ಉಡುಪಿ: ಪೂರ್ಣಪ್ರಜ್ಞ ಕಾಲೇಜು ಇದರ ಭೌತಶಾಸ್ತ್ರ ವಿಭಾಗವು ಏಳು ದಿನಗಳ ರಾಷ್ಟ್ರಮಟ್ಟದ Mini -PTTS ಎಂಬ ವಿದ್ಯಾರ್ಥಿ -ತರಬೇತಿ ಕಾರ್ಯಕ್ರಮವನ್ನು PTTS ಎಂಬ ಸಂಸ್ಥೆಯೊಂದಿಗೆ ಜಂಟಿಯಾಗಿ ಆಗಸ್ಟ್ 21 ರಿಂದ 27ರ ವರೆಗೆ ಆಯೋಜಿಸಿತ್ತು. PTTS (Physics Talent and Training Search) ಸಂಸ್ಥೆಯು ರಾಷ್ಟ್ರ ಮಟ್ಟದ ಸಂಸ್ಥೆಯಾಗಿದ್ದು ಇದರ ಸಂಯೋಜಕರು ಹಾಗೂ ಕೇಂದ್ರ ವಿಶ್ವವಿದ್ಯಾಲಯ ಹೈದರಾಬಾದ್ ಇದರ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಪ್ರೊ. ಶಿವಕುಮಾರ್ ಇವರು ಸಮನ್ವಯಗೊಳಿಸಿದ್ದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ ಮತ್ತು ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್, ಇವರು ಈ ಕಾರ್ಯಕ್ರಮದ ಸ್ಥಳೀಯ ಸಂಯೋಜಕರಾಗಿದ್ದರು.
ದೆಹಲಿ, ಪಂಜಾಬ್, ಮಧ್ಯಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಹೀಗೆ ದೇಶದ ವಿವಿಧ ರಾಜ್ಯಗಳ 38 ಬಿ. ಎಸ್ಸಿ. ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಈ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಆನ್ಲೈನ್ ಪ್ರವೇಶ ಪರೀಕ್ಷೆ ಹಾಗೂ ಸಮಾನತೆಯ ಮೇಲೆ ಆಧರಿಸಿದ್ದು ಇದರಲ್ಲಿ ಗ್ರಾಮೀಣ ಹಾಗೂ ನಗರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಕಾಲೇಜುಗಳಿಂದ 15 ವಿದ್ಯಾರ್ಥಿಗಳು ಭಾಗವಹಿಸಿದ್ದು ಆದರಲ್ಲಿ 8 ಮಂದಿ ಪೂರ್ಣಪ್ರಜ್ಞ ಕಾಲೇಜಿನವರಾಗಿದ್ದಾರೆ.
ತರಬೇತಿಯು ಕಾಲೇಜಿನ ಆವರಣದಲ್ಲಿ ನಡೆದಿದ್ದು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿತ್ತು. 6 ದಿನಗಳ ಕಾಲ ಕಠಿಣ ತರಬೇತಿ ಯನ್ನು ನೀಡಿದ್ದು ಬೆಳಗ್ಗಿನ ಅವಧಿಯಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್ ಹಾಗೂ ಥರ್ಮೋಡೈನಮಿಕ್ಸ್ ತರಗತಿಗಳು ಮತ್ತು ಮಧ್ಯಾಹ್ನದ ಅವಧಿಯಲ್ಲಿ ಸಮಸ್ಯೆ ವಿಶ್ಲೇಷಣೆ ಹಾಗೂ ಪರಿಹರಿಸುವ ಕೌಶಲ್ಯ, ಪ್ರಾಯೋಗಿಕ ತರಗತಿಗಳು ಈ ರೀತಿ ತರಬೇತಿಯು ಅನೇಕ ಅವಧಿಗಳನ್ನ ಒಳಗೊಂಡಿತ್ತು.
ವಿದ್ಯಾರ್ಥಿಗಳಿಗೆ ಸಕ್ರಿಯ ಕಲಿಕಾ ವಿಧಾನದ ಮೂಲಕ ತಂಡಗಳಲ್ಲಿ ಭಾಗವಹಿಸಿ ಕಲಿತುಕೊಳ್ಳಲು ಪ್ರೋತ್ಸಾಹ ನೀಡಲಾಯಿತು.
ಅಂತೆಯೇ ಮುಖ್ಯ ಅವಧಿಗಳ ತರುವಾಯ ವಿಜ್ಞಾನ ಚಲನಚಿತ್ರ ವೀಕ್ಷಣೆ, ಆಕಾಶ ವೀಕ್ಷಣೆ ಭೌತಶಾಸ್ತ್ರದಲ್ಲಿ ವೃತ್ತಿ ಜೀವನ ಇಂತಹ ವಿಶೇಷ ಅವಧಿಗಳನ್ನು ಪ್ರತಿ ದಿನ ಆಯೋಜಿಸಲಾಗಿತ್ತು.
ಪ್ರೊ. ಶಿವಕುಮಾರ್ ಸೇರಿದಂತೆ ಐಐಎಸ್ಇಆರ್ (iiser) ಕೊಲ್ಕತ್ತದ ಪ್ರೊ. ಆನಂದದಾಸ್ ಗುಪ್ತ ಮತ್ತು ಎನ್ಐಟಿಇಯ ಪ್ರೊ. ಸತ್ಯಜಿತ್ ಮುಖ್ಯ ಅವಧಿಗಳ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಪೂರ್ಣ ಪ್ರಜ್ಞ ಕಾಲೇಜು ಮತ್ತು PTTSನ ಹಳೆವಿದ್ಯಾರ್ಥಿ ದಿನೇಶ್ ಹೆಬ್ಬಾರ್ ಅವರು ಇತರ ತರಗತಿಗಳಲ್ಲಿ ಬೋಧಕರಾಗಿ ಭಾಗವಹಿಸಿದ್ದರು.
ಪಿಟಿಟಿಎಸ್ ನ ಪ್ರಮಾಣ ಪತ್ರವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದು ಉನ್ನತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಸಹಾಯಕವಾಗುತ್ತದೆ. ಈ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶ್ರೀರಮಣ ಐತಾಳ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಪ್ರಮಾಣ ಪತ್ರವನ್ನು ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಇವರು ವಹಿಸಿದ್ದು, ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ. ವಿನಯ್ ಕುಮಾರ್, ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