ರಾಘವೇಂದ್ರ ಭಕ್ತಾಗ್ರೇಸರ ಶ್ರೀಕೃಷ್ಣಾವಧೂತರು

Upayuktha
0

 ಆಗಸ್ಟ್ 31 ರಿಂದ ಸೆ 2 ರವರೆಗೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ

ತನ್ನಿಮಿತ್ತ ವಿಶೇಷ ಲೇಖನ




ಶ್ರೀ ಅಪ್ಪಣಾಚಾರ್ಯರಂತೆ ಶ್ರೀಕೃಷ್ಣಾವಧೂತರು ಸಹ ವೈರಾಗ್ಯ ಶಿಖಾಮಣಿಗಳು. ಹೆಸರೇ ಹೇಳುವಂತೆ ಅವರು ಅವಧೂತರು. ಸಂಸಾರದಲ್ಲಿನ ನಶ್ವರತೆಯನ್ನು ಮನಗಂಡು ಲೌಕಿಕ ಭೋಗ, ಭಾಗ್ಯಗಳಿಗೆ ಒಂದಿಷ್ಟು ಮಹತ್ವ ನೀಡದೆತಮ್ಮ ಬದುಕನ್ನ ಗುರುಗಳ ಮತ್ತು ಭಗವಂತನ ಸೇವಗಾಗಿಯೇ ಮೀಸಲಿಟ್ಟ ಮಹಾತ್ಮರು. ಗುರುಸಾರ್ವಭೌಮರ ಪರಮಕರುಣೆಗೆ ಪಾತ್ರರಾಗಿ ಅವರ ಅನುಗ್ರಹದಿಂದಲೇ ‘ಶ್ರೀ ರಾಘವೇಂದ್ರ ಗುರುಗಳ ಪ್ರೇಮ ಪುತ್ರ’ಎಂದು ಕರೆಸಿಕೊಂಡ ಭಕ್ತ ಶಿರೋಮಣಿಗಳು.


ಗುರುರಾಜರ ಅಗಮ್ಯ ಮಹಿಮೆಗಳನ್ನು ಸ್ತೋತ್ರ ರೂಪದಲ್ಲಿ ಜಗತ್ತಿಗೆ ಪರಿಚಯಿಸಿದ ಶ್ರೀ ಅಪ್ಪಣಾಚಾರ್ಯರಿಗೂ ಮತ್ತು ಶ್ರೀಕೃಷ್ಣಾವಧೂತರಿಗೂ ನಿಕಟವಾದ ಸಂಬಂಧ. ಇಬ್ಬರೂ ಶ್ರೀ ರಾಘವೇಂದ್ರ ಗುರುಗಳ ಅಂತರಂಗ ಭಕ್ತರು. 1835ರ ರಥಸಪ್ತಮಿಯಂದು ನಾರಾಯಣದೇವರ ಕೆರೆಯಲ್ಲಿ ‘ಕೃಷ್ಣ’ ಎಂಬ ಹೆಸರಿನಿಂದ ಜನಿಸಿದರು. ಆದರೆ ತಂದೆ ತಾಯಿಗಳು ಇವರನ್ನು ಪ್ರಸಿದ್ಧ ವಿದ್ವಾಂಸರಾದ ಸೊಂಡೂರು ಶ್ರೀ ಹಳೇಕೋಟೆ ಭೀಮಸೇನಾಚಾರ್ಯರಿಗೆ ದತ್ತು ಕೊಟ್ಟುಬಿಟ್ಟರು. ದತ್ತು ಪುತ್ರನಾಗಿ ಮುದ್ದು ಕೃಷ್ಣ ಎಂದಾದರು. ಬಾಲ್ಯದಿಂದಲೂ ಚುರುಕಾಗಿದ್ದ ಮುದ್ದುಕೃಷ್ಣರು  ತಾರುಣ್ಯದ ವೇಳೆಗೆ ಎಲ್ಲಾ ವಿಷಯಗಳಲ್ಲಿ ಸಾಕಷ್ಟು ಪ್ರಾವೀಣ್ಯತೆಯನ್ನು ಗಳಿಸಿಕೊಂಡ ಕಾಲಾಂತರದಲ್ಲಿ ಗೃಹಸ್ಥರಾಗಿ ಪತ್ನಿಯಕೆಟ್ಟ ಚಾಳಿಗಳಿಂದ ನೊಂದು ವಿರಕ್ತರಾಗಿ ಮೈಸೂರಿನ ರಾಮಾಚಾರ್ಯರಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಚಿಕ್ಕ ವಯಸ್ಸಿನಲ್ಲಿಯೇ ಮಂದಾರ ಮಕರಂದ ಚಂಪೂ ಎಂಬ ಪ್ರಸಿದ್ಧ ಕಾವ್ಯ ಬರೆದುದೇಶದ ವಿವಿಧೆಡೆ ಸಂಚರಿಸಿ ಖ್ಯಾತಿ ಪಡೆದರು.


