ಲಕ್ಷ್ಮಣನ ಉಪಸ್ಥಿತಿಯಲ್ಲಿ ರಾಮನಿಗೆ ತಾಯಿ ಕೌಸಲ್ಯೆಯ ಅನುಮತಿ ಸಿಕ್ಕಿತು.ರಾಮನ ಬೇಕು ಬೇಡಗಳನ್ನು ಲೆಕ್ಕಿಸದೆ ಅವನೊಡನಿದ್ದು ಅಂದಿನ ಎಲ್ಲಾ ಘಟನೆಗಳಿಗೆ ಸಾಕ್ಷಿಯಾದ ಲಕ್ಷ್ಮಣ ರಾಮನ ಅರಮನೆಗೂ ಅವನೊಡನೆಯೇ ಬಂದನು.
ತಾಯಿಯು ದು:ಖದಿಂದ ಹತಾಶಳಾಗಿ ದುರಂತ ತಂದುಕೊಳ್ಳಬಾರದೆಂದು ತನ್ನ ಭಾವನೆಗಳನ್ನು ಅದುಮಿ ಇಟ್ಟುಕೊಂಡ ರಾಮನಿಗೆ ಅವನ್ನು ಹೆಚ್ಚು ಸಮಯ ಹಾಗೆಯೇ ಇಟ್ಟು ಕೊಳ್ಳಲಾಗಲಿಲ್ಲ.ತನ್ನ ಅರಮನೆಗೆ ಸತಿ ಸೀತೆಯನ್ನು ಕಾಣಲೆಂದು ಬಂದವನ ಮುಖ ನೋಡಿಯೇ ಸೀತೆಯು ಆಗಬಾರದ್ದೇನೋ ಆಗಿದೆಯೆಂದು ತಿಳಿದು ಹೆದರಿ ನಡುಗುತ್ತಾ - ಈ ಸಮಯದಲ್ಲಿ ಇದೇನಿದು? ಹೀಗೇಕಿರುವೆ?- ಎಂದು ಕೇಳಿದಳು.ಅದಕ್ಕೆ ರಾಮನು ಚುಟುಕಾಗಿ- ಸೀತೆ, ಪೂಜ್ಯಪಾದನಾದ ತಂದೆಯು ನನ್ನನ್ನು ಅರಣ್ಯಕ್ಕೆ ಕಳುಹಿಸುತ್ತಿದ್ದಾನೆ-ಎಂದು ಹೇಳಿ ಕೈಕೇಯಿಯು ಪಡೆದ ಎರಡು ವರಗಳ ವಿಷಯವನ್ನು ವಿಸ್ತರಿಸಿ ಹೇಳಿದನು.ಬಳಿಕ ಸೀತೆಗೆ- ನೀನಿಲ್ಲಿ ಮಡಿಯುಟ್ಟು ವ್ರತೋಪವಾಸ ನಿಷ್ಠಳಾಗಿದ್ದುಕೊಂಡು ಧರ್ಮನಿರತಳಾಗಿ ಪುತ್ರ ವಿರಹದಿಂದ ದು:ಖಿಸುತ್ತಿರುವ ತಾಯಿ ಕೌಸಲ್ಯೆಯನ್ನೂ,ವೃದ್ಧನಾದ ತಂದೆ ದಶರಥನನ್ನೂ,ರಾಜ ಭರತನನ್ನೂ ಸೇವಿಸುತ್ತಿರಬೇಕು-ಎನ್ನುತ್ತಾ ನನ್ನ ಮಾತನ್ನು ನಡೆಸಿಕೊಡಬೇಕೆಂದು ಹೇಳಿದನು.
