು. ಆದರೆ ಈಗ ಎಲ್ಲೆಡೆ ಹಗಲೇ ಮನೆಯಿಂದ ಹೊರಬೀಳುವ ಪರಿಸ್ಥಿತಿ ಹೆಣ್ಣುಮಕ್ಕಳಿಗಿಲ್ಲ ಎಂಬಂತಾಗಿದೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದೇ ತಿಳಿಯದಂತಾಗಿದೆ. ವಿಶ್ವಾಸಾರ್ಹತೆಯೇ ಇಲ್ಲವಾಗುತ್ತದೆ. 


ರಕ್ಷಾಬಂಧನವಾಗಲೀ, ಯಜ್ಞೋಪವೀತ ಧಾರಣೆಯಾಗಲೀ ಜೀವನ ಮೌಲ್ಯಗಳನ್ನು ವರ್ಧಿಸುವ ವಿಧಾನ. ಸ್ನೇಹ, ಸೌಹಾರ್ದತೆ, ಸಹೃದಯತೆಯ ಸ್ಪಂದನವನ್ನುಂಟು ಮಾಡುವಂಥಹದು. ಕಾಮದ ಶಿಶುವಾಗಿ ಜನ್ಮಿಸಿರಬಹುದು. ಆದರೆ ಕಾಮದ ಪಶುವಾಗಬಾರದಲ್ಲ. ಹೆಣ್ಣು ಮಕ್ಕಳೆಲ್ಲ ತನ್ನ ಒಡಹುಟ್ಟಿದ ಸಹೋದರಿಯರೆಂಬ ಭಾವ ಸಂಪನ್ನತೆ ತುಂಬಿಕೊಳ್ಳುವ ಈ ಹಬ್ಬದ ಸಂದೇಶ ಸಾಮಾನ್ಯವಾದುದಲ್ಲ. ಹಸಿರು ಸೀರೆಯುಟ್ಟು ಚೈತನ್ಯದ ಚೆಲುವಿನ ಶ್ರಾವಣ ಮಾಸಕ್ಕೆ ಶೃಂಗಾರ ಮಾಸವೆಂದೂ ಹೇಳಿದ್ದಾರೆ. ಈ ಶೃಂಗಾರ ಸೌಂದರ್ಯ ಮಾಸದಲ್ಲಿ ರಕ್ಷಾಬಂಧನವೂ ರೋಚಕವಾದುದಾಗಿದೆ. 


- ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸಂಸ್ಕೃತಿ ಚಿಂತಕರು - ಬೆಂಗಳೂರು – 9739369621 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top