ಇಂತಹ ಖ್ಯಾತಿಗಳಿಸಿದ ಮುದ್ದುಕೃಷ್ಣರ ಜೀವನ ಕೊಂಚ ಅಡ್ಡದಾರಿ ಹಿಡಿಯಿತು. ಕೇರಳದ ಮಾಂತ್ರಿಕನಿಂದ ಅನೇಕ ತಂತ್ರ ವಿದ್ಯೆಯನ್ನು ಕೆಲವು ಶಾರೀರಿಕ ಸುಖಕ್ಕೆ ಹೆಚ್ಚಿನ ಮಹತ್ವ ನೀಡಿ ಭೋಗ ಲಾಲಸೆಯಲ್ಲಿರುವಾಗ ಮತ್ತೆ ವಿವಾಹವಾಗಿ ಸೊಂಡೂರಿನ ಆಸ್ಥಾನ ವಿದ್ವಾಂಸರಾಗಿದರು. ಅಪ್ಪಣಾಚಾರ್ಯರು ಗುರುರಾಜರ ಸಮಕಾಲೀನರಾಗಿದ್ದರೆ ಕೃಷ್ಣಾವಧೂತರು. 19ನೇಯ ಶತಮಾನದವರು. ಒಂದಕ್ಕೊಂದು ತಾಳೆಯಾಗದಿದ್ದರೂ ಸಹ ಅಡ್ಡದಾರಿಯನ್ನು ಹಿಡಿದಿದ್ದ ಮುದ್ದುಕೃಷ್ಣರನ್ನು ಅಪ್ಪಣಾಚಾರ್ಯರು ಎಚ್ಚರಿಸಿ ಅವತಾರದ ಅರಿವನ್ನುಂಟು ಮಾಡಿ ಸ್ವಪ್ನದ ಮೂಲಕ ಶ್ರೀವ್ಯಾಸ ಕೃಷ್ಣ ಮಂತ್ರಗಳನ್ನು ಉಪದೇಶಿಸಿ ಗುರುಸೇವೆ ಮಾಡಿಸುತ್ತಾರೆ. ಇದರಿಂದ ವಿಶ್ವಾಸಗೊಂಡ ಮುದ್ದುಕೃಷ್ಣರು ಮಂತ್ರಾಲಯ ಪ್ರಭುಗಳನ್ನು ಆರಾಧಿಸಿದಾಗ ಯತಿರಾಜರು ಅವರನ್ನು ಅನುಗ್ರಹಿಸಿ ಅನೇಕ ಗೋಪ್ಯ ವಿಷಯಗಳನ್ನು ಉಪದೇಶಿಸುತ್ತಾರೆ. ಅಂದಿನಿಂದ ಮುದ್ದುಕೃಷ್ಣಾಚಾರ್ಯರಿಗೆ ವೈರಾಗ್ಯ ಬೆಳೆದು ಸಂಸಾರ ಮತ್ತು ಸಕಲ ಸಂಪತ್ತುಗಳನ್ನು ತ್ಯಜಿಸಿ ಸದಾ ಗುರುಗಳ ಚರಣದಲ್ಲಿಯೇ ಮನಸ್ಸಿಟ್ಟವರಾಗಿ ಕೃಷ್ಣಾವಧೂತರೆಂಬ ಹೆಸರಿನಿಂದ ಪ್ರಸಿದ್ಧರಾಗುತ್ತಾರೆ.


ನಂತರ ಹಂಪೆಯ ಯಂತ್ರೋದ್ಧಾರಕ ಪ್ರಾಣದೇವರ ಸನ್ನಿಧಿಯಲ್ಲಿ ಎಂಟು ವರ್ಷಗಳ ಕಾಲ ತಪೋನಿರತರಾಗಿದ್ದಾಗ ರಾಯರು ಅತ್ಯಂತ ಪ್ರಸನ್ನರಾಗಿ ಪ್ರತ್ಯಕ್ಷ ದಿವ್ಯದರ್ಶನಕೊಟ್ಟು ಪರಮಾನುಗ್ರಹ ಮಾಡುತ್ತಾರೆ.


