ನಾಗದೇವನೆ ಪ್ರೇಮ ಸ್ವರೂಪನೆ
ನಿಗಮಾಗಮ ಗೋಚರನೆ |
ಸುಗುಣ ದಿವ್ಯ ಸಂತಾನ ಪ್ರದಾಯಕ
ಝಗಝಗಿಸುವ ಮಣಿ ಭೂಷಿತನೆ ||೧||
ಹರನಾ ಕಂಠದ ಸಿರಿ ವರ್ಧಿತನೆ
ಹರಿಗೆ ಹಾಸಿಗೆ ಮಿದು ಮೈಯವನೆ ||
ಧರೆಯನು ಪೊತ್ತಿಹ ವರ ಆದಿಶೇಷನೆ
ಪರಬ್ರಹ್ಮ ರೂಪ ಶ್ರೀ ಸುಬ್ರಹ್ಮಣ್ಯನೆ ||೨||
ನಾರಿಕೇಳ ಜಲ ಕ್ಷೀರಾಭಿಷೇಕ
ಸಾರಸ ಫಲ ಶುಭ ತಾಂಬೂಲ ||
ಅರಿಶಿಣ ಸಂಪಿಗೆ ಸಿಂಗಾರ ಕೇದಗೆ
ವರ ಪುಷ್ಪಾರ್ಚನೆ ಸಮರ್ಪಣೆ ||೩||
ಅಶ್ವತ್ಥ ಮೂಲದಿ ವಲ್ಮೀಕ ತಾಣವು
ವಿಶ್ವಾಧಾರನು ಫಣಿಪತಿ ಮಹಿಮ |
ಐಶ್ವರ್ಯ ನಿಧಿಯ ಕಾಯುವ ದೇವ
ನಶ್ವರರೆಲ್ಲರ ಪೊರೆ ಸಂಜೀವ ||೪||
-ಭಾಸ್ಕರ ರೈ ಕುಕ್ಕುವಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