ಈ ಮಾತನ್ನು ಕೇಳಿ ಆಘಾತಗೊಳ್ಳದ ಸೀತೆ-ಅಷ್ಟೇ ತಾನೇ?.ನನ್ನನ್ನೂ ವನವಾಸಕ್ಕೆ ಕರೆದುಕೊಂಡು ಹೋಗು.ಪತಿಯೊಂದಿಗಿರಬೇಕಾದದ್ದು ಸತಿಧರ್ಮ.ಇಹದಲ್ಲಾಗಲೀ ಪರದಲ್ಲಾಗಲೀ ಪತಿಯೊಬ್ಬನೇ ಸ್ತ್ರೀಯರಿಗೆ ಪರಮಾಶ್ರಯನು.ನಾನು ಚಿಕ್ಕವಳಿರುವಾಗಲೇ ನನ್ನ ತಂದೆ ತಾಯಿಯರಿಂದ ಸತಿಧರ್ಮದ ಬಗ್ಗೆ ತಿಳಿದುಕೊಂಡಿದ್ದೇನೆ.ನೀನೇ ನನಗೆ 'ಪತಿ ವಿಹೀನಳಾದ ಸ್ತ್ರೀಯು ಜೀವಿಸಲು ಸಮರ್ಥಳಾಗುವುದಿಲ್ಲ'ಎಂದು ಹೇಳಿದ್ದಿ ತಾನೇ? ಇಷ್ಟು ಮಾತ್ರವಲ್ಲ ನಾನು ಚಿಕ್ಕವಳಿದ್ದಾಗ ನಮ್ಮ ಅರಮನೆಗೆ ಬಂದ ತೇಜಸ್ವೀ ಬ್ರಾಹ್ಮಣ ಹಾಗೂ ಸಂನ್ಯಾಸಿಯೊಬ್ಬರು ನಿನಗೆ ವನವಾಸದ ಯೋಗವಿದೆಯೆಂದು ಹೇಳಿದ್ದರು.ಅದೂ ಇಂದು ಕೈಗೂಡುತ್ತಿದೆ.-ಎಂದು ತನ್ನ ಮನದಾಳದ ಮಾತುಗಳನ್ನು ಸ್ಪಷ್ಟವಾಗಿ ದೃಢವಾಗಿ ಹೇಳಿದಳು.
ಕಾಡಿನಲ್ಲಿರುವ ದುರ್ಗಮ ಗುಡ್ಡ ಬೆಟ್ಟ ನದಿಗಳು,ಕ್ರೂರ ಪ್ರಾಣಿಗಳು,ರಕ್ಕಸರು, ಆಹಾರ ವಿಹಾರಗಳಿಗೆ ಅಲೆದಾಟ.. ಮುಂತಾದ ಭಯಾನಕ ಜೀವನವನ್ನು ಕಣ್ಣಿಗೆ ಕಟ್ಟುವಂತೆ ರಾಮನು ಸೀತೆಯೆದುರು ತೆರೆದಿಟ್ಟರೂ ಜಪ್ಪಯ್ಯ ಎನ್ನದ ಸೀತೆ ಕೊನೆಗೆ - "ತಪೋ ವಾ ಯದಿ ವಾರಣ್ಯಂ ಸ್ವರ್ಗೋ ವಾ ಸ್ವಾತ್ತ್ವಯಾ ಸಹ"
ತಪಶ್ಚರಣೆಯಾಗಲೀ,ವನವಾಸವಾಗಲೀ, ಸ್ವರ್ಗಕ್ಕೆ ಹೋಗುವುದಾಗಲೀ-ನಿನ್ನ ಜೊತೆಯಲ್ಲಿ ಹೋಗಬೇಕು.ನಿನ್ನ ಬಿಟ್ಟು ನನಗೆ ಬೇರೆ ಯಾವುದೂ ಬೇಡ. ನೀನು ನನ್ನನ್ನು ವನವಾಸಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರೆ ಸಾಯುತ್ತೇನೆ-ಎಂದು ಬೆದರಿಸಿದಾಗ ಅನಿವಾರ್ಯವಾಗಿ ರಾಮನು ಸೀತೆಯನ್ನು ಕರೆದೊಯ್ಯಲು ಒಪ್ಪಿದನು.ತಾಯಿಯನ್ನು ಒಪ್ಪಿಸಲು ಬಳಸಿದ ಪತಿಸೇವೆಯ ಸೂತ್ರ ಇಲ್ಲಿ ಅವನನ್ನೇ ಬಂಧಿಸಿದ್ದು ವಿಶೇಷ.
ರಾಮನು ಸೀತೆಗೆ ದಾನ ಧರ್ಮಾದಿಗಳನ್ನು ಮಾಡಲು ಹೇಳಿದಾಗ ಕೂಡಲೇ ಅವಳು ಕಾರ್ಯ ಪ್ರವೃತ್ತಳಾಗಿ ವನವಾಸಕ್ಕೆ ಸಂತಸದಿಂದ ಸಿದ್ಧಳಾದಳು.
ರಾಮನಿಗೆ ಪಟ್ಟತಪ್ಪಿದುದಕ್ಕೆ ಒಂದಿಷ್ಟೂ ಬೇಸರಿಸದೆ ಸಂತೋಷದಿಂದ ರಾಮನೊಡನೆ ವನವಾಸಕ್ಕೆ ಹೊರಟ ಸೀತೆಯ ಪತಿ ನಿಷ್ಠೆಯನ್ನು ಕಾಣಲು ಆಕೆಯ ಈ ಒಂದು ನಡೆ ಸಾಕು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