ವಿಮೆನ್ ಇನ್ ಬ್ಲೂ ಖ್ಯಾತಿಯ ಮಿಥಾಲಿ ದೊರೈರಾಜ್

Upayuktha
0

ಭಾರತೀಯ ಕ್ರಿಕೆಟ್ ರಂಗದಲ್ಲಿ ಮಹಿಳಾ ಕ್ರಿಕೆಟ್ ಗೆ ತನ್ನದೇ ಆದ ಆಯಾಮವನ್ನು ಸೃಷ್ಟಿಸಿದಾಕೆ ಮಿಥಾಲಿ ದೊರೈರಾಜ್. ಮೆನ್ ಇನ್ ಬ್ಲೂ ಎಂದು ಪುರುಷರ ಕ್ರಿಕೆಟಿಗೆ ಹೆಸರಾಗಿದ್ದ ಭಾರತ ದೇಶದಲ್ಲಿ ಮಹಿಳಾ ಕ್ರಿಕೆಟ್ ನ ಅಸ್ಮಿತೆಗೆ ಕಾರಣಳಾದ  ಕ್ರಿಕೆಟ್ ರಂಗದಲ್ಲಿ  ಹತ್ತು ಸಾವಿರಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ ಕ್ರಿಕೆಟ್ ಪಟು, ತನ್ನ ಆಟದ ಕೌಶಲ ಮತ್ತು ತಂತ್ರಗಾರಿಕೆಯಿಂದಲೇ ಹೆಸರುವಾಸಿಯಾದ ಮಹಿಳಾ ಕ್ರಿಕೆಟ್ ಕಪ್ತಾನಳಾಗಿ ದಶಕಗಳಿಗೂ ಮೀರಿ ಕಾರ್ಯನಿರ್ವಹಿಸಿದ ಧೀಮಂತ ಮಹಿಳೆ ಮಿಥಾಲಿ ದೊರೈರಾಜ್. ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿ ಮರಳಿ ಬಂದಾಗಲೂ ಕೂಡ ಅವರಿಗೆ ಸಲ್ಲಬೇಕಾದ ಗೌರವ ಸಮ್ಮಾನಗಳು ದೊರೆಯದೆ ಹೋದಾಗ ನೊಂದುಕೊಂಡ ಆಕೆ ಮಹಿಳೆಯರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಶೌಚಕರ್ಮಗಳಿಗೂ ಕೂಡ ಬಯಲನ್ನು ಆಶ್ರಯಿಸಬೇಕಾಗಿ ಬಂದಾಗ ಭಾರತೀಯ ಕ್ರಿಕೆಟ್ ಬೋರ್ಡ್ ಗೆ ಪತ್ರ ಬರೆದು ಸಮಸ್ಯೆ ನಿವಾರಣೆಯಲ್ಲಿ ಯಶಸ್ವಿಯಾದ ಮೊದಲ ಕ್ರಿಕೆಟ್ ಆಟಗಾರ್ತಿ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಎಲ್ಲರೂ ಮಹಿಳಾ ಕ್ರಿಕೆಟ್ ಅನ್ನು ಉಡಾಫೆಯಿಂದ ನೋಡುತ್ತಿರುವಾಗ ಉತ್ತಮ ಟೀಮ್ ಕಟ್ಟುವುದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವಿನ ಪತಾಕೆ ಹಾರಿಸಿದಾಕೆ ಮಿಥಾಲಿ ದೊರೈರಾಜ್.


