|| ತ್ವಷ್ಟಾಂತರ್ಗತ ಶ್ರೀ ಅನಂತಾಯ ನಮಃ ||
ಅರ್ಜುನನಿಗೆ ಕರ್ಣನು ದಾನವೀರನೆಂದರೆ ಸಹಿಸಲು ಆಗುತ್ತಿರಲಿಲ್ಲ. ತಾನು ಅವನನ್ನೂ ದಾನದಲ್ಲಿ ಮೀರಿಸಬೇಕು ಎಂದು ಚಿಂತಿಸುತ್ತಿದ್ದ. ಇಂಥ ಒಂದು ಅವಕಾಶಕ್ಕಾಗಿ ಕೃಷ್ಣನಲ್ಲಿ ಕೇಳಿದ.
ಕೆಲವು ದಿನಗಳ ನಂತರ ಕೃಷ್ಣನು ಅರ್ಜುನನ್ನು ಒಂದು ಹಳ್ಳಿಗೆ ಕರೆದುಕೊಂಡು ಹೋದನು. ಅಲ್ಲಿ ತನ್ನ ಶಕ್ತಿಯಿಂದ ಕೃಷ್ಣನು ಬಂಗಾರ, ಮುತ್ತು, ರತ್ನಗಳಿಂದ ಕೂಡಿದ ಒಡವೆಗಳ ಒಂದು ಬೆಟ್ಟವನ್ನೇ ಸೃಷ್ಟಿಸಿದ. ಇದನ್ನು ನೋಡಿ ಅರ್ಜುನನಿಗೆ ಬಹಳ ಸಂತೋಷವಾಯಿತು. ಇದೆಲ್ಲ ತನಗೇ ಸೇರಲಿ ಎಂದು ಅರ್ಜುನ ಬಯಸಿದನು. ಕೃಷ್ಣನು ಅರ್ಜುನನ ಮನದ ಆಸೆಯನ್ನು ಅರಿತನು. ಬೆಟ್ಟದಷ್ಟು ರಾಶಿಯಾಗಿ ಬಿದ್ದಿದ್ದ ಎಲ್ಲ ಒಡವೆಗಳನ್ನು ಈ ಹಳ್ಳಿಯ ಜನರಿಗೆ ಸಮಾನವಾಗಿ ಹಂಚಬೇಕೆಂದು ಕೃಷ್ಣನು ಅರ್ಜುನನಿಗೆ ಹೇಳಿದನು. ಅರ್ಜುನ ಒಪ್ಪಿ ತನ್ನ ಕಾರ್ಯವನ್ನು ಪ್ರಾರಂಭಿಸಿದನು. ಆ ಹಳ್ಳಿಯ ಜನರೆಲ್ಲ ಬಂದರು. ಅವರಿಗೆಲ್ಲ ಅರ್ಜುನನು ಆ ಒಡವೆಗಳನ್ನು ಸರಿಸಮಾನವಾಗಿ ಹಂಚಲು ಪ್ರಾರಂಭಿಸಿದನು. ಎಷ್ಟು ಹಂಚಿದರೂ ಒಡವೆಗಳ ರಾಶಿಯು ಕೊಂಚವೂ ಕಡಿಮೆಯಾಗಲಿಲ್ಲ. ರಾತ್ರಿಯಾಯಿತು. ಅರ್ಜುನ ಸುಸ್ತಾಗಿ ಮಲಗಿಬಿಟ್ಟ. ಈ ಕಾರ್ಯ ನನ್ನಿಂದ ಸಾಧ್ಯವಿಲ್ಲ ಎಂದ ಅರ್ಜುನ.
ಆಗ ಕೃಷ್ಣನು ಕರ್ಣನನ್ನು ಬರಹೇಳಿದ. ಈ ಒಡವೆಗಳನ್ನು ಈ ಹಳ್ಳಿಯ ಜನರಿಗೆ ಸರಿಸಮವಾಗಿ ಹಂಚಬೇಕು ಎಂದು ಕರ್ಣನಿಗೆ ಕೃಷ್ಣನು ಹೇಳಿದನು. ತಕ್ಷಣ ಕರ್ಣನು ಆ ಹಳ್ಳಿಯ ಜನರನ್ನು ಉದ್ದೇಶಿಸಿ ಹೀಗೆ ಹೇಳಿದನು ``ಬಂಧುಗಳೇ ಈ ರಾಶಿ ರಾಶಿ ಒಡವೆಗಳೆಲ್ಲವನ್ನೂ ನಿಮಗೆಲ್ಲ ನಾನು ದಾನ ಮಾಡಿದ್ದೇನೆ. ನೀವೆಲ್ಲರೂ ಯಾವುದೇ ಮನಸ್ತಾಪವಿಲ್ಲದೇ ಸಮವಾಗಿ ನಿಮ್ಮ ನಿಮ್ಮಲ್ಲಿ ಹಂಚಿಕೊಳ್ಳಿ. ಇದೇ ನೀವು ನನಗೆ ಮಾಡುವ ಅನುಗ್ರಹವೆಂದು ನಾನು ಭಾವಿಸುವೆ.''
