ಶಿಕ್ಷಣಕ್ಕೆ ಧರ್ಮ, ಸಂಸ್ಕೃತಿಯ ತಳಹದಿ ಅಗತ್ಯ: ರಾಘವೇಶ್ವರ ಶ್ರೀ

Upayuktha
0

ಗೋಕರ್ಣ: ದೇಶದ ಧರ್ಮ, ಸಂಸ್ಕೃತಿ, ಸಂಪ್ರದಾಯದ ಅರಿವು ಇಲ್ಲದೇ ಯುವಜನಾಂಗ ದಾರಿ ತಪ್ಪುತ್ತಿದೆ. ಔಪಚಾರಿಕ ಶಿಕ್ಷಣದಲ್ಲಿ ದೇಶದ ಸಂಸ್ಕೃತಿ- ಪರಂಪರೆಯನ್ನು ಬೋಧಿಸುವ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಲೋಪ. ಧರ್ಮ- ಸಂಸ್ಕೃತಿಯ ತಳಹದಿಯಲ್ಲಿ ನೀಡುವ ಶಿಕ್ಷಣ ಮಾತ್ರವೇ ಪರಿಪೂರ್ಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪರಮಪೂಜ್ಯರು, ಮಂಗಳವಾರ ಮುಳ್ಳೇರಿಯಾ ಮಂಡಲದ ಎಣ್ಮಕಜೆ, ಚಂದ್ರಗಿರಿ, ಪಳ್ಳತ್ತಡ್ಕ ಮತ್ತು ಪೆರಡಾಲ ವಲಯಗಳ ಶಿಷ್ಯಭಕ್ತರಿಂದ ಶ್ರೀಭಿಕ್ಷಾಸೇವೆ ಸ್ವೀಕರಿಸಿ ಶ್ರೀಸಂದೇಶ ನೀಡಿದರು.


ಶಿಕ್ಷಣ ಕ್ಷೇತ್ರದ ಈ ನ್ಯೂನತೆಯನ್ನು ಗಮನಿಸಿ, ಯುವಜನಾಂಗಕ್ಕೆ ಸಮಗ್ರ ಪರಿಕಲ್ಪನೆಯ ಶಿಕ್ಷಣ ಲಭ್ಯವಾಗಬೇಕು ಎಂಬ ಕಾರಣದಿಂದಲೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ತಲೆ ಎತ್ತಿದೆ. ಮಕ್ಕಳಿಗೆ ಎಳವೆಯಲ್ಲೇ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವ ಈ ಮಹತ್ಕಾರ್ಯಕ್ಕೆ ಸಮಾಜ ಕೈಜೋಡಿಸಬೇಕು ಎಂದು ಹೇಳಿದರು.


ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ಮಕ್ಕಳು ಶ್ರೀಮಠದ ಛತ್ರದಡಿ ಓದುವಂತಾಗಬೇಕು. ಮುಂದಿನ ಸಮಾಜದ ಭವಿಷ್ಯ ಉಜ್ವಲವಾಗಬೇಕಾದರೆ ಇದೊಂದೇ ದಾರಿ. ವಿವಿವಿಯಂಥ ಸಂಸ್ಥೆಗಳು ಸಮಾಜದ ಎಲ್ಲೆಡೆ ಬೆಳೆಯಬೇಕು. ಬಾಲ್ಯದಿಂದ ಪಿಯುಸಿವರೆಗೆ ಕಡ್ಡಾಯವಾಗಿ ಇಂಥ ಗುರುಕುಲ ಶಿಕ್ಷಣವನ್ನೇ ನಮ್ಮ ಮಕ್ಕಳು ಪಡೆಯಬೇಕು. ಮುಂದೆ ಅಪೇಕ್ಷಿತ ಉನ್ನತ ಶಿಕ್ಷಣ ಅವಕಾಶವನ್ನು ಇಲ್ಲೇ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಸಂಸ್ಕಾರಯುಕ್ತ ಮಕ್ಕಳು ದೇಶದ ಆಸ್ತಿ ಎಂದು ಬಣ್ಣಿಸಿದರು.


ವಿವಿವಿಯಂಥ ಮಹತ್ಕಾರ್ಯ ಪರಂಪರೆಗೆ ಶ್ರೀರಕ್ಷೆಯಾಗಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಸಮಾಜದ ಮೇಲಿದೆ. ಸಮಾಜಕ್ಕೆ ಭಾರವಾಗದ ರೀತಿಯಲ್ಲಿ ವ್ಯಸನ, ಶೋಕಿಗಳಿಗೆ ಮಾಡುವ ನಿರರ್ಥಕ ಮತ್ತು ಅನರ್ಥಕ ವೆಚ್ಚಕ್ಕೆ ಕಡಿವಾಣ ಹಾಕಿ ಅಂಥ ಸಂಪತ್ತನ್ನು ಇಂಥ ಶಾಶ್ವತ ಕಾರ್ಯಗಳಿಗೆ ಧಾರೆ ಎರೆಯೋಣ ಎಂದರು.


ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಮ್ಮ ಮೂಲಮಠ ಮತ್ತೆ ತಲೆ ಎತ್ತುತ್ತಿದೆ. ಜತೆಗೆ ಶ್ರೀಶಂಕರ ಕನಸು ಇಲ್ಲಿ ಸಾಕಾರಗೊಳ್ಳುತ್ತಿದೆ. ಶಿಷ್ಯಭಕ್ತರಲ್ಲಿ ಈ ಬಗ್ಗೆ ಅತ್ಯುಚ್ಛ ಮಟ್ಟದ ಜಾಗೃತಿ ಜಾಗರಣೆಗಾಗಿ ಇಡೀ ವರ್ಷ ರಾಜ್ಯಾದ್ಯಂತ ಸ್ವರ್ಣಪಾದುಕೆಗಳ ಸಂಚಾರ ನಡೆಯಲಿದೆ. ಪ್ರತಿ ವಲಯ ಮಟ್ಟದಲ್ಲಿ 15ರಂತೆ ಕನಿಷ್ಠ 1800 ಜಾಗೃತಿ ಸಭೆಗಳು ನಡೆಯಲಿವೆ ಎಂದು ವಿವರಿಸಿದರು.


ಶ್ರೀಮಠದ ಮಹತ್ಕಾರ್ಯಗಳನ್ನು ಮನೆಮನೆಗೆ ತಲುಪಿಸುವ ಸಲುವಾಗಿ ದೊಡ್ಡ ಕಾರ್ಯಕರ್ತರ ತಂಡ ಸಜ್ಜಾಗಬೇಕು. ಗುರುಸೇವೆಗೆ ಪ್ರತಿ ಮನೆಯಿಂದ ಒಬ್ಬ ಕಾರ್ಯಕರ್ತ ಸಜ್ಜಾಗಬೇಕು. ನಮ್ಮ ಪದಾಧಿಕಾರಿಗಳು ಸಾಧನೆ, ಸೇವೆಯನ್ನು ಗುರುತಿಸುವ ಜತೆಗೆ ಸಮಾಜದ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.


ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ, "ಸಮಾಜದಲ್ಲಿ ಕಳೆದ ಮೂರು ದಶಕಗಳಲ್ಲಿ ಶ್ರೀಮಠ ಹತ್ತು ಹಲವು ಕ್ರಾಂತಿಕಾರಕ ಯೋಜನೆಗಳನ್ನು ಹಾಕಿಕೊಂಡಿದ್ದು, ನಮ್ಮ ಕಾಲಘಟ್ಟದಲ್ಲಿ ಇದು ಆಗುತ್ತಿದೆ ಎನ್ನುವುದೇ ನಮಗೆ ಹೆಮ್ಮೆ. ಇಂಥ ಕಾರ್ಯಗಳನ್ನು ಸಮಾಜದಲ್ಲಿ ಪ್ರಸಾರ ಮಾಡುವ ಮೂಲಕ ಇದರ ಪ್ರಯೋಜನ ಎಲ್ಲರಿಗೆ ಲಭ್ಯವಾಗುವಂತೆ ಮಾಡುವುದು ಪ್ರತಿಯೊಬ್ಬ ಶಿಷ್ಯಭಕ್ತರ ಕರ್ತವ್ಯ" ಎಂದು ಹೇಳಿದರು.


ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಸಲಹೆಗಾರರಾದ ಡಾ. ವೈ. ವಿ. ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಪ್ರಾಂತ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮುಷ್ಟಿಭಿಕ್ಷೆ ಪ್ರಧಾನ ಹೇರಂಬ ಶಾಸ್ತ್ರಿ, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‍ಜಿ ಭಟ್ ಮತ್ತಿತರರು ಉಪಸ್ಥಿತರಿದ್ದರು.


ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಶಂಕರ ರಾವ್ ಕಕ್ವೆ, ಕೃಷ್ಣ ಭಟ್ ಮರುವಳ, ಸತ್ಯನಾರಾಯಣ ಬೆಳೇರಿ, ಕೃಷ್ಣಕುಮಾರ ಭಟ್ ಕೋಡಿ, ವಿಷ್ಣುಭಟ್ ಪಯ, ಡಾ.ಮಹಾಬಲಕೃಷ್ಣ ಭಟ್, ಗಣೇಶ ವತ್ಸ ನೆಕ್ರಾಜೆ, ವಿಶ್ವೇಶ್ವರ ಭಟ್ ಕಾರ್ಯಾಡು, ಶಂಕರನಾರಾಯಣ ಭಟ್ ಪೆರ್ಮುಂಡ, ಡಾ.ವೇಣುಗೋಪಾಲ ಕಳಯತ್ತೋಡಿ, ಬಿ.ಜಿ.ರಾಮಭಟ್ ಗೋಳಿತ್ತಡ್ಕ, ಪುರುಷೋತ್ತಮ ಭಟ್ ಮಿತ್ತೂರು, ಕೆ.ಶಂಕರನಾರಾಯಣ ಭಟ್ ಅವರನ್ನು ಸಾಧಕ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 13 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಮಕೃಷ್ಣ ಕಾಟುಕುಕ್ಕೆ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top