ಮಿಥಾಲಿ ದೊರೈರಾಜ್ ಹುಟ್ಟಿದ್ದು 1982 ಡಿಸೆಂಬರ್ 3ರಂದು ರಾಜಸ್ಥಾನದ ಜೋಧಪುರದಲ್ಲಿ. ತಾಯಿ ಲೀಲಾ ರಾಜ್ ಮತ್ತು ತಂದೆ ದೊರೈರಾಜ್. ವಾಯುಪಡೆಯಲ್ಲಿ ವಾರಂಟ್ ಆಫೀಸರ್ ಆಗಿದ್ದರು ತಂದೆ ದೊರೈರಾಜ್. ಮಿಥಾಲಿ ಬೆಳೆದದ್ದು ಹೈದರಾಬಾದಿನಲ್ಲಿ. ಹೆಣ್ಣು ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಅಷ್ಟೇನು ಪ್ರಾಶಸ್ತ್ಯವಿಲ್ಲದ ಕುಟುಂಬದಲ್ಲಿ ಜನಿಸಿದ ಮಿಥಾಲಿ ಸ್ನೇಹಿತೆಯ ಮಾತಿಗೆ ಕಟ್ಟುಬಿದ್ದು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ಆಕೆಗೆ ಕೇವಲ ಎಂಟು ವರ್ಷ. ಆಕೆಯ ಸಹೋದರನೊಂದಿಗೆ ಆಕೆಗೂ ಕೂಡ ಕ್ರಿಕೆಟ್ನ ತರಬೇತಿ ಪ್ರಾಥಮಿಕ ಶಾಲಾ ಅವಧಿಯಲ್ಲಿಯೇ ದೊರೆಯಿತು. ಮುಂದೆ ಆಕೆ ಏರ್ ಇಂಡಿಯ ಮತ್ತು ರೈಲ್ವೆಸ್ ಗಳಿಗಾಗಿ ಆಡಿದಳು. ತದನಂತರ ಭಾರತೀಯ ಮಹಿಳಾ ಕ್ರಿಕೆಟ್ ಮಂಡಳಿಗೆ ಆಯ್ಕೆಯಾದ ಮಿಥಾಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಟೆಸ್ಟ್ ಕ್ರಿಕೆಟ್, ಏಕದಿನ ಪಂದ್ಯಾವಳಿಗಳು ಮತ್ತು ಟಿ ಟ್ವೆಂಟಿ ಪಂದ್ಯಾವಳಿ ಹೀಗೆ ಕ್ರಿಕೆಟ್ ನ ಮೂರು ಸ್ವರೂಪಗಳಲ್ಲಿಯೂ ಆಕೆ ಆಟವಾಡಿದ್ದಾಳೆ.


ಅಗಸ್ಟ್17, 2002 ರಲ್ಲಿ ತನ್ನ 19ನೇ ವಯಸ್ಸಿನಲ್ಲಿ ಮೊಟ್ಟಮೊದಲ ಗರಿಷ್ಠ 214 ಸ್ಕೋರನ್ನು ಇಂಗ್ಲೆಂಡಿನ ಕೌಂಟಿ ಗ್ರೌಂಡ್ ನಲ್ಲಿ ದಾಖಲಿಸಿದ ಆಕೆ ತನ್ನ ಎರಡನೇ ಅತಿ ದೊಡ್ಡ ಸ್ಕೋರ್ 209 ರನ್ಗಳನ್ನು ಬಾರಿಸುವ ಮೂಲಕ ಕರೆನ ರೊಲ್ಟನ್ ಳ ವಿಶ್ವ ದಾಖಲೆಯನ್ನು ಮುರಿದರು.


2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವ ಮಹಿಳಾ ಕ್ರಿಕೆಟ್ ಚಾಂಪಿಯನ ಶಿಪ್ ನಲ್ಲಿ ತಮ್ಮ ತಂಡವನ್ನು ಫೈನಲ್ ನವರೆಗೆ ತಲುಪಿಸಿದರು. 2006ರಲ್ಲಿ ನಡೆದ ಏಷ್ಯಾ ಕಪ್ ನಲ್ಲಿ ಒಂದೇ ಒಂದು ಸರಣಿಯನ್ನು ಕಳೆದುಕೊಳ್ಳದೆ ಜಯಭೇರಿ ಸಾಧಿಸಿ ಕಪ್ ತಮ್ಮದಾಗಿಸಿಕೊಂಡರು.


ಮಿಥಾಲಿ ರಾಜ್ 2003 ರ ಸಾಲಿನ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ.


2013 ರ ಮಹಿಳಾ ವಿಶ್ವಕಪ್‌ನಲ್ಲಿ,  ಮಿಥಾಲಿ ರಾಜ್ ನಂಬರ್ 1 ಮಹಿಳಾ ಅಂತರರಾಷ್ಟ್ರೀಯ ಏಕದಿನ (odi) ಪಂದ್ಯಾವಳಿಯ ಕ್ರಿಕೆಟಿಗರಾಗಿದ್ದರು. ಆಕೆಯ ವೃತ್ತಿಜೀವನದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು, ಐದು ಶತಕಗಳು ಮತ್ತು ಏಕದಿನ ಪಂದ್ಯಾವಳಿಗಳಲ್ಲಿ ಐದು ಅರ್ಧಶತಕಗಳನ್ನು ಗಳಿಸಿದರು, ಜೊತೆಗೆ ಅಂತರಾಷ್ಟ್ರೀಯ ಏಕದಿನ ಪಂದ್ಯಾವಳಿಗಳಲ್ಲಿ 3-4 ರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು ಮತ್ತು T 20 ಗಳಲ್ಲಿ ಹತ್ತು ಅರ್ಧಶತಕಗಳನ್ನು ಗಳಿಸಿದರು.


