ಮಾನವ ಸಂಘ ಜೀವಿ, ಭಾವನಾತ್ಮಕ ಸಂಬಂಧಗಳೆಂಬ ಸಂಕೋಲೆಯಿಂದ ಬಂದಿಯಾಗಿರುವವರು ಸಂಬಂಧ ಎಂದ ತಕ್ಷಣ ನಾವು ಕಣ್ಣು ಮುಚ್ಚಿ ಕಣ್ಣು ತೆರೆದಾಗ ನಮ್ಮ ಕಣ್ಣು ಮುಂದೆ ಬರುವುದು ನಮ್ಮ ಪುಟ್ಟ ಕುಟುಂಬ. ಕರುಳ ಕುಡಿಯು ಪ್ರಪಂಚಕ್ಕೆ ಕಾಲಿಟ್ಟಾಗ ಅವಳ ಪ್ರತಿಯೊಂದು ಪುಟ್ಟ ಪುಟ್ಟ ಹೆಜ್ಜೆಯಲ್ಲೂ ರಕ್ಷಣೆಯನ್ನು ನೀಡಿದವರು ಅಮ್ಮ. ಅದೇ ಕಂದಮ್ಮ ಸಾಮಾಜಿಕ ಜೀವನವನ್ನು ಕಂಡು ಹೆದರಿದಾಗ ಬೆನ್ನತಟ್ಟಿ ಮುನ್ನಡೆಸಿದವನು ಅಪ್ಪನಾದರೆ... ಅದೇ ಕಂದಮ್ಮನಿಗೆ ಒಬ್ಬ ತಾಯಿಯಾಗಿ, ತಂದೆಯಾಗಿ, ನೆಚ್ಚಿನ ಗೆಳೆಯನಾಗಿ, ಮಾರ್ಗದರ್ಶಿಯಾಗಿ, ಹಿತೈಷಿಯಾಗಿ, ಎಲ್ಲಾ ಪಾತ್ರವನ್ನು ನಿಭಾಯಿಸುವ ಜೀವ ಅಣ್ಣ.....
ಪ್ರತಿಯೊಂದು ಹೆಣ್ಣು ಮಗಳ ಬಾಳಿನಲ್ಲಿ ಅಣ್ಣ ಎಂಬ ಜೀವಕ್ಕೆ ವಿಶೇಷವಾದ ಸ್ಥಾನವಿದೆ. ಅವನು ಅವಳ ರಕ್ತ ಸಂಬಂಧಿಯು ಆಗಿರಬಹುದು, ಹೃದಯ ಸಂಬಂಧಿಯೂ ಆಗಿರಬಹುದು, ಅವ ಎಲ್ಲಿಯೇ ಇರಲಿ ಯಾವ ಪರಿಸ್ಥಿತಿಯಲ್ಲಿಯೇ ಇರಲಿ ತಂಗಿಯ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗದು, ನಿಸ್ವಾರ್ಥ ಪ್ರೀತಿ ಅವನದು. ಅಣ್ಣ ಎಂಬ ಎರಡಕ್ಷರದಲ್ಲಿ ಯಾವ ರೀತಿಯ ಮಾಂತ್ರಿಕ ಪ್ರೀತಿ ಅಡಗಿದೆ ಎಂಬುದನ್ನು ನಾ ಅರಿಯೆನು.
ಅಣ್ಣ ತಂಗಿ ಭಾಂದವ್ಯವೆಂದರೆ ಅದೊಂದು ತರಹದ ಅದ್ಭುತ ಪ್ರಪಂಚ. ಈ ಸಂಬಂಧವೇ ಒಂದು ರೀತಿಯ ವಿಭಿನ್ನ ಹಾಗೂ ವಿಶೇಷವಾದ ಬಂಧ ಅಲ್ವಾ?ಕಾರಣ ಇಲ್ಲದೆ ಕಿತ್ತಾಡಿಕೊಳ್ಳುತ್ತಾರೆ, ಕಾರಣವಿಲ್ಲದೆ ಪ್ರೀತಿ ಮಾಡುತ್ತಾರೆ, ಎಷ್ಟೇ ತರ್ಲೆ ತುಂಟಾಟಗಳು ಮಾಡಿದರು ಸಹ ಆ ಸಂಬಂಧದಲ್ಲಿ ಪ್ರೀತಿ ಎಂಬ ನದಿ ಸದಾ ಹರಿಯುತ್ತಿರುತ್ತದೆ. ಒಬ್ಬರಿಗೆ ನೋವಾದರೂ ಆ ಎರಡು ಜೀವ ಸಂಕಟ ಯಾತನೆ ಪಡುತ್ತಿರುತ್ತದೆ ಅಣ್ಣನ ಪ್ರೀತಿಯ ತಂಗಿಗೆ ಶ್ರೀರಕ್ಷೆ ಇದ್ದಂತೆ.