ಗುರುಗಳ ಅನುಗ್ರಹವನ್ನು ಪಡೆದಅವಧೂತರು ಹಂಪೆಯನ್ನು ಬಿಟ್ಟು ಆದವಾನಿಗೆ ಬಂದು ನೆಲಸುವರು. ಶ್ರೀಕೃಷ್ಣಾವಧೂತರು ತಮ್ಮ ಜೀವಿತಕಾಲದಲ್ಲಿ ಹಲವಾರು ಗ್ರಂಥಗಳನ್ನು ರಚಿಸಿದ್ದರೂ ಸಹ ಅವರ ‘ಶ್ರೀ ರಾಘವೇಂದ್ರತಂತ್ರಮ್’ ಎಂಬ ಗ್ರಂಥ ಅನೇಕ ನಿಟ್ಟಿನಿಂದ ಮಹತ್ವ ಪೂಣವಾದದ್ದು. ಶ್ರೀರಾಘವೇಂದ್ರ ಗುರುರಾಜರ ಗುಣಮಣಿಗಳಿಂದ ಬಹು ಸುಂದರವಾಗಿ ಹೆಣೆಯಲ್ಪಟ್ಟಿದೆ. ಶ್ರೀರಾಘವೇಂದ್ರ ತಂತ್ರಗ್ರಂಥವನ್ನು ಪ್ರತ್ಯಕ್ಷ ಸಿದ್ಧಿಪ್ರದ ಗ್ರಂಥವೆಂದು ಕರೆಯುವ ಅವಧೂತರು ಇದನ್ನು ಶ್ರೀರಾಘವೇಂದ್ರ ಗುರುಗಳ ಪ್ರೇರಣೆಯಿಂದ ರಚಿಸಿದ್ದಾಗಿ ತಿಳಿದು ಬರುತ್ತದೆ. ತಮ್ಮ ಸ್ವರೂಪೋದ್ಧಾರಕರಾದ ಅಪ್ಪಣಾಚಾರ್ಯರನ್ನು ಭಕ್ತಿಯಿಂದ ಸ್ಮರಿಸುತ್ತಾರೆ. ಜ್ಞಾನಜ್ಞಾನದಿಂದ ತಾವು ಮಾಡಿರಬಹುದಾದ ತಪ್ಪುಗಳನ್ನು ಗುರುಗಳೆದುರಿಗೆ ಮುಕ್ತ ಮನಸ್ಸಿನಿಂದ ಏಕಾಂತವಾಗಿ ಹೇಳಿಕೊಂಡಿರುವ ಶ್ರೀ ಕೃಷ್ಣಾವಧೂತರು ಇಲ್ಲಿ ಎಲ್ಲಾ ಗುರುಭಕ್ತರ ಪ್ರತಿನಿಧಿಯಂತೆ ಗೋಚರಿಸುತ್ತಾರೆ.


ಪಾಪೀನಾಮಗ್ರಗಣ್ಯೋಹಂದಯಾಲೂನಾಂತ್ವಮಗ್ರಣೀಃ|

ತ್ವಾಂವಿನಾ ನ ಹಿ ಜಾನೇನನ್ಯಂ ಮಮಾದ್ಯೀದ್ಧಾರಕಾರಣಮ್|| 


ಭಕ್ತಾಗ್ರೇಸರರಾದ ಶ್ರೀ ಕೃಷ್ಣಾವಧೂತರು ಕಲಿಯುಗದ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳೆಂದು ಪ್ರಸಿದ್ಧರಾದ ಪರಮಕಾರುಣ್ಯ ಮೂರ್ತಿ ಶ್ರೀರಾಘವೇಂದ್ರ ಗುರು ಸಾರ್ವಭೌಮರ ಪರಮಾನುಗ್ರಹಕ್ಕೆ ಪಾತ್ರರಾದ ಜ್ಞಾನಿ ಶ್ರೇಷ್ಠರು. ಹೆಸರೇ ಹೇಳುವಂತೆ ಅವರು ಅವಧೂತರು. ಸಂಸಾರದಲ್ಲಿನ ನಿಸ್ಸಾರತೆಯನ್ನು ಮನಗಂಡು ಲೌಕಿಕ-ಭೋಗ-ಭಾಗ್ಯಗಳಿಗೆ ಒಂದಿಷ್ಟೂ ಮಹತ್ವ ನೀಡದೆ ತಮ್ಮ ಬದುಕನ್ನು ಗುರುಗಳ ಮತ್ತು ಭಗವಂತನ ಸಾಕ್ಷಾತ್ಕಾರಕ್ಕಾಗಿಯೇ ಮೀಸಲಿಟ್ಟ ಮಹಾತ್ಮರು. 