ಹೀಗೆಂದವನೇ ಕರ್ಣನು ಕೃಷ್ಣನಿಗೆ ನಮಸ್ಕರಿಸಿ ಅಲ್ಲಿಂದ ಹೊರಟು ಹೋಗೇ ಬಿಟ್ಟನು. ಕೃಷ್ಣನು ಅರ್ಜುನನ ಮುಖವನ್ನು ನೋಡಿದನು. ಆಗ ಅರ್ಜುನನು ಕರ್ಣನ ಕಾಯಕವನ್ನು ಕಂಡು ತನ್ನ ತಲೆ ತಗ್ಗಿಸಿದನು. ಮಾಡಿದ ದಾನಕ್ಕೆ ಪ್ರತಿಫಲಾಪೇಕ್ಷೆಯನ್ನು ನಾವು ಎಂದೂ ಬಯಸಬಾರದು. ನಾವು ಬಯಸದಿದ್ದರೂ ದೇವರು ಕೊಟ್ಟೇ ಕೊಡುತ್ತಾನೆಂಬ ನಂಬಿಕೆ ಇದ್ದರೆ ಸಾಕು.
ಆತ ಸಚ್ಚಿದಾನಂದಮಯ. ಜನನ ಮರಣವಿಲ್ಲದ ಜಗನ್ನಾಥ. ಆತ ಎಲ್ಲರಿಗೂ ತಂದೆ. ಯಾರಿಗೂ ಮಗನಲ್ಲ. ಬ್ರಹ್ಮಾದಿಗಳಿಂದ ಪ್ರಾರ್ಥಿತನಾದವ. ಧರೆಗೆ ಇಳಿದವ. ಎಲ್ಲರನ್ನೂ ಆಕರ್ಷಿಸಿದವ. ಕೃಷ್ಣನೆಂದು ಕರೆಸಿಕೊಂಡವ. ಸಜ್ಜನರ ಪಾಂಡವರ ಹಿತ ಬಯಸಿ ಸಂರಕ್ಷಿಸಿದವ. ದುಷ್ಟರ ಕುಲಾಂತಕನಾಗಿ ಜಗದಿ ಧರ್ಮವ ಸ್ಥಾಪಿಸಿದವ. ಧರ್ಮಾಧ್ಯಕ್ಷನಾದವ. ಇಂತಹ ಗುಣಪೂರ್ಣ ನಿರ್ದೋಷ ಪರಮ ಶ್ರೇಷ್ಠ ಶ್ರೀಕೃಷ್ಣನೇ ದೇವಶಿಖಾಮಣಿ.
ಶ್ರೀಕೃಷ್ಣಕಥೆಯ ಮೂಲ ಆಕರಗಳೆಂದರೆ ಮಹಾಭಾರತ, ಭಾಗವತ ಮತ್ತು ಹರಿವಂಶ. ಈ ಮೂರು ಮಹಾಕೃತಿಗಳ ಕರ್ತೃ ವೇದವ್ಯಾಸರು. ಭಾಗವತ ಮತ್ತು ಹರಿವಂಶಗಳಲ್ಲಿ ಪ್ರಧಾನವಾಗಿ ಶ್ರೀಕೃಷ್ಣನ ಬಾಲ್ಯದ ಘಟನೆಗಳು ನಿರೂಪಿತವಾಗಿವೆ; ಮಹಾಭಾರತದಲ್ಲಿ ಪ್ರೌಢ ಕೃಷ್ಣನನ್ನು ಕಾಣುತ್ತೇವೆ; ಅಲ್ಲಿ ಅವನು ರಾಜನೀತಿಜ್ಞನಾಗಿ, ಸಖನಾಗಿ, ಲೋಕಗುರುವಾಗಿ ಕಾಣಿಸಿಕೊಳ್ಳುತ್ತಾನೆ. ಶ್ರೀಕೃಷ್ಣನ ವಿಶ್ವರೂಪದರ್ಶನವಾಗಿರುವುದು ಮಹಾಭಾರತದಲ್ಲಿಯೇ. ಮಹಾಭಾರತದ ಭೀಷ್ಮಪರ್ವದಲ್ಲಿ ಬಂದಿರುವ ಗೀತೆಯಂತೂ ಜೀವನದ ಸೂತ್ರಗಳ ಸಂಗ್ರಹದಂತಿವೆ. ಜಗತ್ತಿನ ಚಿಂತನ ಪ್ರಸ್ಥಾನಕ್ಕೆ ಅದ್ಭುತ ಉಪದೇಶ ಸಂಗ್ರಹ. ಈ ಮಹಾಕೃತಿಯ ಬಗ್ಗೆ ಅಂದಿನಿಂದ ಇಂದಿನವರೆಗೂ ನೂರಾರು ಭಾಷ್ಯ-ವ್ಯಾಖ್ಯಾನಗಳು ಬಂದಿವೆ, ಬರುತ್ತಿವೆ. ಇದು ಕೃಷ್ಣ ಎನ್ನುವುದು ಶಾಶ್ವತ ಪ್ರಜ್ಞಾಪ್ರವಾಹದಂತಿದೆ ಎನ್ನುವುದಕ್ಕೆ ಸಾಕ್ಷ್ಯವಾಗಿದೆ. ಈ ಮೂರು ಕೃತಿಗಳ ಆನಂತರದಲ್ಲಿ ಬಂದ ಹತ್ತು ಹಲವು ಕೃತಿಗಳು ಕೃಷ್ಣತತ್ತ್ವದ ಹಲವು ರೂಪಗಳನ್ನು ಕಂಡರಿಸಿವೆ. ಗೀತಗೋವಿಂದ, ಶ್ರೀಕೃಷ್ಣಕರ್ಣಾಮೃತ, ದಾಸರ ಕೀರ್ತನೆಗಳು, ವಾಗ್ಗೇಯಕಾರರ ಕೃತಿಗಳಲ್ಲಿ ಕೃಷ್ಣನ ವ್ಯಕ್ತಿತ್ವ ಹರಳುಗಟ್ಟಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