ತಂಗಿ ಎಂಬ ಪುಟ್ಟ ಪ್ರಪಂಚಕ್ಕೆ ರಾಜಕುಮಾರನೇ ನೀನು ಅಣ್ಣ. ನಿನಗೆ ನಾನು ತುಂಬಾ ತರ್ಲೆ ಮಾಡುತ್ತೇನೆ, ಸಣ್ಣ‐ ಪುಟ್ಟ ವಿಷಯಕ್ಕೆ ಜಗಳ ಮಾಡುತ್ತೇನೆ ಆದರೆ ನಾನು ಎಂದಿಗೂ ಅದನ್ನು ಮುನಿಸು ಇಟ್ಟುಕೊಂಡು ಮಾಡಿದ್ದಂತು ಖಂಡಿತವಲ್ಲ, ಏಕೆಂದರೆ ಅದು ನನ್ನ ಹಕ್ಕು ಎಂದು ತಿಳಿದಿರುವ ಅವಳು ನಾನು. ನಿನ್ನ ಆ ಪುಟ್ಟ ಮುಖದಲ್ಲಿ ಸದಾ ಚಂದ್ರನಂತೆ ಹೊಳಪಿನ ನಗುವನ್ನು ಕಾಣುವುದು ಮಾತ್ರ ಈ ಜೀವದ ಬಯಕೆ ಅಣ್ಣ ... ಮನಸ್ಸಿನಲ್ಲಿ ಎಷ್ಟೇ ಗಾಢವಾದ ನೋವು ಆತಂಕ ಅಥವಾ ಸಂತೋಷವಿರಲಿ ನಿನ್ನೊಂದಿಗೆ ಹಂಚಿಕೊಂಡಾಗ ಆಗುವಂತಹ ನೆಮ್ಮದಿಯಲ್ಲಿಯೂ ಸಿಗಲಾರದು. ಯಾರೊಂದಿಗೂ ಹಂಚಿಕೊಳ್ಳಲಾಗದ ಸಂದರ್ಭ ಎದುರಾದಾಗ ನಿನ್ನೊಂದಿಗೆ ನನ್ನ ಎಲ್ಲಾ ಭಾವನೆಗಳನ್ನು ಹಂಚಿಕೊಂಡು ಮನಸ್ಸಿನ ಭಾರವನ್ನು ಇಳಿಸಿಕೊಳ್ಳಲು ನಿನ್ನ ಒಡನಾಟವೇ ಸಾಕು ಅಣ್ಣ ನನಗೆ.
ಅಣ್ಣ ಸಾವಿರ ನೋವಿರಲಿ ಸಾವಿರ ಖುಷಿ ಇರಲಿ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ನೆರಳಾಗಿ ಹಸುಗೂಸಿನಂತೆ ಕಾಪಾಡಿದ್ದಿ, ಹೀಗೆ ನನ್ನ ಜೀವನದ ಉದ್ದಕ್ಕೂ ನನ್ನ ಬೆನ್ನೆಲುಬುವಾಗಿ ಸಲಹು, ಬೆಟ್ಟದಷ್ಟು ನಿನ್ನ ಮನದಲ್ಲಿ ಪ್ರೀತಿ ಕಾಳಜಿ ಅಡಗಿದ್ದರೂ ಅದನ್ನು ಎಲ್ಲಿಯೂ ತೋರಿಸದೆ ಜೋಪಾನ ಮಾಡೋ ಕೈ ನಿನ್ನದು. ಅಣ್ಣ ನಿನಗೆ ಯಾವ ರೀತಿ ಧನ್ಯವಾದ ಸಮರ್ಪಿಸಿದರೂ ಸಾಲದು. ನಿನಗೆ ಆಶೀರ್ವಾದ ಮಾಡುವಷ್ಟು ದೊಡ್ಡವಳು ನಾನಲ್ಲ, ನಿನ್ನಿಂದಲೇ ನನಗೆ ತಂಗಿ ಎನ್ನುವ ಪಟ್ಟ ಬಂದಿದೆ ನೀ ಎಲ್ಲೇ ಸಾಗಿದರೂ ಖುಷಿಯಿಂದಿರು ಅಣ್ಣ...
- ಕೃತಿಕಾ ಪುತ್ತಿಗೆ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