2017ರಲ್ಲಿ 5500 ರನ್ ಗಳನ್ನು ಗಳಿಸಿದ ಏಕೈಕ ಭಾರತೀಯ ಮಹಿಳಾ ಕ್ರಿಕೆಟ್ ನ ಕ್ರೀಡಾಪಟುವಾಗಿದ್ದ ಮಿಥಾಲಿ, 2017ರಲ್ಲಿ ನಡೆದ ಐಸಿಸಿ ಏಕದಿನ ಪಂದ್ಯಾವಳಿಗಳಲ್ಲಿ ಪಾಲ್ಗೊಂಡರು.
2018 ರಲ್ಲಿ  ವೆಸ್ಟ್ ಇಂಡೀಸ್ ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿ ಭಾಗವಹಿಸಿದ ಆಕೆ, 2019ರಲ್ಲಿ ಟಿ ಟ್ವೆಂಟಿ ಯಿಂದ ನಿವೃತ್ತರಾದರು. ಮುಂದೆ ಆಕೆಯ ಚಿತ್ತ ಇದ್ದದ್ದು 2021 ರಲ್ಲಿ ನಡೆಯುವ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಜಯಭೇರಿ ಗಳಿಸಬೇಕೆಂಬುದು.


ನವೆಂಬರ್ 2020 ರಲ್ಲಿ,  ಮಿಥಾಲಿರಾಜ್ ಅವರು ದಶಕದ ICC ಮಹಿಳಾ ಕ್ರಿಕೆಟಿಗರಿಗಾಗಿ ರಾಚೆಲ್ ಹೇಹೋ-ಫ್ಲಿಂಟ್ ಪ್ರಶಸ್ತಿಗೆ ಮತ್ತು ದಶಕದ ಮಹಿಳಾ ODI ಕ್ರಿಕೆಟರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.


ಮೇ 2021 ರಲ್ಲಿ ಅವರು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಏಕೈಕ (ಒಂದು ಬಾರಿ ಮಾತ್ರ) ಪಂದ್ಯಕ್ಕಾಗಿ ಭಾರತದ ಟೆಸ್ಟ್ ತಂಡದ ನಾಯಕಿಯಾಗಿ ನೇಮಕಗೊಂಡರು ಜನವರಿ 2022 ರಲ್ಲಿ, ಅವರು ನ್ಯೂಜಿಲೆಂಡ್‌ನಲ್ಲಿ 2022 ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತ ತಂಡದ ನಾಯಕಿಯಾಗಿ ನೇಮಕಗೊಂಡರು . 
ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸಲಹೆಗಾರರಾಗಿದ್ದು ಸೂಕ್ತ ತರಬೇತಿ ಮಾರ್ಗದರ್ಶನದ ಕುರಿತು ಹೆಚ್ಚಿನ ಅರಿವನ್ನು ಹೊಂದಿದ ಏಕೈಕ ವ್ಯಕ್ತಿಯಾಗಿದ್ದಾರೆ.


8 ಜೂನ್ 2022 ರಂದು, ರಾಜ್  ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದರು . 


ಕ್ರಿಕೆಟ್ ನ್ನು ಜೀವನದ ಗುರಿಯನ್ನಾಗಿಸಿಕೊಂಡ ಮಿಥಾಲಿ ರಾಜ್ ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ ಅದೊಂದು ಜೀವನ ಶೈಲಿ ಎಂದು ಘೋಷಿಸಿದರು. ಪುರುಷರ ಕ್ರಿಕೆಟಿಗೆ ನೀಡುವಷ್ಟೇ ಮಹತ್ವವನ್ನು ಮಹಿಳಾ ಕ್ರಿಕೆಟ್ ಗೆ ನೀಡಲೇಬೇಕು ಎಂದು ಭಾರತೀಯ ಕ್ರಿಕೆಟ್  ಮಂಡಳಿಯನ್ನು ಒತ್ತಾಯಿಸಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದರು. ತಮ್ಮ ಗುರುಗಳಾದ ಸಂಪತ್ ರವರ ಆಶಯದಂತೆ ಆಟದ ಅಂಗಳದಲ್ಲಿ ಎಷ್ಟೋ ಜನ ತಮ್ಮ ಕಣ್ಣೀರು ದುಃಖ ನೋವು ಸಂತೋಷಗಳನ್ನು ಕಂಡಿದ್ದಾರೆ ಆದರೆ ಅದೆಲ್ಲವನ್ನು ನುಂಗಿರುವ ಅಂಗಳಕ್ಕೆ ನಮ್ಮ ಶ್ರದ್ಧೆಯ ಆಟವಾಡುವುದರ ಮೂಲಕ ನಿಜವಾದ ಕಾಣಿಕೆ ನೀಡಬೇಕು ಎಂದು ಆಟವಾಡಿದ ಮಿಥಾಲಿ ರಾಜ್ ಹೆಸರು ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿ ಸದಾ ಮಂಚೂಣಿಯಲ್ಲಿರುತ್ತದೆ.

-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top