ತುಂಗಾಭದ್ರಾ ನದಿತೀರದ ಸಣ್ಣ ಹಳ್ಳಿಯಲ್ಲಿ ಕಡು ಬಡತನದ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಕೃಷ್ಣಾವಧೂತರು ಸೊಂಡರು ಸಂಸ್ಥಾನದ ಪ್ರಸಿದ್ಧ ವಿದ್ವಾಂಸರೊಬ್ಬರ ದತ್ತು ಪುತ್ರನಾಗಿ ಬೆಳೆದು ಸಣ್ಣ ವಯಸ್ಸಿಗೆ ಅಪಾರವಾದ ಪಾಂಡಿತ್ಯವನ್ನು ಗಳಿಸಿಕೊಂಡವರು. 


ಆ ಕಾಲದ ಪದ್ಧತಿಯಂತೆ ಅವರಿಗೆ ಬಾಲ್ಯದಲ್ಲಿಯೇ ವಿವಾಹವಾದರೂ ಗುರುಕೃಪೆಯಿಂದ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಲಿಲ್ಲ. ಆದರೆ ಸಂಕುಚಿತ ಮನೋಭಾವದ ಕುಟುಂಬ ವರ್ಗದ ಅಂತಃಕಲಹದಿಂದಾಗಿ ಬೇಸತ್ತು ಕೃಷ್ಣಾವಧೂತರು ಚಿಕ್ಕ ವಯಸ್ಸಿನಲ್ಲಿಯೇ ಗೃಹತ್ಯಾಗ ಮಾಡಿ. ದೇಶಾಂತರ ಹೊರಟು ಹೋದರು. 


ಹೋದ ಕಡೆಯಲೆಲ್ಲಾ ಶ್ರೀ ಕೃಷ್ಣಾವಧೂತರು ವಿಪುಲ ವಿದ್ಯಾರ್ಜನೆ ಮಾಡಿ ಮೇರು ಸದೃಶ ಪಾಂಡಿತ್ಯವನ್ನು ಸಂಪಾದಿಸಿದರು. “ಶ್ರೀ ರಾಘವೇಂದ್ರ ತಂತ್ರ”ವೆಂಬ ಪ್ರತ್ಯಕ್ಷ ಸಿದ್ಧಪುರ ಗ್ರಂಥವನ್ನು ರಚಿಸಿ ಗುರುರಾಜರ ಕರುಣಾಮೃತವನ್ನು ಮೊಗೆ ಮೊಗೆದು ಕುಡಿದರು. ಶ್ರೀ ರಾಘವೇಂದ್ರ ಗುರುಗಳನ್ನು ಸೇವಿಸುವ ಸುಲಭವಾದ ರಾಜಮಾರ್ಗವನ್ನು ತೋರಿಸಿಕೊಟ್ಟು, ಅವರ ಅನುಗ್ರಹ ಸಂಪಾದಿಸುವ ಉಪಾಯವನ್ನು ಮನವೊಪ್ಪುವಂತೆ ನಿರೂಪಿಸಿದ್ದಾರೆ. 


ಸಾಯುವುದಕ್ಕೆ ಮುನ್ನ ಸಾರ್ಥಕವಾಗಿ ಬದುಕಿದಂತೆ ಸತ್ತ ನಂತರವೂ ಸಹ ಕೀರ್ತಿ ದೇಹಿಯಾಗಿ, ಇತರರ ಬದುಕಿಗೆ ಬೆಳಕಾಗಿ ಬದುಕುವುದು ಮಹಾತ್ಮರ ಲಕ್ಷಣ. ಶ್ರೀ ಕೃಷ್ಣಾವಧೂತರು ಇಂತಹ ಮಹಾತ್ಮರು. ಅವರ ದೇಹ ಕಣ್ಮರೆಯಾದರೂ ಅವರು ಮಾಡಿದ ಸಾಧನೆ ಕಣ್ಮರೆಯಾಗಿಲ್ಲ. ಗುರುಕೃಪೆಯಿಂದ ಪಡೆದ ಸಿದ್ಧಿ ನಶಿಸಿ ಹೋಗಿಲ್ಲ. ಸಾರಸ್ವತ ಭಂಡಾರವನ್ನು ಶ್ರೀಮಂತಗೊಳಿಸಿದ ತಮ್ಮ ಗ್ರಂಥದ ಮೂಲಕ ಇನ್ನು ಬದುಕಿದ್ದಾರೆ. ಗುರು ಕರುಣೆಗಾಗಿ ಹಂಬಲಿಸುವ ಪ್ರತಿಯೊಬ್ಬ ಸುಜೀವನು ಬದುಕಿನ ಬೆಳಕಾಗಿ ಗುರಿಯ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ.


-ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಸಂಸ್ಕೃತಿ ಚಿಂತಕರು ದೂ: 9035618076


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top