ಅಂಬಾಗಿರಿ, ಹರೀಶಿ-ಮಂಗಳೂರು, ಹಾರ್ಸಿಕಟ್ಟಾ ವಲಯಗಳ ಭಿಕ್ಷಾಸೇವೆ
ಗೋಕರ್ಣ: ಸಹಸ್ರಮಾನದ ಯೋಜನೆಯಾಗಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಕಟ್ಟುವುದು ಎಷ್ಟು ಕಷ್ಟವೋ ಅದರ ನಿರ್ವಹಣೆ ಮತ್ತಷ್ಟು ಕಷ್ಟ ಎಂಬ ವಾಸ್ತವವನ್ನು ಅರಿತು ಸ್ವರ್ಣ ಪಾದುಕೆಗಳನ್ನು ಸಂಘಟನಾ ಚಾತುರ್ಮಾಸ್ಯದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಸ್ವರ್ಣಪಾದುಕೆಗೆ ಅರ್ಪಣೆಯಾಗುವ ಪ್ರತಿಯೊಂದು ರೂಪಾಯಿ ಕೂಡಾ ವಿವಿವಿ ನಿರ್ವಹಣೆಗೆ ಬಳಕೆಯಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿವಿವಿ ಆವರಣದಲ್ಲಿ ಸಂಘಟನಾ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ಸೋಮವಾರ ಸಿದ್ದಾಪುರ ಮಂಡಲಾಂತರ್ಗತ ಅಂಬಾಗಿರಿ, ಹಾರ್ಸಿಕಟ್ಟಾ ಮತ್ತು ಹರೀಶಿ-ಮಂಗಳೂರು ವಲಯಗಳ ಶಿಷ್ಯಭಕ್ತರಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು, ಮುಂದಿನ ದಿನಗಳಲ್ಲಿ ಸ್ವರ್ಣಪಾದುಕೆ ಸಮಾಜದಲ್ಲಿ ಯಾತ್ರೆ ಕೈಗೊಳ್ಳಲಿದೆ. ಇದು ಶಿಷ್ಯಭಕ್ತರಿಗೆ ಸೇವೆ ಹಾಗೂ ಸಾರ್ಥಕತೆಯ ಭಾವನೆಯನ್ನು ಮೂಡಿಸಲು ಸಹಕಾರಿ. ಸ್ವರ್ಣಪಾದುಕೆಯ ಜತೆಗೆ ವಿವಿವಿ ಪರಿಕಲ್ಪನೆಯನ್ನು, ವೈಶಿಷ್ಟ್ಯಗಳನ್ನು ಮನೆಮನೆಗೆ ಒಯ್ಯಲು ವಿಸ್ತೃತ ರೂಪದ ಸಮಿತಿ ರಚಿಸಲಾಗಿದ್ದು, ಈಗಾಗಲೇ ಇದು ಕಾರ್ಯೋನ್ಮುಖವಾಗಿದೆ ಎಂದು ವಿವರಿಸಿದರು.
ಸಂಘಟನೆಗಾಗಿ ಶ್ರೀಸಂಸ್ಥಾನ ಮತ್ತು ಸ್ವರ್ಣಪಾದುಕೆ ಎಲ್ಲ ವಲಯಗಳಲ್ಲಿ ಸಂಚರಿಸಲಿದೆ. ಶಿಷ್ಯರು ಸ್ವರ್ಣಪಾದುಕೆ ವಸತಿಗೆ ವ್ಯವಸ್ಥೆ ಕಲ್ಪಿಸಿ, ಎಲ್ಲರಿಗೂ ಅದರ ಸೇವೆಯ ಭಾಗ್ಯ ಒದಗಿ ಬರುವಂತೆ ವ್ಯವಸ್ಥೆ ಮಾಡಬೇಕು. ಅದು ಆಗಮಿಸಿದಾಗ ಪಲ್ಲಕ್ಕಿ ಮೆರವಣಿಗೆಯಲ್ಲಿ ಒಯ್ದು ಶಿಷ್ಯಭಕ್ತರು ಸೇವೆ ಮಾಡಲು ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಸ್ವರ್ಣಪಾದುಕೆಯ ಜತೆಗೆ ಆಗಮಿಸುವ ವಿವಿವಿ ಸಮಿತಿ ಪದಾಧಿಕಾರಿಗಳು ವಿವಿವಿಯ ಸಮಗ್ರ ಮಾಹಿತಿಯನ್ನು ಮನೆಗಳಿಗೆ ನೀಡಬೇಕು ಎಂದು ಸಲಹೆ ನೀಡಿದರು.
ಶ್ರೀಮಠದ ಯೋಜನೆಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರತಿ ಮನೆಗೊಬ್ಬ ಕಾರ್ಯಕರ್ತ ಸಜ್ಜಾಗಬೇಕು. ಮಠದ ಯಾವ ಶಿಷ್ಯಭಕ್ತರು ಕೂಡಾ ಜವಾಬ್ದಾರಿಯಿಂದ ಹೊರತಾಗಿರಬಾರದು. ಸಮಾಜ ಸಂಘಟನೆಯ ಬೃಹತ್ ಜಾಲದಲ್ಲಿ ಎಲ್ಲ ಮನೆಗಳಿಂದ ಕನಿಷ್ಠ ಒಬ್ಬ ಕಾರ್ಯಕರ್ತ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಂತೆಯೇ ಯಾವುದೇ ಕಾರ್ಯಕರ್ತ ಅಥವಾ ಶಿಷ್ಯಭಕ್ತರಿಗೆ ತೊಂದರೆಯಾದಾಗ ಅವರು ನೆರವು ಯಾಚಿಸಿ ಬರುವ ಮುನ್ನ ನಮ್ಮ ಕಾರ್ಯಕರ್ತರು ಅವರ ಸೇವೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಜತೆಗೆ ಹವ್ಯಕ ಮಹಾಮಂಡಲ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಶ್ರೀಮಠಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಇದು ಉನ್ನತ ಸಾಧನೆಗೆ ಪ್ರೇರಣೆಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ವಿವಿವಿ ಸಮಿತಿ ಮುಖ್ಯಸ್ಥರಾದ ಆರ್.ಎಸ್.ಹೆಗಡೆ ಹರಗಿ, ನಾಗರಾಜ ಭಟ್ ಪಿದಮಲೆ, ಅರವಿಂದ ದರ್ಭೆ, ಎಂ.ವಿ.ಹೆಗಡೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ವಿವಿವಿ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಉಪಸ್ಥಿತರಿದ್ದರು.
ಸಿದ್ದಾಪುರ ಹವ್ಯಕ ಮಂಡಲದ ನೂತನ ಪದಾಧಿಕಾರಿಗಳ ಉದ್ಘೋಷ ಶ್ರೀಸಂಸ್ಥಾನದವರ ಸನ್ನಿಧಿಯಲ್ಲಿ ನೆರವೇರಿತು. ಅಧ್ಯಕ್ಷರಾಗಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷರಾಗಿ ಸತೀಶ್ ಆಲ್ಮನೆ, ಪ್ರಧಾನ ಕಾರ್ಯದರ್ಶಿಯಾಗಿ ಚಂದನ ಶಾಸ್ತ್ರಿ, ಸಂಘಟನಾ ಕಾರ್ಯದರ್ಶಿಯಾಗಿ ಕಲ್ಪನಾ ತಲವಾಟ, ಕೋಶಾಧ್ಯಕ್ಷರಾಗಿ ರಾಮಮೂರ್ತಿ ಗಣಪತಿ ಹೆಗಡೆ ಮತ್ತು ವಿಭಾಗಗಳ ಪ್ರಧಾನರು ಶ್ರೀಗಳಿಂದ ನಿಯುಕ್ತಿಪತ್ರ ಮತ್ತು ಅನುಗ್ರಹ ಮಂತ್ರಾಕ್ಷತೆ ಪಡೆದರು.
ಅಂಬಾಗಿರಿ ವಲಯ ಅಧ್ಯಕ್ಷರಾಗಿ ಶಂಕರ ಹೆಗಡೆ ಭದ್ರನ್, ಹಾರ್ಸಿಕಟ್ಟಾ ವಲಯ ಅಧ್ಯಕ್ಷರಾಗಿ ಸೀತಾರಾಮ ಗಣಪತಿ ಸುಳಗಾರ, ಹರೀಶಿ- ಮಂಗಳೂರು ವಲಯದ ಅಧ್ಯಕ್ಷರಾಗಿ ಲೋಕೇಶ ದತ್ತಾತ್ರೇಯ ಹೆಗಡೆ ನಿಯುಕ್ತರಾದರು. ಪ್ರತಿ ವಲಯಗಳಿಂದ ಐದು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